ಗೆಜ್ಜೆಗಿರಿ ಕ್ಷೇತ್ರದಲ್ಲಿ ಯಾತ್ರಿ ನಿವಾಸಕ್ಕೆ ಶಿಲಾನ್ಯಾಸ

0

7ಕೋ. ರೂ. ವೆಚ್ಚದ ಸುಸಜ್ಜಿತ ಯಾತ್ರಿನಿವಾಸ
ಗೆಜ್ಜೆಗಿರಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಕ್ಷೇತ್ರದ ಆಡಳಿತ ಮಂಡಳಿಯು ಯೋಜನೆ ಹಾಕಿಕೊಂಡಿದೆ. ಕ್ಷೇತ್ರದ ಸನಿಹದಲ್ಲೇ 7 ಕೋ.ರೂ. ವೆಚ್ಚದಲ್ಲಿ ಸುಮಾರು 60 ಸಾವಿರ ಚದರ ಅಡಿಯಲ್ಲಿ ತಲೆಎತ್ತಲಿರುವ 5 ಅಂತಸ್ತುಗಳ ಯಾತ್ರಿನಿವಾಸ ಕಟ್ಟಡಕ್ಕೆ ಕ್ಷೇತ್ರದ ತಂತ್ರಿಯವರಾದ ಶ್ರೀ ಶಿವಾನಂದ ತಂತ್ರಿಗಳ ಪೌರೋಹಿತ್ಯದಲ್ಲಿ ಪೂರ್ವಾಹ್ನ 10ಕ್ಕೆ ಶಿಲಾನ್ಯಾಸ ನಡೆಯಿತು. ಗುಜರಾತ್‌ನ ಬರೋಡಾದ ಉದ್ಯಮಿ ದಯಾನಂದ ಬೊಂಟ್ರರವರು ಶಿಲಾನ್ಯಾಸ ನೆರವೇರಿಸಿದರು.

ಯಾತ್ರಿ ನಿವಾಸದ ನೆಲಮಹಡಿಯಲ್ಲಿ ಪಾಕಶಾಲೆ, ಮೇಲಂತಸ್ತಿನಲ್ಲಿ 20 ಕೊಠಡಿಗಳು, ಸಮುದಾಯ ಭವನ, ದೇಯಿಬೈದ್ಯೆತಿ ಆಯುರ್ವೇದ ಸಂಶೋಧನಾ ಟ್ರಸ್ಟ್ ಬರಲಿದೆ. ಪ್ರಥಮ ಹಂತದಲ್ಲಿ 20 ಕೊಠಡಿಗಳು ನಿರ್ಮಾಣವಾಗಲಿದೆ.

ಕಟ್ಟಡದ ವಾಸ್ತುಶಿಲ್ಪಿಯವರಿಗೆ ಗೌರವಾರ್ಪಣೆ
ಯಾತ್ರಿನಿವಾಸ ಕಟ್ಟಡದ ವಾಸ್ತುವಿನ್ಯಾಸಕಾರರಾದ ಪ್ರಮಲ್ ಕುಮಾರ್ ಕಾರ್ಕಳರವರನ್ನು ಸೋಲೂರು ಮಠದ ಶ್ರೀವಿಖ್ಯಾತಾನಂದ ಸ್ವಾಮೀಜಿಯವರು ಹಾರ, ಶಾಲು ಹಾಕಿ ಗೌರವಿಸಿದರು.

ಪುತ್ತೂರು: ಗೆಜ್ಜೆಗಿರಿ ಅದಿ ಧೂಮಾವತಿ ಕ್ಷೇತ್ರ. ಸಾಯನ ಬೈದ್ಯರ ಗುರುಪೀಠ, ದೇಯಿಬೈದೈತಿ-ಕೋಟಿ ಚೆನ್ನಯ ಮೂಲಸ್ಥಾನದಲ್ಲಿ ಸಮಾರು 7ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಯಾತ್ರಿ ನಿವಾಸ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನ.22ರಂದು ನಡೆಯಿತು. ಶಿಲಾನ್ಯಾಸ ಕಾರ್ಯಕ್ರಮದ ಬಳಿಕ ಕ್ಷೇತ್ರದ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ದೀಪ ಬೆಳಗಿಸಿ ಸಭಾಕಾರ್ಯಕ್ರಮ ಉದ್ಘಾಟಿಸಿದರು.

