ಪೆರ್ನೆ: ಟ್ಯಾಂಕರ್ ದುರಂತ- 13 ಮಂದಿ ದುರ್ಮರಣ ಪ್ರಕರಣ

0

ಪರಿಹಾರ ಮೊತ್ತ ಕಡಿತಗೊಳಿಸಲು ಹೈಕೋರ್ಟ್ ನಿರಾಕರಣೆ

ಬೆಂಗಳೂರು: 2013ರಲ್ಲಿ ಪೆರ್ನೆಯಲ್ಲಿ ಸಂಭವಿಸಿದ್ದ ಎಲ್‌ಪಿಜಿ ಟ್ಯಾಂಕರ್ ದುರಂತದಲ್ಲಿ ಮೃತಪಟ್ಟಿದ್ದ 13 ಮಂದಿಯ ಕುಟುಂಬಗಳಿಗೆ ಸರ್ಕಾರ ಹೆಚ್ಚುವರಿ ಪರಿಹಾರ ಪ್ರಕಟಿಸಿರುವುದರಿಂದ, ಆ ಮೊತ್ತವನ್ನು ವಿಮಾ ಪರಿಹಾರದ ಮೊತ್ತದಲ್ಲಿ ಕಡಿತಗೊಳಿಸುವಂತೆ ಕೋರಿ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.


ಎಲ್‌ಪಿಜಿ ಟ್ಯಾಂಕರ್‌ನ ವಿಮೆದಾರರಾದ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಪಿ. ಶ್ರೀಸುಧಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸರ್ಕಾರ ನೀಡಿರುವ ಹೆಚ್ಚುವರಿ ಪರಿಹಾರ (ಎಕ್ಸ್‌ಗ್ರೇಷಿಯಾ) ಕುಟುಂಬಗಳಿಗೆ ಉಂಟಾಗಿರುವ ಆದಾಯ ನಷ್ಟವನ್ನು ಭರಿಸಿಲು ನೀಡಿರುವ ಸಾಮಾಜಿಕ ಭದ್ರತೆಯ ಭಾಗವಾಗಿದೆ.ಅದಕ್ಕೂ ವಿಮೆ ಪರಿಹಾರಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದೆ.


ಎಲ್‌ಪಿಜಿ ಟ್ಯಾಂಕರ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರವಾಗಿ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪಾವತಿಸಿದ ಎಕ್ಸ್‌ಗ್ರೇಷಿಯಾವನ್ನು ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (ಎಂಎಸಿಟಿ) ಘೋಷಿಸಿರುವ ಪರಿಹಾರದಿಂದ ಕಡಿತಗೊಳಿಸಲಾಗುವುದಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.


ಸರ್ಕಾರ ಸಂತ್ರಸ್ತರಿಗೆ ನೀಡುವ ಎಕ್ಸ್‌ಗ್ರೇಷಿಯಾವನ್ನು ಕಡಿತಗೊಳಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.ಎಕ್ಸ್‌ಗ್ರೇಷಿಯಾ ಪಾವತಿ ಸಾಮಾಜಿಕ ಭದ್ರತೆಯ ಭಾಗವೇ ಅಥವಾ ಆದಾಯ ನಷ್ಟಕ್ಕೆ ಪರಿಹಾರವೇ ಎಂಬುದು ಸ್ಪಷ್ಟವಾಗಿಲ್ಲ ಹಾಗೂ ಎಕ್ಸ್‌ಗ್ರೇಷಿಯಾ ಲೆಕ್ಕಾಚಾರಕ್ಕೆ ಆಧಾರವನ್ನು ಉಲ್ಲೇಖಿಸಲಾಗಿಲ್ಲ. ಎಲ್‌ಪಿಜಿ ಟ್ಯಾಂಕರ್‌ನಿಂದಾಗಿ ಅಪಘಾತ ಸಂಭವಿಸಿದ್ದು, ಅದಕ್ಕೆ ಚಾಲಕನ ನಿರ್ಲಕ್ಷ್ಯವೂ ಕಾರಣವಾಗಿದೆ ಎಂದು ಆದೇಶದಲ್ಲಿ ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮೋಟಾರು ವಾಹನ ಕಾಯ್ದೆ ಅಡಿಯಲ್ಲಿನ ಕ್ಲೇಮ್‌ಗಳನ್ನು ಪಡೆಯಲು ಸಂತ್ರಸ್ತರಿಗೆ ಅನುಮತಿಸಿದ್ದು, ಸಂಪೂರ್ಣ ಪರಿಹಾರದ ಮೊತ್ತವನ್ನು ಬಡ್ಡಿಯೊಂದಿಗೆ ಠೇವಣಿ ಇಡುವಂತೆ ವಿಮಾ ಕಂಪನಿಗೆ ನಿರ್ದೇಶಿಸಿದೆ.


