ಪುತ್ತೂರಿನಲ್ಲಿ ಗಾಂಧಿಸ್ಮೃತಿ, ಬೃಹತ್ ಜನಜಾಗೃತಿ ಸಮಾವೇಶ

0

ಸಹಾಯಧನ, ಮಾಸಾಶನ, ಅನುದಾನ ವಿತರಣೆ | ಠರಾವು ಮಂಡನೆ

ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಡಲು ತರಬೇತಿಯೊಂದು ಮಾಧ್ಯಮ- ಡಾ| ಡಿ. ವೀರೇಂದ್ರ ಹೆಗ್ಗಡೆ


ಪುತ್ತೂರು: ಮದ್ಯ ಸೇವಿಸಿದ ಮನುಷ್ಯ ಹತೋಟಿಯಿಲ್ಲದೆ ಕುಣಿಯುತ್ತಾನೆ. ಆದ್ದರಿಂದ ಮದ್ಯಪಾನ ನಿಲ್ಲಿಸಲು ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಅದಕ್ಕಾಗಿ ಮದ್ಯವರ್ಜನ ಶಿಬಿರದ ತರಬೇತಿ ಒಂದು ಮಾಧ್ಯಮ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಅ.15ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ಗಾಂಧಿಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ ಉದ್ಘಾಟಿಸಿ, ಮಹಾತ್ಮ ಗಾಂಧಿಜಿ ಮತ್ತು ಶ್ರೀ ಮಂಜುನಾಥ ಸ್ವಾಮಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ಯೋಜನೆಯ ಅನೇಕ ಕಾರ್ಯಕ್ರಮ ಜನಪರವಾಗಿದೆ. ಎಷ್ಟೋ ಮಂದಿಗೆ ಮದ್ಯವರ್ಜನ ಆದ ಬಳಿಕ ಏನು ಮಾಡಬೇಕೆಂದು ಗೊತ್ತಿರುವುದಿಲ್ಲ. ಹಾಗಾಗಿ ಅವರಿಗೆ ಸ್ವ ಉದ್ಯೋಗ ಕಾರ್ಯಕ್ರಮ ನೀಡಿದ್ದೇವೆ. ಈಗಾಗಲೇ 35 ಕೇಂದ್ರಗಳಲ್ಲಿ ಕಾರ್ಯಕ್ರಮ ನಡೆದಿದೆ. ಸಾವಿರಾರು ಮಂದಿ ನವಜೀವನ ಸದಸ್ಯರಿಗೆ ಸ್ವ ಉದ್ಯೋಗ ತರಬೇತಿ ಕೊಡಿಸಿದ್ದೇವೆ. ಗುಜರಾತಿನಲ್ಲಿ ಮದ್ಯಪಾನವಿಲ್ಲ. ಅಂತಹ ಬದುಕು ಇಲ್ಲಿಯೂ ಆಗಬೇಕು ಎಂದು ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.


ಮದ್ಯವರ್ಜನ ಶಿಬಿರ ತೃಪ್ತಿ ತಂದಿದೆ:
ಕೆಲವರು ಮಾನಸಿಕ ಒತ್ತಡದಿಂದ ಮದ್ಯ ಸೇವನೆ ಆರಂಭಿಸಿರುವುದೆಂದು ಹೇಳುತ್ತಾರೆ. ಯಾವುದೇ ವಿಚಾರವನ್ನು ಸ್ನೇಹಿತರೊಂದಿಗೆ ಹಂಚಿಕೊಂಡಾಗ ಸಮಾಧಾನ ಸಿಗುತ್ತದೆ. ಸಮಸ್ಯೆ ಹಂಚಿಕೊಂಡಾಗ ನೆಮ್ಮದಿ ಸಿಗುತ್ತದೆ. ಮಹಾತ್ಮಗಾಂಧಿಯವರು ಭಜನೆಯ ಮೂಲಕ ಸಮಾಜವನ್ನು ಸಂಘಟಿಸಿದ್ದರು. ಸಂಘಟನೆ ಮಾಡುವುದು ಬಹಳ ದೊಡ್ಡ ಕಷ್ಟದ ಕೆಲಸ. ಇವತ್ತು ಯೋಜನೆಯ ಮೂಲಕ ಪುಣ್ಯದ ಕೆಲಸ ಆಗುತ್ತಿದೆ. ಅನುದಾನ, ನೆರವು ನೀಡುವುದು ಸಹಜ. ಮದ್ಯವರ್ಜನ ಶಿಬಿರ ಆಯೋಜನೆಯಿಂದ ನಾನು ಸಂತೋಷ ಪಡುತ್ತೇನೆ. ಇದು ಸಂಸಾರಕ್ಕೆ ನೆಮ್ಮದಿ ಕೊಡುತ್ತದೆ. ಇದರಿಂದ ನನಗೆ ತೃಪ್ತಿಯಿದೆ ಎಂದು ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಹೇಳಿದರು.


