ಪುತ್ತೂರು: ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ ಕೋಟ ಶಿವರಾಮ ಕಾರಂತರ ಬಾಲವನ ಪುತ್ತೂರು, ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ಇದರ ವತಿಯಿಂದ ಅ.10ರಂದು ಬಾಲವನ ಬಯಲು ರಂಗ ಮಂದಿರದಲ್ಲಿ ನಡೆದ ಡಾ ಕೋಟ ಶಿವರಾಮ ಕಾರಂತರ ಜನ್ಮದಿನೋತ್ಸವ ಮತ್ತು ಡಾ ಕೋಟ ಶಿವರಾಮ ಕಾರಂತರ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಳಗ್ಗಿನಿಂದ ರಾತ್ರಿಯ ತನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ ಸುಳ್ಯಪದವು ಪದಡ್ಕ ವಿಶ್ವಕಲಾ ನಿಕೇತನದಿಂದ ಕಾರಂತರಿಗೆ ನೃತ್ಯ ನಮನ ನಡೆಯಿತು. ದೀಪ ಪ್ರಜ್ವಲನೆಯ ಬಳಿಕ ಕೊಂಬೆಟ್ಟು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯ ನಡೆಯಿತು. ಅಪರಾಹ್ನ ಕಾರಂತರಿಗೆ ಬೊಳುವಾರು ಶ್ರೀಆಂಜನೇಯ ಮಹಿಳಾ ಯಕ್ಷಗಾನ ಕಲಾಸಂಘದಿಂದ ಶ್ರೀರಾಮ ನಿರ್ಯಾಣ ಯಕ್ಷಗಾನ ತಾಳಮದ್ದಳೆ, ಸಂಜೆ ನೀನಾಸಂ ಹೆಗ್ಗೋಡು ಇದರ ನಿವೃತ್ತ ಪ್ರಾಧ್ಯಾಪಕರಾದ ಬಿ. ಆರ್. ವೆಂಕಟರಮಣ ಐತಾಳ್ ರವರು ಕಾರಂತರ ರಂಗ ಸ್ಮರಣೆ, ಕಾರ್ಕಳ ಯಕ್ಷರಂಗಾಯಣದ ಕಲಾವಿದರಿಂದ ಕಾರಂತರ ರಚನೆಯ ಸೋಮಿಯ ಸೌಭಾಗ್ಯ ಎಂಬ ಗೀತಾ ನಾಟಕ ಪ್ರದರ್ಶನಗೊಂಡಿತು. ಬೆಳಗ್ಗೆ ಅತಿಥಿಗಳ ಮೆರವಣಿಗೆಯಲ್ಲಿ ಪಿಎಂಶ್ರೀ ವೀರಮಂಗಲ ಶಾಲೆಯ ವಿದ್ಯಾರ್ಥಿಗಳ ಆಕರ್ಷಕ ಬ್ಯಾಂಡ್ ಸೆಟ್ ಪಥ ಸಂಚಲನ ನಡೆಯಿತು.