ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಪ್ರತಿಭಾ ತರಂಗಿಣಿ 2025-26

0

ಪ್ರತಿಯೊಂದು ಮಗುವಿನಲ್ಲೂ ವಿಶೇಷ ಸಾಮರ್ಥ್ಯಗಳಿವೆ : ಡಾ.ಮಂಜುನಾಥ್ ರೇವಣ್ಕರ್


ಪುತ್ತೂರು: ಆಧುನಿಕ ದಿನಮಾನಗಳ ಶಿಕ್ಷಣದಲ್ಲಿ ಮೌಲ್ಯಗಳ ಕೊರತೆ ಎದ್ದು ಕಾಣಿಸುತ್ತಿದೆ. ಶೈಕ್ಷಣಿಕ ಕ್ಷೇತ್ರ ಉದ್ಯಮವಾಗಿ ಬದಲಾಗುತ್ತಿದೆ. ಆದ್ದರಿಂದ ಸಂಸ್ಕೃತಿ, ಸಂಸ್ಕಾರ, ಮೌಲ್ಯಗಳನ್ನು ತುಂಬುವ ವ್ಯವಸ್ಥೆಯಾಗಿ ಶಿಕ್ಷಣ ಮೂಡಿಬರಬೇಕಾದ ಅವಶ್ಯಕತೆ ಇದೆ. ಪ್ರತಿಯೊಂದು ಮಗುವಿನಲ್ಲೂ ಅದರದ್ದೇ ಆದ ಸಾಮರ್ಥ್ಯ ವಿಶೇಷತೆಗಳಿರುತ್ತವೆ. ಅವುಗಳನ್ನು ಗುರುತಿಸುವ ಕಾರ್ಯ ಆಗಬೇಕು ಎಂದು ಸೂರಜ್ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಮಂಜುನಾಥ ರೇವಣ್ಕರ್ ಹೇಳಿದರು.


ಅವರು ನಗರದ ನಟ್ಟೋಜ ಪೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವಾರ್ಷಿಕ ದಿನಾಚರಣೆ – ಪ್ರತಿಭಾ ತರಂಗಿಣಿ ೨೦೨೫-೨೬ ಅನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.


ಕೇವಲ ಅಂಕ ಪಡೆದವರಷ್ಟೇ ಜಾಣರು ಎಂದು ಪರಿಭಾವಿಸುವ ಮನೋಧರ್ಮ ಇರಲೇಬಾರದು. ಶಿಕ್ಷಣ ವ್ಯವಸ್ಥೆ ಹೆಚ್ಚು ಅಂಕ ಪಡೆದವನಿಗೆ ಲಭ್ಯವಿರುವಷ್ಟೇ ಸಮಾನವಾಗಿ ಕಡಿಮೆ ಅಂಕ ಪಡೆದವನಿಗೂ ದೊರಕಬೇಕು. ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚು ಅಂಕ ಪಡೆದವರಿಗಷ್ಟೇ ದಾಖಲಾತಿ ನೀಡುತ್ತೇವೆ ಎನ್ನುವ ಮನೋಭಾವ ಒಪ್ಪತಕ್ಕಂತಹದ್ದಲ್ಲ. ಯಾರನ್ನೂ ದಡ್ಡ ಎಂದು ಹೇಳಬಾರದು. ಶಿಕ್ಷಣ ಸರ್ವವ್ಯಾಪಿ ಎನಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.


