ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಬೆಳ್ಳಿಹಬ್ಬ ಕಾಮಗಾರಿಗಳಿಗೆ ಶಂಕುಸ್ಥಾಪನೆ

0

ಮೌಲ್ಯಯುತ ಶಿಕ್ಷಣವಿಲ್ಲದಿದ್ದರೆ ಸಮಾಜ ಅಧಃಪತನಕ್ಕೆ ತಳ್ಳಲ್ಪಡುತ್ತದೆ – ಡಾ. ಪ್ರಭಾಕರ ಭಟ್‌ ಕಲ್ಲಡ್ಕ

ಬೆಟ್ಟಂಪಾಡಿ: ಮೌಲ್ಯಯುತ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ಕೊಡದೇ ಹೋದಲ್ಲಿ ನಮ್ಮ ಸಮಾಜ ಅಧಃಪತನಕ್ಕೆ ಹೋಗುವುದು ಖಂಡಿತ. ಶಿಕ್ಷಣದಲ್ಲಿ ಬದಲಾವಣೆ ಕಂಡಾಗ ಮಾತ್ರ ಸಮಾಜದಲ್ಲಿ ಮೌಲ್ಯ, ಮಾನವೀಯ ಸಂಬಂಧಗಳು, ತತ್ವಾದರ್ಶಗಳು ಕಾಣಲು ಸಾಧ್ಯ ಎಂಬ ದೃಷ್ಟಿಕೋನದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಕಾಳಜಿ ವಹಿಸುತ್ತಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್‌ ಕಲ್ಲಡ್ಕ ಹೇಳಿದರು.


ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯಾದ ಬೆಟ್ಟಂಪಾಡಿಯ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಬೆಳ್ಳಿಹಬ್ಬದ ಸಲುವಾಗಿ ನಡೆಯುವ ವಿವಿಧ ಕಾಮಗಾರಿಗಳಿಗೆ ಅ. 8 ರಂದು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.


ವ್ಯಕ್ತಿಯಲ್ಲಿ ದೈವತ್ವವನ್ನು ಕಂಡ ದೇಶ ನಮ್ಮದು. ವಿವೇಕಾನಂದರಂತಹ ಮಹಾತ್ಮರನ್ನು ಕಂಡ ದೇಶ. ಜಗತ್ತು ಈ ಕಡೆ ಮುಖ ಮಾಡಿ ನೋಡುವಂತಹ ಸಂಸ್ಕೃತಿ, ಆಚಾರ ವಿಚಾರಗಳನ್ನು ಹೊಂದಿರುವ ನಮ್ಮ ಸಮಾಜದಲ್ಲಿ ನೈತಿಕ ಅಧಃಪತನ ಕಾಣುವ ವೇಳೆಗೆ ಆರ್‌ಎಸ್‌ಎಸ್‌ ಶಿಕ್ಷಣ ಕ್ಷೇತ್ರದಲ್ಲಿ ಕೈಯಾಡಿಸಿ ಅಮೂಲಾಗ್ರ ಬದಲಾವಣೆಯನ್ನು ತರುವ ಪ್ರಯತ್ನ ಮಾಡಿದೆ. ಮಗುವನ್ನು ಆದರ್ಶ ವ್ಯಕ್ತಿಗಳಾಗಿ ರೂಪಿಸಿ ಸಮಾಜಕ್ಕೆ ನೀಡುವ ವಿಶೇಷ ಶಿಕ್ಷಣ ಸಂಸ್ಥೆಯಲ್ಲಿ ತಮ್ಮೆಲ್ಲರ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಿರುವುದು ಅಭಿನಂದನೀಯ. ನಮ್ಮ ಸಮಾಜ ತುಂಡಾಗದ ರೀತಿಯಲ್ಲಿ, ಕುಟುಂಬ ಸಂಸ್ಕೃತಿ, ಶಿಷ್ಟಾಚಾರ ಪಾಲನೆಯೊಂದಿಗೆ, ಪರಿಸರ ಸಂರಕ್ಷಣೆ ಮತ್ತು ಸ್ವದೇಶಿ ಚಿಂತನೆಯೊಂದಿಗೆ ನಾವೆಲ್ಲಾ ಸಮಾಜದ ಏಳಿಗೆಗೆ ಕಾರಣಕರ್ತರಾಗೋಣʼ ಎಂದು ಡಾ. ಭಟ್‌ ಹೇಳಿದರು.


ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತುರವರು ಮಾತನಾಡಿ ʻಬೈಲಾಡಿ ಬಾಬು ಗೌಡರ ಕನಸಿನ ಕೂಸಾಗಿ ಸ್ಥಾಪನೆಗೊಂಡ ಈ ಶಾಲೆಯ ಇಲಾಖೆಯ ಎಲ್ಲಾ ನಿಯಮಗಳಿಗೆ ಅನ್ವಯಗೊಳ್ಳುವಂತೆ ಗ್ರಾಮೀಣ ಭಾಗದ ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ಕೊಡುವ ಪ್ರಯತ್ನ ಮಾಡುತ್ತಿದೆ. ಬೆಳ್ಳಿಹಬ್ಬದ ಅನೇಕ ಸಮಾಜಮುಖಿ ಕಾರ್ಯಕ್ರಮಗಳಿಗೂ ನಿಮ್ಮೆಲ್ಲರ ಸಹಕಾರ ಇರಲಿ. ಪ್ರಸ್ತುತ ವಿದ್ಯಾರ್ಥಿಗಳ ಸಂಖ್ಯೆ 500 ರಷ್ಟಿದ್ದು, ಇದು 1000 ದವರೆಗೆ ಏರಿಸಲು ನೀವೆಲ್ಲರೂ ಕೈ ಜೋಡಿಸಬೇಕೆಂದುʼ ವಿನಂತಿಸಿದರು. ತಾಲೂಕು ಮಟ್ಟದ ಕ್ರೀಡಾಕೂಟವೂ ಈ ಬಾರಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿದೆʼ ಎಂದರು.


ಗೌರವಾರ್ಪಣೆ
ಇದೇ ವೇಳೆ ಶಾಲಾ ವಿವಿಧ ಕಾಮಗಾರಿಗಳಿಗೆ ರೂ. 5 ಲಕ್ಷ ನೆರವನ್ನು ನೀಡಿದ ಬೆಂಗಳೂರಿನ ಸುರಕ್ಷಾ ಕಾರ್‌ ಕೇರ್‌ ಪ್ರೈ. ಲಿ. ನ ಆಡಳಿತ ನಿರ್ದೇಶಕ ಬಿ.ಪಿ. ರಾಮ್‌ಪ್ರಸಾದ್‌ ರೈಯವರಿಗೆ ಗೌರವಾರ್ಪಣೆ ನೆರವೇರಿತು. ಇಂಟರ್‌ಲಾಕ್‌ ಅಳವಡಿಕೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ರಾಮ್‌ಪ್ರಸಾದ್‌ ರೈಯವರು ʻನಮ್ಮ ಸಂಸ್ಕೃತಿ ಉಳಿಯಬೇಕೆಂದರೆ ಇಂತಹ ಶಾಲೆಗಳು ಬೆಳೆಯಬೇಕು. ನಾವು ಬೆಳೆಯುತ್ತಿರಬೇಕಾದರೆ ಪಟ್ಟ ಕಷ್ಟ ಉಳಿದವರು ಪಡಬಾರದು ಎಂಬ ನೆಲೆಯಲ್ಲಿ ನಮ್ಮ ಕಂಪೆನಿಯ ಲಾಭಾಂಶದಲ್ಲಿ ಸ್ವಲ್ಪ ಭಾಗವನ್ನು ಧಾರ್ಮಿಕ, ಶೈಕ್ಷಣಿಕವಾಗಿ ಮಕ್ಕಳ ಕಲಿಕೆಗೆ ನೀಡುತ್ತಿದ್ದೇವೆ. ನಮ್ಮ ಮನೆಯನ್ನು ಮೊದಲು ಸರಿಪಡಿಸಿಕೊಂಡು ಆಮೇಲೆ ಸಮಾಜ ಸರಿಪಡಿಸಬಹುದು. ಭಗವದ್ಗೀತೆಯ ಗೀತಾ ಸಾರ ನಮ್ಮ ಜೀವನಕ್ಕೆ ಅನೇಕ ಪಾಠ ಕಲಿಸಿಕೊಡುತ್ತದೆ. ಎಲ್ಲಾ ಧರ್ಮಗಳು ಬೇಕು. ಆದರೆ ನನ್ನ ಧರ್ಮವನ್ನು ಬಿಟ್ಟುಕೊಡಲ್ಲ ಎಂಬ ಭಾವನೆ ನನ್ನದು. ಹಿಂದು ಸಂಸ್ಕೃತಿ ಉಳಿದರೆ ಪ್ರಪಂಚ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಮಾಡುತ್ತಿರುವ ಕೆಲಸಗಳು ಶ್ಲಾಘನೀಯವಾದುದು. ಅವರಿಗೆ ನಾವೆಲ್ಲಾ ಸಹಕಾರ ನೀಡಬೇಕು. ಶಾಲೆಯ ಬೆಳ್ಳಿಹಬ್ಬ ಕಾಮಗಾರಿಗಳಿಗೆ ನನ್ನಿಂದಾದ ಸಹಾಯ ನೀಡುತ್ತೇನೆ ಎಂದರು.


