ರೋಟರಿ ಈಸ್ಟ್ ನಿಂದ ದೀಪಾವಳಿ ಸಂಭ್ರಮ, ಕುಟುಂಬ ಸಮ್ಮಿಲನ

0

ರೋಟರಿಯ ಮೌಲ್ಯಾಧಾರಿತ ಸೇವೆಗೆ ವಿಶ್ವವೇ ಮೆಚ್ಚುಗೆ-ಪ್ರಕಾಶ್ ಕಾರಂತ್

ಪುತ್ತೂರು:ರೋಟರಿ ಎಂಬ ಅಂತರರಾಷ್ಟ್ರೀಯ ಸಂಸ್ಥೆಯ ಸದಸ್ಯರ ನಡುವಿನ ಬಾಂಧವ್ಯ, ಸಾಂಗತ್ಯ ಪರಿಪೂರ್ಣದೊಂದಿಗೆ ಸಮಾಜದಲ್ಲಿ ಒಳ್ಳೆಯ ಬದುಕನ್ನು ಕಲ್ಪಿಸಿಕೊಡುತ್ತದೆ. ನಮ್ಮೊಳಗಿನ ಅಜ್ಞಾನ ಎಂಬ ಕತ್ತಲೆಯನ್ನು ಹೋಗಲಾಡಿಸಿ ಸುಜ್ಞಾನ ಎಂಬ ಬೆಳಕನ್ನು ಚೆಲ್ಲುವುದೇ ದೀಪಾವಳಿ ಆಗಿದೆ. ರೋಟರಿ ಸಂಸ್ಥೆಯ ಮೌಲ್ಯಾಧಾರಿತ ಸೇವೆಗೆ ವಿಶ್ವವೇ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ರವರು ಹೇಳಿದರು.

ನ.18 ರಂದು ಸಂಜೆ ರೋಟರಿ ಮನೀಷಾ ಸಭಾಂಗಣದಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಆಶ್ರಯದಲ್ಲಿ, ಇತ್ತೀಚೆಗೆ ವೈವಾಹಿಕ ಜೀವನದ ಬೆಳ್ಳಿಹಬ್ಬವನ್ನು ಆಚರಿಸಿದ ಕ್ಲಬ್ ಪೂರ್ವಾಧ್ಯಕ್ಷ ಜಯಂತ್ ನಡುಬೈಲುರವರ ಪ್ರಾಯೋಜಕತ್ವದಲ್ಲಿ ಜರಗಿದ ದೀಪಾವಳಿ ಸಂಭ್ರಮ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕ್ಲಬ್ ಅನ್ನು ಮುನ್ನೆಡೆಸಿದವರನ್ನು ಗೌರವಿಸುವುದು ಜವಾಬ್ದಾರಿ-ಶಶಿಧರ್ ಕಿನ್ನಿಮಜಲು;
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಮಾತನಾಡಿ, ರೋಟರಿ ಈಸ್ಟ್ ಸಂಸ್ಥೆಯನ್ನು ಸ್ಥಾಪನೆ ಮಾಡಿ ಅದರ ಅಧ್ಯಕ್ಷರಾಗಿ, ಸದಸ್ಯರಾಗಿ ಸಂಸ್ಥೆಯನ್ನು ಇಲ್ಲಿವರೆಗೆ ಯಶಸ್ವಿಯಾಗಿ ಮುನ್ನೆಡೆಸಿರುವುದು ಶ್ಲಾಘನೀಯ ಮಾತ್ರವಲ್ಲ ಅವರನ್ನು ಗೌರವಿಸುವುದು ಕೂಡ ನಮ್ಮ ಜವಾಬ್ದಾರಿ ಆಗಿದೆ. ಮುಂದಿನ ದಿನಗಳಲ್ಲಿ ಕ್ಲಬ್ ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಗಳಿಗೆ ಎಂದಿನಂತೆ ಸಹಕಾರವಿರಲಿ ಹಾಗೂ ಇಂದು ಕುಟುಂಬ ಸಮ್ಮಿಲನ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ ಜಯಂತ್ ನಡುಬೈಲು ದಂಪತಿಗೆ ಕೃತಜ್ಞತೆಗಳು ಎಂದರು.

