ಪುತ್ತೂರು: ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆಯ ಸ್ಥಾಪಕರಾದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಅ.13ಕ್ಕೆ ಮುಂದೂಡಿಕೆಯಾಗಿದೆ.
ಅಡ್ವೋಕೇಟ್ ಜನರಲ್, ಡಿವೈಎಸ್ಪಿ ಹಾಜರು
ಬಂಟ್ವಾಳ ಡಿವೈಎಸ್ಪಿಯವರ ಕೋರಿಕೆ ಮೇರೆಗೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಸೆ.18ರಂದು ತನ್ನನ್ನು ಒಂದು ವರ್ಷದ ಅವಧಿಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಅ.8ರಂದು ಹೈಕೋರ್ಟ್ನಲ್ಲಿ ನಡೆದ ವೇಳೆ ರಾಜ್ಯ ಸರಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮತ್ತು ಬಂಟ್ವಾಳ ಡಿವೈಎಸ್ಪಿ ವಿಜಯಪ್ರಸಾದ್ ಹಾಜರಿದ್ದರು.
ಮಹೇಶ್ ಶೆಟ್ಟಿ ತಿಮರೋಡಿ ಪರ ವಕೀಲರಾದ ತಾರನಾಥ ಪೂಜಾರಿ ಮೂಡಬಿದ್ರೆ, ಎಂ.ಆರ್.ಬಾಲಕೃಷ್ಣ ಸುಳ್ಯ ಮತ್ತು ಮೋಹಿತ್ ಕುಮಾರ್ ಪುತ್ತೂರು ಅವರು ಉಪಸ್ಥಿತರಿದ್ದರು.
ಸೆ.30ರಂದು ನಡೆದಿದ್ದ ಅರ್ಜಿಯ ವಿಚಾರಣೆ ವೇಳೆ, ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಿರುವ ಆದೇಶಕ್ಕೆ ಅ.8ರವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರು ಅ.8ರಂದು ಮತ್ತೆ ಅರ್ಜಿಯ ವಿಚಾರಣೆ ನಡೆಸಿದರು. ಈ ವೇಳೆ ವಾದ ಮಂಡನೆಗೆ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಕಾಲಾವಕಾಶ ಕೇಳಿದರು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಯವರು ವಿಚಾರಣೆಯನ್ನು ಅ.13ಕ್ಕೆ ಮುಂದೂಡಿದರು. ಅವತ್ತು ಅಡ್ವೋಕೇಟ್ ಜನರಲ್ ಮತ್ತು ಮಹೇಶ್ ಶೆಟ್ಟಿ ಅವರ ಪರ ವಕೀಲರ ವಾದ ಪ್ರತಿವಾದ ಆಲಿಸಿ ನ್ಯಾಯಮೂರ್ತಿ ಅವರು ಆದೇಶ ಹೊರಡಿಸುವ ಸಾಧ್ಯತೆ ಇದೆ. ಮಹೇಶ್ ಶೆಟ್ಟಿ ಅವರು ಈ ಪ್ರಕರಣದಲ್ಲಿ ರಾಜ್ಯ ಸರಕಾರ, ಪುತ್ತೂರು ಎ.ಸಿ, ಬಂಟ್ವಾಳ ಡಿವೈಎಸ್ಪಿ ಮತ್ತು ಬೆಳ್ತಂಗಡಿ ಪೊಲೀಸ್ ಇನ್ಸ್ಪೆಕ್ಟರ್ ಅವರನ್ನು ಪ್ರತಿವಾದಿಯಾಗಿಸಿದ್ದಾರೆ.