ಆವರಣ ಗೋಡೆಗೆ ಶಂಕುಸ್ಥಾಪನೆ ನೆರವೇರಿಸಿದ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯರು ಮಾತನಾಡಿ ʻದೇಶವನ್ನು ಬೆಳೆಸುವಲ್ಲಿ ಹಿಂದು ಧರ್ಮದ ಪಾತ್ರ ಅಪಾರವಾದುದು. ನಾನು ರಣಮಂಗಲ ದೇವಸ್ಥಾನದ ಮೊಕ್ತೇಸರನಾಗಿ 25 ವರ್ಷಗಳು ಸಂದಿವೆ. ಪ್ರಿಯದರ್ಶಿನಿ ಶಾಲೆಗೂ 25 ವರ್ಷಗಳು ಸಂದಿವೆ. ಹಾಗಾಗಿ ಈ ಶಾಲೆಯ ಅಭಿವೃದ್ಧಿಗೆ 25 ಸಾವಿರ ರೂ. ನೆರವನ್ನು ನೀಡುತ್ತೇನೆʼ ಎಂದರು. ಸುವರ್ಣ ಮಹೋತ್ಸವ ಆಚರಿಸುವ ಮೂಲಕ ಈ ಸಂಸ್ಥೆ ದಕ್ಷಿಣ ಭಾರತದಲ್ಲೇ ಉತ್ತಮ ಸಂಸ್ಥೆಯಾಗಿ ಬೆಳಗಲಿ ಎಂದು ಹಾರೈಸಿದರು.


ಅಕ್ಷಯ ಕಾಲೇಜು ಸಂಪ್ಯ ಇದರ ಆಡಳಿತ ನಿರ್ದೇಶಕ ಜಯಂತ ನಡುಬೈಲು ರವರು ಮಾತನಾಡಿ ʻಈ ಶಾಲೆಯ ವಾತಾವರಣ ಸಂಸ್ಕೃತಿ ಸಂಸ್ಕಾರದಿಂದ ಕೂಡಿದೆ. ಒಂದು ಶಿಕ್ಷಣ ಸಂಸ್ಥೆಯನ್ನು ನಡೆಸುವುದು ಹೇಗೆ ಎಂಬುದರ ಬಗ್ಗೆ ಸಾಕಷ್ಟು ನನಗೆ ಅನುಭವವಿದೆ. ಬೆಟ್ಟಂಪಾಡಿಯಲ್ಲಿ ಈ ಶಾಲೆಯ ಅಭಿವೃದ್ಧಿಗೆ ಪಣತೊಟ್ಟಿರುವ ವಿದ್ಯಾಭಿಮಾನಿಗಳು ಅಭಿನಂದನಾರ್ಹರುʼ ಎಂದರು.


