ಪುತ್ತೂರು: ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಒಂದೇ ಸೂರಿನಡಿ ಹಲವು ಸೌಲಭ್ಯಗಳು ಸಿಗುವಂತಹ ಮಾಲ್ಗಳು ಕಾಣಸಿಗುತ್ತವೆ. ಆದರೆ, ಪುತ್ತೂರು ನಗರ ಪ್ರದೇಶದ ಹೊರಭಾಗದ ಸರ್ವೆಯ ಭಕ್ತಕೋಡಿಯಲ್ಲಿ ಬಹುತೇಕ ಅಂತಹದೇ ಸೌಲಭ್ಯ ಇರುವಂತಹ ಆರಾಧ್ಯ ವಾಣಿಜ್ಯ ಸಂಕೀರ್ಣ ನ.8 ರಂದು ಲೋಕಾರ್ಪಣೆಗೊಳ್ಳುತ್ತಿದೆ. ಇದು ಹಳ್ಳಿ ಭಾಗದ ಜನರಿಗೆ ಹಾಗೂ ಪ್ರವಾಸೋದ್ಯಮದ ದೃಷ್ಟಿಯಿಂದ ಮುಖ್ಯ ರಸ್ತೆಯಲ್ಲಿ ಸಂಚರಿಸುವ ಪ್ರವಾಸಿಗರಿಗೂ ಇದು ಅನುಕೂಲವಾಗಲಿದೆ.
ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದ ವ್ಯವಸ್ಥಾಪಕ ಡಾ.ಸೀತರಾಮ್ ಭಟ್ ಅವರ ಅಧ್ಯಕ್ಷತೆಯಲ್ಲಿ ಸಂಜೆ 6.30 ಕ್ಕೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಸಂಕೀರ್ಣವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ಎಂಎಲ್ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಎನ್ಎಸ್ಡಿ, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುರೇಶ ಕುಮಾರ್ ಸೊರಕೆ, ಮುಂಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಡಿ.ವಸಂತ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಿರಿಯ ಜ್ಯೋತಿಃಶಾಸ್ತ್ರಜ್ಞ ದೈವಜ್ಞ ಜ್ಯೋತಿರ್ವಿದ್ವಾನ್ ವಳಕ್ಕುಂಜ ವೆಂಕಟ್ರಮಣ ಭಟ್, ನೇಪಾಳದ ಶ್ರೀ ಪಶುಪತಿ ದೇವಾಲಯದ ನಿಕಟಪೂರ್ವ ಪ್ರಧಾನ ಅರ್ಚಕ ವೇ|ಮೂ| ಬ್ರಹ್ಮಶ್ರೀ ವಿದ್ವಾನ್ ಶ್ರೀರಾಮ ಕಾರಂತ, ಪುರೋಹಿತ ವೇ|ಮೂ|ಬ್ರಹ್ಮಶ್ರೀ ಅನಂತ ನಾರಾಯಣ ಭಟ್ ಪರಕ್ಕಜೆ, ಬೆಟ್ಟಂಪಾಡಿ ಹೈಸ್ಕೂಲ್ನ ವಿಶ್ರಾಂತ ಮುಖ್ಯೋಪಾಧ್ಯಾಯ ವೇ|ಮೂ| ಮಂಜುಳಗಿರಿ ವೆಂಕಟರಮಣ ಭಟ್ಟ ಅವರನ್ನು ಸನ್ಮಾನಿಸಲಾಗುತ್ತದೆ. ಎಲ್ಐಸಿ ಉಡುಪಿಯ ಹಿರಿಯ ವಿಭಾಗಾಧಿಕಾರಿ ಗಣಪತಿ ಭಟ್ ಅವರು ಶುಭಾಶಂಸನೆ ನುಡಿಯಲಿದ್ದಾರೆ.

ಸಂಕೀರ್ಣದಲ್ಲಿನ ಸೌಲಭ್ಯಗಳು
400 ಆಸನಗಳಿರುವ ಹವಾನಿಯಂತ್ರಿತ ಮದುವೆ ಹಾಲ್, ಲಿಫ್ಟ್ ವ್ಯವಸ್ಥೆ, 24 ಗಂಟೆ ಜನರೇಟರ್ ಸೌಲಭ್ಯ, 50 ಮಂದಿ ಕುಳಿತುಕೊಳ್ಳಬಹುದಾದ ಹವಾನಿಯಂತ್ರಿತ ಕಾನ್ಫರೆನ್ಸ್ ಹಾಲ್, ಸ್ಟಾರ್ಟ್ಅಪ್ ಕಂಪನಿಗಳಿಗಾಗಿ 8 ಸಾವಿರ ಚದರ ಅಡಿಯಷ್ಟು ಸ್ಥಳಾವಕಾಶ ಇರುವ ಸುಸಜ್ಜಿತ ಕಚೇರಿ ಸಮುಚ್ಚಯ, ವೈಫೈ ಸೌಲಭ್ಯ, ಹೋಟೆಲ್, ಬ್ಯಾಂಕ್, ಮೆಡಿಕಲ್ ಸಹಿತ ವಾಣಿಜ್ಯ ಮಳಿಗೆಗಳಿವೆ. ಜತೆಗೆ 24 ಹವಾನಿಯಂತ್ರಿತ ವಸತಿ ಕೊಠಡಿಗಳು (ಲಾಡ್ಜ್), 3 ಅತ್ಯಾಧುನಿಕ ಸ್ಯೂಟ್ಗಳು, ವಾಕಿಂಗ್ ಪಾಥ್, ಮಕ್ಕಳ ಉದ್ಯಾನಗಳೂ ಇವೆ. ಈಜುಕೊಳ, ಜಿಮ್ ಸೌಲಭ್ಯಗಳಿದ್ದು, 400 ಕಾರುಗಳನ್ನು ಪಾರ್ಕ್ ಮಾಡುವಷ್ಟು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ಸಂಜೆ 4 ರಿಂದ 5 ಗಂಟೆ ವರೆಗೆ ಕುಮಾರಿ ತನ್ಮಯಿ ಉಪ್ಪಂಗಳ ಅವರಿಂದ ವಯಲಿನ್ ವಾದನ ಕಾರ್ಯಕ್ರಮ ನಡೆಯಲಿದೆ. 5 ರಿಂದ 6.30ರ ವರೆಗೆ ರಾಜೇಶ್ ಮಳಿ ಮತ್ತು ಶುಭಾ ರಾಜ್ ದಂಪತಿಯಿಂದ ಜಾದೂ ವಿಸ್ಮಯ, ರಾತ್ರಿ 8 ರಿಂದ ಸ್ಟಾರ್ ಸುವರ್ಣ ಸಂಕಲ್ಪದ ನಿರೂಪಕಿ, ಕಲರ್ಸ್ ಕನ್ನಡದ ಕನ್ನಡ ಕೋಗಿಲೆ ಹಾಗೂ ಜೀ ಕನ್ನಡ ಸರಿಗಮಪ ಖ್ಯಾತಿಯ ಅಖಿಲಾ ಪಜಿಮಣ್ಣು ಅವರಿಂದ ಗಾನ ಸಂಭ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಎಲ್ಲರಿಗೂ ಸ್ವಾಗತ ಬಯಸುತ್ತೇವೆ ಎಂದು ಮಾಲಕರಾದ ಜಿ.ಕೆ.ಪ್ರಸನ್ನ, ದೇವಿಕಾ ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.