ನಿರೀಕ್ಷೆಗೂ ಮೀರಿ ಸ್ವ ಇಚ್ಚೆಯಿಂದ ಕೈಜೋಡಿಸಿದ ಸ್ವಯಂ ಸೇವಕರು
ಸ್ವಯಂ ಸೇವಕರಾಗುವುದೂ ದೇವರ ಸೇವೆಗೆ ಸಮಾನ- ಶ್ರೀಕೃಷ್ಣ ಉಪಾಧ್ಯಾಯ
ಹೆಚ್ಚು ಸ್ವಯಂ ಸೇವಕರಾಗಿ ನೋಂದಾವಣೆ ಮಾಡಿದಕ್ಕೆ ಕೃತಜ್ಞತೆ – ಅರುಣ್ ಕುಮಾರ್ ಪುತ್ತಿಲ
ಕಾರ್ಯಕರ್ತರು, ಸ್ವಯಂಸೇವಕರು ಶಾಂತಚಿತ್ತರಾಗಿರಬೇಕು – ಶ್ರೀರಾಮ ಭಟ್ ಪಾತಾಳ
ತಾವು ಬರಬೇಕು ಬರುವಾಗ ಇನ್ನಷ್ಟು ಸ್ವಯಂ ಸೇವಕರನ್ನು ಕರೆದುಕೊಂಡು ಬರಬೇಕು – ಉಮೇಶ್ ಕೋಡಿಬೈಲು
ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯಿಂದ ನ.29 ಮತ್ತು 30ರಂದು ಪುತ್ತೂರಿನಲ್ಲಿ ನಡೆಯಲಿರುವ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರನೇ ವರ್ಷದ ಅಂಗವಾಗಿ ನಡೆಯುವ ಸಾಮೂಹಿಕ ವಿವಾಹ ಮತ್ತು ಹಿಂದುವೀ ಸಾಮ್ರಾಜ್ಯೋತ್ಸವದ ಅಂತಿಮ ಸಿದ್ಧತೆ ಮತ್ತು ಸ್ವಯಂ ಸೇವಕರ ಸಭೆಯು ನ.23ರಂದು ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದಲ್ಲಿ ನಡೆಯಿತು.

ನಿರೀಕ್ಷೆಗೂ ಮೀರಿ ಭಕ್ತರು ಸ್ವ ಇಚ್ಚೆಯಾಗಿ ಸ್ವಯಂ ಸೇವಕರಾಗಿ ಭಾಗವಹಿಸುವ ಭರವಸೆಯನ್ನು ಆನ್ ಲೈನ್ ಮೂಲಕ ನೋಂದಾವಣಿ ಆಗಿರುವುದರ ಜೊತೆಗೆ ಸಭೆಯಲ್ಲೂ ಅನೇಕ ಮಂದಿ ಸ್ವಯಂ ಸೇವಕರಾಗಿ ಸೇರಿದರು. ಸ್ವಯಂ ಸೇವಕರಿಗೆ ವಿವಿಧ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಯಿತು. ಪಾರ್ಕಿಂಗ್, ಅನ್ನಛತ್ರ, ವೇದಿಕೆ, ನೀರಿನ ಸರಬರಾಜು, ತುರ್ತು ಸೇವೆ ಸಹಿತ ವಿವಿಧ ವಿಭಾಗಗಳನ್ನು ಸಭೆಗೆ ತಿಳಿಸಲಾಯಿತು.
