ಸಾಮಾಜಿಕ ಜಾಲತಾಣದಲ್ಲಿ ನಟಿ ರಮ್ಯಾಗೆ ನಿಂದನೆ ಆರೋಪ : ಆಲಂತಾಯ ನಿವಾಸಿ ಯುವಕ ಜೈಲುಪಾಲು

0

ಪುತ್ತೂರು: ಮಾಜಿ ಸಂಸದೆ ಹಾಗೂ ಚಲನಚಿತ್ರ ನಟಿ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಲಾಗಿದೆ ಎಂಬ ಆರೋಪದಲ್ಲಿ ಕಡಬ ತಾಲೂಕಿನ ಆಲಂತಾಯ ನಿವಾಸಿ ಯುವಕ ಜೈಲುಪಾಲು ಆಗಿರುವುದಾಗಿ ತಡವಾಗಿ ವರದಿಯಾಗಿದೆ.


ಆಲಂತಾಯ ನಿವಾಸಿ ಆದರ್ಶ ಗೌಡ(21ವ.) ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಪಾಲಾಗಿರುವ ಯುವಕ. ನಟ ದರ್ಶನ್ ಅವರ ಅಭಿಮಾನಿಗಳು ಎಂದು ಹೇಳಿಕೊಂಡು ಅಶ್ಲೀಲ ಸಂದೇಶ ರವಾನೆ, ಕಾಮೆಂಟ್ ಮಾಡುತ್ತಿದ್ದವರ ವಿರುದ್ದ ಜು.28ರಂದು ನಟಿ ರಮ್ಯಾ ಅವರೇ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಇದರ ವಿಚಾರಣೆ ಕೈಗೆತ್ತಿಕೊಂಡ ಸೈಬರ್ ಕ್ರೈಂ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಳೆದ ಆಗಸ್ಟ್ ತಿಂಗಳಿನಲ್ಲೇ ಆಲಂತಾಯ ನಿವಾಸಿ ಆದರ್ಶ ಗೌಡ ಎಂಬವರನ್ನು ಆಲಂತಾಯದ ಅವರ ಮನೆಯಿಂದ ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.

ಆದರ್ಶ ಗೌಡ ಸಹಿತ ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಮೊಬೈಲ್ ಫೋನ್ ಸಹ ವಶಪಡಿಸಿಕೊಂಡಿರುವ ಪೊಲೀಸರು ಅಳಿಸಿ ಹಾಕಿದ್ದ ದತ್ತಾಂಶ ಮರು ಸಂಗ್ರಹಿಸಲು ಮೊಬೈಲ್ ಫೋನ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆರೋಪಿಗಳ ಖಾತೆಗಳು, ಸಂದೇಶಗಳನ್ನು ಮರು ಸಂಗ್ರಹಿಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಆರೋಪಿ ಆದರ್ಶ ಗೌಡ ನ್ಯಾಯಾಂಗ ಬಂಧನದಲ್ಲಿರುವುದಾಗಿ ವರದಿಯಾಗಿದೆ.


ಪ್ರಕರಣ;
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರ ಜಾಮೀನು ರದ್ಧತಿ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ತಮ್ಮ ಸಾಮಾಜಿಕ ಖಾತೆಯಲ್ಲಿ ನಟಿ ರಮ್ಯಾ ಹಂಚಿಕೊಂಡಿದ್ದರು. ಇದಕ್ಕೆ ಅನಾಮಧೇಯವಾದ 43 ಸಾಮಾಜಿಕ ಜಾಲತಾಣ ಖಾತೆಗಳಿಂದ ಅವಹೇಳನಕಾರಿ ಪ್ರತಿಕ್ರಿಯೆ ಜೊತೆಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ರಮ್ಯಾ ನೀಡಿದ ದೂರು ಆಧರಿಸಿ ಬೆಂಗಳೂರಿನ ಸೈಬರ್ ಠಾಣೆಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್)ಸೆಕ್ಷನ್‌ಗಳಾದ 351(2)(ಕ್ರಿಮಿನಲ್ ಬೆದರಿಕೆಯ ಉದ್ದೇಶದ ಅಪರಾಧ), 351(3)(ಸಾವು, ತೀವ್ರ ನೋವುಂಟು ಮಾಡುವ ಉದ್ದೇಶದ ಕ್ರಿಮಿನಲ್ ಬೆದರಿಕೆ), 352(ಉದ್ದೇಶಪೂರ್ವಕ ಅವಮಾನದ ಮೂಲಕ ಶಾಂತಿಭಂಗದ ಯತ್ನ), 75(1)(ಐವಿ)(ಲೈಂಗಿಕ ಟೀಕೆ), 79(ಮಹಿಳೆಯ ಗೌರವಕ್ಕೆ ಧಕ್ಕೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67,66(ಸಿ)ಅಡಿ ಪ್ರಕರಣ ದಾಖಲಿಸಿದ್ದರು.

LEAVE A REPLY

Please enter your comment!
Please enter your name here