ಗಾಂಧಿಜಿ ಕಂಡ ಕನಸು ಖಾವಂದರ ಮೂಲಕ ನನಸು;
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್‌ಕುಮಾರ್ ಎಸ್.ಎಸ್. ಆಶಯ ಭಾಷಣ ಮಾಡಿದರು. ಮಹಾತ್ಮಗಾಂಧಿಜಿಯವರು ಅನೇಕ ಕನಸು ಕಂಡಿದ್ದರು. ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಆ ಕನಸನ್ನು ಈಗ ನನಸು ಮಾಡುತ್ತಿದ್ದಾರೆ. ಮಹಾತ್ಮ ಗಾಂಧಿಯವರ ಆಶಯವನ್ನು ಖಾವಂದರು ಯಾವ ರೀತಿ ಅರ್ಥೈಸಿಕೊಂಡಿದ್ದಾರೆ ಎಂಬುದನ್ನು ಅವರ ಪ್ರತಿಯೊಂದು ಕಾರ್ಯಕ್ರಮದಲ್ಲಿ ನೋಡಬಹುದು. ಹಳ್ಳಿಗಳ ಅಭಿವೃದ್ಧಿಯಾದರೆ ಡಿಲ್ಲಿಯ ಅಭಿವೃದ್ದಿ ಎಂದು ಹೇಳಿ ಬಾಪೂಜಿ ಕನಸುಕಂಡಿದ್ದರು. ಇವತ್ತು ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಹಳ್ಳಿಗಳ ಅಭಿವೃದ್ಧಿಯಾಗುತ್ತಿದೆ. ಯುವಜನರ ಸಬಲೀಕರಣಕ್ಕಾಗಿ ಲಕ್ಷಾಂತರ ಯುವಕರಿಗೆ ಸ್ವಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ. ಖಾವಂದರ ಈ ಅಭಿವೃದ್ಧಿ ಕಾರ್ಯಗಳನ್ನು ಕೇಂದ್ರ ಸರಕಾರ ದೇಶದಾದ್ಯಂತ ಅಳವಡಿಸಿಕೊಂಡಿದೆ. ಇದರಿಂದಾಗಿ 43 ಲಕ್ಷ ಯುವಕರು ಸ್ವ ಉದ್ಯೋಗಿಗಳಾಗಿದ್ದಾರೆ. ಅವರು ಇತರರಿಗೆ ಉದ್ಯೋಗ ನೀಡಿರುವುದರಿಂದ ದೇಶದಲ್ಲಿ ಸುಮಾರು 2.5೦ ಕೋಟಿ ಉದ್ಯೋಗ ಸೃಷ್ಟಿಯಾಗಿದೆ ಎಂದು ಅನಿಲ್‌ಕುಮಾರ್ ಹೇಳಿದರು. ಖಾವಂದರು ಮಹಿಳಾ ಸಬಲೀಕರಣ, ಭಜನಾ ಸಂಸ್ಕೃತಿ ವೈಭವ, ಆತ್ಮನಿರ್ಭರ ಭಾರತವನ್ನು ಸಾಕಾರಗೊಳಿಸಿದರು. ಗ್ರಾಮ ಗ್ರಾಮಗಳಲ್ಲಿ ಶಿಕ್ಷಣದ ವ್ಯವಸ್ಥೆ ಮಾಡಿದರು. 1 ಸಾವಿರ ಅಂಗನವಾಡಿ ಕಟ್ಟಡ ರಚನೆ, 4,8೦೦ ಹಾಲು ಒಕ್ಕೂಟಗಳಿಗೆ ನೆರವು ನೀಡಿದ್ದಾರೆ. ರಾಜ್ಯ ಸಭಾ ಸದಸ್ಯರಾಗಿರುವ ಖಾವಂದರು ಎಂ.ಪಿ ಲ್ಯಾಂಡ್ ಫಂಡ್ ಬಳಕೆ ಮಾಡಿ ಬೀದರ್‌ನಲ್ಲಿ ಕ್ಷೀರ ಕ್ರಾಂತಿಗೆ ಶಾಶ್ವತ ದಾರಿ ಹಾಕಿಕೊಟ್ಟಿದ್ದಾರೆ. ಒಟ್ಟಿನಲ್ಲಿ ಗಾಂಧಿಜಿ ಕಂಡ ಕನಸನ್ನು ಖಾವಂದರು ನನಸು ಮಾಡುತ್ತಿದ್ದಾರೆ. ಇವತ್ತು ರಾಜ್ಯದಾದ್ಯಂತ ಗಾಂಧಿಸ್ಮತಿ ಮಾಡುತ್ತಿದ್ದೇವೆ ಎಂದು ಅನಿಲ್‌ಕುಮಾರ್ ಹೇಳಿದರು.