ಸ್ಥಾಪಕ ಅಧ್ಯಕ್ಷ, ಸದಸ್ಯರಿಗೆ ಗೌರವ:
ರೋಟರಿ ಈಸ್ಟ್ ಕ್ಲಬ್ ಅನ್ನು ಸ್ಥಾಪನೆ ಮಾಡಿ ಸ್ಥಾಪಕಾಧ್ಯಕ್ಷರಾಗಿ ಕ್ಲಬ್ ಮುನ್ನೆಡೆಸಿದ ಕೆ.ಆರ್ ಶೆಣೈ, ಚಾರ್ಟರ್ ಸದಸ್ಯ ಬೂಡಿಯಾರು ರಾಧಾಕೃಷ್ಣ ರೈರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕ್ಲಬ್ ಪೂರ್ವಾಧ್ಯಕ್ಷರಿಗೆ ಗೌರವ:
ಕ್ಲಬ್ ಅನ್ನು ಮುನ್ನೆಡೆಸಿದ ಪೂರ್ವಾಧ್ಯಕ್ಷರಾದ ಡಾ.ಸೂರ್ಯನಾರಾಯಣ, ಸೂರ್ಯನಾಥ ಆಳ್ವ, ಕರ್ನಲ್ .ಡಿ ಭಟ್, ಪ್ರಮೀಳಾ ರಾವ್, ದಿವಾಕರ ನಿಡ್ವಣ್ಣಾಯ, ಕೆ.ವಿಶ್ವಾಸ್ ಶೆಣೈ, ಮುರಳೀಶ್ಯಾಂ, ಜಯಂತ್ ನಡುಬೈಲು, ಅಬ್ಬಾಸ್ ಮುರ, ಡಾ.ಶ್ಯಾಮ್ ಪ್ರಸಾದ್, ಪುರಂದರ ರೈ ಮಿತ್ರಂಪಾಡಿ, ಬೂಡಿಯಾರು ರಾಧಾಕೃಷ್ಣ ರೈ, ಶರತ್ ಕುಮಾರ್ ರೈರವರುಗಳನ್ನು ಶಾಲು ಹೊದಿಸುವ ಮೂಲಕ ಗೌರವಿಸಲಾಯಿತು.

ಕ್ರಿಕೆಟ್ ಟ್ರೋಫಿ/ಶ್ರೀನಿವಾಸ ಕಲ್ಯಾಣೋತ್ಸವ ಆಮಂತ್ರಣ ಪತ್ರಿಕೆ ಹಸ್ತಾಂತರ:
ಸುಳ್ಯದಲ್ಲಿ ನಡೆದ ರೋಟರಿ ಸದಸ್ಯರ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ರನ್ನರ್ಸ್ ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಗೆ ಆಯ್ಕೆಯಾಗಿರುವ ಕ್ಲಬ್ ನಿಯೋಜಿತ ಅಧ್ಯಕ್ಷ ರವಿಕುಮಾರ್ ರೈರವರ ನಾಯಕತ್ವದಲ್ಲಿ ಕ್ರಿಕೆಟ್ ಟ್ರೋಫಿಯನ್ನು ಕ್ಲಬ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರಿಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಿದರು. ಮುಂದಿನ ದಿನಗಳಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಜರಗುವ ಮೂರನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆಯನ್ನು ನಿಯೋಜಿತ ಅಧ್ಯಕ್ಷ ರವಿಕುಮಾರ್ ರೈರವರು ಈ ಸಂದರ್ಭದಲ್ಲಿ ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರಿಗೆ, ಪಿಡಿಜಿ ಪ್ರಕಾಶ್ ಕಾರಂತ್ ರವರಿಗೆ ಹಸ್ತಾಂತರಿಸಿದರು.