ಹಿಂದಿನ ಕಾಲದವರಿಗೆ ಹೋಲಿಸಿದರೆ ಇಂದಿನ ಮಕ್ಕಳು ಹೆಚ್ಚು ಭಾಗ್ಯವಂತರು. ಇಂದು ಹೆತ್ತವರು ತಮ್ಮ ಮಕ್ಕಳ ಓದಿಗಾಗಿ ಎಲ್ಲಾ ರೀತಿಯ ವ್ಯವಸ್ಥೆಯನ್ನೂ ಕಲ್ಪಿಸಿಕೊಡುತ್ತಿದ್ದಾರೆ. ಹಾಗಾಗಿ ಉತ್ತಮ ಶಿಕ್ಷಣವನ್ನು ಪಡೆದು ನಮ್ಮ ನಮ್ಮ ಶಕ್ತಿಗನುಸಾರವಾಗಿ ಸಾಧನೆ ಮೆರೆಯಬೇಕು. ನಾವು ದೇಶದ ಬಗೆಗೆ ಹೆಮ್ಮೆ ಪಡುವಂತೆ ದೇಶ ನಮ್ಮ ಬಗ್ಗೆ ಹೆಮ್ಮೆ ಪಡುವಂತೆ ಕಾರ್ಯನಿರ್ವಹಿಸಬೇಕು. ರಾಷ್ಟ್ರೀಯತೆ, ದೇಶದ ಬಗೆಗಿನ ನಿಷ್ಟೆ ಸದಾ ಜಾಗೃತವಾಗಿರಬೇಕು ಎಂದು ಕರೆ ನೀಡಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಅಂಬಿಕಾದ ವೇದಿಕೆ ಯಾವುದೇ ಪಾಶ್ಚಿಮಾತ್ಯ ಕುಣಿತಗಳಿಗಾಗಿ ರೂಪಿತವಾಗಿಲ್ಲ. ಹಾಗಾಗಿ ಭಾರತೀಯ ಕಲೆಗಳ, ಭಾರತೀಯ ಪರಂಪರೆಗಳ ಅನಾವರಣಕ್ಕೆ ವಾರ್ಷಿಕೋತ್ಸವ ಅನುವು ಮಾಡಿಕೊಡುತ್ತಿದೆ. ಮನಸ್ಸನ್ನು ಕೆರಳಿಸುವ ಕಾರ್ಯಕ್ರಮಗಳ ಬದಲಾಗಿ ಮನಸ್ಸು ಅರಳಿಸುವ ಕಲೆಗಳನ್ನು ಎಳೆಯ ಮಕ್ಕಳ ಮುಂದೆ ಪ್ರಸ್ತುತಪಡಿಸಲಾಗುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ವಿದ್ಯಾರ್ಥಿ ಜಸ್ವಿತ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಿ.ಚಂದ್ರಕಾಂತ ಪೈ ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರವೀಣ್ ನಾಯಕ್, ಅಕ್ಷತಾ ದಂಪತಿ ಪುತ್ರ, ವಿಶ್ವದಾಖಲೆ ಬರೆದಿರುವ ಎಲ್‌ಕೆಜಿ ವಿದ್ಯಾರ್ಥಿ ಅಪ್ರಮೇಯ ಹಾಗೂ ಮಹೇಶ್ ಕಜೆ ಹಾಗೂ ದೀಪಿಕಾ ಕಜೆ ದಂಪತಿ ಪುತ್ರಿ. ಬೆಸ್ಟ್ ಔಟ್‌ಗೋಯಿಂಗ್ ಅವಾರ್ಡ್ ಪಡೆದ ಮಂದಿರಾ ಕಜೆ ಅವರನ್ನು ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಡಾ. ಮಂಜುನಾಥ್ ರೇವಣ್ಕರ್ ಹಾಗೂ ಹೇಮಲತಾ ರೇವಣ್ಕರ್ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಸಂಸ್ಥೆಯ ಉಪಪ್ರಾಚಾರ್ಯೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ಪ್ರಾಚಾರ್ಯೆ ಮಾಲತಿ ಡಿ. ವಾರ್ಷಿಕ ವರದಿಯನ್ನು ಮಂಡಿಸಿದರು.
ವಿದ್ಯಾರ್ಥಿನಿಯರಾದ ವೈಷ್ಣವಿ ಎಂ.ಆರ್., ಇಂಚರಾ ಎಸ್ ಮಯ್ಯ, ಅನುಶ್ರೀ ಪ್ರಾರ್ಥಿಸಿದರು. ವಿದ್ಯಾರ್ಥಿ ನಾಯಕ ಸುಧನ್ವ ಸುದರ್ಶನ ಸ್ವಾಗತಿಸಿದರು. ಶಿಕ್ಷಕಿಯರಾದ ಅನುಪಮಾ, ಜಯಲಕ್ಷ್ಮೀ, ಕುಸುಮಾ, ರಕ್ಷಾ ಬಹುಮಾನಿತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿ ನಾಯಕಿ ರಕ್ಷಾ ಎಸ್.ಎಸ್. ವಂದಿಸಿದರು. ಶಿಕ್ಷಕಿ ಪ್ರಿಯಾಶ್ರೀ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿಯರಾದ ಗೌರಿ ಹಾಗೂ ಕೃತಿಕಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here