ವರದಿ: ಸಂತೋಷ್ ಕುಮಾರ್ ಶಾಂತಿನಗರ
ಪುತ್ತೂರು: ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳಿಗೆ ಹೊಸ ವರ್ಷದ ಆರಂಭದಲ್ಲಿ ಚುನಾವಣೆಯ ಯೋಗ ಕೂಡಿ ಬರುವ ಭರವಸೆ ಮೂಡಿದೆ.
ರಾಜ್ಯ ಸರಕಾರ ಚುನಾವಣೆಗೆ ಈಗಾಗಲೇ ತಯಾರಿ ನಡೆಸುತ್ತಿದ್ದು ಚುನಾವಣಾ ಆಯೋಗ ಕೂಡ ಸಕಲ ಸಿದ್ಧತೆ ಆರಂಭಿಸಿದೆ. ಪುತ್ತೂರು, ಕಡಬ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಪುತ್ತೂರು ನಗರಸಭೆಗೆ ಸರಣಿಯಾಗಿ ಚುನಾವಣೆ ಪರ್ವ ನಡೆಯಲಿದ್ದು 2026ನೇ ಇಸವಿಯ ಚುನಾವಣೆ ಹಬ್ಬದ ನಿರೀಕ್ಷೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಈಗಾಗಲೇ ಕಾರ್ಯ ಯೋಜನೆ ಶುರುವಾಗಿದೆ. ಜನಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸಿದವರು ಮರು ಆಯ್ಕೆ ಬಯಸಿದರೆ ಬಹುತೇಕ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗಾಗಿ ಹುಡುಕಾಟ ನಡೆಯುತ್ತಿದೆ.
ಚುನಾವಣಾ ಪರ್ವ ಆರಂಭ:
ಸಕಾಲಕ್ಕೆ ಚುನಾವಣೆ ನಡೆಸಬೇಕಾದ ಸಂವಿಧಾನಿಕ ಹೊಣೆಗಾರಿಕೆಯ ನಡುವೆಯೂ ನಾನಾ ನೆಪ, ಅಡ್ಡಿಯೊಂದಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮುಂದೂಡುತ್ತಾ ಬಂದ ಕಾರಣ ಪ್ರಜಾಪ್ರಭುತ್ವದ ವಿಕೇಂದ್ರೀಕರಣದ ಆಶಯ ರಾಜ್ಯದಲ್ಲಿ ಸೊರಗಿದೆ. ಚುನಾವಣೆಯನ್ನು ಮತ್ತಷ್ಟು ಮುಂದೂಡಿಕೊಂಡು ಹೋಗುವುದು ಚುನಾಯಿತ ಸರಕಾರಕ್ಕೆ ಗೌರವ ತರುವುದಿಲ್ಲ ಎಂಬ ಚರ್ಚೆಗಳು ಆಡಳಿತಾರೂಢ ಕಾಂಗ್ರೆಸ್‌ನಲ್ಲಿಯೇ ಶುರುವಾಗಿದ್ದು ಚುನಾವಣೆ ನಡೆಸುವ ಒತ್ತಡ ಸೃಷ್ಟಿಯಾಗಿದೆ. ಅಂತೆಯೇ ಚುನಾವಣೆಗೆ ಅಣಿಯಾಗಲು ಕಾಂಗ್ರೆಸ್‌ನಿಂದ ಪಕ್ಷದ ಕೇಡರ್‌ಗೆ ಸಂದೇಶ ರವಾನೆಯಾಗಿದೆ. ಇದರ ಸುಳಿವರಿತು ಬಿಜೆಪಿ ಮತ್ತು ಜೆಡಿಎಸ್ ಸಹ ಸಿದ್ಧತೆ ಆರಂಭಿಸಿದೆ. ಕೋರ್ಟ್ ಪ್ರಕರಣಗಳು ಸೇರಿ ನಾನಾ ಕಾರಣಗಳನ್ನು ನೀಡಿ ಚುನಾವಣೆ ಮುಂದೂಡಿಕೊಂಡು ಬಂದಿರುವ ಸರಕಾರದ ನಿಲುವು ಈಗ ಬದಲಾಗಿದೆ. ೨೦೨೬ರಲ್ಲಿ ಚುನಾವಣೆ ನಡೆಸದಿದ್ದರೆ ವಿಕೇಂದ್ರೀಕರಣ ವ್ಯವಸ್ಥೆಯನ್ನು ಆಪೋಶನ ಮಾಡಿದ ಅಪಕೀರ್ತಿ ತಟ್ಟಲಿದೆ. ಹಾಗಾಗಿ ರಾಜಕೀಯ ಪಕ್ಷಗಳ ಚಿಹ್ನೆ ಹೊರತಾಗಿ ನಡೆಯುವ ಗ್ರಾಮ ಪಂಚಾಯಿತಿಗಳ ಚುನಾವಣೆ ಮೂಲಕ ನಾಡಿನ ಜನರ ನಾಡಿಮಿಡಿತ ಅರಿತ ಬಳಿಕ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ಅಣಿಯಾಗುವ ಚಿಂತನೆ ಸರಕಾರದಲ್ಲಿ ನಡೆದಿದೆ. ಜತೆಗೆ ಪಟ್ಟಣ ಪಂಚಾಯತ್, ನಗರ ಪಂಚಾಯತ್, ಪುರಸಭೆ, ನಗರಸಭೆ, ನಗರ ಪಾಲಿಕೆಗಳಿಗೂ ಚುನಾವಣೆಯ ಪರ್ವ ಆರಂಭಗೊಳ್ಳಲಿದೆ.
