ಪುತ್ತೂರು: ನೆಲ್ಯಾಡಿ ಹೋಬಳಿಯ ಹೊಸವಕ್ಲು ಮನೆಯಲ್ಲಿ ಈ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಕುಟುಂಬ ಮಿಲನ ಕಾರ್ಯಕ್ರಮವು ಹಳೆಯ ಸಂಪ್ರದಾಯದ ಜೀವಂತ ಚಿತ್ರಣವಾಯಿತು. ಹೊಸ ಕಾಲದ ವೇಗದ ಬದುಕಿನಲ್ಲಿ ಕುಟುಂಬ ಬಂಧಗಳು ಶಿಥಿಲವಾಗುತ್ತಿರುವ ಈ ಯುಗದಲ್ಲಿ, ಹೊಸವಕ್ಲು ಕುಟುಂಬದ ಸದಸ್ಯರು ಪ್ರದರ್ಶಿಸಿದ “ಸಂಘಟಿತ ಕುಟುಂಬ”ದ ಮಾದರಿ ಎಲ್ಲರಿಗೂ ಪ್ರೇರಣೆಯಾಗಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ಹೊಸವಕ್ಲು ಕುಟುಂಬದ ಹಿರಿಯರು, ಯುವಕರು ಹಾಗೂ ಮಕ್ಕಳು ಎಲ್ಲರೂ ಸೇರಿಕೊಂಡು ಪುರಾತನ ಸಂಪ್ರದಾಯದಂತೆ ಪೂಜೆ, ಭೋಜನ ಮತ್ತು ಹಬ್ಬದ ಉತ್ಸಾಹದಲ್ಲಿದರು.
ಗೋ ಪೂಜೆ, ತುಳಸಿ ಪೂಜೆ, ಗುರುಹಿರಿಯ ಸ್ಮರಣೆ ಹೊಸವಕ್ಲು ಕುಟುಂಬದ ಸದಸ್ಯರು ತಮ್ಮ ತಮ್ಮ ಮನೆಗಳಲ್ಲಿ ಮೊದಲು ಗೋಪೂಜೆಯನ್ನು ನೆರವೇರಿಸಿದರು. ಗೋವುಗಳಿಗೆ ಹೂ, ಅಕ್ಷತೆ, ಹಾಲು ಮತ್ತು ಹಣ್ಣಿನ ನೈವೇದ್ಯ ಅರ್ಪಿಸಿ, ಗೋಮಾತೆಯನ್ನು ಸಮೃದ್ಧಿಯ ಸಂಕೇತವೆಂದು ಪೂಜಿಸಲಾಯಿತು. ತದನಂತರ ಮನೆಯ ಆವರಣದಲ್ಲಿರುವ ತುಳಸಿಯ ಬಳಿಯಲ್ಲಿ ತುಳಸಿ ಪೂಜೆ ನಡೆಯಿತು. ನಂತರ ಕುಟುಂಬದ ಪಿತೃಗಳು ಮತ್ತು ಗುರುಹಿರಿಯರ ಸ್ಮರಣಾರ್ಥವಾಗಿ ನಮನ ಸಲ್ಲಿಸಿದರು.
ಕುಟುಂಬದ ಹಿರಿಯರಾದ ಸುಂದರಿ ಹೊಸವಕ್ಲು ಅವರ ಮನೆಯಲ್ಲಿ ಮುತ್ತಪ್ಪ ಗೌಡ ಹೊಸವಕ್ಲು ಹಾಗೂ ಶ್ರೀನಿವಾಸ ಗೌಡ ಹೊಸವಕ್ಲು ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಕುಟುಂಬದ ಪೌರಾಣಿಕ ಸಂಪ್ರದಾಯದ ಭಾಗವಾಗಿರುವ ಬಲಿಯೇಂದ್ರ ಮಹಾರಾಜನ ಸ್ಮರಣಾರ್ಥವಾಗಿ ಬಲಿಯೇಂದ್ರ ಕಂಬ ನೆಟ್ಟು ಪೂಜಿಸಲಾಯಿತು. ಬಳಿಕ ಬಲಿಯು ನೀಡಿದ ತ್ಯಾಗ ಮತ್ತು ದಾನಾತ್ಮಕ ಮನೋಭಾವವನ್ನು ಸ್ಮರಿಸಲಾಯಿತು. ಈ ಸಂದರ್ಭ ಹಿರಿಯರು ಸಂಪ್ರದಾಯದ ಮಹತ್ವವನ್ನು ಯುವ ಪೀಳಿಗೆಗೆ ವಿವರಿಸಿದರು.
ಬಳಿಕ ಎಲ್ಲ ಸದಸ್ಯರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ತಯಾರಿಸಲಾದ ಸಾಂಪ್ರದಾಯಿಕ ಖಾದ್ಯಗಳನ್ನು ಬಡಿಸಲಾಯಿತು.
ಈ ಹಬ್ಬದ ಸಂಭ್ರಮದಲ್ಲಿ ಕುಟುಂಬದ ಸದಸ್ಯರಾದ ಸುಂದರಿ ಹೊಸವಕ್ಲು, ಚಂದ್ರಾವತಿ, ಶ್ರೀಲತಾ, ವಾಸುದೇವ ಗೌಡ, ಧನಂಜಯ ಗೌಡ, ರವಿಚಂದ್ರ ಗೌಡ, ಸುಪ್ರಿತಾ ರವಿಚಂದ್ರ ಗೌಡ, ಸುಮನ, ಅನುರಾಧ, ಹರಿಣಾಕ್ಷಿ, ಸದಾನಂದ, ಭಾರತಿ, ಮೋಹನ, ಮಲ್ಲಿಕಾ, ಪ್ರಸನ್ನ, ನಿವೇದಿತಾ, ಸುಧಾ, ಶಿವಕುಮಾರ ಬಂಗಾರಪೇಟೆ, ಚಂದ್ರಕಾಂತ ಬೆಳ್ತಂಗಡಿ, ಸುಮನಾ, ತುಷಾರ್, ವಿಹಾರ್, ಪ್ರದೀಪ್, ಅಪೂರ್ವ, ಕೃತಿಕಾ, ಮೋನಿಷಾ, ಪ್ರಸಾದ್, ಚಿತ್ತರಂಜನ್, ಪ್ರಭಾ, ಅಭಿರಂಜನ, ಅಭಿರಾಮ್ ಹಾಗೂ ಮಕ್ಕಳೂ ಸೇರಿದಂತೆ ಅನೇಕ ಮಂದಿ ಹಾಜರಿದ್ದರು.