ವಿಟ್ಲ: ಯಕ್ಷಗಾನ ರಂಗದ ಹಿರಿಯ ಅರ್ಥಧಾರಿ ವಿಟ್ಲ ಶಂಭು ಶರ್ಮ (74 ವ.) ರವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದಾಗಿ ನ.1ರಂದು ಬೆಳಗ್ಗೆ ನಿಧನರಾದರು.
ಉಪನ್ಯಾಸಕರಾಗಿ, ಯಕ್ಷಗಾನ ಅರ್ಥಧಾರಿಯಾಗಿ ಜನಪ್ರಿಯರಾಗಿದ್ದ ಅವರು ಪ್ರಸ್ತುತ ಪುತ್ತೂರು ಸಮೀಪ ಮುರ ಎಂಬಲ್ಲಿ ವಾಸಿಸುತ್ತಿದ್ದರು.
ಶೇಣಿ ಗೋಪಾಲಕೃಷ್ಣ ಭಟ್ ಸಹಿತ ಖ್ಯಾತನಾಮರೊಂದಿಗೆ ಅರ್ಥಗಾರಿಕೆ ಮಾಡಿದ ಅನುಭವಿಯಾಗಿದ್ದ ಶಂಭು ಶರ್ಮಾ, ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಚಿರಪರಿಚಿತ. ಖಳಪಾತ್ರ ಸಹಿತ ಯಾವುದೇ ಪಾತ್ರ ವಹಿಸಿದರೂ ಶಂಭು ಶರ್ಮ ಅವರ ಆರ್ಥಗಾರಿಕೆಗೆ ಅಪಾರ ಅಭಿಮಾನಿಗಳಿದ್ದರು. ಕ್ಯಾಸೆಟ್ ಸಹಿತ ಈಗಿನ ನವಮಾಧ್ಯಮಗಳಲ್ಲೂ ಶಂಭು ಶರ್ಮಾ ಅವರ ಪಾತ್ರಗಳನ್ನು ವೀಕ್ಷಿಸುವವರು, ಕೇಳುವ ಅಭಿಮಾನಿಗಳು ಹಲವರು.
ಮೃತರು ಪತ್ನಿ ಹಾಗೂ ಪುತ್ರ ಸಹಿತ ಅಪಾರ ಬಂಧು, ಬಾಂಧವರು, ಅಭಿಮಾನಿಗಳನ್ನು ಅವರು ಅಗಲಿದ್ದಾರೆ.
