ಕೆದಿಲ:ಹಲವು ವರ್ಷದ ರಸ್ತೆ ಸಮಸ್ಯೆ ಇತ್ಯರ್ಥ

0

ಪುತ್ತೂರು:ಕೆದಿಲ ಗ್ರಾಮದ ಶಾಲೆಯ ಬಳಿಯಲ್ಲಿ ಹಲವು ವರ್ಷಗಳಿಂದ ಇದ್ದ ರಸ್ತೆ ಸಮಸ್ಯೆಯೊಂದನ್ನು ಶಾಸಕ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ಮಧ್ಯಸ್ಥಿಕೆಯಲ್ಲಿ ಕೇವಲ ಎರಡೇ ದಿನದಲ್ಲಿ ಬಗೆಹರಿಸಲಾದ ಮತ್ತು ಊರವರೆಲ್ಲರೂ ಮಿನಿ ಬಸ್ ಮಾಡಿ ಶಾಸಕ ಅಶೋಕ್ ಕುಮಾರ್ ರೈ ಅವರ ಮನೆಗೆ ತೆರಳಿ ಶಾಸಕರಿಗೆ ಗುಲಾಬಿ ಹೂವು ನೀಡಿ ಅಭಿನಂದಿಸಿದ ಘಟನೆ ಅ.17ರಂದು ಬೆಳಗ್ಗೆ ನಡೆದಿದೆ.


ಕೆದಿಲ ಗ್ರಾಮದ ಶಾಲೆಯ ಬಳಿಯಲ್ಲಿ ರಸ್ತೆಯೊಂದಿದ್ದು, ಈ ರಸ್ತೆಯ ವಿಚಾರದಲ್ಲಿ ಸ್ಥಳೀಯ ಸುಬ್ರಹ್ಮಣ್ಯ ಭಟ್ ಮತ್ತು ಏಳೆಂಟು ಮನೆ ಸಂಪರ್ಕದವರ ನಡುವೆ ವೈಮನಸ್ಸು ಉಂಟಾಗಿತ್ತು. ಇತ್ತೀಚೆಗೆ ಶಾಸಕ ಅಶೋಕ್ ಕುಮಾರ್ ರೈ ಅವರು,ರಸ್ತೆ ಸಮಸ್ಯೆಯನ್ನು ಸರಿಪಡಿಸಿ ಏಳೆಂಟು ಮನೆಗಳಿಗೆ ಸಂಪರ್ಕ ಒದಗಿಸುವ ಕುರಿತು ಭರವಸೆ ನೀಡಿ ರೂ.5 ಲಕ್ಷದಲ್ಲಿ ಕಾಂಕ್ರಿಟೀಕರಣದ ಪ್ರಸ್ತಾವನೆ ಮಾಡಿದ್ದರು.ಆದರೆ ಸುಬ್ರಹ್ಮಣ್ಯ ಭಟ್ ಅವರು ರಸ್ತೆಗೆ ಬೇಲಿ ಹಾಕಿದ್ದರಿಂದ ಊರವರು ಲೋಕೇಶ್ ಪಡ್ಡಾಯೂರು ಮತ್ತು ಹರೀಶ್ ಬಂಗೇರ ಅವರ ಗಮನಕ್ಕೆ ತಂದಿದ್ದರು. ಅವರು ಈಶ್ವರ ಭಟ್ ಪಂಜಿಗುಡ್ಡೆಯವರ ಗಮನಕ್ಕೆ ತಂದಿದ್ದರು.ಅವರು ಅದನ್ನು ಶಾಸಕರ ಗಮನಕ್ಕೆ ತಂದಿದ್ದರು.ಮನುಷ್ಯನಿಗೆ ಮೂಲಭೂತ ಸೌಕರ್ಯ ಮುಖ್ಯ.ಅದಕ್ಕಾಗಿ ರಸ್ತೆ ಮಾಡುವ ವಿಚಾರದಲ್ಲಿ ಸುಬ್ರಹ್ಮಣ್ಯ ಭಟ್ ಮತ್ತು ಊರವರ ನಡುವೆ ಮಾತುಕತೆ ನಡೆಸಲು ಶಾಸಕರು ಪಂಜಿಗುಡ್ಡೆ ಈಶ್ವರ ಭಟ್ ಅವರಿಗೆ ಸೂಚನೆ ನೀಡಿದ್ದರು.ಈಶ್ವರ ಭಟ್ ಪಂಜಿಗುಡ್ಡೆಯವರು ಶಾಸಕರ ಮಾರ್ಗದರ್ಶನಂತೆ ಅ.16ರಂದು ಎರಡೂ ಕಡೆಯವರಲ್ಲಿ ಮಾತುಕತೆ ನಡೆಸಿ 12 ಫೀಟ್ ಅಗಲದ ರಸ್ತೆಯನ್ನು ಮಾಡಲು ಒಪ್ಪಿಗೆ ಪಡೆದುಕೊಳ್ಳುವ ಮೂಲಕ ಸಮಸ್ಯೆಯನ್ನು ಸೌಹಾರ್ದ ರೀತಿಯಲ್ಲಿ ಇತ್ಯರ್ಥಗೊಳಿಸಲಾಯಿತು.


