ಸೌದಿ ಅರೇಬಿಯಾ(ಜುಬೈಲ್): ನಾವು ಅಧಿಕಾರದಲ್ಲಿರುವಾಗ ನಮ್ಮ ಬಳಿಗೆ ಎಷ್ಟು ಜನ ಬರುತ್ತಾರೆ ಎನ್ನುವುದು ಮುಖ್ಯವಲ್ಲ, ಬದಲಾಗಿ ನಮ್ಮ ಅಂತ್ಯ ಸಂಸ್ಕಾರಕ್ಕೆ ಬಂದು ಎಷ್ಟು ಜನರು ಬೆನ್ನು ಕೊಡುತ್ತಾರೆ, ಪ್ರಾರ್ಥನೆ ಮಾಡುತ್ತಾರೆ ಎನ್ನವುದು ಮುಖ್ಯ. ಈ ನಿಟ್ಟಿನಲ್ಲಿ ಪ್ರೀತಿಯಿಂದ, ಸೌಹಾರ್ದತೆಯಿಂದ ಜೀವನ ಸಾಗಿಸಿ ನಾವು ಜನತೆಯ ಹೃದಯದಲ್ಲಿ ಸ್ಥಾನ ಪಡೆಯಬೇಕು. ಈ ಮೂಲಕ ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಕೆಲಸ ಆಗಬೇಕಾಗಿದೆ ಎಂದು ಕರ್ನಾಟಕ ವಿಧಾನಸಭಾ ಸ್ವೀಕರ್ ಯು.ಟಿ ಖಾದರ್ ಹೇಳಿದ್ದಾರೆ. ಜುಬೈಲಿನಲ್ಲಿ ಕೆಐಸಿ ನ್ಯಾಷನಲ್ ಕಮಿಟಿಯು ಹಮ್ಮಿಕೊಂಡಿದ್ದ ಕೆಐಸಿ ಎಲಿವೇಷನ್ ಸಮ್ಮಿಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಅತಿಥಿಯಾಗಿ ಆಗಮಿಸಿದ್ದ ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಶಿಕ್ಷಿತರಾಗಬೇಕೆಂಬುದು ನನ್ನ ಬಹುದೊಡ್ಡ ಕನಸು. ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ ಕ್ಷೇತ್ರ ಮಾತ್ರ ನಿಜಕ್ಕೂ ಅಭಿವೃದ್ಧಿ ಹೊಂದಿದ ಕ್ಷೇತ್ರವೆನ್ನುವುದು ನನ್ನ ನಂಬಿಕೆ. ಹಾಗಾಗಿ ನನ್ನ ಕ್ಷೇತ್ರದಲ್ಲಿ ವಿದ್ಯೆ ನೀಡುವ ಯಾರೇ ಆದರೂ ಸರಿ ನಾನು ಅವರನ್ನು ಅಪ್ಪಿಕೊಳ್ಳುತ್ತೇನೆ, ಎಲ್ಲಿಗೆ ಕರೆದರೂ ಹೋಗುತ್ತೇನೆ. ಇದೇ ಕಾರಣಕ್ಕೆ ನಾನಿವತ್ತು ನಿಮ್ಮ ಮುಂದೆ ಸೌದಿ ಅರೇಬಿಯಾದಲ್ಲಿದ್ದೇನೆ. ಕೆಐಸಿ ಕುಂಬ್ರ ಸಂಸ್ಥೆಯ ಯೋಜನೆಗಳಿಗೆ ಸರಕಾರದಿಂದ ಸಿಗುವ ಸಹಕಾರವನ್ನು ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಭೆಗೆ ಭರವಸೆ ನೀಡಿದರು.
