ನಮ್ಮ ದೃಷ್ಟಿ ಮಾದರಿ ಶಾಲೆಯ ಸೃಷ್ಟಿ ವಿಜ್ಞಾಪನ ಪತ್ರ ಅನಾವರಣ
ಕಾಣಿಯೂರು : ಕೊಪ್ಪ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಮತ್ತು ಸಿ ಆರ್ ಪಿಯಾಗಿ ಪದೋನ್ನತಿಯಾಗಿ ವರ್ಗಾವಣೆಗೊಂಡ ಶಿಕ್ಷಕ ನಾರಾಯಣ ಡಿ. ಪುಣಚ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ ವಿಶ್ವನಾಥ ಕೊಪ್ಪ ಕಾರ್ಯಕ್ರಮಕ್ಕೆ ಶುಭಾಶಯಗಳನ್ನು ಕೋರಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ವಿಜಯ ಕುಮಾರ್ ಸೊರಕೆಯವರು ವಿಜ್ಞಾಪನೆ ಪತ್ರವನ್ನು ಬಿಡುಗಡೆ ಮಾಡಿ ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಕಾಲಿಡುತ್ತಿರುವ ಈ ಕೊಪ್ಪ ಶಾಲೆಗೆ ಬೇಕಾದ ಮೂಲಭೂತ ಅಗತ್ಯಗಳಿಗೆ ಸ್ಪಂದಿಸಲು ಸರಕಾರದ ಗಮನಕ್ಕೆ ತರುತ್ತೇನೆ ಹಾಗೂ ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇದಕ್ಕೆ ತಮ್ಮೆಲ್ಲರ ಸಹಕಾರಬೇಕು ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಗತಿಪರ ಕೃಷಿಕ ಪ್ರವೀಣ್ ಕುಂಟ್ಯಾನ ಶಾಲೆಯ ಅಭಿವೃದ್ಧಿಗೆ ತಮ್ಮ ಸಂಪೂರ್ಣ ಸಹಕಾರ ಎಂದಿಗೂ ಇದೆ ನಮ್ಮ ಊರಿನ ಶಾಲೆಯನ್ನು ಉಳಿಸುವುದು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸೀತಾರಾಮ ಕೊಪ್ಪ ಅಧ್ಯಕ್ಷತೆ ವಹಿಸಿದ್ದರು, ಕಾಣಿಯೂರು ಸಮೂಹ ಸಂಪನ್ಮೂಲ ವ್ಯಕ್ತಿ ಯಶೋಧ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ರಮಣಿ, ಬೆಟ್ಟoಪಾಡಿ ಸಿ ಆರ್ ಪಿ ಯಾಗಿ ವರ್ಗಾವಣೆಗೊಂಡ ಶಿಕ್ಷಕರಾದ ನಾರಾಯಣ ಡಿ ಪುಣಚ, ಮುಖ್ಯ ಶಿಕ್ಷಕಿ ಜ್ಯೋತಿ ದೇವರಮನೆ, ಶಾಲಾ ನಾಯಕ ಸ್ವಸ್ತಿಕ್ ಎಂ ಸಭೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಆಶಿಕಾ, ಸುಹಾನ ಪ್ರಾರ್ಥಿಸಿ ಮುಖ್ಯಗುರು ಜ್ಯೋತಿ ದೇವರಮನೆ ಸ್ವಾಗತಿಸಿದರು. ಶಿಕ್ಷಕಿ ಹವ್ಯ ವಂದಿಸಿ, ಅತಿಥಿ ಶಿಕ್ಷಕ ಸುರೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ವಿಜ್ಞಾಪನ ಪತ್ರ ಅನಾವರಣ
ಕೊಪ್ಪ ಶಾಲೆಯ ಅಭಿವೃದ್ಧಿ ಮಾರ್ಗದ ಮೊದಲ ಹೆಜ್ಜೆಯಾಗಿ ನಮ್ಮ ದೃಷ್ಟಿ ಮಾದರಿ ಶಾಲೆಯ ಸೃಷ್ಟಿ ವಿಜ್ಞಾಪನ ಪತ್ರವನ್ನು ಅನಾವರಣಗೊಳಿಸಲಾಯಿತು.
ಕೊಪ್ಪ ಸ. ಕಿ. ಪ್ರಾ. ಶಾಲೆಯಲ್ಲಿ 3 ವರ್ಷಗಳ ಕಾಲ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಇದೀಗ ಪದೋನ್ನತಿ ಹೊಂದಿ ಬೆಟ್ಟoಪಾಡಿ ಸಿ ಆರ್ ಪಿ ಯಾಗಿ ನಿಯೋಜನೆಗೊಂಡ ನಾರಾಯಣ ಡಿ ಪುಣಚ ಇವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.