ಪುತ್ತೂರಿನ ಖ್ಯಾತ ವೈದ್ಯರಾದ ಡಾ. ಸುರೇಶ್‌ ಪುತ್ತೂರಾಯರು ಮಾತನಾಡಿ ʻಸಹೃದಯ ಬಂಧುಗಳ ಸಹಕಾರದಿಂದ ಬೆಳ್ಳಿಹಬ್ಬ ಸಮಿತಿಯ ನಿರೀಕ್ಷೆಗಳು ಫಲಗೂಡಲಿ. ಬದುಕಿಗೆ ಎಲ್ಲವನ್ನೂ ನೀಡುವ ಶಿಕ್ಷಣ ಸಂಸ್ಥೆಗಳು ಇನ್ನಷ್ಟು ಬೆಳಗಿ ಬರಲಿ ಎಂದು ಆಶಿಸಿದರು.


ಪುತ್ತೂರು ಪ್ರಸಾದ್‌ ಇಂಡಸ್ಟ್ರೀಸ್‌ನ ಮ್ಹಾಲಕ ಶಿವಪ್ರಸಾದ್‌ ಶೆಟ್ಟಿ ಕಿನಾರ ರವರು ಮಾತನಾಡಿ ʻಈ ಶಾಲೆಗೆ ಬರುವಾಗ ಇಲ್ಲಿನ ಗೌರವ, ಆದರ ಆತಿಥ್ಯ ಬಹಳಷ್ಟು ಸಂತೋಷ ತಂದಿದೆ. ವಿವೇಕಾನಂದ ವಿದ್ಯಾಸಂಸ್ಥೆಯನ್ನು ನಾನು ಹತ್ತಿರದಿಂದ ಬಲ್ಲವನಿದ್ದೇನೆ. ಬೆಟ್ಟಂಪಾಡಿಯಂತಹ ಗ್ರಾಮೀಣ ಭಾಗದಲ್ಲಿ ಬೈಲಾಡಿ ಕುಟುಂಬ ಈ ಶಾಲೆಯನ್ನು ದೊಡ್ಡ ಕೊಡುಗೆಯಾಗಿ ನೀಡಿರುವುದು ಅಭಿನಂದನಾರ್ಹʼ ಎಂದರು.


ಮುಖ್ಯ ಅತಿಥಿಗಳಾಗಿ ಎಂಆರ್‌ಪಿಎಲ್‌ನ ಸೀತಾರಾಮ ರೈ ಕೈಕಾರ ಶುಭ ಹಾರೈಸಿದರು. ವೇದಿಕೆಯಲ್ಲಿ ಬೆಳ್ಳಿಹಬ್ಬ ಸಮಿತಿಯ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್‌ ರೈ ಬೈಲಾಡಿ ಉಪಸ್ಥಿತರಿದ್ದರು.


