ಪುತ್ತೂರು: ಆಕ್ಸಿಸ್ ಮ್ಯಾಕ್ಸ್ ಇನ್ಶೂರೆನ್ಸ್ ಕಲಾ ರತ್ನ ಹಾಗೂ ಸೇವಾ ರತ್ನ ಪ್ರಶಸ್ತಿ ಬಾಲಕೃಷ್ಣ ಪೂಜಾರಿ ಸಣ್ಣಗುತ್ತು ಅವರಿಗೆ ಲಭಿಸಿದೆ.
ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಸಣ್ಣಗುತ್ತು ಚೆನ್ನಪ್ಪ ಪೂಜಾರಿ ಶಿವಮ್ಮ ದಂಪತಿಗಳ ಪುತ್ರರಾದ ಬಾಲಕೃಷ್ಣ ಪೂಜಾರಿ ಅವರು ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪೂರೈಸಿ ತಂದೆಯ ಜೊತೆಗೆ ಕೃಷಿಯಲ್ಲಿ ತೊಡಗಿಸಿಕೊಂಡು ಉತ್ತಮ ಕೃಷಿಕರಾಗಿ ಹೆಸರುಗಳಿಸಿಕೊಂಡವರು.
ಕೃಷಿ ಜೊತೆಗೆ ಪೈಂಟಿಂಗ್ ವೃತ್ತಿ ಮಾಡಿಕೊಂಡು ಜೊತೆಗೆ ಸಮಾಜದಲ್ಲಿ ಬಡವರಿಗೆ ಆಶಕ್ತರಿಗೆ ತನ್ನಿಂದೇ್ನಾದರೂ ಉಪಯೋಗವಾಗಬೇಕು ಎಂಬ ದೃಷ್ಟಿಕೋನವನ್ನಿಟ್ಟುಕೊಂಡು ಸುಮಾರು 24 ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿಕೊಂಡು ಸಮಾಜ ಸೇವೆ ಮಾಡುತ್ತಿದ್ದು, ಶಿಬಿರಗಳ ಮೂಲಕ 2463 ಕನ್ನಡಕಗಳನ್ನು ವಿತರಣೆ ಮಾಡಿರುತ್ತಾರೆ. ಕೊರೋನ ಪೀಡಿತ ಸಂದರ್ಭದಲ್ಲಿ ಅನೇಕ ಬಡಜನರಿಗೆ ಮತ್ತು ಕೊರೋನ ಪೀಡಿತರಿಗೆ ಮಾಸ್ಕ್ ಮತ್ತು ಆಹಾರದ ಕಿಟ್ ಗಳನ್ನು ವಿತರಣೆ ಮಾಡಿದ್ದಾರೆ.
ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆ ಅಳಿಕೆ ವಿದ್ಯಾಸಂಸ್ಥೆಯ ಅನೇಕ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಊರಿನ ಕೆಲವು ಅಂಗನವಾಡಿ ಕೇಂದ್ರಗಳಿಗೆ ಹೆತ್ತವರ ಸ್ಮರಣಾರ್ಥವಾಗಿ ಧ್ವಜ ಸ್ಥಂಭವನ್ನು ಕೊಡುಗೆಯಾಗಿ ನೀಡಿದ್ದಾರೆ. ಪ್ರಸ್ತುತ ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಅಧ್ಯಕ್ಷರಾಗಿಯೂ, ಅಳಿಕೆ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ, ಅಳಿಕೆ ಹಾಲು ಉತ್ಪದಕರ ಸಂಘದ ನಿರ್ದೇಶಕರಾಗಿ ಅನೇಕ ಸಂಘ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಬಯ್ಯಮಲ್ಲಿಗೆ, ಕರಿಮಳೆತ ನಿರೆಲ್, ಕಾವೇರಿ, ಮೋಕೆದ ಕಡಲ್, ಸರಸ್ವತಿ, ಭಕ್ತಕುಂಬಾರ, ಗಂಗಾರಾಮ್, ನಾಗಬನ, ಈ ಇಲ್ಲ್ ಬಗೆವಂದ್, ಉಡಲ್ ಮೋಕೆದ ಕಡಲ್, ಒಂಜಿ ಪೊಣ್ಣು ಆಜಿ ಕಣ್ಣ್ ಮುಂತಾದ ಅನೇಕ ನಾಟಕಗಳಿಗೆ ಅಭಿನಯದ ಜೊತೆಗೆ ನಿರ್ದೇಶನ ಮಾಡಿ ಸತತವಾಗಿ 300ಕ್ಕಿಂತಲೂ ಹೆಚ್ಚು ನಾಟಕ ಪ್ರದರ್ಶನ ಮಾಡಿರುತ್ತಾರೆ. ಯುವಕ ಮಂಡಲ ಚೆಂಡುಕಲ, ಅಳಿಕೆಯಲ್ಲಿ 10 ನೇ ವಯಸ್ಸಿನಿಂದಲೇ ಶಾಖೆಯಲ್ಲಿ ಭಾಗವಹಿಸುತ್ತ ಪೌರಾಣಿಕ ನಾಟಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸುತ್ತ ಸತತವಾಗಿ 45 ವರ್ಷಗಳ ಕಾಲ ರಂಗಭೂಮಿಯಲ್ಲಿ ದುಡಿದ ರಂಗಕರ್ಮಿಯಾಗಿದ್ದಾರೆ.
ಚಂದನ ವಾಹಿನಿಯಲ್ಲಿ ಪ್ರದರ್ಶನವಾಗುತ್ತಿದ್ದ ಕೋಟಿ ಚೆನ್ನಯ ಮತ್ತು ಪಾಪದ ಪಿರವು ಧಾರವಾಹಿ ಗಳಲ್ಲಿ ಅಭಿನಯಿಸಿರುತ್ತಾರೆ. ರಂಗಭೂಮಿಯಲ್ಲಿ ಸಲ್ಲಿಸಿದ ಸೇವೆಗೆ
ಆಕ್ಸಿಸ್ ಮ್ಯಾಕ್ಸ್ ಇನ್ಶೂರೆನ್ಸ್ ಕಲಾರತ್ನ ಮತ್ತು ಸಾಮಾಜಿಕ ಸೇವೆಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.