ಅಂಬಿಕಾ ವಿದ್ಯಾಸಂಸ್ಥೆಗಳ ವತಿಯಿಂದ ಹೆತ್ತವರ ಹಾಗೂ ಹಿರಿಯ ವಿದ್ಯಾರ್ಥಿಗಳ ’ಪುನರ್ಮಿಲನ’ ಸಭೆ

0

ರಜತಮಹೋತ್ಸವಕ್ಕೆ ಸಾಮಾಜಿಕ ಕಾರ್ಯಗಳ ಕೊಡುಗೆಯ ಗುರಿ: ಅಂಬಿಕಾ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಅಜಯ್ ರಾಮ್ ಅಭಿಪ್ರಾಯ

ಪುತ್ತೂರು: ಅಂಬಿಕಾ ಶಿಕ್ಷಣ ಸಂಸ್ಥೆ ಆರಂಭಗೊಂಡು 25 ವರ್ಷಗಳು ಪೂರ್ಣಗೊಂಡು ರಜತಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ರಕ್ತದಾನ ಶಿಬಿರ, ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವಂತಹಾ ಸಾಮಾಜಿಕ ಕಾರ್ಯಗಳನ್ನು ನಡೆಸಲು ಯೋಜನೆ ರೂಪಿಸಲಾಗುತ್ತಿದೆ. ಹಿರಿಯ ವಿದ್ಯಾರ್ಥಿಗಳು ಸದಾ ಒಬ್ಬರಿಗೊಬ್ಬರು ಸಹಕಾರ ಮನೋಭಾವನೆ ನೀಡುವ ಉದ್ದೇಶದಿಂದ ಸಂಘಟನಾತ್ಮಕವಾಗಿ ಹೆಚ್ಚು ಸಕ್ರಿಯಗೊಳ್ಳಬೇಕಿದೆ ಎಂದು ಅಂಬಿಕಾ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಅಜಯ್ ರಾಮ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಸಂಸ್ಥೆಗಳ ವತಿಯಿಂದ ಶನಿವಾರದಂದು ಅಪರಾಹ್ನ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಹೆತ್ತವರ ಹಾಗೂ ಹಿರಿಯ ವಿದ್ಯಾರ್ಥಿಗಳ ’ಪುನರ್ಮಿಲನ’ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಂಬಿಕಾ ಸಂಸ್ಥೆ ರಾಷ್ಟ್ರ ನಿರ್ಮಾಣ ಹಾಗೂ ಭಾರತದ ಸಾಂಸ್ಕೃತಿಯನ್ನು ಪಸರಿಸುವ ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತಿದ್ದು, ರಜತಮಹೋತ್ಸವ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳು ಇದನ್ನು ಸಾಕ್ಷೀಕರಿಸಲು ಸರ್ವ ಪ್ರಯತ್ನ ನಡೆಸಬೇಕು. ಡಿಸೆಂಬರ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಪೂರ್ಣ ಮನಸ್ಸಿನಿಂದ ಸಿದ್ಧತೆ ನಡೆಸಿ ಪಾಲ್ಗೊಳ್ಳಬೇಕು ಎಂದರು.

ಹಲವು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಉದ್ಯೋಗಿಗಳಾಗಿರುವುದರಿಂದ ಅವರ ಅನುಕೂಲಕ್ಕಾಗಿ ಅ.11 ರಂದು ಬೆಂಗಳೂರಿನಲ್ಲಿಯೂ ಹಿರಿಯ ವಿದ್ಯಾರ್ಥಿಗಳ ಸಭೆ ಆಯೋಜಿಸಲಾಗಿದೆ. ರಾಜರಾಜೇಶ್ವರಿ ನಗರದ ದೇಸೀ ಮಸಾಲ ಕಟ್ಟಡದಲ್ಲಿ ಹಿರಿಯ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿಗೆ ಅಂಬಿಕಾ ಕೋಚಿಂಗ್, ಪಿ.ಯು., ಪದವಿ ಶಿಕ್ಷಣ ಪಡೆದ ಹಿರಿಯ ವಿದ್ಯಾರ್ಥಿಗಳು ಆಗಮಿಸಿ ರಜತ ಮಹೋತ್ಸವ ವಿಭಿನ್ನವಾಗಿ ನಡೆಯುವ ನಿಟ್ಟಿನಲ್ಲಿ ತಮ್ಮ ಸಲಹೆ, ಸೂಚನೆ ನೀಡಬೇಕು ಎಂದರು.


