ಹಿರೇಬಂಡಾಡಿ: ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಕುವೆಂಪು ಸಾಹಿತ್ಯ ಸಂಘ ಮತ್ತು ಅನಾವರಣ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಇವರ ಸಹಯೋಗದಲ್ಲಿ ೭೦ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಕುವೆಂಪು ಸಾಹಿತ್ಯ ಸಂಘದ ಅಧ್ಯಕ್ಷೆ ಅನುಶ್ರೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅನಾವರಣ ಸಂಸ್ಥೆಯ ಅಧ್ಯಕ್ಷೆ ಪರಿಮಳ ಮಹೇಶ್ ಅವರು ಹಚ್ಚೇವು ಕನ್ನಡದ ದೀಪ ಎಂಬ ವಿದ್ಯಾರ್ಥಿನಿಯವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸಿ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕನ್ನಡ ಭಾವಗೀತೆ, ಜನಪದ ಗೀತೆ, ನಾನು ಮೆಚ್ಚಿದ ಕನ್ನಡದ ಸಾಹಿತಿ ಎಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆ ನಡೆಸಲಾಯಿತು.
ಕನ್ನಡ ನಾಡುನುಡಿಯ ಬಗ್ಗೆ ಅಭಿಮಾನದಿಂದ ವಿದ್ಯಾರ್ಥಿಗಳು ಭಿತ್ತಿ ಪತ್ರಿಕೆಗಳನ್ನು ರಚಿಸಿದರು. ಮಕ್ಕಳು ಕನ್ನಡವನ್ನು ಹೇಗೆ ಉಳಿಸಬಹುದು ಮತ್ತು ಬೆಳೆಸಬಹುದು ಎಂಬುದನ್ನು ಪರಿಮಳ ಮಹೇಶ್‌ರವರು ವಿದ್ಯಾರ್ಥಿಗಳಿಗೆ ತಿಳಿಸಿದರು. ಅನಾವರಣ ಸಂಸ್ಥೆಯ ಇನ್ನೋರ್ವ ಸದಸ್ಯೆ ಆಶ್ವಿಜಶ್ರೀಧರ್ ಅವರು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಗೀತೆಯನ್ನು ವಿದ್ಯಾರ್ಥಿಗಳಿಂದ ಹಾಡಿಸಿದರು. ಮಕ್ಕಳಿಗೆ ವಿವಿಧ ಕನ್ನಡ ಭಾಷಾ ಆಟಗಳನ್ನು ಆಡಿಸಿ ಬಹುಮಾನ ನೀಡಲಾಯಿತು. ಅನಾವರಣ ಸಂಸ್ಥೆಯ ಸದಸ್ಯೆ ಸವಿತಾ ಕರ್ಕೇರಾ ಸಹಕರಿಸಿದರು.
ಶಾಲಾ ಪ್ರಭಾರ ಮುಖ್ಯಗುರು ಉಷಾಕಿರಣ್ ರೈ ಡಿ. ಸ್ವಾಗತಿಸಿದರು. ಕನ್ನಡ ಭಾಷಾಬೋಧಕಿ ಮಲ್ಲಿಕಾ ಐ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ವಿಜ್ಞಾನ ಬೋಧಕಿ ಲಲಿತಾ ಕೆ. ವಂದಿಸಿದರು. ಶಾಲಾ ಶಿಕ್ಷಕರಾದ ವಸಂತಕುಮಾರ್, ಮನೋಹರ್, ಆರತಿ ಸಹಕರಿಸಿದರು. ಚಂದ್ರಿಕಾ ನಿರೂಪಿಸಿದರು. ನಿವೃತ್ತ ಶಿಕ್ಷಕ ವೆಂಕಟ್ರಮಣ ಭಟ್‌ರವರ ಪ್ರಾಯೋಜಕತ್ವದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ಗಳನ್ನು ವಿತರಿಸಿ, ಸಿಹಿ ಹಂಚಲಾಯಿತು.