ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಸುಮಾರು 80 ಅಡಿ ಆಳಕ್ಕೆ ಬಿದ್ದ ಘಟನೆ ಶಿರಾಡಿ ಘಾಟ್ನ ಸಕಲೇಶಪುರ ಸಮೀಪದ ಮಾರನಹಳ್ಳಿಯಲ್ಲಿ ಅ.24ರಂದು ಬೆಳಿಗ್ಗೆ ನಡೆದಿದೆ. ಕಾರಿನಲಿದ್ದ ಶಿವಮೊಗ್ಗ ಮೂಲದ ಶಿಕ್ಷಕ ಗೋವಿಂದ ನಾಯ್ಕ್ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಗೋವಿಂದ ನಾಯ್ಕ್ ಅವರು ತಮ್ಮ ಪುತ್ರ ಅಕ್ಷಿತ್ನನ್ನು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಗೆ ನವೋದಯ ಶಾಲೆಗೆ ಬಿಡಲು ಪತ್ನಿ ಹಾಗೂ ಇನ್ನೋರ್ವ ಪುತ್ರನ ಜೊತೆಗೆ ಕಾರಿನಲ್ಲಿ ಶಿರಾಡಿ ಘಾಟ್ ಮೂಲಕ ಬರುತ್ತಿದ್ದವರು ಮಾರನಹಳ್ಳಿ ನ್ಯೂ ಸ್ಟಾರ್ ಹೋಟೆಲ್ ಬಳಿ ತಲುಪುತ್ತಿದ್ದಂತೆ ತಡೆಗೋಡೆಯಿಲ್ಲದ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿ ಹೋಟೆಲ್ ಪಕ್ಕದ ನೀರಿನ ಸಿಂಟೆಕ್ಸ್ ಟ್ಯಾಂಕ್ಗೆ ಡಿಕ್ಕಿಯಾಗಿ ಸುಮಾರು 80 ಅಡಿ ಆಳದ ಕೆಂಪುಹೊಳೆಗೆ ಬಿದ್ದಿದೆ. ಅಪಘಾತದ ಶಬ್ದ ಕೇಳಿ ಸ್ಥಳೀಯರು ಹಾಗೂ ಇತರ ವಾಹನ ಸವಾರರು ಬಂದು ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಕಾರು ಸಂಪೂರ್ಣ ಹಾನಿಗೊಂಡಿದೆ. ಘಟನೆಯಲ್ಲಿ ಗೋವಿಂದ ನಾಯ್ಕ್ರವರ ಪತ್ನಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಉಳಿದವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