ಗಾಂಧಿಜಿಯವರ ಸ್ವದೇಶಿ ಚಿಂತನೆಯನ್ನು ಖಾವಂದರು ಅನುಷ್ಠಾನ ಮಾಡಿದರು:
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ಗಾಂಧಿ ಸ್ವದೇಶಿ ಚಿಂತನೆಗೆ ಒತ್ತುಕೊಟ್ಟರು. ಅದನ್ನು ಖಾವಂದರು ಅನುಷ್ಠಾನ ಮಾಡಿದರು. ಇದು ಪರಿವರ್ತನೆಯ ಹಾದಿ. ಖಾವಂದರು ಎಲ್ಲವನ್ನೂ ಸಮಾಜಕ್ಕೆ ಸಮರ್ಪಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ದೂರ ದೃಷ್ಟಿಯಂತೆ ಬಯಲು ಶೌಚಾಲಯ ಮುಕ್ತ ಗ್ರಾಮ ಖಾವಂದರೂ ಮಾಡುತ್ತಿದ್ದಾರೆ. ಸಮಾಜದಲ್ಲಿ ಬೇರೆ ಬೇರೆ ಜಾತಿ ಇದ್ದರೂ ಅವರೆಲ್ಲರನ್ನೂ ಒಂದೇ ಕುಟುಂಬದವರಂತೆ ಖಾವಂದರು ಕಾಣುತ್ತಿದ್ದಾರೆ ಎಂದರು.


