ಸಿ.ಎಂ ಪರಿಹಾರ ನಿಧಿಯಿಂದ ನೆರವು ಒದಗಿಸುವೆ: ಶಾಸಕ ಅಶೋಕ್ ರೈ
ಪುತ್ತೂರು; ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುಣಚ ಗ್ರಾ.ಪಂ ಮಾಜಿ ಅಧ್ಯಕ್ಷರೂ, ಹಿರಿಯ ಬಿಜೆಪಿ ನಾಯಕರಾದ ರಾಮಕೃಷ್ಣ ಪೂಜಾರಿ ಯವರು ಶಾಸಕರಾದ ಅಶೋಕ್ ರೈ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.
ಶನಿವಾರ ಶಾಸಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ರಾಮಕೃಷ್ಣ ಪೂಜಾರಿಯವರು ಕಳೆದ ಕೆಲವು ತಿಂಗಳಿಂದ ನಾನು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗೆ ಸುಮಾರು 50 ಲಕ್ಷ ರೂ ಖರ್ಚು ತಗಲುತ್ತಿದೆ. ಆರ್ಥಿಕ ಸಂಕಷ್ಟದಲ್ಲಿರುವ ನನಗೆ ನನ್ನ ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವು ಒದಗಿಸಿಕೊಡುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಅಶೋಕ್ ರೈ ಅವರು ಚಿಕಿತ್ಸೆಗೆ ನೆರವು ನೀಡುವುದು ಮಾನವೀಯ ಧರ್ಮ. ಇದರಲ್ಲಿ ರಾಜಕೀಯ ಇಲ್ಲ. ನಿಮ್ಮ ಮನವಿಯನ್ನು ಮುಖ್ಯಮಂತ್ರಿಗಳ ಬಳಿ ನೀಡಿ ನನ್ನಿಂದ ಸಾಧ್ಯವಾದಷ್ಟು ನೆರವನ್ನು ಪಡೆದುಕೊಂಡು ನಿಮಗೆ ಕೊಡಿಸುವುದಾಗಿ ಹೇಳಿದರು.