ಬಿಲ್ಲವ ಸಮಾಜ ಹಿಂದೂ ಧರ್ಮದಡಿಯಲ್ಲಿ ಸಂಘಟಿತರಾಗುವುದು ಅಗತ್ಯ:
ಕೇಂದ್ರ ಸಚಿವ ಶ್ರೀಪಾದ ನಾಯ್ಕರವರು ಮಾತನಾಡಿ ಗೆಜ್ಜೆಗಿರಿ ಕ್ಷೇತ್ರ ಅನಾದಿಕಾಲದ ಆಧ್ಯಾತ್ಮಿಕ ಶ್ರದ್ಧಾಕೇಂದ್ರ ಇದು ಮಂದಿರ ಅಲ್ಲ ಸಾಂಸ್ಕೃತಿಕ ಕೇಂದ್ರವಾಗಿದೆ. ಹಿಂದೂ ಧರ್ಮ ಸರ್ವಧರ್ಮವನ್ನು ಗೌರವಿಸುವ ಸಂಸ್ಕೃತಿಯನ್ನು ಹೊಂದಿದೆ. ಸಂಸ್ಕಾರ, ಪರಂಪರೆಯನ್ನು ಹೊಂದಿದ ವಿಶಿಷ್ಟ ಧರ್ಮವಾಗಿದೆ ಎಂದರು. ಬಿಲ್ಲವ ಸಮಾಜವನ್ನು ವಿವಿಧ ಊರು, ಪ್ರದೇಶಗಳಲ್ಲಿ ಬೇರೆ ಬೇರ ಹೆಸರುಗಳಿಂದ ಕರೆಯುತ್ತಾರೆ. ಇವರೆಲ್ಲರೂ ಹಿಂದೂ ಸಮಾಜದಡಿಯಲ್ಲಿ ಸಂಘಟಿತರಾಗುವುದು ಅಗತ್ಯವಾಗಿದೆ ಎಂದ ಅವರು ಈ ಕ್ಷೇತ್ರ ತುಳುನಾಡಿನ ಗೌರವ ಪರಂಪರೆಯಾಗಿದೆ. ಮಹಾದಾನವಾಗಿರುವ ಅನ್ನದಾನ ಇಲ್ಲಿ ನಿರಂತರ ನಡೆಯಲಿ. ಎಲ್ಲರೂ ಏಕತಾ ಮನೋಭಾವದಿಂದ ಕೆಲಸ ಮಾಡುವ ಮೂಲಕ ಕ್ಷೇತ್ರ ಅಭಿವೃದ್ಧಿ ಹೊಂದಲಿ ಎಂದರು.