ವೇಮೂ. ದಿನೇಶ್‌ ಮರಡಿತ್ತಾಯ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್‌ ರೈ ಬೈಲಾಡಿ, ಸಹ ಶಿಕ್ಷಕ ಪ್ರಶಾಂತ್‌, ಆಡಳಿತ ಸಮಿತಿಯ ಕೋಶಾಧಿಕಾರಿ ಕರುಣಾಕರ ಶೆಟ್ಟಿ ಕೊಮ್ಮಂಡ, ಕುಳ ತರವಾಡಿನ ದಾಮೋದರ ಮಣಿಯಾಣಿ, ಮುಖ್ಯಗುರು ರಾಜೇಶ್‌ ನೆಲ್ಲಿತ್ತಡ್ಕ, ಉದ್ಯಮಿ ವರದರಾಯ ನಾಯಕ್‌ ರವರು ಅತಿಥಿಗಳನ್ನು ಗೌರವಿಸಿದರು. ಮುಖ್ಯಗುರು ರಾಜೇಶ್‌ ನೆಲ್ಲಿತ್ತಡ್ಕ ವಂದಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಹಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿ ವೃಂದ ಸಹಕರಿಸಿದರು. ನೂರಾರು ಪೋಷಕರು ಪಾಲ್ಗೊಂಡರು. ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

ಸಹೃದಯಿ ವಿದ್ಯಾಭಿಮಾನಿಗಳ ಸಹಕಾರದ ನಿರೀಕ್ಷೆಯಲ್ಲಿ – ಶಶಿಕುಮಾರ್‌ ರೈ ಬಾಲ್ಯೊಟ್ಟು
ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಮುಂಭಾಗದಲ್ಲಿ ವಿಶಾಲ ಬೃಹತ್‌ ಸಭಾಂಗಣ, ಸಭಾ ಮಂಟಪ, ಸಭಾಂಗಣಕ್ಕೆ ಇಂಟರ್‌ಲಾಕ್‌ ಅಳವಡಿಕೆ, ಆವರಣಗೋಡೆ ನಿರ್ಮಾಣಕ್ಕೆ ಯೋಜನೆ ಹಾಕಲಾಗಿದೆ. ಗ್ರಾಮೀಣ ಭಾಗದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಸಕ್ರೀಯವಾಗಿರುವ ಈ ವಿದ್ಯಾಸಂಸ್ಥೆಯ ಅಭಿವೃದ್ಧಿಯಲ್ಲಿ ಸರಕಾರದ ಕಡೆಯಿಂದ ಯಾವುದೇ ಅನುದಾನಗಳು ಬರುತ್ತಿಲ್ಲವಾದ್ದರಿಂದ ಪೋಷಕರು, ವಿದ್ಯಾಭಿಮಾನಿಗಳೆಲ್ಲಾ ವಿದ್ಯಾರ್ಥಿಗಳ ಕಲಿಕೆಯ ಹಿತದೃಷ್ಟಿಯಿಂದ ಅಭಿವೃದ್ಧಿ ಯೋಜನೆಯಲ್ಲಿ ಕೈ ಜೋಡಿಸಬೇಕೆಂದು ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ಶಶಿಕುಮಾರ್‌ ರೈ ಬಾಲ್ಯೊಟ್ಟು ವಿನಂತಿಸಿದರು.

ಶಾಶ್ವತ ಫಲಕದಲ್ಲಿ ದಾನಿಗಳ ಹೆಸರು
ಬೆಳ್ಳಿಹಬ್ಬದ ವಿವಿಧ ಕಾಮಗಾರಿಗಳಿಗೆ ನೆರವು ನೀಡುವ ದಾನಿಗಳ ಹೆಸರನ್ನು ಶಾಶ್ವತ ಫಲಕದಲ್ಲಿ ಪ್ರಕಟಿಸಲಾಗುತ್ತದೆ. 10 ಲಕ್ಷ ರೂ. ನೀಡಿದವರ ಹೆಸರನ್ನು ಸಭಾಂಗಣಕ್ಕೆ, 5 ಲಕ್ಷ ರೂ. ನೀಡಿದವರ ಹೆಸರನ್ನು ರಂಗಮಂದಿರಕ್ಕೆ.,, 2.5 ಲಕ್ಷ ನೀಡಿದವರನ್ನು ಆವರಣಗೋಡೆಗೆ, 1 ಲಕ್ಷ ರೂ. ನೀಡಿದವರನ್ನು ಗ್ರಾನೈಟ್‌ ಶಿಲೆಯಲ್ಲಿ ಹಾಗೂ 50 ಸಾವಿರ ನೀಡಿದವರ ಭಾವಚಿತ್ರವನ್ನು ಸಭಾಂಗಣದಲ್ಲಿ ಅಳವಡಿಸುವ ವಿಶೇಷ ಯೋಜನೆ ಇಟ್ಟುಕೊಂಡಿದ್ದೇವೆ ಎಂದು ಶಶಿಕುಮಾರ್‌ ರೈ ಬಾಲ್ಯೊಟ್ಟು ಹೇಳಿದರು. ಆವರಣ ಗೋಡೆಯ ಸಂಪೂರ್ಣ ವೆಚ್ಚವನ್ನು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಬೇಕಿದ್ದ ಬೆಂಗಳೂರಿನ ಉದ್ಯಮಿ ಬಾಲಕೃಷ್ಣ ರೈ ನರೈಮಾರ್‌ ರವರು ವಹಿಸುವುದಾಗಿ ಶಶಿಕುಮಾರ್‌ ರೈ ಘೋಷಿಸಿದರು.

