ನಾಳೆ(ನ.16) ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂಕರೆ ಉತ್ಸವ

0

ಪುತ್ತೂರು: ತುಳುನಾಡಿನಲ್ಲಿ ಭತ್ತವನ್ನು ಬೇಸಾಯ ಮಾಡುವ ರೈತಾಪಿ ಜನರು ಆರಾಧಿಸುತ್ತಾ ಬಂದಿರುವ ಆಚರಣೆಯಲ್ಲಿ ಪೂಕರೆ ಹಾಕುವ ಪಧ್ಧತಿಯೂ ಒಂದು. ಫಲವಂತಿಕೆಯ ಹಿನ್ನೆಲೆಯಲ್ಲಿ ಸುಗ್ಗಿ ಪೂಕರೆಯ ವೇಳೆ ಬೇಸಾಯದ ದೈವವಾಗಿ ಎರುಕುಲ ದೈವದ ಆರಾಧನೆ ನಡೆಯುತ್ತದೆ. ಪೂಕರೆಗೆ ಗದ್ದೆಕೋರಿ, ಕಂಡದಕೋರಿ ಎಂದೂ ಕರೆಯಲಾಗುತ್ತದೆ. ನ.16ಕ್ಕೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಕರೆ ಉತ್ಸವ ನಡೆಯಲಿದೆ.


ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಪೂರ್ತಿಯಾಗಿ ಕೆಲ ದಶಕಗಳ ಹಿಂದೆ ಭತ್ತದ ಬೇಸಾಯ ಮಾಡಲಾಗುತ್ತಿತ್ತು ಬಂಗರಸನ ಕಾಲದಲ್ಲೇ ಇಲ್ಲಿ ಕಂಬಳ ನಡೆಯುತ್ತಿತ್ತು ಎಂದು ಇಲ್ಲಿನ ಇತಿಹಾಸ ಸಾರುತ್ತವೆ. ದೇವರಮಾರು ಗದ್ದೆಯಲ್ಲಿ ಪೂಕರೆ ಉತ್ಸವದ ಆಚರಣೆಯೂ ಇಲ್ಲಿನ ಸಂಪ್ರದಾಯಕ್ಕೆ ಸೇರಿದೆ. ದೇವಾಲಯದ ಒಳಾಂಗಣದಲ್ಲಿರುವ ಶಿಲಾಶಾಸನದಲ್ಲೂ ದೇವಳದ ಗದ್ದೆಯಲ್ಲಿ ಭತ್ತ ಬೆಳೆಯುತ್ತಿದ್ದ ಮತ್ತು ಭತ್ತದ ಮುಡಿಗಳ ಹಂಚಿಕೆಯ ಬಗ್ಗೆ ಮಾಹಿತಿ ಇದೆ. ದೀಪಾವಳಿಯಂದು ಬಲಿ ಹೊರಟು ಮುಂದಿನ ನಿಗದಿತ ದಿನಗಳಲ್ಲಿ ಪೂಕರೆ ಉತ್ಸವ, ಲಕ್ಷ ದೀಪೋತ್ಸವವೂ ಇಲ್ಲಿ ನಡೆಯುತ್ತದೆ.


ದೇವರ ಸವಾರಿ:
ಪೂಕರೆಯ ಅಂಗವಾಗಿ ಹಿಂದಿನ ಕಾಲದಿಂದ ಅನೂಚಾನವಾಗಿ ನಡೆದು ಬಂದ ಈ ಕ್ಷೇತ್ರದ ಪೂರ್ವಶಿಷ್ಟ ಸಂಪ್ರದಾಯದಂತೆ ಪುಷ್ಪಕನ್ನಡಿ ರಹಿತವಾಗಿ ನಿತ್ಯದ ಬಲಿಮೂರ್ತಿಗೆ ಆಭರಣ ಮತ್ತು ವಿವಿಧ ಹೂವು ಗಳಿಂದ ಓರಣವಾಗಿ ಅಲಂಕರಿಸಿ ಮುಸ್ಸಂಜೆಯಲ್ಲಿ ಶ್ರೀ ದೇವರ ಬಲಿ ಹೊರಟು ಹಸ್ರಕೊಡೆ, ಛತ್ರ ಚಾಮರ, ಎರುಕೋಲ ದೈವದೊಂದಿಗೆ ಸರ್ವ ವಾದ್ಯಘೋಷ, ದಂಡುಸಿಲಾಲ್, ದೇವಳದ ಬಸವ, ಬೇತಾಳ, ಸಕಲ ಬಿರುದಾವಳಿ ನಿಶಾನಿಯೂ ಸೇರಿ ದೇವಳದ ಪಶ್ಚಿಮ ಭಾಗದಿಂದ ಸವಾರಿಯು ರಾಜಬೀದಿಯಲ್ಲಿ ಪೂಕರೆಕಟ್ಟೆಯವರೆಗೆ ಸಾಗಿ ಪೂಕರೆಯ ಕ್ರಮಗಳು ಜರಗಿ ಕಟ್ಟೆಪೂಜೆ ನೆರವೇರಿದ ಬಳಿಕ ದಾರಿಯಲ್ಲಿ ಆರತಿ, ಹಣ್ಣುಕಾಯಿ ಸ್ವೀಕರಿಸುತ್ತಾ ದೇಗುಲಕ್ಕೆ ಹಿಂತಿರುಗುವುದು ಈ ಸವಾರಿಯ ಪದ್ಧತಿ.

LEAVE A REPLY

Please enter your comment!
Please enter your name here