ಪುತ್ತೂರು: ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು ಇದರ ಕಬಡ್ಡಿ ತಂಡಕ್ಕೆ ಸತತ ಮೂರನೇ ಬಾರಿಗೆ ಆಯ್ಕೆಯಾಗಿರುವ ಬಲ್ನಾಡು ನಿವಾಸಿ, ಮೂಡಬಿದ್ರೆ ಆಳ್ವಾಸ್ ಬ್ಯಾಚುರಲ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‌ನ ಡಾ. ಅರ್ಜುನ್ ಆಳ್ವರನ್ನು ಕರ್ನಾಟಕದ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ ಪ್ರಶಂಸಾ ಪತ್ರ ಹಾಗೂ ಚಿನ್ನದ ಪದಕ ನೀಡಿ ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ಉಪನಿಬಂಧಕ ಡಾ. ವಸಂತ ಶೆಟ್ಟಿ, ತಂಡದ ವ್ಯವಸ್ಥಾಪಕ ಐ.ಎಸ್ ನ್ಯಾಮಗೌಡ ಮತ್ತು ಕೋಚ್ ಸಿದ್ದು ಮಟ್ಟಿ ಹಾಜರಿದ್ದರು.
ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಐ.ಎಸ್ ಯಡವಾಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ದಕ್ಷಿಣ ಭಾರತ ವಲಯದ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ರಾಜೀವ ಗಾಂದಿ ಆರೋಗ್ಯ ವಿಜ್ಞಾನ ವಿ.ವಿ ಬೆಂಗಳೂರು ತಂಡವನ್ನು ಅವರು ಪ್ರತಿನಿಧಿಸಿದ್ದರು. ಇವರು ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಮಂಗಳೂರು ವಿಶ್ವವಿದ್ಯಾನಿಲಯದ ಕಬಡ್ಡಿ ತಂಡದ ಮಾಜಿ ಕಪ್ತಾನ, ಅಜಲಾಡಿ ಬೀಡು ಪ್ರವೀಣ್‌ಚಂದ್ರ ಆಳ್ವ ಮತ್ತು ಸುಮಲತಾ ದಂಪತಿ ಪುತ್ರ.