ಈ ಕ್ಷೇತ್ರದ ಅನುಗ್ರಹದಿಂದ ನಮ್ಮ ಸಮಾಜ ಅಭಿವೃದ್ಧಿ ಹೊಂದಲಿ:
ಶಿಲಾನ್ಯಾಸ ನೆರವೇರಿಸಿದ ಗುಜರಾತ್‌ನ ಬರೋಡಾದ ಉದ್ಯಮಿ ದಯಾನಂದ ಬೊಂಟ್ರರವರು ಮಾತನಾಡಿ ಯಾವುದೇ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಅಗತ್ಯ. ಈ ಕ್ಷೇತ್ರದ ಆಡಳಿತ ವರ್ಗದಿಂದ ಯಾತ್ರಿ ನಿವಾಸ ನಿರ್ಮಾಣದ ಯೋಜನೆ ಹಾಕಿಕೊಂಡಿರುವುದು ಸಂತೋಷ. ದೂರದ ಗುಜರಾತ್‌ನಿಂದ ನನ್ನನ್ನು ಕರೆಸಿ ಶಿಲಾನ್ಯಾಸ ನೆರವೇರಿಸಿದ್ದೀರಿ ಇದಕ್ಕೆ ನಾನು ಚಿರಋಣಿಯಾಗಿದ್ದೇನೆ. ಕುಲದೇವರಾದ ಬೈದ್ಯೇರುಗಳ ಅನುಗ್ರಹ ನಮ್ಮ ಸಮಾಜಕ್ಕೆ ಸಿಗಲಿ. ನಮ್ಮೆಲ್ಲರನ್ನೂ ಒಟ್ಟಿಗೆ ಸೇರಿಸಿ ನಮ್ಮಲ್ಲಿ ಐಕ್ಯತೆ ಮೂಡುವಂತಾಗಲಿ ಎಂದರು. ಗುಜರಾತ್‌ನಲ್ಲಿಯೂ ಬಿಲ್ಲವರ ಸಂಘ ಮಾಡಿದ್ದೇವೆ. ನಮ್ಮ ಸಮಾಜದ ಏಳಿಗೆಗೆ, ಯುವ ಸಮೂಹ ಮುಂದೆ ಬರಬೇಕು ಎಂಬ ದೃಷ್ಟಿಯಿಂದ ಗುಜರಾತ್‌ನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ನಾನು ದೀಕ್ಷೆ ಪಡೆದ ಗಾಯತ್ರಿ ಸಾಧಕನಾಗಿದ್ದೇನೆ. ನನ್ನ ಜನ್ಮಭೂಮಿ ಕರ್ನಾಟಕವಾದರೂ ಕರ್ಮಭೂಮಿ ಗುಜರಾತ್ ಆಗಿದೆ. ಗುಜರಾತ್‌ನಲ್ಲಿ ಗಾಯತ್ರಿ ಮಂದಿರವನ್ನು ನಿರ್ಮಾಣ ಮಾಡಿದ್ದೇವೆ. ಅಲ್ಲಿನ ಮ್ಯಾನೇಜಿಂಗ್ ಟ್ರಸ್ಟಿಯಾಗಿದ್ದೇನೆ ಎಂದ ಅವರು ಈ ಕ್ಷೇತ್ರ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ನಮ್ಮ ಸಮಾಜ ಈ ಕ್ಷೇತ್ರದ ಅನುಗ್ರಹ ಪಡೆದು ಸರ್ವತೋಮುಖ ಅಭಿವೃದ್ಧಿ ಹೊಂದಲಿ ಎಂದರು.


ಬಿಲ್ಲವ ಸಮಾಜ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು:
ಸಭಾಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ ಹಿಂದುಳಿದಿರುವ ನಮ್ಮ ಬಿಲ್ಲವ ಸಮಾಜ ಮೇಲೆ ಬರಬೇಕು. ಇದಕ್ಕೆ ಶಿಕ್ಷಣ ಅಗತ್ಯ. ಕೇರಳ ರಾಜ್ಯದಲ್ಲಿ ಸಂಪೂರ್ಣ ಸಾಕ್ಷರತೆ ಇದೆ. ಇದಕ್ಕೆ ನಾರಾಯಣ ಗುರುಗಳೇ ಕಾರಣ. ನಾರಾಯಣ ಗುರುಗಳ ಅಧ್ಯಯನ ಪೀಠ ಮಂಗಳೂರು ವಿ.ವಿ.ಯಲ್ಲಿ ಸ್ಥಾಪನೆ ಆಗುತ್ತಿದೆ. ಇದು ನಮಗೆ ಹೆಮ್ಮೆಯ ವಿಚಾರ ಎಂದರು. ಅಶ್ಪೃಶ್ಯತೆಯ ವಿರುದ್ಧ ಹೋರಾಡಲು ಮಹಾತ್ಮಗಾಂಧಿಗೆ ನಾರಾಯಣ ಗುರುಗಳೇ ಪ್ರೇರಣೆಯಾಗಿದ್ದರು. ಅವರ ಶ್ರಮದಿಂದ ನಮ್ಮ ಸಮಾಜ ಮುಂದೆಬರಲು ಸಾಧ್ಯವಾಯಿತು. ಆದುದರಿಂದ ನಾರಾಯಣ ಗುರುಗಳು ಹಾಕಿದ ದಾರಿಯಲ್ಲಿ ನಾವು ಸಾಗಬೇಕು. ಕೋಟಿ ಚೆನ್ನಯರ ಸಿದ್ಧಾಂತದಲ್ಲಿ ಬದುಕಬೇಕು. ಯುವ ಪೀಳಿಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ದೇಶಕ್ಕೆ ಉತ್ತಮ ಪ್ರಜೆಗಳಾಗಬೇಕು ಎಂದು ಹೇಳಿ ವಿಶ್ವವೇ ಕೋಟಿ ಚೆನ್ನಯರ ಸಂಸ್ಕೃತಿ, ಜೀವನ ಅರಿಯಲಿ ಎಂದರು.