ಗಾಂಧಿ ಕಂಡ ರಾಮರಾಜ್ಯ ಸಾಕಾರಗೊಂಡಿದೆ:
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧಿಜಿ, ಸ್ವಾತಂತ್ರ್ಯ ನಂತರ ಖಾವಂದರು. ಈ ಪ್ರಸ್ತುತೆಯ ಅವಲೋಕನಕ್ಕಾಗಿ ನಾವು ಸೇರಿದ್ದೇವೆ. ಸುಮಾರು 20 ಕೋಟಿ ಜನಸಂಖ್ಯೆ ಇದ್ದ ಸಂದರ್ಭ ಗಾಂಧಿಜಿಯವರ ಚಿಂತನೆಯಂತೆ ಇವತ್ತು 144 ಕೋಟಿ ಜನಸಂಖ್ಯೆ ಇರುವ ವಾಸ್ತವ ಸ್ಥಿತಿಯನ್ನು ಖಾವಂದರು ಯೋಚಿಸುತ್ತಿದ್ದಾರೆ. ಗಾಂಧಿಜಿ ಕಂಡ ರಾಮರಾಜ್ಯ ಇವತ್ತು ಸಾಕಾರಗೊಳ್ಳುತ್ತಿದೆ. ಖಾವಂದರಿಂದ ಪ್ರೇರಣೆ ಪಡೆದುಕೊಂಡು ನಾವೂ ಅವರ ಕಾರ್ಯವನ್ನು ಕಾರ್ಯಗತಗೊಳಿಸುತ್ತೇವೆ ಎನ್ನುವ ಸಂದೇಶ ಕೊಡಬೇಕಾಗಿದೆ. ವ್ಯಸನ ಮುಕ್ತ ಸಮಾಜ, ಸ್ವದೇಶಿ ಚಿಂತನೆ, ಸ್ವಾವಲಂಬಿ, ಸ್ವಾಭಿಮಾನದ ಜೀವನ ಮಾಡಬೇಕೆಂದು ಗಾಂಧಿಜಿಯವರು ಹೇಳಿದ್ದರು. ಅದೆಲ್ಲವನ್ನೂ ಸಾಕಾರಗೊಳಿಸಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಸರಕಾರ ಮಾಡದ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಆತ್ಮಸ್ಥೈರ್ಯ ಕೊಟ್ಟ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವತ್ತು ಜಗತ್ತಿಗೆ ಮಾದರಿ ಆದ ಸಂದೇಶ ನೀಡಿದೆ ಎಂದರು.


ಪೂರ್ವಜರ ಮಾತನ್ನು ಪೂರ್ಣ ಮಾಡಿದ ಖಾವಂದರು:
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ಸಂಘಟನಾಧ್ಯಕ್ಷರಾದ ನಟರಾಜ ಬಾದಾಮಿ ಮಾತನಾಡಿ, ದುಡಿಮೆಯ ಒಂದು ಪಾಲು ಸಮಾಜಕ್ಕೆ ವಿನಿಯೋಗ ಆಗಬೇಕೆಂಬ ಪೂರ್ವಜರ ಮಾತನ್ನು ಪೂರ್ಣ ಮಾಡಿದ ಖಾವಂದರು ವಿಶ್ವದಾದ್ಯಂತ ಕಾರ್ಯಕ್ರಮ ಮಾಡುತ್ತಿದ್ದಾರೆ. ಇವತ್ತು ಡಾ| ಡಿ.ವೀರೇಂದ್ರ ಹೆಗ್ಗಡೆಯವರಲ್ಲಿ ಗಾಂಧಿಜಿಯನ್ನು ನೋಡುತ್ತಿದ್ದೇವೆ. ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಮಗೆ ಯೋಗ. ಮುಂದೆ ಯಾವುದೇ ಕಾರ್ಯಕ್ರಮಕ್ಕೂ ನಾವು ಸಹಕಾರ ನೀಡೋಣ. ಯಾವುದೇ ದುಷ್ಟ ಶಕ್ತಿಗಳು ಬಂದರೂ ಅದನ್ನು ಹೊಡೆದು ಒಡಿಸುತ್ತೇವೆ ಎಂಬ ಸಂಕಲ್ಪ ಮಾಡೋಣ ಎಂದರು.