ಇದೇ ವೇಳೇ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಲ್ ಮುಝೈನ್ ಸಂಸ್ಥೆಯ ಅಧ್ಯಕ್ಷ ಝಕರಿಯಾ ಜೋಕಟ್ಟೆಯವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಝಕರಿಯಾ, ಶಿಕ್ಷಣ ಎಲ್ಲಿದೆ ಅಲ್ಲಿ ಭವಿಷ್ಯವಿದೆ. ಶಿಕ್ಷಣದಿಂದ ಈ ಸಮಾಜವನ್ನು ಎತ್ತರಕ್ಕೆ ಬೆಳೆಸಬಹುದಾಗಿದ್ದು, ಶಿಕ್ಷಣವು ಕಾಲದ ಬೇಡಿಯಾಗಿದೆ. ಪುತ್ತೂರಿನ ಕೆಐಸಿ ತಂಡವು ಸಾಧನೆಯ ಹಾದಿಯಲ್ಲಿದೆ. ದಾನವು ವಿಪತ್ತುಗಳಿಂದ ಕಾಪಾಡುತ್ತದೆ ಎನ್ನುವಂತೆ ಉತ್ತಮ ಶಿಕ್ಷಣವು ನಮ್ಮನ್ನು ಉತ್ತಮ ಪ್ರಜೆಯನ್ನಾಗಿಸುತ್ತದೆ ಎಂದರು. ಕಾರ್ಯಕ್ರಮದ ಸಂಘಟಕರನ್ನು ಅಭಿನಂದಿಸಿದ ಅವರು ಸಮಾಜದ ಏಳಿಗೆಗಾಗಿ ದುಡಿಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಒತ್ತಿ ಹೇಳಿದರು.
ಎಕ್ಸ್ ಪರ್ಟೈಸ್ ಸಂಸ್ಥೆಯ ಉಪಾಧ್ಯಕ್ಷ ಅಶ್ರಫ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಪುತ್ತೂರಿನ ಕೆಐಸಿ ಕುಂಬ್ರವು ಮುಂದಿನ ದಿನದಲ್ಲಿ ಕ್ರಾಂತಿ ನಿರ್ಮಿಸುವ ದೂರದೃಷ್ಟಿಯನ್ನು ಹೊಂದಿದೆ. ವಿವಿಧ ಸ್ಥರಗಳಲ್ಲಿ ಶಿಕ್ಷಣ ನೀಡುವ ಸಂಸ್ಥೆಯ ಗುರಿ ನಿಜಕ್ಕೂ ಶ್ಲಾಘನೀಯ. ನಾವು ಕೆಐಸಿಯ ಬೆನ್ನೆಲುಬಾಗಿ ನಿಲ್ಲುತ್ತೇವೆ. ಯಾಕೆಂದರೆ ಶಿಕ್ಷಣದಿಂದಲೇ ನಮ್ಮ ಸಮುದಾಯದ ಅಭಿವೃದ್ಧಿ ಸಾಧ್ಯ. ಶಿಕ್ಷಣದ ಮೂಲಕ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದು ಹೇಳಿದರು.
ಕೆಐಸಿ ಸಂಸ್ಥೆಯ ಕಾರ್ಯದರ್ಶಿ ಅನೀಸ್ ಕೌಸರಿ ದಿಕ್ಸೂಚಿ ಭಾಷಣದ ಮೂಲಕ ಸಂಸ್ಥೆಯ ಯೋಜನೆಯನ್ನು ವಿವರಿಸಿ ಎಲ್ಲರ ಸಹಕಾರ ಕೋರಿದರು. ಮಾಜಿ ಶಾಸಕ ಮೊೖದೀನ್ ಬಾವಾ, ಭಾರತ್ ಕನ್ಸ್ಟ್ರಕ್ಸನ್ ಸಿಇಓ ಮುಸ್ತಫಾ ಭಾರತ್, ಪ್ರಿಸಿಶನ್ ವಾಲ್ವ್ಸ್ ಎಂಡಿ ಯೂನುಸ್ ಸೆಯ್ಯದ್ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಸಭೆಯ ಮುಂದಿಟ್ಟು ಸಂಘಟಕರನ್ನು ಅಭಿನಂದಿಸಿದರು.
ಇಫ್ತಿಕಾರ್ ಯು ಟಿ ಸೇರಿದಂತೆ ಸೌದಿ ಅರೇಬಿಯಾದ ವಿವಿಧ ಪ್ರತಿಷ್ಠಿತ ಕಂಪೆನಿಗಳ ಮಾಲಕರು ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು, ಕೆಐಸಿ ಅಧ್ಯಕ್ಷ ಕೆ ಪಿ ಅಹಮದ್ ಹಾಜಿ (ಆಕರ್ಷಣ್) ಉದ್ಘಾಟಿಸಿದರು. ಕೆಐಸಿ ಸೆಂಟ್ರಲ್ ಕಮೀಟಿ ಅಧ್ಯಕ್ಷ ತಾಹೀರ್ ಸಾಲ್ಮರ ಅಧ್ಯಕ್ಷತೆ ವಹಿಸಿ ಮಾತನಾಡಿ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮ ಸಂಯೋಜಕ ಅಬ್ದುಲ್ ಹಮೀದ್ ಅಸ್ಕಾಫ್ ಸ್ವಾಗತಿಸಿ, ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.