ನೆಲ್ಯಾಡಿ: ಉಚಿತ ನೇತ್ರ ಚಿಕಿತ್ಸಾ ಶಿಬಿರ, ಕನ್ನಡಕ ವಿತರಣೆ

0

ನೆಲ್ಯಾಡಿ: ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ, ಸೀನಿಯರ್ ಜೇಸಿ ನೆಲ್ಯಾಡಿ ಲೀಜಿಯನ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ ಇದರ ಆಶ್ರಯದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು ಇದರ ಸಹಯೋಗದೊಂದಿಗೆ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸಾ ಹಾಗೂ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ಅ.28ರಂದು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.


ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ ಅವರು ಶಿಬಿರ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇಂತಹ ಶಿಬಿರದಿಂದ ಪ್ರಯೋಜನ ಸಿಗಲಿ ಎಂದರು. ಸಂಚಾರಿ ನೇತ್ರ ಚಿಕಿತ್ಸಾ ಘಟಕದ ಮುಖ್ಯಸ್ಥರಾದ ಸುಮನ ಅವರು ಉಚಿತ ಪೊರೆ ಶಸ್ತ್ರ ಚಿಕಿತ್ಸೆ, ಜಿಲ್ಲಾಸ್ಪತ್ರೆಯಿಂದ ಉಚಿತ ಕನ್ನಡಕ ವಿತರಣೆ ಕುರಿತು ಮಾಹಿತಿ ನೀಡಿದರು.


ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ ಇದರ ಅಧ್ಯಕ್ಷರಾದ ಪದ್ಮಪ ಗೌಡ ಮಾತನಾಡಿ, ಸಾಮಾಜಿಕ ಸೇವಾ ಸಂಸ್ಥೆಗಳು ಸೇವೆಯನ್ನೇ ಗುರಿಯಾಗಿಟ್ಟುಕೊಂಡು ಜನಪರ ಕಾಳಜಿಯಿಂದ ಇಂತಹ ಶಿಬಿರ ಆಯೋಜಿಸಿದಲ್ಲಿ ಸಂಸ್ಥೆಗಳ ಗೌರವ ಹೆಚ್ಚಾಗುತ್ತದೆ ಹಾಗೂ ಜನರಲ್ಲಿ ನಂಬಿಕೆ ಉಳಿಯುತ್ತದೆ. ಈ ನಿಟ್ಟಿನಲ್ಲಿ ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ಕೆಲಸ ಮಾಡುತ್ತಿದೆ ಎಂದರು. ಸೀನಿಯರ್ ಚೇಂಬರ್ ನೆಲ್ಯಾಡಿ ಲೀಜಿಯನ್ ಅಧ್ಯಕ್ಷ ಪ್ರಕಾಶ್ ಕೆ.ವೈ., ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಸಲಾಂ ಬಿಲಾಲ್, ಸದಸ್ಯೆ ಉಷಾ ಜೋಯಿ, ಪುತ್ತೂರು ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಆನಂದ ಡಿ.ಬಿ. ಸಂದರ್ಭೋಚಿತವಾಗಿ ಮಾತನಾಡಿದರು. ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ. ದೀಪಕ್ ರೈ, ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೃಷ್ಣಾನಂದರವರು ಶಿಬಿರಕ್ಕೆ ಭೇಟಿ ನೀಡಿದರು.


59ನೇ ನೇತ್ರ ಚಿಕಿತ್ಸಾ ಶಿಬಿರ ಸಂಘಟಕ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಾಮಾಜಿಕ ಮುಖಂಡ ವಾಸುದೇವ ಗೌಡ ವಂದಿಸಿದರು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಶಿಬಿರದ ಯಶಸ್ಸಿಗೆ ಸಹಕರಿಸಿದರು.

225 ಜನರಿಂದ ಕಣ್ಣಿನ ತಪಾಸಣೆ
ಶಿಬಿರದಲ್ಲಿ ಸುಮಾರು 225ಕ್ಕೂ ಹೆಚ್ಚು ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. 182 ಜನರಿಗೆ ಉಚಿತ ಕನ್ನಡ ವಿತರಿಸಲಾಯಿತು. 10 ಮಂದಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು.

LEAVE A REPLY

Please enter your comment!
Please enter your name here