ದಾನಿಗಳಿಂದ ನೆರವು ಹಸ್ತಾಂತರ
ಇದೇ ವೇಳೆ ಬೆಳ್ಳಿಹಬ್ಬದ ವಿವಿಧ ಕಾಮಗಾರಿಗಳಿಗೆ ಪೋಷಕರು ಹಾಗೂ ದಾನಿಗಳು ಸಭೆಯಲ್ಲಿ ಧನ ಸಹಾಯವನ್ನು ಹಸ್ತಾಂತರಿಸಿದರು. ಪುರೋಹಿತರಾದ ರಾಧಾಕೃಷ್ಣ ಭಟ್‌ ರವರು ರೂ. 1 ಲಕ್ಷ, ವೇ.ಮೂ. ದಿನೇಶ್‌ ಮರಡಿತ್ತಾಯ ಗುಮ್ಮಟೆಗದ್ದೆಯವರು ರೂ. 1 ಲಕ್ಷ, ನೋಟರಿ ನ್ಯಾಯವಾದಿ ಬೆಳ್ಳಿಹಬ್ಬ ಸಮಿತಿ ಗೌರವಾಧ್ಯಕ್ಷ ಚಿದಾನಂದ ಬೈಲಾಡಿಯವರು ರೂ. 1 ಲಕ್ಷ, ಉದ್ಯಮಿ ಸತೀಶ್‌ ರೈ ಕಟ್ಟಾವುರವರು ರೂ. 1 ಲಕ್ಷ, ಮಂಗಳೂರಿನ ಉದ್ಯಮಿ ಜನಾರ್ದನ ಪೂಜಾರಿ ಪದಡ್ಕರವರು ರೂ. 1 ಲಕ್ಷ, ಪ್ರಕಾಶ್‌ ರೈ ಬೈಲಾಡಿಯವರು ರೂ. 50 ಸಾವಿರ, ಉದ್ಯಮಿ ಯತೀಶ್‌ ರೈ ಚೆಲ್ಯಡ್ಕರವರು ರೂ. 50 ಸಾವಿರ, ಮುಖ್ಯಗುರು ರಾಜೇಶ್‌ ನೆಲ್ಲಿತ್ತಡ್ಕರವರು ರೂ. 50 ಸಾವಿರ, ಶುಭಕರ ರೈ ಬೈಲಾಡಿಯವರು ರೂ. 50 ಸಾವಿರ, ವಿಮಲ ರೈ ನೀರ್ಪಾಡಿಯವರು ರೂ. 25 ಸಾವಿರ, ವರದರಾಯ ನಾಯಕ್‌ ರವರು ರೂ. 25 ಸಾವಿರ ನೆರವನ್ನು ಅಧ್ಯಕ್ಷ ರಂಗನಾಥ ರೈ ಗುತ್ತುರವರಿಗೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here