ಪೂಜ್ಯರ ಆಶಯ ಈಡೇರಿಸುವ ಸೇವಕರಾಗಿ ಕೆಲಸ ಮಾಡುತ್ತಿದ್ದೇವೆ:
ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ದ.ಕ.ಜಿಲ್ಲಾಧ್ಯಕ್ಷರಾದ ಪದ್ಮನಾಭ ಶೆಟ್ಟಿ ಮಾತನಾಡಿ, 1982ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಖಾವಂದರು ಹುಟ್ಟು ಹಾಕಿದ್ದರು. 1990ರಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹುಟ್ಟು ಹಾಕಿದರು. 2002ರಲ್ಲಿ ಪುತ್ತೂರು ತಾಲೂಕಿಗೆ ಈ ಯೋಜನೆ ಪಾದಾರ್ಪಣೆ ಆಯಿತು. ಅಲ್ಲಿಂದ ಇಲ್ಲಿನ ತನಕ ನಾವು ಪೂಜ್ಯ ಖಾವಂದರ ಆಶಯ ಈಡೇರಿಸುವ ಸೇವಕರಾಗಿ ಕೆಲಸ ಮಾಡುತ್ತಿದ್ದೇವೆ. ಗಾಂಧಿಜಿಯವರ ಜೀವಿತಾವದಿಯಲ್ಲಿ ನಾವು ಇಲ್ಲದಿದ್ದರೂ ಇವತ್ತು ಖಾವಂದರೊಂದಿಗೆ ನಾವು ಇರುವುದರಿಂದ ಸಾರ್ಥಕತೆ ಕಂಡಿದೆ. ಪುಣ್ಯದ ಕೆಲಸದಲ್ಲಿ ನಾವು ಭಾಗಿಯಾಗಿದ್ದೇವೆ ಎಂದರು.


ಪಾನಮುಕ್ತರಿಗೆ ಗುಲಾಬಿ ಹೂ ನೀಡಿ ಗೌರವ:
ಜನಜಾಗೃತಿ ವೇದಿಕೆ, ಜನಜೀವನ ಸಮಿತಿ ಮೂಲಕ ಪಾನಮುಕ್ತರಾದ ನೂರಾರು ಮಂದಿಗೆ ಜನಜಾಗೃತಿ ವೇದಿಕೆ ಅಧ್ಯಕ್ಷರು, ಪದಾಽಕಾರಿಗಳು ಸಭಾಂಗಣದಲ್ಲಿ ಹೂ ನೀಡಿ ಗೌರವಿಸಿದರು.


ಪಾನಮುಕ್ತರಿಂದ ಅನಿಸಿಕೆ:
ಮದ್ಯವರ್ಜನ ಶಿಬಿರದ ಮೂಲಕ ಪಾನಮುಕ್ತರಾದ ಕೆದಿಲದ ಕೆ. ಭಾಸ್ಕರ ಮೂಲ್ಯ, ಚಿತ್ರ ದಂಪತಿ ಖಾವಂದರ ಆಶೀರ್ವಾದದಿಂದ ನಮ್ಮ ಜೀವನ ಸುಧಾರಿಕೆಯಾಗಿದೆ ಎಂದರು. ವಸಂತ ಅವರ ಪರವಾಗಿ ಅವರ ಪತ್ನಿ ಶೈಲಜಾ ವಸಂತ ಬನ್ನೂರು ಅನಿಸಿಕೆ ವ್ಯಕ್ತಪಡಿಸಿ, ನಾನು ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿ ಎಂದು ಹೇಳಿ ಪತಿಯ ಕುಡಿತದ ಚಟ ಮತ್ತು ಅವರು ಹೊಸ ಜೀವನ ಪಡೆದ ವಿಚಾರ ತಿಳಿಸಿದರು.


ಸೌಲಭ್ಯ, ಸಲಕರಣೆ ವಿತರಣೆ:
ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಪ್ರತಿಕ್ಷಾ, ಮಂಗಳೂರಿನಲ್ಲಿ ಫಿಸಿಯೋಥೆರಪಿ ಕೋರ್ಸ್ ಮಾಡುತ್ತಿರುವ ಅಝ್ವಿನಾ, ಸಮೀಕ್ಷಾ ಅವರಿಗೆ ಸುಜ್ಞಾನ ನಿಧಿ ರೂ.1 ಸಾವಿರದ ಮಂಜೂರಾತಿ ಪತ್ರ ವಿತರಿಸಲಾಯಿತು. ಬನ್ನೂರು ನಿವಾಸಿ ಸಂಕಮ್ಮ ಅವರಿಗೆ ಜನಮಂಗಲ ಕಾರ್ಯಕ್ರಮದಡಿಯಲ್ಲಿ ವೀಲ್ ಚಯರ್ ವಿತರಿಸಲಾಯಿತು.


