ಅಶೋಕ್ ರೈ ಶಾಸಕರಾಗಿರುವುದು ಪುತ್ತೂರಿನ ಜನರ ಸೌಭಾಗ್ಯ: ಸಂತೋಷ್ಕುಮಾರ್ ರೈ ನಳೀಲು
ಪುತ್ತೂರು: ಕೊಳ್ತಿಗೆ ಗ್ರಾಮದ ಮಣಿಕ್ಕಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಪರ್ಕ ಸೇತುವೆ ನಿರ್ಮಾಣವಾಗಬೇಕೆಂಬುದು ಈ ಭಾಗದ ಜನರ ಬಹುವರ್ಷದ ಬೇಡಿಕೆಯಾಗಿತ್ತು, ಇಲ್ಲಿ ಸೇತುವೆ ನಿರ್ಮಾಣ ಮಾಡಲು ಶಾಸಕ ಅಶೋಕ್ ರೈ ಅವರೇ ಕಾರಣಕರ್ತರು ಅವರು ಶಾಸಕರಾಗದೇ ಇರುತ್ತಿದ್ದರೆ ಇಲ್ಲಿ ಸೇತುವೆ ನಿರ್ಮಾಣವಾಗುತ್ತಿರಲಿಲ್ಲ, ಇವರು ಶಾಸಕರಾಗಿರುವುದು ಪುತ್ತೂರಿನ ಜನತೆಯ ಸೌಭಾಗ್ಯ ಎಂದು ಉದ್ಯಮಿ ಸಂತೋಷ್ ಕುಮಾರ್ ರೈ ನಳೀಲು ಹೇಳಿದರು.
ಅವರು ಮಣಿಕ್ಕಾರ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸೇತುವೆ ನಿರ್ಮಾಣ ಮಾಡಿದ ಶಾಸಕರಿಗೆ ದೇವಸ್ಥಾನದ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಶೋಕ್ ರೈ ಶಾಸಕರಾದ ಬಳಿಕ ಪುತ್ತೂರು ವಿಧಾನಸಭಾ ಕ್ಷೇತ್ರ ದಿನದಿಂದ ದಿನಕ್ಕೆ ಅಭಿವೃದ್ದಿಯಾಗುತ್ತಿದೆ. ಯಾರಿದಂಲೂ ಸಾಧ್ಯವಾಗದ ಮೆಡಿಕಲ್ ಕಾಲೇಜು ಪುತ್ತೂರಿಗೆ ತಂದಿರುವುದು ಸಣ್ಣ ವಿಚಾರವಲ್ಲ , ಜನಪರವಾಗಿ ಕೆಲಸ ಮಾಡಲು ರಾಜಕೀಯ ಇಚ್ಚಾಶಕ್ತಿ ಬೇಕು ಅದು ಶಾಸಕರಲ್ಲಿದ್ದ ಕಾರಣ ಇಂದು ಹಿಂದೆಂದೂ ಆಗದ ಕೆಲಸಗಳು ಸಲೀಸಾಗಿ ನಡೆಯುತ್ತಿದೆ ಎಂದು ಹೇಳಿದರು. ಪ್ರತೀ ವರ್ಷ ದೀಪಾವಳಿಗೆ ವಸ್ತ್ರದಾನ ಮಾಡುವ ಮೂಲಕ ಲಕ್ಷಾಂತರ ಮಂದಿಗೆ ಅನ್ನದಾನವನ್ನು ನೀಡುತ್ತಿರುವುದು ಅವರಿಗೆ ದೇವರು ಕರುಣಿಸಿದ ಮಹಾಭಾಗ್ಯ ಎಂದು ಹೇಳಿದರು. ಸಾವಿರಾರು ದೇವಸ್ಥಾನಗಳನ್ನು ಜೀರ್ಣೋದ್ದಾರ ಮಾಡುವ ಮೂಲಕ ಹಿಂದೂ ಧರ್ಮಕ್ಕೆ ಮಹಾನ್ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.

ಚುನಾವಣಾ ಸಮಯದಲ್ಲಿ ಮಾತ್ರ ರಾಜಕೀಯ: ಅಶೋಕ್ ರೈ
ನಾನು ಶಾಸಕನಾದ ಬಳಿಕ ಅಭಿವೃದ್ದಿ ವಿಚಾರದಲ್ಲಿ ಎಂದೂ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ ರಾಜಕೀಯ ಏನಿದ್ದರೂ ಅದು ಚುನಾವಣಾ ಸಮಯದಲ್ಲಿ ಮಾತ್ರ ಎಂದು ಶಾಸಕ ಅಶೋಕ್ ರೈ ಹೇಳಿದರು. ಪುತ್ತೂರು ವಿಧಾನಸಬಾ ಕ್ಷೇತ್ರ ಅಭಿವೃದ್ದಿಯಾಗಬೇಕು, ಇಲ್ಲಿನ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿರಬೇಕು, ಕುಡಿಯುವ ನೀರು ದಿನದ 24 ಗಂಟೆಯೂ ದೊರೆಯುವಂತಾಗಬೇಕು, ನಮ್ಮ ಮಕ್ಕಳಿಗೆ ಉದ್ಯೋಗ ದೊರೆಯಬೇಕು ಅದೇ ರೀತಿ ಇಲ್ಲಿನ ಕಟ್ಟಕಡೇಯ ವ್ಯಕ್ತಿಗೂ ಸರಕಾರಿ ಸೌಲಭ್ಯ ದೊರೆಯಬೇಕು ಎಂಬುದು ನನ್ನ ಉದ್ದೇಶವಾಗಿದೆ. ನನ್ನಿಂದ ಸಾಧ್ಯವಾದಷ್ಟು ಅನುದಾನವನ್ನು ತರುವ ಮೂಲಕ ಜನರ ಬೇಡಿಕೆ ಈಡೇರಿಸುವ ಕೆಲಸ ಮಾಡುತ್ತಿದ್ದೇನೆ. ಮೆಡಿಕಲ್ ಕಾಲೇಜು ತಂದಿದ್ದೇನೆ, ಕುಡಿಯುವ ನೀರಿಗೆ 1010 ಕೋಟಿ ರೂ ತಂದಿದ್ದೇನೆ ಜನರ ನಿರಿಕ್ಷೆಗೆ ತಕ್ಕಂತೆ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಹೇಳಿದ ಶಾಸಕರು ಸರಕಾರಿ ಜಾಗದಲ್ಲಿರುವ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ದೇವರ ಹೆಸರಿನಲ್ಲಿ ಮಾಡುವ ಯತ್ನಕ್ಕೂ ಕೈ ಹಾಕಿದ್ದು ಅದರಲ್ಲೂ ಯಶಸ್ಸು ಸಾಧಿಸುವುದು ನಿಶ್ಚಿತವಾಗಿದೆ ಎಂದು ಹೇಳಿದರು. ಒಳ್ಳೆಯ ಕೆಲಸ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.
ಮಣಿಕ್ಕಾರ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ಪಟೇಲ್ ನಾರಾಯನ ರವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ, ಉಪಾಧ್ಯಕ್ಷರಾದ ಪ್ರಮೋದ್ ಕೆಎಸ್, ಸದಸ್ಯರಾದ ಶುಭಲತಾ ರೈ, ಸುಂದರ, ಪುತ್ತೂರು ಪುಡಾ ಅಧ್ಯಕ್ಷ ಅಮಲ ರಾಮಚಂದ್ರ ಉಪಸ್ಥಿತರಿದ್ದರು. ವಿಲಾಸ್ ರೈ ಸ್ವಾಗತಿಸಿ, ವಂದಿಸಿದರು.