ಹುಟ್ಟು ಹಬ್ಬಕ್ಕೆ ಶಾಸ್ತ್ರೀಯ ನೃತ್ಯದ ಮೂಲಕ ಅನಿರೀಕ್ಷಿತ ಶುಭಾಶಯ !

0

ಪುತ್ತೂರಿನಲ್ಲಿ ಮಾದರಿಯಾದ 23 ವರ್ಷಗಳ ಹಿಂದಿನ ಗುರುಶಿಷ್ಯರ ಸಂಬಂಧ

ಪುತ್ತೂರು: ಹುಟ್ಟಿದ ದಿನದಂದು ಶುಭಕೋರುವುದು, ಉಡುಗೊರೆ ನೀಡುವುದು, ಸಿಹಿ ಹಂಚುವುದು ಸಹಜ. ಆದರೆ ಇಲ್ಲೊಂದು ಕಡೆ ಸುಮಾರು 23 ವರ್ಷಗಳ ಹಿಂದೆ ಭರತನಾಟ್ಯ ನೃತ್ಯಾಭ್ಯಾಸದಲ್ಲಿ ರಂಗಪ್ರವೇಶ ಮಾಡಿ ಪರವೂರಿನಲ್ಲಿರುವ ನೆಲೆಯಾಗಿರುವ ಹಿರಿಯ ಶಿಷ್ಯಂದಿರು ಜೊತೆಯಾಗಿ ಮತ್ತೆ ಕಾಲಿಗೆ ಗೆಜ್ಜೆ ಕಟ್ಟಿ ಹಡೆದಮ್ಮ ಅಲ್ಲದಿದ್ದರೂ ಗೆಜ್ಜೆ ಕಟ್ಟಿದ ಪುಟ್ಟ ಪುಟ್ಟ ಹೆಜ್ಜೆಗಳನ್ನು ಪ್ರೀತಿಯಿಂದ ತಿದ್ದಿ ನೃತ್ಯ ಕಲಿಸುವ ಗುರುಗಳ ಮುಂದೆ ಅಚ್ಚರಿಯ ನೃತ್ಯ ಪ್ರದರ್ಶನ ನೀಡುವ ಮೂಲಕ ಹುಟ್ಟು ಹಬ್ಬದ ಶುಭಾಶಯ ಕೋರಿದ ಉತ್ತಮ ಬೆಳವಣಿಗೆಯೊಂದು ಗುರುಶಿಷ್ಯರ ಸಂಬಂಧವನ್ನು ಗಟ್ಟಿಗೊಳಿಸದ ಸಂಗತಿ ಪುತ್ತೂರಿನಲ್ಲಿ ನಡೆದಿದೆ.


ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಅವರ ನ.13ರ ಹುಟ್ಟು ಹಬ್ಬದ ದಿನದಂದು ಕಲಾಶಾಲೆಯ ವಿದ್ಯಾರ್ಥಿಗಳು ಗುರುಗಳಿಗೆ ಅನಿರೀಕ್ಷಿತ ಕಾರ್ಯಕ್ರಮ ನೀಡುವ ಮೂಲಕ ಹುಟ್ಟು ಹಬ್ಬದ ಶುಭಾಶಯ ಕೋರಬೇಕೆಂಬ ಚಿಂತನೆಯೊಂದಿಗೆ ಸೌಜನ್ಯ ಪಡುವೆಟ್ನಾಯ ಮತ್ತು ಸುಮಂಗಲ ಗಿರೀಶ್ ಹಾಗು ವಿದ್ವಾನ್ ಗಿರೀಶ್ ಕುಮಾರ್ ಅವರ ನೇತೃತ್ವದಲ್ಲಿ ನೃತ್ಯನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಅವರಿಗೆ ತಿಳಿಯದ ರೀತಿಯಲ್ಲಿ ಅವರ ಮಾರ್ಗದರ್ಶನದಲ್ಲಿ 2002 ರಿಂದ 2016ರಲ್ಲಿ ರಂಗಪ್ರವೇಶ ಮಾಡಿದ ಸುಮಾರು 6 ಮಂದಿ ಶಿಷ್ಯಂದಿರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾದರು. ಪರವೂರಿನಲ್ಲಿರುವ ಅನುಷಾ ಜೈನ್, ದಾಕ್ಷಾಯಿಣಿ, ಡಾ. ಕರುಣಾ, ಬಿ.ಗಿರೀಶ್ ಕುಮಾರ್, ಡಾ. ನಿರೀಕ್ಷಾ ಶೆಟ್ಟಿ, ತೇಜಸ್ವಿನಿ ವಿ, ಧನ್ಯಶ್ರೀ ಪ್ರಭು ಅವರು ದರ್ಬೆ ಶ್ರೀ ಶಶಿಶಂಕರ ಸಭಾಗಂಣದಲ್ಲಿ ದೀಪಕ್ ಕುಮಾರ್ ಅವರ ಮುಂದೆ ನೃತ್ಯ ಪ್ರದರ್ಶನ ನೀಡಿದರು.