ಅಂಬಿಕಾ ಕೋಚಿಂಗ್ ಸೆಂಟರ್ ಪ್ರಥಮ ವರ್ಷದ ವಿದ್ಯಾರ್ಥಿನಿ ನಂದಿನಿ ಆಚಾರ್ಯ ಮಾತನಾಡಿ, ನಟ್ಟೋಜ ದಂಪತಿ ಕೇವಲ ಇಬ್ಬರು ಪುತ್ತೂರಿನಂತಹಾ ಊರಿನಲ್ಲಿ ಆರಂಭಿಸಿದ ಸಂಸ್ಥೆ ಇಂದು ಐದು ಸಂಸ್ಥೆಗಳಾಗಿ ವಿಸ್ತರಿಸಿಕೊಂಡು ಬೆಳೆದಿರುವುದು ಸಂತಸದ ಸಂಗತಿ. ಉತ್ತಮ ಉದ್ದೇಶದಿಂದ ಸ್ಥಾಪಿಸಿರುವ ಈ ಸಂಸ್ಥೆಯನ್ನು ಹಿರಿಯ ವಿದ್ಯಾರ್ಥಿಗಳು ಪರಸ್ಪರ ಒಗ್ಗಟ್ಟಿನಿಂದ ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ರಜತಮಹೋತ್ಸವದ ಯಶಸ್ಸಿಗೆ ಸರ್ವ ರೀತಿಯ ಸಹಕಾರ ನೀಡಲು ಸಿದ್ಧ ಎಂದರು.


ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಅಂಬಿಕಾ ಶಿಕ್ಷಣ ಸಂಸ್ಥೆ ಆರಂಭಗೊಂಡು ೨೫ ವ?ಗಳು ಪೂರ್ಣಗೊಂಡ ಹಿನ್ನೆಲೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಭಾಗವಾದ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆ, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯ, ಬಪ್ಪಳಿಗೆಯ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯ ಹಾಗೂ ಅಂಬಿಕಾ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳು ಹಾಗೂ ಈ ಹಿಂದೆ ಅಂಬಿಕಾ ವಿದ್ಯಾಲಯ ಕೋಚಿಂಗ್ ಸೆಂಟರ್‌ನಲ್ಲಿ ಅಧ್ಯಯನ ನಡೆಸಿದ್ದ ವಿದ್ಯಾರ್ಥಿಗಳ ಮಹಾ ಸಮ್ಮಿಲನ ಇದಾಗಲಿದೆ. ರಜತಮಹೋತ್ಸವ ಆಚರಣೆ ಮಾತ್ರವಲ್ಲದೆ ಸಂಸ್ಥೆ ಹಾಗೂ ವಿದ್ಯಾರ್ಥಿಗಳ ನಂಟನ್ನು ಬಲಪಡಿಸುವ ಪ್ರಯತ್ನ. ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಬೆಳೆಯಬೇಕು, ದೇಶಕ್ಕೆ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಅವರನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕೆಲಸಗಳೂ ನಡೆಯಲಿದೆ ಎಂದರು.


ಹಿರಿಯ ವಿದ್ಯಾರ್ಥಿಗಳು ಸ್ಟಾರ್ಟ್‌ ಆಪ್, ಸ್ವ – ಉದ್ಯೋಗದಂತಹಾ ಉತ್ತಮ ನಿರ್ಧಾರಗಳಿಂದ ಬೆಳೆಯಬೇಕು. ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಅಂಬಿಕಾ ಸಂಸ್ಥೆಯೇ ಮಾದರಿ, ಕೇವಲ ಒಬ್ಬ ವಿದ್ಯಾರ್ಥಿಯಿಂದ ಆರಂಭವಾದ ಈ ಸಂಸ್ಥೆಯಲ್ಲಿ ಇಂದು ಸಾವಿರಾರು ವಿದ್ಯಾರ್ಥಿಗಳು, ನೂರಾರು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಸ್ಥೆ ಬೆಳೆಯುವ ಜೊತೆಗೆ ಹಿರಿಯ ವಿದ್ಯಾರ್ಥಿಗಳನ್ನು ಬೆಳೆಸುವ ಕಾರ್ಯವನ್ನೂ ನಡೆಸಲಾಗುತ್ತಿದೆ. ಇದು ಇನ್ನಷ್ಟು ತೀವ್ರಗತಿಯಲ್ಲಿ ನಡೆಯಬೇಕಾದ ಅಗತ್ಯವಿದೆ ಎಂದರು.