ಮೀಸಲು ಬಾಕಿ:
ರಾಜ್ಯದ 239 ತಾಲೂಕು ಪಂಚಾಯಿತಿಗಳ 3,671 ತಾ.ಪಂ. ಕ್ಷೇತ್ರಗಳು ಹಾಗೂ 31 ಜಿಲ್ಲೆಗಳ 1,130 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ 2020-21ನೇ ಸಾಲಿನಿಂದ ಚುನಾವಣೆ ಬಾಕಿ ಉಳಿದಿದೆ. ಜಿ.ಪಂ. ಮತ್ತು ತಾ.ಪಂ. ಕ್ಷೇತ್ರದ ಪುನರ್ವಿಂಗಡಣೆಯನ್ನು ಸರಕಾರ ಒಪ್ಪಿದ್ದರೂ ಮೀಸಲು ಅಂತಿಮಗೊಳಿಸಿ ಇನ್ನೂ ಚುನಾವಣಾ ಆಯೋಗಕ್ಕೆ ಕೊಟ್ಟಿಲ್ಲ. ಈ ವಿವಾದ ಕೋರ್ಟ್ ಅಂಗಳದಲ್ಲಿದ್ದು ಬಹುತೇಕ ಐದು ವರ್ಷಗಳ ಒಂದು ಅವಧಿಯಲ್ಲಿ ಜನಪ್ರತಿನಿಧಿಗಳೇ ಇಲ್ಲದೆ ಜಿ.ಪಂ. ಮತ್ತು ತಾ.ಪಂ.ಗಳು ಸೊರಗಿವೆ. ಚುನಾವಣೆ ನಡೆಸಲು ಸರಕಾರ ಬಯಸಿದರೆ ಕೋರ್ಟ್ ಪ್ರಕರಣ ಇತ್ಯರ್ಥವಾಗಿ ಚುನಾವಣೆ ಹಾದಿ ಸುಗಮವಾಗುವುದು ಕಷ್ಟವಲ್ಲ. ಹಾಗಾಗಿ ಸೂಕ್ತ ಸಮಯದ ಲೆಕ್ಕಾಚಾರದಲ್ಲಿ ತೊಡಗಿದ್ದು ಮುಂದಿನ ಏಪ್ರಿಲ್ ವೇಳೆಗೆ ಮುಹೂರ್ತ ನಿಗದಿಯಾಗುವ ನಿರೀಕ್ಷೆಯಿದೆ. ಗ್ರಾ.ಪಂ, ಜಿ.ಪಂ., ತಾ.ಪಂ.ಗಳ ಜತೆಗೆ ಅವಧಿ ಮುಗಿಯುತ್ತಿರುವ 185 ನಗರ/ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಲು ಸರಕಾರ ಸಿದ್ಧತೆ ನಡೆಸಿದೆ.
ಗ್ರಾಮ ಪಂಚಾಯಿತಿಯೇ ಫಸ್ಟ್
ರಾಜ್ಯದ ಸುಮಾರು 6 ಸಾವಿರ ಗ್ರಾಮ ಪಂಚಾಯಿತಿಗಳ ಪೈಕಿ ಬಹಳಷ್ಟು ಸಂಸ್ಥೆಗಳ ಅವಧಿ ಇದೇ ಡಿಸೆಂಬರ್ ಅಥವಾ ಜನವರಿಗೆ ಮುಗಿಯುತ್ತಿದೆ. ಹಾಗಾಗಿ ಈ ವೇಳೆಗೆ ಚುನಾವಣಾ ಪ್ರಕ್ರಿಯೆ ಶುರುವಾಗಬೇಕಿತ್ತು. ಗ್ಯಾರಂಟಿ ಯೋಜನೆಗಳ ಫಲಶ್ರುತಿ ಮೇಲೆ ಬಹಳಷ್ಟು ನಿರೀಕ್ಷೆ ಮತ್ತು ಭರವಸೆ ಹೊಂದಿರುವ ರಾಜ್ಯ ಸರಕಾರ ಗ್ರಾಮ ಪಂಚಾಯಿತಿ ಚುನಾವಣೆ ಮೂಲಕವೇ ಸ್ಥಳೀಯ ಸಂಸ್ಥೆಗಳ ಸಾಲುಸಾಲು ಚುನಾವಣೆ ಆರಂಭಿಸಲು ಬಯಸಿದೆ. ಹಾಗಾಗಿ ಸದ್ಯದಲ್ಲೇ ಗ್ರಾಮ ಪಂಚಾಯಿತಿಗಳ ಚುನಾವಣೆ ಪ್ರಕ್ರಿಯೆ ಶುರುವಾಗಿ ಜನವರಿ ಹೊತ್ತಿಗೆ ಚುನಾವಣೆ ನಡೆಯಬಹುದು ಎಂದು ಹೇಳಲಾಗುತ್ತಿದೆ. ಗ್ರಾ.ಪಂ. ಚುನಾವಣೆಯ ಬಳಿಕ ತಾ.ಪಂ. ಮತ್ತು ಜಿ.ಪಂ. ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಚುನಾವಣೆಗಳಿಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಸಿದ್ಧತೆ ನಡೆಸುತ್ತಿರುವ ಚುನಾವಣಾ ಆಯೋಗ ಇವಿಎಂ ಬದಲು ಬ್ಯಾಲೆಟ್ ಪೇಪರ್‌ನಲ್ಲಿ ಮತದಾನ ನಡೆಸುವುದರ ಬಗೆಗಿನ ಸಾಧಕ ಬಾಧಕಗಳ ಕುರಿತೂ ಚಿಂತನ ಮಂಥನ ನಡೆಸುತ್ತಿದೆ.