ಮಿನಿ ಬಸ್ಸಲ್ಲಿ ತೆರಳಿ ಶಾಸಕರಿಗೆ ಅಭಿನಂದನೆ:
ರಸ್ತೆ ಸಮಸ್ಯೆ ಬಗೆ ಹರಿದ ನಿಟ್ಟಿನಲ್ಲಿ ಅ.17ರಂದು ಬೆಳಗ್ಗೆ ಊರಿನ ಸುಮಾರು 60 ಮಂದಿ ಮಿನಿ ಬಸ್‌ನಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಳದ ಬಳಿಯಿಂದ ಶಾಸಕ ಅಶೋಕ್ ಕುಮಾರ್ ರೈ ಅವರ ಕೋಡಿಂಬಾಡಿ ಮನೆಗೆ ತೆರಳಿ ಶಾಸಕರಿಗೆ ಗುಲಾಬಿ ಹೂವು ನೀಡಿ ಅಭಿನಂದಿಸಿದರು.ಕಾಂಗ್ರೆಸ್ ವಲಯ ಅಧ್ಯಕ್ಷ ಲೋಕೇಶ್ ಪಡ್ಡಾಯೂರು, ಕೆದಿಲ ಗ್ರಾ.ಪಂ ಅಧ್ಯಕ್ಷ ಹರೀಶ್ ವಿ ವಾಲ್ತಾಜೆ, ಪ್ರಸನ್ನ ಭಟ್ ವಳಂಗಜೆ, ಸಾಹುಲ್ ಹಮೀದ್ ಕುಕ್ಕಾಜೆ, ಪ್ರಮೋದ್ ಪಡ್ಡಾಯೂರು, ಹರೀಶ್ ಬಂಗೇರ ಗುರುದೇವ್ ಗ್ರೂಪ್, ಪ್ರಕಾಶ್ ಗೌಡ ನೆಕ್ಕಿಲಾಡಿ, ಸೀತಾರಾಮ ಭಟ್ ಬಡೆಕ್ಕಿಲ, ಶಶಾಂಕ್ ಬಡೆಕ್ಕಿಲ, ವೆಂಕಪ್ಪ ಗೌಡ ಪನಡ್ಕ, ವಾರಿಜ, ತಿಮ್ಮಕ್ಕ, ಪೂವಪ್ಪ, ದಿವಾಕರ ನಾಯ್ಕ, ಪೂರ್ಣಿಮಾ, ಯಶೋಧ, ವೆಂಕಪ್ಪ, ರಾನ್ಯ, ಲಕ್ಷ್ಮಿ ಪನಡ್ಕ, ವನಿತ ವಲಂಕುಮೇರಿ ಸಹಿತ ಹಲವಾರು ಮಂದಿ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.

ಜಾಗದ ಮಾಲಕರು ಮಾನವೀಯತೆ ಮೆರೆದಿದ್ದಾರೆ
ರಸ್ತೆ ಸಮಸ್ಯೆಯ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು.ಖಾಸಗಿ ಜಾಗವಾದ ಕಾರಣ ಅಲ್ಲಿ ರಸ್ತೆ ಮಾಡುವುದು ಕಷ್ಟಸಾಧ್ಯವಾಗಿತ್ತು.ಜಾಗದ ಮಾಲಕರಾದ ಪ್ರಸನ್ನ ಭಟ್ ಅವರು ಜಾಗ ಬಿಟ್ಟು ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಸುಮಾರು 25 ಕುಟುಂಬಗಳಿಗೆ ಇದು ನೆರವಾಗಿದೆ.ಮುಂದಕ್ಕೆ ಈ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುವುದು
-ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು


ಈ ಬಾರಿ ಬೇಡಿಕೆ ಈಡೇರಿದೆ
ಶಾಸಕರು ಮಾಡಿದ ಪುಣ್ಯದ ಕೆಲಸ ಇದಾಗಿದ್ದು, ಬಡವರ ಮನೆಗೆ ದಾರಿ ಮಾಡಿಕೊಟ್ಟಿದ್ದಾರೆ.ಇಷ್ಟು ವರ್ಷದಲ್ಲಿ ಹಲವು ಮಂದಿಯ ಬಳಿ ಅರ್ಜಿ ಹಾಕಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಈ ಬಾರಿ ಬೇಡಿಕೆ ಈಡೇರಿದೆ,ಮುಂದೆ ರಸ್ತೆಯನ್ನು ಶಾಸಕರು ಅಭಿವೃದ್ಧಿ ಮಾಡಲಿದ್ದಾರೆ.
-ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು
ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

LEAVE A REPLY

Please enter your comment!
Please enter your name here