ಮಂತ್ರ ಹೇಳುವುದು ಮಾತ್ರವಲ್ಲ ಸ್ವಯಂ ಸೇವಕರಾಗುವುದೂ ದೇವರ ಸೇವೆಗೆ ಸಮಾನ
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವ ಸಲಹೆಗಾರ ಶ್ರೀಕೃಷ್ಣ ಉಪಾಧ್ಯಾಯ ಅವರು ಮಾತನಾಡಿ ಪುತ್ತೂರಿನಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಪುತ್ತೂರು ಕಂಡ ದೊಡ್ಡ ಜಾತ್ರೆಯಂತೆ. ಯಾಕೆಂದರೆ ಪುತ್ತಿಲ ಪರಿವಾರದ ಕಾರ್ಯಕರ್ತರು ಎಲ್ಲರನ್ನು ಈ ಕಾರ್ಯಕ್ರಮಕ್ಕೆ ತೊಡಗಿಸಿಕೊಂಡಿದ್ದಾರೆ. ಮಾಡುವುದು ದೇವರ ಕಾರ್ಯ ಉತ್ಕಷ್ಟ್ರ ಸೇವೆ. ಶ್ರೀನಿವಾಸನನ್ನು ದೂರದ ತಿರುಪತಿಯಿಂದ ಕರೆ ತಂದಿರುವುದು ಪುತ್ತಿಲ ಪರಿವಾರ. 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ತೊಂದರೆ ಆಗದೆ ನೂರಕ್ಕೆ ನೂರು ಚೆನ್ನಾಗಿ ನಡೆಯುತ್ತದೆ ಎಂದ ಅವರು ಇಲ್ಲಿ ಕೇವಲ ಮಂತ್ರ ಹೇಳುವುದು ದೇವರ ಸೇವೆಯಲ್ಲ. ನಾವು ಭಕ್ತಿ ಭಾವದಿಂದ ಮಾಡುವ ಯಾವುದೇ ಕಾರ್ಯವಾಗಲಿ, ಹೂ ಕೀಳುವುದು, ಸೆಗಣಿ ಸಾರಿಸುವುದು, ಸ್ವಯಂ ಸೇವಕರಾಗಿ ಏನೇನು ಸೇವೆ ಮಾಡುತ್ತೇವೆಯೋ ಅವೆಲ್ಲವೂ ಅರ್ಚಕರು ಮಂತ್ರ ಹೇಳಿಕೊಂಡು ಏನು ಸೇವೆ ಮಾಡುತ್ತಾರೋ ಅದಕ್ಕೆ ಕಿಂಚಿಂತ್ ಕಡಿಮೆಯಲ್ಲ ಎಂದು ಹೇಳಿದರು.
ಹೆಚ್ಚು ಸ್ವಯಂ ಸೇವಕರಾಗಿ ನೋಂದಾವಣೆ ಮಾಡಿದಕ್ಕೆ ಕೃತಜ್ಞತೆ
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಇನ್ನು ಉಳಿದಿರುವುದು ಬಹಳ ಮಹತ್ವಪೂರ್ಣವಾದ ದಿವಸ. ಕಳೆದ ಒಂದು ತಿಂಗಳಿನಿಂದ ಕಾರ್ಯಕರ್ತರು ಹಗಲಿರುಳು ಸೇವೆ ಮಾಡುತ್ತಿದ್ದೀರಿ. ಕಾರ್ಯಕ್ರಮ ಯಾವುದೇ ಲೋಪ ಇಲ್ಲದೆ ನಡೆಯಬೇಕು. ಈಗಾಗಲೇ ಸಾಮೂಹಿಕ ವಿವಾಹಕ್ಕೆ 17 ಜೋಡಿ ನೋಂದಾವಣೆ ಆಗಿದೆ. ಅವರಿಗೆ ಕರಿಮಣಿ ಹೊರತುಪಡಿಸಿ ಉಳಿದ ಸಾಹಿತ್ಯ ನೀಡಲಾಗಿದೆ. ಸಾಮೂಹಿಕ ವಿವಾಹದಲ್ಲಿ ವಿವಾಹವಾದ ಎಲ್ಲಾ ಜೋಡಿಗಳಿಗೆ ತಿರುಪತಿ ಪ್ರವಾಸವೂ ಮುಂದಿನ ದಿನ ನಿಗದಿಪಡಿಸಲಾಗಿದೆ. ಈಗಾಗಲೆ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರ ಪಾತ್ರ ಬಹಳ ಮಹತ್ವ. ಅದಕ್ಕಾಗಿ ಹೆಚ್ಚು ಸ್ವಯಂ ಸೇವಕರು ನೋಂದಾವಣೆ ಮಾಡಿದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನ.26ಕ್ಕೆ ಸಂಜೆ ದರ್ಬೆಯಿಂದ ಪೇಟೆಯಲ್ಲಿ ಆಮಂತ್ರಣ ಪತ್ರ ವಿತರಣೆ ನಡೆಯಲಿದೆ. ನ.28ಕ್ಕೆ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಹೊರೆಕಾರಣಿಕೆ ಸಮರ್ಪಣೆಗೆ ಭಾಗಿಯಾಗುವ ನೂರು ವಾಹನದಲ್ಲೂ ಹೊರೆಕಾಣಿಕೆ ಇರಿಸತಕ್ಕದು. ನ.29ರಂದು ನಡೆಯುವ ಶೋಭಾಯಾತ್ರೆಯಲ್ಲಿ ಎಲ್ಲರು ಪಾಲ್ಗೊಳ್ಳಬೇಕು. ಒಟ್ಟಿನಲ್ಲಿ ನೀವು ಇಟ್ಟಿರುವ ವಿಶ್ವಾಸಕ್ಕೆ ಟ್ರಸ್ಟ್ ಮೂಲಕ ಮುಂದಿನ ದಿನ ಎಲ್ಲರು ಒಟ್ಟಾಗಿ ಒಂದಾಗಿ ಕೆಲಸ ಕಾರ್ಯ ಮಾಡೋಣ ಎಂದ ಅವರು ಬಲ್ನಾಡಿನಲ್ಲಿ ಬ್ಯಾನರ್ಗೆ ಹಾನಿಯಾದ ವಿಚಾರಕ್ಕೆ ಸಂಬಂಧಿಸಿ ನೋವಿದೆ. ಕೃತ್ಯ ಎಸಗಿದವರಿಗೆ ಭಗವಂತ ಮತ್ತು ಉಳ್ಳಾಲ್ತಿಯಮ್ಮ ತಕ್ಕ ಶಾಸ್ತಿ ಮಾಡುತ್ತಾರೆ ಎಂದರು.
