ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಮೂಡಿಸಿದ ಕಾರ್ಯಕ್ರಮ
ಪುತ್ತೂರು: ಸುದಾನ ಪದವಿ ಪೂರ್ವ ಕಾಲೇಜು ಪುತ್ತೂರು ಇದರ ವತಿಯಿಂದ “ಸುದಾನ ಎಂಥೂಸಿಯಾ – 2025 ಅ ಜೀಲ್ ಪರ್ಫಾರ್ಮೆನ್ಸ್ ಇಂಟರ್ ಕ್ಲಾಸ್ ಫೆಸ್ಟ್” ಎಂಬ ವಿಶಿಷ್ಟ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಉತ್ಸವವನ್ನು ಕಾಲೇಜಿನ ಎಡ್ವರ್ಡ್ ಕಾನ್ಫರೆನ್ಸ್ ಹಾಲ್ನಲ್ಲಿ ಅದ್ದೂರಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ಪ್ರಗತಿ ಆಂಗ್ಲ ಮಾಧ್ಯಮ ಶಾಲೆ, ಕಾಣಿಯೂರು ಇಲ್ಲಿನ ಮುಖ್ಯೋಪಾಧ್ಯಾಯರಾದ ನಾರಾಯಣ ಭಟ್ ಅವರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸ್ಪರ್ಧಾತ್ಮಕ ಮನೋಭಾವ ಹಾಗೂ ಸಕಾರಾತ್ಮಕ ಚಿಂತನೆ ಅತ್ಯಂತ ಅಗತ್ಯ. ವಿಫಲತೆಗಳನ್ನು ಭಯಪಡದೇ ಅವುಗಳನ್ನು ಸವಾಲುಗಳಾಗಿ ಸ್ವೀಕರಿಸಿ, ಅವುಗಳಿಂದ ಪಾಠ ಕಲಿಯುವುದು ನಿಜವಾದ ಯಶಸ್ಸು, ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುದ ಸುದಾನ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ರೆ|ವಿಜಯ್ ಹಾರ್ವಿನ್ ಅವರು ಮಾತನಾಡಿ, ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯಾಗಿ ಪರಿಣಮಿಸುತ್ತವೆ. ಶಿಸ್ತಿನ ಪ್ರಾಮುಖ್ಯತೆ, ಸಮಯ ನಿರ್ವಹಣೆ ಮತ್ತು ನಿಗದಿತ ಗುರಿ – ಇವು ವಿದ್ಯಾರ್ಥಿ ಜೀವನದ ಯಶಸ್ಸಿನ ಅವಿಭಾಜ್ಯ ಅಂಶಗಳು ಎಂದರು.
ಕಾಲೇಜಿನ ಸಂಚಾಲಕ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಎಂಥೂಸಿಯಾ ಉತ್ಸವದ ಉದ್ದೇಶವು ವಿದ್ಯಾರ್ಥಿಗಳಲ್ಲಿ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿಯೂ ಉತ್ಸಾಹವನ್ನು ಹೆಚ್ಚಿಸುವುದು. ಇತರರೊಂದಿಗೆ ಹೋಲಿಕೆ ಮಾಡದೆ ಸ್ವಂತ ಅಭಿವೃದ್ಧಿಯನ್ನು ಅಳೆಯುವುದು ಮುಖ್ಯ ಎಂದರು. ಕಾಲೇಜಿನ ಖಜಾಂಜಿ ಆಸ್ಕರ್ ಆನಂದ್ ಮತ್ತು ಸುಪ್ರೀತ್ ಕೆ.ಸಿ. ಉಪಸ್ಥಿತರಿದ್ದರು.
ಸಮಾರೋಪ
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ರಾಮಕೃಷ್ಣ ಹೈ ಸ್ಕೂಲ್ನ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್. ಮಾತನಾಡಿ, ಶಿಕ್ಷಣವೇ ಜಗತ್ತನ್ನು ಬದಲಾಯಿಸುವ ಅತ್ಯಂತ ಶಕ್ತಿಯುತ ಆಯುಧ ಅದನ್ನು ಸಕಾರಾತ್ಮಕವಾಗಿ ಬಳಸಬೇಕೆಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ವಿದ್ಯಾರ್ಥಿಗಳು ಪ್ರತಿ ಅವಕಾಶವನ್ನೂ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಾಂಶುಪಾಲರಾದ ಸುಪ್ರೀತ್ ಕೆ.ಸಿ. ಮಾತನಾಡಿ, ಯಶಸ್ಸಿಗೆ ಸಮರ್ಪಣೆ ಮತ ದೃಢ ನಿಶ್ಚಯ ಅತ್ಯಾವಶ್ಯಕ ಎಂದರು.
ಕಾಲೇಜಿನ ಖಜಾಂಚಿ ಆಸ್ಕರ್ ಅನಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಯತೀಶ್ ಬಿ.ಕೆ. ಮತ್ತು ಪ್ರಾಂಶುಪಾಲರು ಅತಿಥಿಗಳನ್ನು ಸ್ವಾಗತಿಸಿದರು. ಲತಾಶ್ರೀ ಅವರು ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ತ್ರಿಷಾಲ್ ಕುಮಾರ್ ಮತ್ತು ಮೊಹಮ್ಮದ್ ಶಫೀರ್ ಅತಿಥಿಗಳನ್ನು ಪರಿಚಯಿಸಿದರು. ಖದೀಜಾ ರೀಹಾ ಹಾಗೂ ಶಿಜಾ ಅಜೀಝ್ ವಂದಿಸಿದರು. ಜಿಯಾ ಸ್ವೀಡಲ್ ಮತ್ತು ಸ್ವಸ್ಥಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಟ್ರಷರ್ ಹಂಟ್, ರಸಪ್ರಶ್ನೆ, ಚಿತ್ರಕಲೆ, ಜಾನಪದ ನೃತ್ಯ, ಪ್ರೊಡಕ್ಟ್ ಲಾಂಚ್, ಲೋಗೋ ವಿನ್ಯಾಸ, ರಂಗೋಲಿ, ಕ್ರಾಫ್ಟ್ ಮತ್ತು ಪ್ರೆಸೆಂಟೇಷನ್ ಮುಂತಾದ ಸ್ಪರ್ಧೆಗಳು ನಡೆದವು. ವಿದ್ಯಾರ್ಥಿಗಳು ತಮ್ಮ ವಿವಿಧ ಪ್ರತಿಭೆಗಳನ್ನು ಮೆರೆದರು ಹಾಗೂ ಉತ್ಸಾಹಪೂರ್ಣವಾಗಿ ಭಾಗವಹಿಸಿದರು.