ನಮ್ಮ ಸಮಾಜಕ್ಕೆ ಒಳಿತಿನ ಲಕ್ಷಣಗಳ ಕುರುಹು ಕಾಣುತ್ತಿದೆ:
ಸೋಲೂರು ಮಠ ಆರ್ಯಈಡಿಗ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀವಿಖ್ಯಾತಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ ಸಮಾಜಕ್ಕೆ ಈ ವರ್ಷ ಒಳಿತಿನ ಲಕ್ಷಣಗಳು ಬರುವ ಕುರುಹು ಕಾಣುತ್ತಿದೆ. ಸಮಾಜಕ್ಕೆ ಉನ್ನತಿಯ ಭವಿಷ್ಯ ಕೂಡಿಬರುತ್ತಿದೆ. ಅಧಿಕಾರ ಬಂದಾಗ ಧನಕನಕಾದಿಗಳು ಕೂಡಿ ಬರುವಾಗ ಕೆಲವರ ಸ್ವಭಾವ ಬದಲಾವಣೆ ತರುತ್ತದೆ. ನಾವು ಉನ್ನತಿಗೇರಿದ ಏಣಿಯನ್ನು ಮರೆತು ಬಿಡಬಾರದು. ನಮ್ಮಲ್ಲಿ ಉದಾರ ಮನೋವೃತ್ತಿ ಬರಬೇಕು. ಕೋಟಿ ಚೆನ್ನಯರು, ಸಂಸ್ಕಾರ, ಸಂಸ್ಕೃತಿಯಲ್ಲಿ ಬೆಳೆದವರು. ಅವರಂತೆ ನಾವು ಕೂಡ ಬದುಕು ನಡೆಸಬೇಕು. ನಾವು ಮಾಡಿದ ಪಾಪಕರ್ಮಗಳು ಈ ಕ್ಷೇತ್ರದಲ್ಲಿ ಪರಿಹಾರವಾಗಲಿ ಎಂದು ಹೇಳಿ ಎಲ್ಲರ ಸಹಕಾರದಿಂದ ಕಟ್ಟಡ ಪೂರ್ತಿಯಾಗಲಿ ಎಂದು ಆಶೀರ್ವಚಿಸಿದರು.

ಸತ್ಯಧರ್ಮದ ನೆಲ ಗೆಜ್ಜೆಗಿರಿ ಕ್ಷೇತ್ರ ಬೆಳೆಯಲಿ:
ದ.ಕ.ಕ್ಷೇತ್ರದ ಸಂಸದ ಕ್ಯಾ| ಬ್ರಿಜೇಶ್ ಚೌಟ ಮಾತನಾಡಿ ತುಳುವ ನೆಲ ಸತ್ಯಧರ್ಮದ ನೆಲವಾಗಿದೆ. ಹಿಂದೂ ಸಮಾಜಕ್ಕೆ ಆಶ್ರಯ ಕೊಟ್ಟ ನೆಲವೂ ಆಗಿದೆ. ನಾರಾಯಣ ಗುರುಗಳು ದಾರ್ಶನಿಕರು, ಪೂಜ್ಯನೀಯರೂ ಆಗಿದ್ದು ಇಡೀ ಸಮಾಜಕ್ಕೆ ಮಾದರಿಯಾಗಿದ್ದರು ಎಂದರು. ಇಲ್ಲಿನ ಸಮಿತಿಯ ಯೋಜನೆಯಾದ ಆಯುರ್ವೇದ ಆಸ್ಪತ್ರೆ ನಿರ್ಮಾಣ ಈ ಕ್ಷೇತ್ರಕ್ಕೆ ಯೋಗ್ಯವಾದ ಕೊಡುಗೆಯಾಗಿದೆ. ದೇಯಿ ಬೈದ್ಯೆತಿಗೂ ವೈದ್ಯ ಕ್ಷೇತ್ರಕ್ಕೂ ಸಂಬಂಧ ಇದೆ. ಇದಕ್ಕೆ ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ. ಯಾತ್ರಿ ನಿವಾಸ ಶೀಘ್ರವಾಗಿ ಮೂಡಿಬರಲಿ. ತನು ಮನ ಧನದೊಂದಿಗೆ ನಿಮ್ಮೊಂದಿಗಿದ್ದೇನೆ ಎಂದ ಅವರು ಸತ್ಯಧರ್ಮದ ನೆಲ ಗೆಜ್ಜೆಗಿರಿ ಕ್ಷೇತ್ರ ಬೆಳೆಯಲಿ ಎಂದರು.

