ರಾಮಕುಂಜ: ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಕೇಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನದ ಪೂರ್ವಭಾವಿ ಸಭೆ ಅ.೨೬ರಂದು ಮಧ್ಯಾಹ್ನ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಸಮ್ಮೇಳನದ ಪೂರ್ವಸಿದ್ಧತೆ ಬಗ್ಗೆ ಚರ್ಚೆ ನಡೆಸಲಾಯಿತು. ನ.೯ರಂದು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಭಜನೆ, ಕುಣಿತ ಸ್ಪರ್ಧೆ ನಡೆಸುವುದು. ಜನಪದ ಕುಣಿತ ಸ್ಪರ್ಧೆಗಳನ್ನು ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಸುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಸಮ್ಮೇಳನದ ಮೆರುಗಿಗೆ ತಾಲೂಕಿನಲ್ಲಿ ಉತ್ತಮ ತುಳು ಜನಪದೀಯ ಕರಕುಶಲ ವಸ್ತುಗಳ ತಯಾರಿ ಮಾಡುವವರ ಸಂಪರ್ಕ, ತುಳು ಪಠ್ಯಪುಸ್ತಕ ಹಾಗೂ ತುಳು ಸಾಹಿತ್ಯ ಸಂಬಂಧಿ ಪುಸ್ತಕಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವುದು, ಸಮ್ಮೇಳನದ ಸವಿನೆನಪಿಗಾಗಿ ಸ್ಮರಣ ಸಂಚಿಕೆ ಮಾಡುವುದು, ಸಮಾವೇಶದಲ್ಲಿ ತುಳುನಾಡಿನ ವಿವಿಧ ತಿಂಡಿ ತಿನಿಸು ಗಳ ಮಾರಾಟ ಮಾಡುವವರಿಗೆ ಸ್ಥಳ ಬಾಡಿಗೆ ಇಲ್ಲದೆ ಅವಕಾಶ ಮಾಡಿಕೊಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಯಿತು.
ವೇದಿಕೆಯಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಎಸ್ಆರ್ಕೆ ಲ್ಯಾಡರ್ಸ್ನ ಮಾಲಕರಾದ ಕೇಶವ ಅಮೈ, ಕುಟ್ರುಪ್ಪಾಡಿ ಕೇಪು ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶಿವರಾಂ ಶೆಟ್ಟಿ ಕೇಪು, ಬೊಳ್ಳಿಬೊಳ್ಪು ತುಳುಕೂಟದ ಸಂಚಾಲಕ ಗಿರಿಶಂಕರ್ ಸುಲಾಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರಕಾಶ್ ಉಪಸ್ಥಿತರಿದ್ದರು. ವಿವಿಧ ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.
ಶಿಕ್ಷಕಿ ಪ್ರೇಮ ಸ್ವಾಗತಿಸಿ, ಸರಿತಾಜನಾರ್ದನ್ ವಂದಿಸಿದರು. ಕಿಶೋರ್ ಬಿ.ಕೆ.ಸಹಕರಿಸಿದರು. ಸಾಯಿರಾಮ್ ಕಾರ್ಯಕ್ರಮ ನಿರೂಪಿಸಿದರು.
