ಪುತ್ತೂರು: ಮನೆ ಕಟ್ಟುವ ಸಂದರ್ಭ ಉಪಯೋಗಿಸಲೆಂದು ತಾತ್ಕಾಲಿಕವಾಗಿ ಬಿಟ್ಟು ಕೊಟ್ಟ ಮಾರ್ಗವನ್ನು ಮನೆ ಪೂರ್ಣಗೊಂಡರೂ ಉಪಯೋಗಿಸುತ್ತಿರುವ ಕುರಿತು ವಿಚಾರಿಸಿದಕ್ಕೆ ಹಲ್ಲೆ ನಡೆಸಿದ ಘಟನೆ ನೆಟ್ಟಣಿಗೆಮುಡ್ನೂರು ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ನೆಟ್ಟಣಿಗೆಮಡ್ನೂರು ಗ್ರಾಮದ ಚಾರ್ಪಾಟೆ ನಿವಾಸಿ ಆಸೀಯಮ್ಮ ದೂರುದಾರರು. ‘ನೆರೆಮನೆಯ ಅಬ್ದುಸ್ ಅಜೀಜ್ ಎಂಬವರಿಗೆ ಮನೆ ಕಟ್ಟುವ ಸಮಯ ಅನುಕೂಲವಾಗುವಂತೆ ಷರತ್ತು ಬದ್ದವಾಗಿ ತಮ್ಮ ಜಮೀನಿನಲ್ಲಿ ತಾತ್ಕಾಲಿಕವಾಗಿ ಮಾರ್ಗವನ್ನು ಬಿಟ್ಟುಕೊಡಲಾಗಿತ್ತು. 3 ತಿಂಗಳ ಹಿಂದೆ ಅಬ್ದುಲ್ ಅಜೀಜ್ ಅವರ ಮನೆ ಪೂರ್ಣಗೊಂಡಿದ್ದರೂ ಸಹ ಮಾರ್ಗದ ಜಮೀನನ್ನು ಬಿಟ್ಟು ಕೊಡದೇ ಉಪಯೋಗಿಸುತ್ತಿದ್ದರು. ಸದ್ರಿ ಮಾರ್ಗವನ್ನು ಉಪಯೋಗಿಸದಂತೆ ಪುತ್ತೂರು ಸಿವಿಲ್ ನ್ಯಾಯಾಲಯದಿಂದ ಇಂಜೆಂಕ್ಷನ್ ಆರ್ಡರ್ ತರಲಾಗಿತ್ತು. ನ.21ರಂದು ಮಾರ್ಗಕ್ಕೆ ಕೆಂಪು ಕಲ್ಲುಗಳನ್ನು ಅಡ್ಡವಾಗಿಟ್ಟು ಮಾರ್ಗವನ್ನು ಮುಚ್ಚಲಾಗಿತ್ತು. ಆದರೆ ಅಬ್ದುಲ್ ಅಜೀಜ್ ಆಲ್ಟೋ ಕಾರಿನಲ್ಲಿ ಬಂದು, ರಸ್ತೆಗೆ ಅಡ್ಡವಾಗಿ ಇಟ್ಟಿದ್ದ ಕೆಂಪುಕಲ್ಲುಗಳನ್ನು ಕೆಲಸದಾಳು ದಿನಕರ ಎಂಬವರ ಮೂಲಕ ತೆಗೆಯತ್ತಿದ್ದುದನ್ನು ಪ್ರಶ್ನಿಸಿದಾಗ ಅಬ್ದುಲ್ ಅಜೀಜ್ ನನ್ನನ್ನು ಕೈಯಿಂದ ದೂಡಿ ಹಾಕಿ, ಮಾರ್ಗದಲ್ಲಿದ್ದ ಕಲ್ಲನ್ನು ತೆರವು ಮಾಡಿದ್ದಾರೆ’ ಎಂದು ದೂರಿನಲ್ಲಿ ಅವರು ಆರೋಪಿಸಿದ್ದಾರೆ.
ಆಸೀಯಮ್ಮ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಪೊಲೀಸರಿಗೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