ಗೆಜ್ಜೆಗಿರಿ ಕ್ಷೇತ್ರ ಬಿಲ್ಲವ ಸಮಾಜದ ಆತ್ಮವಾಗಲಿ:
ನಾರಾಯಣಗುರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಂಜುನಾಥ್ ಪೂಜಾರಿ ಮುದ್ರಾಡಿ ಮಾತನಾಡಿ ಒಳ್ಳೆಯ ಕಾರ್ಯಕ್ರಮವಾಗಿದೆ. ಬಿಲ್ಲವ ಸಮಾಜ ಒಗ್ಗಟ್ಟಾಗಬೇಕಿದೆ. ಸಮಾಜ ಮುಂದೆ ಬಂದರೆ ಆರಾಧನಾ ಕ್ಷೇತ್ರಗಳು ಬೆಳಗುತ್ತದೆ. ಸಂಪೂರ್ಣ ಮೂಲಭೂತ ಸೌಕರ್ಯ ಈ ಕ್ಷೇತ್ರದಲ್ಲಿಯಾಗಬೇಕು. ಈ ಮೂಲಕ ಕ್ಷೇತ್ರ ಸರ್ವಾಂಗೀಣ ಬೆಳವಣಿಗೆಯಾಗಲಿ. ಸರಕಾರದ ಮಟ್ಟ ಹಾಗೂ ಸಮಾಜ ಭಾಂಧವರು ಸೇರಿ ಈ ಕೆಲಸವಾಗಲಿ. ಬಿಲ್ಲವ ಸಮಾಜದ ಆತ್ಮವಾದ ಈ ಕ್ಷೇತ್ರ ಅಭಿವೃದ್ಧಿ ಹೊಂದಲಿ. ನಮ್ಮ ಸಮಾಜದ ಕೇಂದ್ರಬಿಂದುವಾಗಲಿ ಎಂದರು. ಸ

ನಮ್ಮ ಸಮಾಜದ ಪ್ರತೀ ಮನೆಯಿಂದ ಕಿಂಚಿತ್ ಸಹಕಾರ ಸಿಗಲಿ:
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯೆ ಪ್ರತಿಭಾ ಕುಳಾಯಿ ಮಾತನಾಡಿ ನಮ್ಮ ಸಮಾಜದ ಮೇಲೆ ನನಗೆ ಪ್ರೀತಿ ಇದೆ. ಬಿಲ್ಲವ ಸಮಾಜ ದೊಡ್ಡದಿದೆ. ಈ ಯಾತ್ರಿ ನಿವಾಸ ಕಟ್ಟಡಕ್ಕೆ ನಮ್ಮ ಸಮಾಜದ ಪ್ರತೀ ಮನೆಯಿಂದ ಕಿಂಚಿತ್ ಸಹಕಾರ ನೀಡಿದರೆ ಯಾವುದು ಕಷ್ಟ ಅಲ್ಲ. ನಾನು ಕೂಡ ನನ್ನಿಂದ ಆದಷ್ಟು ಸಹಕಾರ ನೀಡುತ್ತೇನೆ ಎಂದ ಅವರು ನಾನು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗುವಂತಾಗಿದ್ದರೆ ಅದಕ್ಕೆ ನಾರಾಯಣ ಗುರುಗಳೇ ಕಾರಣ. ನಮ್ಮ ಪೀಳಿಗೆ ಶಿಕ್ಷಣ ಪಡೆದು ಸುಶಿಕ್ಷಿತರಾಗೋಣ ಎಂದರು.

