ಪದ್ಮಶ್ರೀ ಪಿ.ಉನ್ನಿಕೃಷ್ಣನ್ ಹಾಗೂ ಉತ್ತರಾ ಉನ್ನಿಕೃಷ್ಣನ್ ತಂಡದಿಂದ ಸಂಗೀತ ಸುಧೆ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಇಪ್ಪತ್ತೈದು ವರ್ಷ ತುಂಬಿದ ಹಿನ್ನೆಲೆಯಲ್ಲಿ ವರ್ಷಪೂರ್ತಿ ಆಚರಿಸಲಾಗುತ್ತಿರುವ ರಜತಮಹೋತ್ಸವ ಸಂಭ್ರಮದ ಭಾಗವಾಗಿ ದಕ್ಷಿಣ ಭಾರತದ ಪ್ರಸಿದ್ಧ ಗಾಯಕ, ರಾಷ್ಟ್ರಪ್ರಶಸ್ತಿ ವಿಜೇತ ಪದ್ಮಶ್ರೀ ಪಿ.ಉನ್ನಿಕೃಷ್ಣನ್, ಅವರ ಪುತ್ರಿ ಉತ್ತರಾ ಉನ್ನಿಕೃಷ್ಣನ್ ಹಾಗೂ ತಂಡದವರಿಂದ ಶನಿವಾರ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೆರವೇರಿತು.

ವಿದ್ವಾನ್ ನಿಶಾನ್ ಚಂದ್ರನ್ ಅವರು ವಾಯಲಿನ್‌ನಲ್ಲಿ, ವಿದ್ವಾನ್ ತುಮಕೂರು ಬಿ.ರವಿಶಂಕರ್ ಅವರು ಮೃದಂಗದಲ್ಲಿ, ವಿದ್ವಾನ್ ತುಮಕೂರು ಬಿ. ಶಶಿಶಂಕರ್ ಘಟಂನಲ್ಲಿ ಹಾಗೂ ವಿದ್ವಾನ್ ವಿಕ್ರಮ್ ಭಾರದ್ವಾಜ್ ಅವರು ಮೋರ್ಚಿಂಗ್ ಹಾಗೂ ರಿದಂಪಾಡ್‌ನಲ್ಲಿ ಸಹಕರಿಸಿದರು.
ಉದ್ಘಾಟನಾ ಕಾರ್ಯಕ್ರಮ: ಕೋಟೆಕಾರಿನ ಶಂಕರಮಠ ನಡೆಸುವ ಸಂಗೀತ ಶಾಲೆಯ ಗುರು ವಿದುಷಿ ನಾರಾಯಣಿ ಬೊಳ್ಳಾವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೋಟೆಕಾರು ಶಂಕರ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಬಿ.ಪುರಂದರ ಭಟ್, ಸುರೇಶ್ ಶೆಟ್ಟಿ ಕೆ., ಡಾ.ಎಚ್.ಮಾಧವ ಭಟ್, ಬಾಲಕೃಷ್ಣ ಬೋರ್ಕರ್, ಪ್ರಸನ್ನ ಭಟ್, ವಿದ್ವಾನ್ ಕಾಂಚನ ಈಶ್ವರ ಭಟ್, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ವಿ.ಬಿ.ಅರ್ತಿಕಜೆ ವೇದಿಕೆಯಲ್ಲಿ ಹಾಜರಿದ್ದರು. ಈ ಸಂದರ್ಭದಲ್ಲಿ ವಿದುಷಿ ನಾರಾಯಣಿ ಬೊಳ್ಳಾವ ಹಾಗೂ ಕಾಂಚನ ಈಶ್ವರ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಿಬರೇ ರಾಮರಸಂ, ಬೋಲಾವ ವಿಠಲ ಪಹಾವ ವಿಠಲ, ಯಾದವ ನೀ ಬಾ ಯದುಕುಲ ನಂದನ ಮಾಧವ ಮಧುಸೂದನ, ಅಚ್ಯುತಂ ಕೇಶವಂ ಕೃಷ್ಣ ದಾಮೋದರಂ ರಾಮ ನಾರಾಯಣಂ ಜಾನಕೀ ವಲ್ಲಭಂ, ಭಾಗ್ಯದಾ ಲಕ್ಷ್ಮೀ ಬಾರಮ್ಮಾ, ಬ್ರಹ್ಮ ಒಕ್ಕಟೇ ಪರಬ್ರಹ್ಮ ಒಕ್ಕಟೇ ಮೊದಲಾದ ಹಾಡುಗಳು ಜನಮನವನ್ನು ಸೂರೆಗೊಂಡವು.
ಸೆಲ್ಫಿಗೆ ಮುಗಿಬಿದ್ದ ಜನ: ಕಾರ್ಯಕ್ರಮ ಮುಗಿಯುತ್ತಿದ್ದಂತೆ ಅನೇಕ ಮಕ್ಕಳು, ವಿದ್ಯಾರ್ಥಿಗಳು, ಹಿರಿಯರು ಗಾಯಕರೊಂದಿಗಿನ ಭಾವಚಿತ್ರಕ್ಕಾಗಿ ಮುಗಿಬಿದ್ದರು. ಪ್ರತಿಯೊಬ್ಬರೂ ಫೋಟೋ ತೆಗೆಸಿಕೊಂಡದ್ದಲ್ಲದೆ ಸೆಲ್ಫಿಯನ್ನೂ ಪಡೆದುಕೊಂಡರು.
ಅಚ್ಚುಕಟ್ಟಾದ ವ್ಯವಸ್ಥೆ: ಶಾಸ್ತ್ರೀಯ ಸಂಗೀತ ಕಾರ್ಯಕ್ರಮಕ್ಕಾಗಿ ಅಂಬಿಕಾ ಕ್ಯಾಂಪಸ್ ನಲ್ಲಿ ಅತ್ಯಂತ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿತ್ತು. ಪಾರ್ಕಿಂಗ್ ವ್ಯವಸ್ಥೆ, ಆಸನದ ವ್ಯವಸ್ಥೆ, ಪಾನೀಯ ವ್ಯವಸ್ಥೆ, ಸೂಕ್ತ ಬೆಳಕು ಹಾಗೂ ಧ್ವನಿವರ್ಧಕದ ವ್ಯವಸ್ಥೆ, ಎಲ್‌ಇಡಿ ವ್ಯವಸ್ಥೆ ಕಾರ್ಯಕ್ರಮವನ್ನು ಹೆಚ್ಚು ಆಪ್ತವಾಗುವಂತೆ ಮಾಡಿತು. ಭಾಷಣಕ್ಕೆ ಆದ್ಯತೆ ಕೊಡದೆ ಸಂಗೀತ ಕಾರ್ಯಕ್ರಮಕ್ಕೆ ಎಲ್ಲ ಸಮಯವನ್ನೂ ಮೀಸಲಿರಿಸಿದ್ದು ಪ್ರೇಕ್ಷಕರ ಮನ್ನಣೆಗೆ ಪಾತ್ರವಾಯಿತು. ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಹಾಗೆಯೇ ಎಲ್ಲೂ ಬೊಬ್ಬೆ, ಕಿರುಚಾಟ ನಡೆಸದೆ ಕರತಾಡನದ ಮುಖಾಂತರವಷ್ಟೇ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸುತ್ತಿದ್ದ ಅಂಬಿಕಾ ವಿದ್ಯಾರ್ಥಿಗಳ ಶಿಸ್ತು ಕೂಡ ಗಮನ ಸೆಳೆಯಿತು.