ಮಣ್ಣಿನ ಹಣತೆ, ಸ್ಥಳೀಯ ಸಾಂಪ್ರದಾಯಿಕ ಉತ್ಪನ್ನ, ಮಣ್ಣಿನ ಲೋಟ, ವೈಯರ್ಡ್ ಬ್ಯಾಗ್, ತಿಂಡಿ ತಿನಿಸುಗಳ ಮಾರಾಟ
ಪುತ್ತೂರು: ಗ್ರಾಮೀಣ ಭಾಗದ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಹಾಗೂ ಪ್ರೋತ್ಸಾಹಿಸಲು ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ಜಂಟಿ ಆಶ್ರಯದಲ್ಲಿ ಪುತ್ತೂರಿನ ದರ್ಬೆ ಬಸ್ ನಿಲ್ದಾಣದ ಬಳಿ ಮಣ್ಣಿನ ಹಣತೆಗಳ ಪ್ರದರ್ಶನ ಹಾಗೂ ಮಾರಾಟ ಮೇಳದ ಉದ್ಘಾಟನೆ ನಡೆಯಿತು.
ಮಳಿಗೆ ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯತ್ನ ಕಾರ್ಯನಿರ್ವಾಹಕಾಧಿಕಾರಿ ನವೀನ್ ಕುಮಾರ್ ಭಂಡಾರಿ, ಗ್ರಾಮೀಣ ಭಾಗದ ಮಹಿಳೆಯರು ತಯಾರಿಸಿದ ಮಣ್ಣಿನ ಹಣತೆಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿಸಬೇಕು. ಆ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಬೇಕು ಎಂದರು. ಕುಂಬಾರ ಗುಡಿ ಕೈಗಾರಿಕಾ ಸಹಕಾರ ಸಂಘದ ಸಿಇಒ ಜನಾರ್ದನ ಎಸ್ ಮೂಲ್ಯ ಮಾತನಾಡಿ, ದೀಪಾವಳಿ ಹಬ್ಬಕ್ಕೆ ಮಣ್ಣಿನ ದೀಪಗಳನ್ನೇ ಬಳಸಬೇಕು. ಇದು ಪರಿಸರ ಸ್ನೇಹಿಯೂ ಆಗಿದೆ. ಅಲ್ಲದೆ, ಇದರಿಂದಾಗಿ ಕುಂಬಾರರ ಬದುಕಿಗೂ ಆಧಾರವಾಗುತ್ತದೆ ಎಂದರು.

ಸಹಾಯಕ ಲೆಕ್ಕಾಧಿಕಾರಿ ರವಿಚಂದ್ರ ಯು ಮಾತನಾಡಿ, ಮಹಿಳೆಯರಿಗೆ ಸ್ವ ಉದ್ಯೋಗ ಕಲ್ಪಿಸಿ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ದರ್ಬೆಯಲ್ಲಿ ತಾತ್ಕಾಲಿಕ ಅಂಗಡಿಯನ್ನು ತೆರೆಯಲು ಪ್ರೋತ್ಸಾಹಿಸಿದ್ದೇವೆ. ಆರ್ಟಿಫಿಶಿಯಲ್ ಹಣತೆಗಳಿಗಿಂತ ಮಣ್ಣಿನಿಂದ ತಯಾರಿಸಿದ ದೀಪಗಳನ್ನು ಬೆಳಗಿಸಿ ಎಂದರು.
ಪಂಚಾಯತ್ ರಾಜ್ ಇಲಾಖೆ ಸಹಾಯಕ ನಿರ್ದೇಶಕ ನಾಗೇಶ್ ಎಂ ಮಾತನಾಡಿ, ಮಹಿಳೆಯರು ತಯಾರಿಸಿದ ಮಣ್ಣಿನ ದೀಪಗಳನ್ನು ಮಾರಾಟ ಮಾಡಲು ತಾಲೂಕು ಪಂಚಾಯತ್ ಪ್ರೋತ್ಸಾಹಿಸುತ್ತಿದೆ ಎಂದು ಹೇಳಿ ಶುಭಹಾರೈಸಿದರು.
ಎನ್ಆರ್ಎಲ್ಎಂನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕೆ., ಕೃಷಿ ಚಟುವಟಿಕೆಗಳ ಬ್ಲಾಕ್ ಮ್ಯಾನೇಜರ್ ಮೋಹನ್ ಕುಮಾರ್, ಪಂಚಾಯತ್ ರಾಜ್ ಸಂಸ್ಥೆಯ ತಾಲೂಕು ಸಂಪನ್ಮೂಲ ವ್ಯಕ್ತಿ ವಿದ್ಯಾಶ್ರೀ, ಉದ್ಯಮಶೀಲತೆ ಉತ್ತೇಜನದ ತಾಲೂಕು ಸಂಪನ್ಮೂಲ ವ್ಯಕ್ತಿ ಕವಿತಾ, ತಾಲೂಕಿನ ವಿವಿಧ ಸಂಜೀವಿನಿ ಒಕ್ಕೂಟಗಳ ಸ್ವಸಹಾಯ ಸಂಘಗಳ ಮಹಿಳೆಯರು ಭಾಗವಹಿಸಿದ್ದರು. ಕಾರ್ಯಕ್ರಮ ನಿರೂಪಿಸಿದ ಸಂಜೀವಿನಿ ಒಕ್ಕೂಟದ ವಲಯ ಮೇಲ್ವಿಚಾರಕಿ ನಮಿತ ಸ್ವಾಗತಿಸಿ ವಂದಿಸಿದರು. ಕುಂಬಾರ ಗುಡಿ ಕೈಗಾರಿಕ ಸಹಕಾರಿ ಸಂಘದ ಸಿಬ್ಬಂದಿ, ಮತ್ತಿತರರು ಸಹಕರಿಸಿದರು.