ನಮ್ಮ ಸಮುದಾಯ ಗಟ್ಟಿಯಾಗಬೇಕು:
ದ.ಕ. ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ನಮ್ಮ ಸಮುದಾಯ ಗಟ್ಟಿಯಾಗಬೇಕು. ಈ ಕ್ಷೇತ್ರ ದೇಶ ಅಲ್ಲದೆ ವಿಶ್ವದಲ್ಲಿಯೇ ಬೆಳಗಬೇಕೆಂದು ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಇದರ ಹಿಂದೆ ತುಂಬಾ ಶ್ರಮ ಇದೆ. ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನಾನು ನೀಡುತ್ತೇನೆ ಎಂದು ಹೇಳಿದರು.

ಮುಂದಿನ ಜಾತ್ರೆಯ ಮೊದಲು ಯಾತ್ರಿನಿವಾಸ ಉದ್ಘಾಟನೆ ಮಾಡುತ್ತೇವೆ:
ಅಧ್ಯಕ್ಷತೆ ವಹಿಸಿದ್ದ ದೇಯಿಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ ಮಾತನಾಡಿ ಗೆಜ್ಜೆಗಿರಿ ಕ್ಷೇತ್ರದ ಹಿಂದಿನ ಅಧ್ಯಕ್ಷರು 4 ಎಕರೆ ಜಾಗ ಖರೀದಿ ಮಾಡಿ ಸಮಿತಿಗೆ ಒಪ್ಪಿಸಿದ್ದರು. ಬಳಿಕ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ವಿಶ್ವದ ಮೂಲೆ ಮೂಲೆಯಿಂದ ಇಲ್ಲಿಗೆ ಬರುವ ಭಕ್ತಾದಿಗಳಿಗಾಗಿ ಯಾತ್ರಿ ನಿವಾಸ ನಿರ್ಮಿಸುವ ಯೋಚನೆ ನನಗೆ ಬಂತು. ಇದಕ್ಕೆ ಸಮಿತಿಯವರು ಹಾಗೂ ದಾನಿಗಳು ಸಹಕಾರ ನೀಡಿದರು. ಗುಜರಾತ್‌ನ ಉದ್ಯಮಿ ಇಂದು ಭೂಮಿ ಪೂಜೆ ನಡೆಸಿದ್ದಾರೆ. ಸ್ವಾಮೀಜಿಯವರು ಹೇಳಿದಂತೆ ಮುಂದಿನ ವರ್ಷದ ಜಾತ್ರೆಯ ಮೊದಲು ಇದನ್ನು ಉದ್ಘಾಟನೆ ಮಾಡುತ್ತೇವೆ ಎಂದು ಹೇಳಿ ಪರಂಪರೆಯಿಂದ ಬಂದ ಈ ಕ್ಷೇತ್ರದಲ್ಲಿ ಸತ್ಯ ಧರ್ಮ ನ್ಯಾಯದಿಂದ ಕೆಲಸ ಮಾಡುತ್ತೇವೆ. ಈ ಕ್ಷೇತ್ರ ಶಕ್ತಿಪೀಠವಾಗಲಿ ಎಂದು ಎಲ್ಲರ ಸಹಕಾರ ಕೋರಿದರು.