ಭಾರತೀಯ ಸೇನೆಯಲ್ಲಿ ಉದ್ಯೋಗ ಪಡೆದ ಅನುಜ್ಞಾ ಪಿ.ವಿ. ಅವರನ್ನು ಗೌರವಿಸಲಾಯಿತು. ವೈದ್ಯಕೀಯ ಸೇವೆ, ಇಂಜಿನಿಯರಿಂಗ್, ವಕೀಲರು, ಉದ್ಯಮಿಗಳು, ಸ್ಟಾರ‍್ಟ್ ಅಪ್ ಸಂಸ್ಥೆ ಸೇರಿದಂತೆ ವಿವಿಧೆಡೆ ಕೆಲಸ ನಿರ್ವಹಿಸುವ ಹಾಗೂ ವಿವಿಧೆಡೆ ವಿದ್ಯಾರ್ಜನೆ ಮಾಡುತ್ತಿರುವ ನೂರಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಸಲಹೆ ನೀಡಿದರು, ಆಗಮಿಸಿದ ಎಲ್ಲಾ ಹಿರಿಯ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಹಿರಿಯ ವಿದ್ಯಾರ್ಥಿಗಳಾದ ಅನ್ಮಯ್ ಭಟ್ ಹಾಗೂ ಅಶ್ವಿನಿ ಕ್ವಿಝ್ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಖಜಾಂಚಿ ರಾಜಶ್ರೀ ಎಸ್. ನಟ್ಟೋಜ, ಬಪ್ಪಾಲಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ.ಎಸ್. ಉಪಸ್ಥಿತರಿದ್ದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕಿ ಸುಕನ್ಯಾ ಎಂ. ಎಸ್. ಪ್ರಾರ್ಥಿಸಿದರು. ಉಪನ್ಯಾಸಕಿ ಅಶ್ವಿನಿ ಯು. ನಾಯಕ್ ನಿರೂಪಿಸಿ, ವಂದಿಸಿದರು.

ಪರಮವೀರ ಚಕ್ರ ಪುರಸ್ಕೃತ ಕಾರ್ಗಿಲ್ ಯೋಧ ಸಂಜಯ್ ಕುಮಾರ್ ಪುತ್ತೂರಿಗೆ
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ರಜತಮಹೋತ್ಸವ ಹಿನ್ನೆಲೆ ಡಿಸೆಂಬರ್‌ನಲ್ಲಿ ಖ್ಯಾತ ಕಲಾವಿದರಾದ ಉತ್ತರೆಯವರ ಕಾರ್ಯಕ್ರಮ ಹಾಗೂ ಹಿರಿಯ ವಿದ್ಯಾರ್ಥಿಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಗಳಿಗೆ ಕಳಶ ಪ್ರಾಯವೆಂಬಂತೆ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರಾದ ಸೈನಿಕ ಸಂಜಯ್ ಕುಮಾರ್ ಅವರನ್ನೂ ಕರೆಸುವ ಯೋಜನೆಯಿದೆ ಎಂದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಈಗಾಗಲೇ ಕಾರ್ಗಿಲ್ ವಿಜಯ ದಿನಾಚರಣೆಯಂದು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ಪರಮವೀರ ಚಕ್ರ ಪ್ರಶಸ್ತಿ ಪಡೆದ ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್ ಹಾಗೂ ಕ್ಯಾಪ್ಟನ್ ನವೀನ್ ನಾಗಪ್ಪ ಕಿಲ್ಲೇ ಮೈದಾನದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನುಭವ ಹಂಚಿಕೊಂಡದ್ದನ್ನು ಸ್ಮರಿಸಬಹುದಾಗಿದೆ. ಈ ಮೂಲಕ ಸೇನೆಯ ಪರಮೋಚ್ಛ ಪ್ರಶಸ್ತಿ ಪರಮವೀರಚಕ್ರ ಪಡೆದ ಮತ್ತೊಬ್ಬ ಯೋಧನ ಆಗಮನಕ್ಕೆ ಪುತ್ತೂರಿನಲ್ಲಿ ಕ್ಷಣಗಣನೆ ಆರಂಭವಾಗಿದೆ.

LEAVE A REPLY

Please enter your comment!
Please enter your name here