ಸಹಾಯಧನ, ಮಾಸಾಶನ ವಿತರಣೆ:
ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಬನ್ನೂರು ಸರಕಾರಿ ಶಾಲಾ ಆವರಣಗೋಡೆ ನಿರ್ಮಾಣಕ್ಕೆ ರೂ.50ಸಾವಿರ ಸಹಾಯಧನದ ಮಂಜೂರಾತಿ ಪತ್ರವನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗುರುಪ್ರಸಾದ್ ಮತ್ತು ಮುಖ್ಯಗುರು ಮಹಮ್ಮದ್ ಆಶ್ರ- ಅವರಿಗೆ ಹಸ್ತಾಂತರ ಮಾಡಲಾಯಿತು. ಅಶಕ್ತರಿಗೆ ನೀಡುವ ರೂ.1 ಸಾವಿರ ಮಾಸಾಶನದ ಮಂಜೂರಾತಿ ಪತ್ರವನ್ನು ಆರ್ಯಾಪು ಗ್ರಾಮದ ಶೀಲಾ ಅವರಿಗೆ ಹಸ್ತಾಂತರಿಸಲಾಯಿತು.


ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ವಸಂತ ಸಾಲಿಯಾನ್, ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗದ ನಿರ್ದೇಶಕ ವಿವೇಕ್ ವಿ.ಪಾಯಸ್, ಕರಾವಳಿ ಪ್ರಾದೇಶಿಕ ವಿಭಾಗದ ನಿರ್ದೇಶಕ ಆನಂದ ಸುವರ್ಣ, ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ, ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರೂ ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು, ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷ ಎನ್.ಎ.ರಾಮಚಂದ್ರ, ಮಹಮ್ಮದ್ ಇಸ್ಮಾಯಿಲ್, ಹಣಕಾಸು ಪ್ರಾದೇಶಿಕ ನಿರ್ದೇಶಕ ಶಾಂತರಾಮ್ ಪೈ, ಬೆಳ್ತಂಗಡಿ ಜನಜಾಗೃತಿ ವೇದಿಕೆ ಅಧ್ಯಕ್ಷ ಖಾಸಿಂ ಮಲ್ಲಿಗೆಮನೆ, ಬಂಟ್ವಾಳದ ರೊನಾಲ್ಡ್ ಡಿಸೋಜ, ಮಂಜೇಶ್ವರದ ಡಾ. ಜಯಪ್ರಕಾಶ್, ಸುಳ್ಯದ ಲೋಕೇಶ್ ಅಮೆಚ್ಚೂರು, ಕಾಸರಗೋಡಿನ ಅಖಿಲೇಶ್ ನಗುಮೊಗಂ, ಮೂಡಬಿದ್ರೆಯ ಸುಭಾಶ್ಚಂದ್ರ ಚೌಟ, ಮಂಗಳೂರಿನ ಚಂದ್ರಶೇಖರ್ ಉಚ್ಚಿಲ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರೂ, ಆಗಿರುವ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಆದ ಶಶಿಕುಮಾರ್ ರೈ ಬಾಲ್ಯೊಟ್ಟು, ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ.ಸವಣೂರು, ಚಂದ್ರಶೇಖರ್ ಉಚ್ಚಿಲ, ಲೋಕನಾಥ ಅಮೆಚ್ಚುರು, ಕಾಸಿಂ ಮಲ್ಲಿಗೆಮನೆ, ಅಖಿಲೇಶ್ ನಗುಮುಗಂ, ರೊನಾಲ್ಡ್ ಡಿಸೋಜ, ಸುಭಾಶ್ಚಂದ್ರ ಚೌಟ, ಪ್ರಾದೇಶಿಕ ನಿರ್ದೇಶಕರು ಅತಿಥಿಗಳನ್ನು ಗೌರವಿಸಿದರು.