ವರ್ಕಲ ಶಿವಗಿರಿ ಮಠದ ಶ್ರೀಜ್ಞಾನೇಂದ್ರ ಸ್ವಾಮೀಜಿ, ಮುಂಬೈ ಬಿಲ್ಲದ ಚೇಂಬರ್ ಆಪ್ ಕಾಮರ್ಸ್ ಅಧ್ಯಕ ಎನ್.ಟಿ.ಪೂಜಾರಿ, ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಮಹೇಶ್ ಎನ್. ಅಂಚನ್, ಮಂಗಳೂರು ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ, ಸತೀಶ್ ಕುಮಾರ್ ಕಡೆಂಜಿಗುತ್ತು, ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಕರ್ನಾಟಕ ಲೋಕಸೇವಾ ಆಯೋಗ ಮಾಜಿ ಸದಸ್ಯ ಲಕ್ಷ್ಮೀನರಸಯ್ಯ, ಪುತ್ತೂರು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ್ ಶೆಟ್ಟಿ ಕಾವು, ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಕ್ ಕೋಟ್ಯಾನ್, ಪಡುಮಲೆ ಶ್ರೀಶಾಸ್ತಾರ ಕೂವೆ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಮಂಗಳೂರು ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ಕುಮಾರ್, ಉಡುಪಿ ನಾರಾಯಣಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ. ನ ಅಧ್ಯಕ್ಷ ಹರೀಶ್ಚಂದ್ರ ಅಮೀನ್, ದೇಯಿ ಬೈದೆತಿ ಕೋಟಿ-ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ, ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ದುಬೈ ಬಿಲ್ಲವ ಸಂಘದ ಉಪಾಧ್ಯಕ್ಷ ಹರೀಶ್ ಪೂಜಾರಿ, ಗುಜರಾತ್ ಬಿಲ್ಲವ ಸಂಘದ ಉಪಾಧ್ಯಕ್ಷೆ ಸರಿತಾ ಕೋಟ್ಯಾನ್, ಟ್ರಸ್ಟಿ ಸುಜಿತಾ ವಿ ಬಂಗೇರ, ಕೆಪಿಸಿಸಿ ಕಾರ್ಯದರ್ಶಿ ಮೋಹನ್ ಪಿ.ವಿ., ಬಿಲ್ಲವ ಬ್ರಿಗೇಡ್ ಅಧ್ಯಕ್ಷ ಅವಿನಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಮಂತ್ರಣ ಪತ್ರ ಬಿಡುಗಡೆ:
ಶಿವಗಿರಿ ಮಠ, ಮಂಗಳೂರು ವಿವಿಯ ಶ್ರೀನಾರಾಯಣ ಗುರು ಅಧ್ಯಯನ ಪೀಠದ ಆಶ್ರಯದಲ್ಲಿ ವಿ.ವಿ. ಕ್ಯಾಂಪಸ್‌ನಲ್ಲಿ ಡಿ.೩ರಂದು ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ, ಶ್ರೀಗುರುವಿನ ಮಹಾ ಸಮಾಧಿ ಶತಾಬ್ಧಿ ಸರ್ವಮತ ಸಮ್ಮೇಳನ ಶತಮಾನೋತ್ಸವ ಯತಿಪೂಜೆಯ ಅಮಂತ್ರಣ ಪತ್ರ ಬಿಡುಗಡೆ ನಡೆಸಲಾಯಿತು.

ಪುಣ್ಯ ಗೆಜ್ಜೆಗಿರಿ ಧ್ವನಿಸುರುಳಿ ಬಿಡುಗಡೆ:
ಸಪ್ತಸ್ವರ ಆರ್ಕೆಸ್ಟ್ರಾ ತಂಡದ ಗೆಜ್ಜೆಗಿರಿ ಕ್ಷೇತ್ರಕ್ಕೆ ಸಂಬಂಧಿಸಿದ ಭಕ್ತಿಗೀತೆಗಳ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆಗೊಳಿಸಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಶ್ರೀನಿವಾಸ ಪೂಜಾರಿ ಕೋಟ, ಮೂಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಎ. ಉಮಾನಾಥ ಕೋಟ್ಯಾನ್, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ, ಅಧ್ಯಕ್ಷ ಜಯರಾಜ್ ಹೆಚ್.ಎಸ್., ಮುಂಬೈ ಭಾರತ್ ಕೊ-ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ ಜೆ. ಸುವರ್ಣ, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಲತಾ ಎಂ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಧಾರ್ಮಿಕ ದತ್ತಿ ಇಲಾಖೆಯ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಾಜಿ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ತಾ.ಪಂ. ಮಾಜಿ ಸದಸ್ಯ ಹರೀಶ್ ಬಿಜತ್ರೆ, ಕರ್ನಪ್ಪಾಡಿ ಕೋಟಿ ಚೆನ್ನಯ ಗರಡಿ ಅಧ್ಯಕ್ಷ ಶಿವಪ್ಪ ಪೂಜಾರಿ ನಿಡ್ಪಳ್ಳಿ, ಡಾ|ಸದಾನಂದ ಪೆರ್ಲ, ಯಕ್ಷಗಾನ ಹಿರಿಯ ಕಲಾವಿದ ನಾರಾಯಣ ಕೊಳ್ತಿಗೆ, ಸೇರದಿಂತೆ ಹಲವರು ಭಾಗವಹಿಸಿದ್ದರು.

ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆರ್.ಸಿ.ನಾರಾಯಣ ರೆಂಜ, ದೇಯಿ ಬೈದೆತಿ ಕೋಟಿ-ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಗೌರವಾಧ್ಯಕ್ಷ ಜಯಂತ ನಡುಬೈಲು, ಉಪಾಧ್ಯಕ್ಷ ದೀಪಕ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್ ಕೆ.ಬಿ., ಕೋಶಾಧಿಕಾರಿ ಮೋಹನ್‌ದಾಸ್ ಬಂಗೇರ, ಜತೆ ಕಾರ್ಯದರ್ಶಿಗಳಾದ ಜಯವಿಕ್ರಮ್ ಕಲ್ಲಾಪು, ಡಾ|ಸಂತೋಷ್ ಕುಮಾರ್ ಟೈರಂಪಳ್ಳಿ, ದೇಯಿ ಬೈದೆತಿ ಕೋಟಿ-ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್ ಕೋಶಾಧಿಕಾರಿ ಹರೀಶ್ ಡಿ. ಸಾಲ್ಯಾನ್ ಬಜೆಗೋಳಿ ಸಹಕರಿಸಿದರು. ದೇಯಿ ಬೈದೆತಿ ಕೋಟಿ-ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಹಾಗೂ ಅಭಿವೃದ್ಧಿ ಟ್ರಸ್ಟಿಗಳಾದ ನಿತ್ಯಾನಂದ ನಾವರ, ನಾರಾಯಣ ಮಚ್ಚಿನ, ಶೈಲೇಂದ್ರ ಸುವರ್ಣ, ಮೋಹನ್ ಆರ್. ತೆಂಕಿಲ, ಚಂದ್ರಹಾಸ ಅಮೀನ್ ಗೋವಾ, ಹರಿಶ್ಚಂದ್ರ ಅಮಿನ್ ಕಟಪಾಡಿ, ಶ್ರೀಕುಮಾರ್ ಮೂಡಬಿದ್ರಿ, ನವೀನ್ ಅಮೀನ್ ಉಡುಪಿ, ನವೀನ್ ಸುವರ್ಣ ಸಜೀಪ, ನಾಗೇಶ್ ಪೂಜಾರಿ ಜಯರಾಮ ಬಂಗೇರ, ಜಯರಾಮ ಪೂಜಾರಿ ಬೀಳುವಾಯಿ, ನಾಗೇಶ್ ಪೂಜಾರಿ ಬೈಕಂಪಾಡಿ, ರಾಘವೇಂದ್ರ, ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

ಪ್ರಕೃತಿ ಹಾಗೂ ಮೋಕ್ಷ ಪ್ರಾರ್ಥಿಸಿದರು. ದೇಯಿ ಬೈದೆತಿ ಕೋಟಿ-ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್ ಗೌರವಾಧ್ಯಕ್ಷ ಡಾ|ರಾಜಶೇಖರ ಕೋಟ್ಯಾನ್ ಸ್ವಾಗತಿಸಿ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಕೆ.ಎ. ವಂದಿಸಿದರು. ದಿನೇಶ್ ಸುವರ್ಣ ಮತ್ತು ಪ್ರಜ್ಞಾ ಓಡಿಳ್ನಾಲ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here