ಸದಸ್ಯ ನಿಶಾಂತ್ ರೈ ಪ್ರಾರ್ಥಿಸಿದರು. ರೋಟರಿ ಈಸ್ಟ್ ಪೂರ್ವಾಧ್ಯಕ್ಷ ಹಾಗೂ ಕಾರ್ಯಕ್ರಮದ ಪ್ರಾಯೋಜಕರೂ ಆಗಿರುವ ಜಯಂತ್ ನಡುಬೈಲು ಸ್ವಾಗತಿಸಿದರು. ಕಾರ್ಯದರ್ಶಿ ನವೀನ್ ರೈ ಪಂಜಳ ವಂದಿಸಿದರು. ಕ್ಲಬ್ ಪೂರ್ವಾಧ್ಯಕ್ಷ ಡಾ.ಶ್ಯಾಮ್ ಪ್ರಸಾದ್ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ಸದಸ್ಯ ಧನಂಜಯ್ ಹಾಗೂ ಪೂರ್ವಾಧ್ಯಕ್ಷ ಶರತ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. 

ಸನ್ಮಾನ…
ಕ್ಲಬ್ ನ ಐದು ಅವೆನ್ಯೂಸ್ ಗಳಲ್ಲಿ ಸ್ವ-ಹಿತ ಮೀರಿದ ಸೇವೆ ನೀಡಿ ಅಂತರರಾಷ್ಟ್ರೀಯ ರೋಟರಿಯಿಂದ ಪ್ರಶಸ್ತಿ ಪುರಸ್ಕೃತರಾದ ಕ್ಲಬ್ ಪೂರ್ವಾಧ್ಯಕ್ಷ ಡಾ.ಸೂರ್ಯನಾರಾಯಣರವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನ ಸಂದರ್ಭದಲ್ಲಿ ಡಾ.ಸೂರ್ಯನಾರಾಯಣರವರ ಪತ್ನಿ ಮನೋರಮಾ ಹೆಜಮಾಡಿ ಉಪಸ್ಥಿತರಿದ್ದರು.

ದೀಪ ಬೆಳಗಿಸಿ ಉದ್ಘಾಟನೆ..
ಕಾರ್ಯಕ್ರಮದ ಆರಂಭದಲ್ಲಿ ರೋಟರಿ ಭೀಷ್ಮ, ಹಿರಿಯರಾದ ಕೆ.ಆರ್ ಶೆಣೈ ಹಾಗೂ ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್ ರವರು ಜೊತೆಗೂಡಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.

ಹಾರ ಬದಲಾವಣೆ..
ನವೆಂಬರ್ 5 ರಂದು ತಮ್ಮ ವೈವಾಹಿಕ ಜೀವನದ ಬೆಳ್ಳಿ ಹಬ್ಬವನ್ನು ಆಚರಿಸಿದ ಕ್ಲಬ್ ಪೂರ್ವಾಧ್ಯಕ್ಷ ಹಾಗೂ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲು ಹಾಗೂ ಕಲಾವತಿ ಜಯಂತ್ ದಂಪತಿ ಪರಸ್ಪರ ಹಾರ ಹಾಕುವ ಮೂಲಕ ವೈವಾಹಿಕ ಜೀವನದ ಸಂಭ್ರಮವನ್ನು ದ್ವಿಗುಣಗೊಳಿಸಿದರು.

ವಿಜಯಕುಮಾರ್ ಸೊರಕೆರವರಿಗೆ ಗೌರವ:
ಇತ್ತೀಚೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ವಿಜಯಕುಮಾರ್ ಸೊರಕೆರವರನ್ನು ಕ್ಲಬ್ ವತಿಯಿಂದ ಗೌರವಿಸಲಾಯಿತು. ವಿಜಯಕುಮಾರ್ ಸೊರಕೆರವರು ಈ ಸಂದರ್ಭದಲ್ಲಿ ವೈವಾಹಿಕ ಜೀವನದ ಬೆಳ್ಳಿ ಹಬ್ಬವನ್ನು ಆಚರಿಸಿದ ಜಯಂತ್ ನಡುಬೈಲು ದಂಪತಿಗೆ ಹೂಗುಚ್ಛ ನೀಡುವ ಮೂಲಕ ಅಭಿನಂದಿಸಿದರು.

LEAVE A REPLY

Please enter your comment!
Please enter your name here