ನವ್ಯ ಆಚಾರ್ಯ ಪ್ರಾರ್ಥಿಸಿದರು. ಉದ್ಘಾಟನೆ ಸಂದರ್ಭ ವೈಷ್ಣವ ಜನತೋ ಗೀತೆ ಹಾಡಲಾಯಿತು. ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ವಂದಿಸಿದರು. ಬಾಲಕೃಷ್ಣ ಆಳ್ವ ಮಾಣಿ ಮತ್ತು ಕರಾವಳಿ ಪ್ರಾದೇಶಿಕ ಯೋಜನಾಽಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ತಾಲೂಕು ಯೋಜನಾಽಕಾರಿ ಶಶಿಧರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮದ ಕೊನೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ, ಬ್ಯಾಂಕ್ ಆ- ಬರೋಡ ಸಹಿತ ಹಲವಾರು ಸಂಘಟನೆಗಳಿಂದ ಡಾ| ಡಿ.ವೀರೇಂದ್ರ ಹೆಗ್ಗಡೆಯವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಕುಣಿತ ಭಜನೆ ಪ್ರದರ್ಶನ ನಡೆಯಿತು. ಸಮಾರಂಭದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸುದ್ದಿ ಯೂ ಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಯಿತು.

ಮದ್ಯಪಾನ ಬಿಟ್ಟವರ ಚರಿತ್ರೆಯ ಸಿನಿಮಾ ತೆಗೆಯಬಹುದು
ಮದ್ಯಪಾನ ಬಿಟ್ಟು ಹೊಸ ಜೀವನ ನಡೆಸುತ್ತಿರುವ ನೂರು ಜನರ ಜೀವನ ಚರಿತ್ರೆ ಕೇಳಿದರೆ ನೂರು ಸಿನಿಮಾ ತೆಗೆಯಬಹುದು. ನಾಟಕ, ಸಿನಿಮಾದಲ್ಲಿ ಕುಡುಕರೇ ಹಾಸ್ಯಗಾರರು. ಎಷ್ಟೋ ಮಂದಿ ಮದ್ಯಪಾನ ಬಿಡುತ್ತೇವೆ ಎಂದು ಹೇಳಿದರೂ ಅವರನ್ನು ಬಾಟಲಿ ಬಿಡುವುದಿಲ್ಲ. ಅದಕ್ಕಾಗಿ ಮದ್ಯಪಾನ ಬಿಡಬೇಕಾದರೆ ಶಿಬಿರಕ್ಕೆ ಹೋಗಲೇ ಬೇಕು ಎಂದು ಡಾ| ಡಿ ವೀರೇಂದ್ರ ಹೆಗ್ಗಡೆ ಹೇಳಿದರು.


ಅಪವಾದ ಮೆಟ್ಟಿನಿಲ್ಲುವ ಕೆಲಸ ಸಮಾಜ ಮಾಡಿದೆ
ಇತ್ತೀಚಿನ ಕೆಲವೊಂದು ವಿದ್ಯಾಮಾನ ನಮಗೆಲ್ಲ ನೋವು ತಂದಿದೆ. ರಾಮಾಯಣದಲ್ಲಿ ರಾಮನಿಗೂ ಅಪವಾದ, ಮಹಾಭಾರತದಲ್ಲಿ ಕೃಷ್ಣನಿಗೂ ಅಪವಾದ ಬಂದಿದೆ. ಧರ್ಮಸ್ಥಳಕ್ಕೆ ಅಪವಾದ ಬಂದಾಗ ಆ ಅಪವಾದವನ್ನು ಮೆಟ್ಟಿ ನಿಲ್ಲುವ ಕೆಲಸ ಈ ಸಮಾಜ ಮಾಡಿದೆ. ಖಾವಂದರ ಪರವಾಗಿ ನಾವೆಲ್ಲ ಇದ್ದೇವೆ ಎಂಬ ಸಂದೇಶವನ್ನು ಇಡಿ ಜಗತ್ತು ಕೊಟ್ಟಿದೆ.
ಸಂಜೀವ ಮಠಂದೂರು, ಮಾಜಿ ಶಾಸಕರು

