ಪುತ್ತೂರು: ಕಸದ ಸಮಸ್ಯೆಗಳಿಗೆ ಮುಕ್ತಿ ಪಡೆಯಲು ಪುತ್ತೂರು ನಗರಸಭೆ ಬನ್ನೂರು ಡಂಪಿಂಗ್ ಯಾರ್ಡ್ನಲ್ಲಿ ನಿರ್ಮಾಣಗೊಂಡಿರುವ ದೇಶದಲ್ಲೇ ಪ್ರಥಮವಾಗಿರುವ ಹಸಿ ಕಸದಿಂದ ಸಿಎನ್ಜಿ ಗ್ಯಾಸ್ ಉತ್ಪಾದಿಸುವ ಯೋಜನೆ ಇದೀಗ ಅಂತಿಮ ಹಂತ ತಲುಪಿದೆ. ಈ ನಿಟ್ಟಿನಲ್ಲಿ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಡಂಪಿಂಗ್ ಯಾರ್ಡ್ಗೆ ಭೇಟಿ ನೀಡಿ ಬಯೋ ಸಿಎನ್ಜಿ ಘಟಕದ ಯೋಜನೆಗಳನ್ನು ಪರಿಶೀಲನೆ ಮಾಡಿದರು.

ಜನರ ಪ್ರಯತ್ನದಿಂದ ಕಸ ವಿಂಗಡಣೆ ಮಾಡಿ ಸಿಎನ್ಜಿ ಪ್ಲಾಂಟ್ ಮಾಡಲಾಗಿದೆ. ಸರಕಾರ ಮತ್ತು ಸರಕಾರೇತರ ಸಂಸ್ಥೆಗಳನ್ನು ಜೋಡಿಸಿಕೊಂಡು ಮಾಡಿರುವ ಸಾಮಾಜಿಕ ಚಟುವಟಿಕೆ ದೇಶಕ್ಕೆ ಮಾದರಿಯಾಗಿದೆ. ಸಿಎನ್ಜಿ ಪ್ಲ್ಯಾಂಟ್ಗೆ ಬೇಕಾದ ಕಸವನ್ನು ಸಂಗ್ರಹಿಸಲು ಜನರಿಗೆ ಕಸವನ್ನು ವಿಂಗಡಣೆ ಮಾಡಲು ಪ್ರೇರಣೆ ಮಾಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಕೃಷ್ಣ ಮುಳಿಯ ಗ್ರೀನ್ ಎನರ್ಜಿಯ ಕೃಷ್ಣನಾರಾಯಣ ಮುಳಿಯ, ರೋಟರಿ, ರಿಟ್ಯಾಪ್ ಸಂಸ್ಥೆಯವರು ಹಾಗು ನಗರಸಭೆ ಆಡಳಿತ ಮಂಡಳಿಗೆ, ಮಾಜಿ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು ಜನರನ್ನು ಜೋಡಿಸಿಕೊಂಡು ಮಾಡಿರುವ ಪ್ರಯತ್ನ ಉತ್ತಮವಾಗಿದೆ. ಉತ್ತಮ ಉದ್ದೇಶದಿಂದ ಮಾಡಿದ ಕಾರ್ಯಕ್ರಮ. ಇದರಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಪ್ರಧಾನಮಂತ್ರಿಗಳ ಸ್ವಚ್ಛತಾ ಭಾರತ ಉದ್ದೇಶಕ್ಕೆ ಪುತ್ತೂರು ಮಾದರಿಯಾಗಲಿದೆ. ಇದರಲ್ಲಿ ಬೇರೆ ಬೇರೆ ಅನುದಾನ ಇರಬಹುದು. ಎಲ್ಲವನ್ನು ಜೋಡಿಸಿಕೊಂಡು ಮಾಡಬೇಕು. ಶಿಕ್ಷಣ ಸಂಸ್ಥೆ, ಮಾದ್ಯಮದವರು ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಬೇಕೆಂದರು.
ಕಸ ವಿಲೇವಾರಿ ವಾಹನಕ್ಕೆ ಚಾಲನೆ:
ಡಂಪಿಂಗ್ ಯಾರ್ಡ್ನಲ್ಲಿ ಸಂಗ್ರಹಗೊಂಡ ಕಸಗಳ ವಿಲೇವಾರಿ ಮಾಡಲು ಮತ್ತು ರೂ.26ಲಕ್ಷ ವೆಚ್ಚದ ಯಂತ್ರವನ್ನು ನಗರಸಭೆಗೆ ಸಂಸದರು ಹಸ್ತಾಂತರಿಸಿದರು. ಇದೇ ಸಂದರ್ಭ ಅವರು ಬಯೋ ಸಿಎನ್ಜಿ ಘಟಕದಲ್ಲಿ ಕಸ ಸಂಗ್ರಹಿಸುವ ವಾಹನಕ್ಕೆ ಸಿಎನ್ಜಿ ಗ್ಯಾಸ್ ತುಂಬಿಸುವ ಮೂಲಕ ಚಾಲನೆ ನೀಡಿದರು.