ಕಾರ್ಯಕರ್ತರು, ಸ್ವಯಂಸೇವಕರು ಶಾಂತಚಿತ್ತರಾಗಿರಬೇಕು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪುತ್ರಿಲ ಪರಿವಾರ ಸೇವಾ ಟ್ರಸ್ಟ್ನ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ ಅವರು ಮಾತನಾಡಿ ಕಲ್ಯಾಣೋತ್ಸವದಲ್ಲಿ ಕಾರ್ಯಕರ್ತರು, ಸ್ವಯಂ ಸೇವಕರು ಶಾಂತಚಿತ್ತರಾಗಿ ಕಾರ್ಯಕ್ರಮಕ್ಕೆ ಬಂದವರನ್ನು ಒಳ್ಳೆಯ ರೀತಿಯಲ್ಲಿ ಔಚಿತ್ಯ ನೀಡುವಂತೆ ಮನವಿ ಮಾಡಿದರು.
ತಾವು ಬರಬೇಕು ಬರುವಾಗ ಇನ್ನಷ್ಟು ಸ್ವಯಂ ಸೇವಕರನ್ನು ಕರೆದುಕೊಂಡು ಬರಬೇಕು
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಹಸಂಚಾಲಕ ಉಮೇಶ್ ಕೋಡಿಬೈಲು ಅವರು ಸ್ವಯಂ ಸೇವಕರ ಜವಾಬ್ದಾರಿಯನ್ನು ವಿವರಿಸಿದರು. ಕಳೆದ ಒಂದು ತಿಂಗಳಿನಿಂದ ವಿಶೇಷವಾಗಿ ಕಾರ್ಯಕ್ರಮದ ಯಶಸ್ವಿಗೆ ಕೆಲಸ ಮಾಡುತ್ತಿದ್ದೇವೆ. ನಾಳಿದಿನ ಕಾರ್ಯಕ್ರಮ ನ.28 ರಂದು ಹೊರೆಕಾಣಿಕೆಯಿಂದ ಪ್ರಾರಂಭಗೊಂಡು ನ.30ರ ರಾತ್ರಿಯ ತನಕ ಸ್ವಯಂ ಸೇವಕರು ಬಹಳ ಅಗತ್ಯ. ಕಳೆದ ಎರಡು ವರ್ಷಗಳಲ್ಲಿ ಮಾಡಿರುವ ಸೇವೆ ನಮಗೆಲ್ಲರಿಗೂ ಗೊತ್ತಿದೆ. ಅದೇ ರೀತಿ ಈ ವರ್ಷವೂ ಕೂಡಾ ಯಶಸ್ವಿಯಾಗಿ ಕಾರ್ಯಕ್ರಮ ನೆರವೇರಬೇಕು. ಹೊರೆಕಾಣಿಕೆಯಲ್ಲಿ ಬಂದ ಸಾಹಿತ್ಯಗಳನ್ನು ದೇವಸ್ಥಾನದ ಸಭಾಭವನದಲ್ಲಿ ಮಾಡಿರುವ ಉಗ್ರಾಣದಲ್ಲಿ ಜೋಡಣೆ ಮಾಡುತ್ತೇವೆ. ಎರಡುಮೂರು ದಿನದ ಕಾರ್ಯಕ್ರಮದಲ್ಲಿ ಅನ್ನಪ್ರಸಾದ ವಿತರಣೆ ಬಹಳ ಮುಖ್ಯ. ಎಲ್ಲಾ ಸ್ವಯಂ ಸೇವಕರಿಗೆ ಒಂದೆ ಕಡೆ ಸೇವೆ ಮಾಡಲು ಅಸಾದ್ಯ. ಹಾಗಾಗಿ ಬೇರೆ ಬೇರೆ ವಿಭಾಗ ಮಾಡಬೇಕು. ಸ್ವಚ್ಚತೆ ಮತ್ತು ಅನ್ನಸಂತರ್ಪಣೆ ಹೆಚ್ಚು ಸ್ವಯಂ ಸೇವಕರು ಬೇಕಾಗಿದೆ. ಮಹಿಳಾ ಸಮಿತಿಯೂ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಸ್ವಯಂಸೇವಕರು ಆತ್ಮೀಯರನ್ನು ಕೂಡಾ ಸ್ವಯಂ ಸೇವಕ ವಿಭಾಗಕ್ಕೆ ಸೇರಿಸಬಹುದು. ತಾವು ಬರಬೇಕು ಬರುವಾಗ ಇನ್ನಷ್ಟು ಸ್ವಯಂ ಸೇವಕರನ್ನು ಕರೆದುಕೊಂಡು ಬರಬೇಕು. ಸ್ವಯಂ ಸೇವಕರು ಒಂದು ವಿಭಾಗದಲ್ಲಿ ಕಡಿಮೆ ಇದ್ದರೆ ಇನ್ನೊಂದು ವಿಭಾಗದವರು ಗಮನಿಸಿ ಅದನ್ನು ಜೋಡಣೆ ಮಾಡುವ ಕೆಲಸ ಮಾಡಬೇಕು. ಒಟ್ಟಿನಲ್ಲಿ ಕಾರ್ಯಕ್ರಮವು ಲೋಪ ನ್ಯೂನ್ಯತೆ ಬಾರದ ರೀತಿಯಲ್ಲಿ ಆಗಬೇಕು ಎಂದರು.
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪ್ರಧಾನ ಪ್ರವೀಣ್ ಶೆಟ್ಟಿ ತಿಂಗಳಾಡಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಕೋಶಾಧಿಕಾರಿ ರೂಪೇಶ್ ನಾೖಕ್ ಟಿ, ಶ್ರೀನಿವಾಸ ಕಲ್ಯಾಣೋತ್ಸವ ಸ್ವಾಗತ ಸಮಿತಿ ಕಾರ್ಯದರ್ಶಿ ಪ್ರೇಮ್ರಾಜ್ ಆರ್ಲಪದವು, ಸ್ವಯಂ ಸೇವಕ ಸಮಿತಿ ಸಂಚಾಲಕ ರವಿಶೆಟ್ಟಿ ಕಾವು, ಸಹಸಂಚಾಲಕ ರಾಜೇಶ್ ಕರವೀರ, ಸಂದೀಪ್ ಕೆ ಕಡಮಾಜೆ, ಮಹಿಳಾ ಸಮಿತಿ ಸಂಚಾಲಕಿ ಪ್ರೇಮ ಮೋನಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಹಸಂಚಾಲಕ ರವಿ ಕುಮಾರ್ ರೈ ಕದೆದಂಬಾಡಿ ಮಠ ಸ್ವಾಗತಿಸಿ, ವಂದಿಸಿದರು. ಸಭೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತ ಪ್ರಮುಖರು ಮತ್ತು ಟ್ರಸ್ಟ್ನ ಪದಾಧಿಕಾರಿಗಳು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.
ಬ್ಯಾನರ್ ಹರಿಯಬಹದು ಹೊರತು ಮನಸ್ಸು ಒಡೆಯಲು ಸಾಧ್ಯವಿಲ್ಲ
ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಅಡ್ಡಿ ಮಾಡುವವರು ಬ್ಯಾನರ್ ಮಾತ್ರ ಹರಿಯಬಹುದು. ಕಾರ್ಯಕರ್ತರ ಮನಸ್ಸನ್ನು ಒಡೆಯಲು ಸಾಧ್ಯವಿಲ್ಲ. ನೀವು ಒಂದು ಬ್ಯಾನರ್ ಹರಿದರೆ ನೂರು ಕಾರ್ಯಕರ್ತರು ಬೆಳೆಯುತ್ತಾರೆ. ಅರುಣಣ್ಣನ ಜೀವನದ ಕೊನೆಯ ತನಕ ನಾವೆಲ್ಲ ಒಂದೆ ಕೂಡುಕುಟುಂಬದಂತೆ ಇರೋಣ
ಶ್ರೀಕೃಷ್ಣ ಉಪಾಧ್ಯಾಯ