13 ಜನ ಸಾವಿಗೀಡಾಗಿದ್ದರು
ಮಂಗಳೂರು-ಬಂಟ್ವಾಳ ಹೆದ್ದಾರಿಯ ಪೆರ್ನೆಯಲ್ಲಿ 2013ರ ಏಪ್ರಿಲ್ 9ರಂದು ಎಲ್‌ಪಿಜಿ ಟ್ಯಾಂಕರ್ ಪಲ್ಟಿಯಾಗಿತ್ತು. ಅನಿಲ ಸೋರಿಕೆಯಾಗಿ ಸ್ಪೋಟಗೊಂಡ ಹಿನ್ನೆಲೆಯಲ್ಲಿ ಅಗ್ನಿ ಅವಘಡ ಸಂಭವಿಸಿ 13 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದರು. ವಸತಿ ಕಟ್ಟಡಗಳು ಮತ್ತು ಅಂಗಡಿಗಳು ಸೇರಿದಂತೆ ಅನೇಕ ಕಟ್ಟಡಗಳು ಮತ್ತು ರಸ್ತೆಯುದ್ದಕ್ಕೂ ಇದ್ದ ವಾಹನಗಳೂ ಹಾನಿಗೊಳಗಾಗಿದ್ದವು. ಟ್ಯಾಂಕರ್ ಎಚ್‌ಪಿಸಿಎಲ್‌ಗೆ ಸೇರಿದ್ದರಿಂದ ಆ ಸಂಸ್ಥೆ ಮತ್ತು ರಾಜ್ಯ ಸರ್ಕಾರ ಮೃತರ ಕುಟುಂಬ ಸದಸ್ಯರಿಗೆ ಮತ್ತು ಗಾಯಗೊಂಡವರಿಗೆ ಹಲವು ವಿಧದ ಪರಿಹಾರ ಮೊತ್ತ ವಿತರಿಸಿದ್ದವು.ಈ ಮಧ್ಯೆ ಪರಿಹಾರ ಕೋರಿ ಸಂತ್ರಸ್ತರ ಕುಟುಂಬ ಸಲ್ಲಿಸಿದ್ದ ಅರ್ಜಿಗಳನ್ನು 2016ರ ಡಿಸೆಂಬರ್‌ನಲ್ಲಿ ಮಾನ್ಯ ಮಾಡಿದ್ದ ಮಂಗಳೂರಿನ ಎಂಎಸಿಟಿ, ಅವರಿಗೆ ಪರಿಹಾರ ಪಾವತಿಸಲು ಆದೇಶಿಸಿತ್ತು.


ಎಂಎಟಿಸಿ ಆದೇಶವನ್ನು 8 ಪ್ರತ್ಯೇಕ ಮೇಲ್ಮನವಿಗಳಲ್ಲಿ ಪ್ರಶ್ನಿಸಿದ್ದ ವಿಮಾ ಕಂಪನಿ, ರಾಜ್ಯ ಸರ್ಕಾರ ಸಂತ್ರಸ್ತರಿಗೆ ಎಕ್ಸ್‌ಗ್ರೇಷಿಯಾ ಮೊತ್ತ ಪಾವತಿಸಿದೆ. ಆದರೆ, ಆ ಮೊತ್ತವನ್ನು ನ್ಯಾಯಮಂಡಳಿಯು ಪರಿಹಾರದಲ್ಲಿ ಕಡಿತಗೊಳಿಸಿಲ್ಲ. ಅಲ್ಲದೆ, ಘಟನೆಯು ಮೋಟಾರು ವಾಹನ ಅಪಘಾತವಲ್ಲ. ಬದಲಿಗೆ ಬೆಂಕಿಯ ಅವಘಡವಾಗಿದೆ. ಕಟ್ಟಡ ಮಾಲಕರಿಗೆ ಮತ್ತು ಅಪಘಾತಕ್ಕೊಳಗಾದವರಿಗೆ ಎಚ್‌ಪಿಸಿಎಲ್ ಈಗಾಗಲೇ ಎಕ್ಸ್‌ಗ್ರೇಷಿಯಾ ಮೊತ್ತ ಪಾವತಿಸಿದೆ. ಆದ್ದರಿಂದ, ಆ ಮೊತ್ತವನ್ನು ಪರಿಹಾರ ಮೊತ್ತದಲ್ಲಿ ಕಡಿತಗೊಳಿಸಬೇಕು ಎಂದು ಕೋರಿತ್ತು.

LEAVE A REPLY

Please enter your comment!
Please enter your name here