ಠರಾವು ಮಂಡನೆ
ಸಭೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ಟ್ರಸ್ಟ್‌ನಿಂದ ಹಲವು ಠರಾವು ಮಂಡನೆ ಮಾಡಲಾಯಿತು. ಮದ್ಯವರ್ಜನ ಶಿಬಿರದ ಮೂಲಕ 1.25 ಲಕ್ಷ ಮಂದಿಯನ್ನು ವ್ಯಸನಮುಕ್ತಗೊಳಿಸಲಾಗಿದೆ. ಆದರೆ ಈ ಕಾರ್ಯಕ್ರಮಗಳಿಗೆ ಕೆಲವೊಂದು ವಿಚಾರಗಳು ಅಡ್ಡಿಯಾಗುತ್ತಿವೆ. ಈ ಕುರಿತು ಹಕ್ಕೋತ್ತಾಯ ಮಾಡುತ್ತಿದ್ದೇವೆ. ಮದ್ಯಪಾನದಿಂದ ಉಂಟಾಗುವ ಸಾಮಾಜಿಕ ಕಷ್ಟ, ನಷ್ಟ ಮತ್ತು ಸರಕಾರದ ಬೊಕ್ಕಸಕ್ಕೆ ಆಗುವ ನಷ್ಟದ ಕುರಿತು ವೈಜ್ಞಾನಿಕ ಅಧ್ಯಯನಕ್ಕೆ ಸಮಿತಿ ರಚಿಸಿ, ವರದಿ ಪಡೆದು ರಾಜ್ಯದಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧ ಮಾಡಬೇಕು. ಅಬಕಾರಿ ಇಲಾಖೆಗೆ ಗುರಿ ಪದ್ಧತಿ ರದ್ದುಗೊಳಿಸಬೇಕು. ಅಬಕಾರಿ ಕಾಯ್ದೆ ಪರಿಷ್ಕರಿಸಿ ತಿದ್ದುಪಡಿ ತರಬೇಕು. ಜನಜಾಗೃತಿ ವೇದಿಕೆ ನಡೆಸುವ ಕಾರ್ಯಕ್ರಮಗಳಿಗೆ ಅಬಕಾರಿ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಬೇಕು. ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಮದ್ಯಪಾನ ಮತ್ತು ಮತ್ತಿತರ ದುಶ್ಚಟಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಶಿಕ್ಷಣ ಇಲಾಖೆಯ ಮೂಲಕ ಆಗಬೇಕು. ಶಾಲಾ ಪಠ್ಯಪುಸ್ತಕಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ವಿಷಯ ಅಳವಡಿಸಬೇಕು. ಸರಕಾರದ ವತಿಯಿಂದ ಹೊಸ ಮದ್ಯದಂಗಡಿ, ಬಾರ್ ವೈನ್‌ಶಾಪ್‌ಗಳಿಗೆ ಅನುಮತಿ ಕೊಡಬಾರದು. ನಗರದಲ್ಲಿರುವ ಮದ್ಯದಂಗಡಿಗಳನ್ನು ಗ್ರಾಮಾಂತರಕ್ಕೆ ಸ್ಥಳಾಂತರಿಸಬಾರದು. ಅಂಗಡಿ ಹೊಟೇಲ್‌ಗಳಲ್ಲಿ ಅನಧಿಕೃತವಾಗಿ ಮದ್ಯಮಾರಾಟ ನಡೆಯುತ್ತಿರುವುದರಿಂದ ಶಿಬಿರದಲ್ಲಿ ಪಾನಮುಕ್ತರಾದವರಿಗೆ ತೊಂದರೆ ಆಗುತ್ತಿದೆ. ಇದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಠರಾವು ಮಂಡನೆ ಮಾಡಿ ಮುಖ್ಯಮಂತ್ರಿಗಳಿಗೆ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರ ಮೂಲಕ ನೀಡಲಾಯಿತು.

LEAVE A REPLY

Please enter your comment!
Please enter your name here