ಪುತ್ತೂರು:ಪುತ್ತೂರು ತಾಲೂಕು ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಈ ಬಾರಿ ಮಳೆಗಾಲದಲ್ಲಿ ಭಾರೀ ಮಳೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ನೀಡಲಾದ ರಜೆಯನ್ನು ಸರಿದೂಗಿಸಲು ಪ್ರತೀ ಶನಿವಾರ ಪೂರ್ಣ ದಿನ ತರಗತಿ ನಡೆಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಭಾರೀ ಮಳೆಗೆ 11 ದಿನ ರಜೆ: 
ಕಳೆದ ಜೂನ್ನಿಂದ ಸಪ್ಟೆಂಬರ್ವರೆಗಿನ ಮಳೆಗಾಲದಲ್ಲಿ ಈ ಬಾರಿ ವಿಪರೀತ ಮಳೆಯಾಗಿತ್ತು.ದ.ಕ.ಜಿಲ್ಲೆಯಾದ್ಯಂತ ಭಾರೀ ಮಳೆಗೆ ಎಲ್ಕೆಜಿ ತರಗತಿಯಿಂದ ಪ್ರೌಢಶಾಲೆವರೆಗೆ ಬರೋಬ್ಬರಿ 11 ರಜೆ ನೀಡಲಾಗಿತ್ತು.ಬಳಿಕ ದಸರಾ ರಜೆ ಕೂಡ ಬಂದ ಹಿನ್ನಲೆಯಲ್ಲಿ ಮತ್ತೆ ರಜೆ ಸಾರಲಾಗಿತ್ತು.ಮಳೆಯ ಕಾರಣಕ್ಕೆ ನೀಡಲಾದ ರಜೆಯನ್ನು ಸರಿದೂಗಿಸಲು ನಿರ್ಧರಿಸಿರುವ ಶಿಕ್ಷಣ ಇಲಾಖೆ ಶನಿವಾರ ಪೂರ್ಣ ತರಗತಿಗಳನ್ನು ನಡೆಸುವಂತೆ ನಿರ್ದೇಶನ ನೀಡಿದೆ.
ಮಾರ್ಚ್ವರೆಗೆ ಶನಿವಾರ ಪೂರ್ಣ ತರಗತಿ: 
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ಭಾರೀ ಮಳೆಗೆ ಸರಾಸರಿ 10ಕ್ಕಿಂತ ಹೆಚ್ಚಿನ ರಜೆ ನೀಡಲಾಗಿದೆ.ಮೇ.22ರಿಂದ ಆರಂಭವಾದ ಮಳೆಗೆ ನಾಲ್ಕು ತಿಂಗಳ ಅವಧಿಯಲ್ಲಿ ದ.ಕ.ಜಿಲ್ಲಾ ಮಟ್ಟದಲ್ಲಿಯೇ 11 ರಜೆಗಳನ್ನು ನೀಡಲಾಗಿದೆ.ಇದೀಗ ಮಳೆಗೆ ನೀಡಲಾದ ರಜೆಯನ್ನು ಭರ್ತಿ ಮಾಡಲು ಶನಿವಾರ ಸಂಜೆಯವರಗೆ ತರಗತಿ ನಡೆಸಲಾಗುತ್ತಿದೆ. ಅ.25ರಿಂದ ಅನ್ವಯವಾಗುವಂತೆ ವಾರದ ಶನಿವಾರ ಪೂರ್ಣ ದಿನ ತರಗತಿ ಆರಂಭವಾಗಿದೆ.ಮಾರ್ಚ್ ತಿಂಗಳವರಗೆ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ನೇ ತರಗತಿಯಿಂದ ಪ್ರೌಢಶಾಲೆವರೆಗೆ ಶನಿವಾರ ಪೂರ್ಣ ದಿನ ತರಗತಿ ನಡೆಸಿ ಕಲಿಕಾ ಅವಧಿ ಪೂರ್ಣಗೊಳಿಸಲಾಗುತ್ತಿದೆ.ಒಂದು ರಜೆಯ ಅವಧಿ ಭರ್ತಿಗೊಳಿಸಲು ಎರಡು ಶನಿವಾರ ಇಡೀ ದಿನ ತರಗತಿ ನಡೆಸುವುದು ಅನಿವಾರ್ಯವಾಗಿದೆ.ನವೆಂಬರ್ನಿಂದ ಮಾರ್ಚ್ವರೆಗೆ ಒಟ್ಟು ಅಂದಾಜು 20 ಶನಿವಾರ ಸಿಗಲಿದ್ದು ಇದರಲ್ಲಿ 11 ರಜೆಯನ್ನು ಸರಿದೂಗಿಸುವ ಸವಾಲು ಶಿಕ್ಷಣ ಇಲಾಖೆಗಿದೆ.
ಗಣತಿ ರಜೆ ಕೂಡ ಸರಿದೂಗಿಸಬೇಕಾಗಿದೆ: 
ಮಳೆಗೆ ನೀಡಿದ ರಜೆ ಅಲ್ಲದೆ ಈ ಬಾರಿ ರಾಜ್ಯ ಸರಕಾರದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಹಿನ್ನಲೆಯಲ್ಲಿ ಕೂಡ 15 ದಿನ ಹೆಚ್ಚುವರಿ ರಜೆ ನೀಡಲಾಗಿತ್ತು.ಆದರೆ ಮಳೆಯ ರಜೆಯನ್ನು ಶನಿವಾರ ತರಗತಿ ನಡೆಸಿ ಭರ್ತಿಮಾಡಲಾಗುತ್ತಿದ್ದು ಗಣತಿಗೆ ನೀಡಲಾದ ರಜೆಯನ್ನು ಸರದೂಗಿಸಲು ಶಿಕ್ಷಣ ಇಲಾಖೆ ಯಾವುದೇ ನಿರ್ಧಾರ ಮಾಡಿಲ್ಲ.11 ರಜೆಯನ್ನು
20 ಶನಿವಾರಗಳಲ್ಲಿ ಪೂರ್ತಿಗೊಳಿಸಬೇಕು ಮಳೆಯ ಕಾರಣಕ್ಕೆ 11 ದಿನ ರಜೆ ಕೊಟ್ಟಿದ್ದೇವೆ.11 ದಿನವನ್ನು ಸರಿದೂಗಿಸಲು ಶನಿವಾರಗಳಂದು ಪೂರ್ತಿ ದಿನ ತರಗತಿ ನಡೆಸಿ 20 ಶನಿವಾರಗಳಲ್ಲಿ ಪೂರ್ತಿಗೊಳಿಸಬೇಕು.ಮಕ್ಕಳಿಗೆ ರಿಲ್ಯಾಕ್ಸ್ ಸಿಗಬೇಕೆಂಬ ಉದ್ದೇಶದಿಂದ ವಾರದಲ್ಲಿ ಒಂದು ದಿನ ರಜೆ ನೀಡಬೇಕಾಗುತ್ತದೆ.ಗಣತಿ ರಜೆ ಸರಿದೂಗಿಸಲು ಸರಕಾರ ಇನ್ನೂ ನಿರ್ದೇಶನ ನೀಡಿಲ್ಲ
| ವಿಷ್ಣುಪ್ರಸಾದ್
ಕ್ಷೇತ್ರ ಶಿಕ್ಷಣಾಧಿಕಾರಿ ಪುತ್ತೂರು