ಓರ್ವ ವಿದ್ಯಾರ್ಥಿನಿ ಆನ್‌ಲೈನ್ ಮೂಲಕವೇ ನೃತ್ಯ ಪ್ರದರ್ಶನ ನೀಡಿದರು. ಒಟ್ಟಿನಲ್ಲಿ ಇವೆಲ್ಲ ವಿದ್ವಾನ್ ದೀಪಕ್ ಕುಮಾರ್ ಅವರಿಗೆ ಅನಿರೀಕ್ಷಿತವಾಗಿತ್ತು. ಈ ಸಂದರ್ಭ ಹಿರಿಯ ವಿದ್ಯಾರ್ಥಿಗಳು ಮತ್ತು ಗುರುಗಳು ಹಿಂದಿನ ವಿಚಾರಗಳನ್ನು ಮತ್ತೊಮ್ಮೆ ನೆನಪಿಸಿಕೊಂಡರು. ಕಾರ್ಯಕ್ರಮದ ಆರಂಭದಲ್ಲಿ ಹಿಮನೀಶ್ ಶಂಖನಾದ ಮಾಡಿದರು. ಮಾತಂಗಿ ಪ್ರಾರ್ಥಿಸಿದರು. ಶೌರಿಕೃಷ್ಣ ಪಂಚಾಂಗ ಓದಿದರು. ಹಾಡುಗಾರಿಕೆ, ನಟುವಾಂಗದಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ವಿದ್ವಾನ್ ಶ್ಯಾಮ್ ಭಟ್, ಕೊಳಲಿನಲ್ಲಿ ವಿದ್ವಾನ್ ಕೃಷ್ಣಗೋಪಾಲ್ ಸಹಕರಿಸಿರು. ಸಂಸ್ಥೆಯ ಸಂಚಾಲಕಿ ಶಶಿಪ್ರಭಾ ಮತ್ತು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಸಮಾರಂಭದ ಕೊನೆಯಲ್ಲಿ ವಿದ್ವಾನ್ ದೀಪಕ್ ಕುಮಾರ್ ಅವರಿಗೆ ಆರತಿ ಬೆಳಗಿ ಹುಟ್ಟು ಹಬ್ಬ ಆಚರಿಸಲಾಯಿತು.

ನಿಮ್ಮಿಂದ ನೃತ್ಯವನ್ನೇ ಬಯಸುವೆ
ವಿದ್ಯಾರ್ಥಿಗಳಿಂದ ನಾನು ನೃತ್ಯವನ್ನು ಮಾತ್ರ ಬಯಸುತ್ತೇನೆ. ನಿರಂತರ ನೃತ್ಯಾಭ್ಯಾಸ ಮಾಡಿ. ರಂಗಪ್ರವೇಶ ಮಾಡಿದ ಬಳಿಕ ನೃತ್ಯದಿಂದ ದೂರ ಹೋಗಬೇಡಿ. ಸಮಯ ಮಾಡಿಕೊಂಡಾದರೂ ನೃತ್ಯಾಭ್ಯಾಸ ಮಾಡಿ. ಇದು ನಿಮ್ಮ ಜೀವನದಲ್ಲಿ ಉತ್ತಮ ಏಳ್ಗೆಯನ್ನು ತಂದುಕೊಡುತ್ತದೆ.
ವಿದ್ವಾನ್ ಬಿ ದೀಪಕ್ ಕುಮಾರ್

LEAVE A REPLY

Please enter your comment!
Please enter your name here