ಪುತ್ತೂರು: ಶ್ರೀಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇದರ 9ನೇ ವರ್ಷದ ತಿರುಗಾಟವು ನ.25ರಂದು ಹನುಮಗಿರಿ ಕ್ಷೇತ್ರದಲ್ಲಿ ಪ್ರಥಮ ಸೇವೆಯಾಟ ನಡೆಯುವುದರೊಂದಿಗೆ ವಿದ್ಯುಕ್ತವಾಗಿ ಆರಂಭಗೊಂಡಿತು.

ಸಂಜೆ ಹನುಮಗಿರಿ ಪಂಚಮುಖಿ ಆಂಜನೇಯ ಮತ್ತು ಶ್ರೀಕೋದಂಡರಾಮ ದೇವರ ಎದುರು ಪ್ರಾರ್ಥನೆ, ಪೂಜೆ ನಡೆದು ಅರ್ಚಕರು ಗೆಜ್ಜೆ ಹಸ್ತಾಂತರಿಸಿದರು. ಬಳಿಕ ಶ್ರೀಕೋದಂಡರಾಮ ದೇವರ ಸನ್ನಿಧಿಯಲ್ಲಿ ಗೆಜ್ಜೆಸೇವೆ ನಡೆಯಿತು. ನಂತರ ಹನುಮಗಿರಿ ಗಜಾನನ ವಿದ್ಯಾಸಂಸ್ಥೆಯ ಆವರಣದಲ್ಲಿ ಚೌಕಿ ಪೂಜೆ ನಡೆದು ಪ್ರಥಮ ಸೇವೆಯಾಟ ನಡೆಯಿತು.
ತಿರುಗಾಟದ ಉದ್ಘಾಟನೆ
ಸೇವೆಯಾಟದ ಮೊದಲಿಗೆ ಈ ವರ್ಷದ ತಿರುಗಾಟದ ಉದ್ಘಾಟನೆ ನಡೆಯಿತು. ವೇ.ಮೂ.ಪರಕ್ಕಜೆ ಗಣಪತಿ ಭಟ್ ದೀಪ ಪ್ರಜ್ವಲಿಸುವ ಮೂಲಕ ತಿರುಗಾಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಶುಭಹಾರೈಸಿದರು. ಹಿರಿಯ ಯಕ್ಷಗಾನ ಕಲಾವಿದರಾದ ಗೋವಿಂದ ಭಟ್, ಶಿವರಾಮ ಜೋಗಿ, ಡಿ.ಮನೋಹರ್ ಕುಮಾರ್, ಭಾಗವತರಾದ ಗಿರೀಶ್ ರೈ ಕಕ್ಕೆಪದವುರವರನ್ನು ಮೆಳದ ಪ್ರಬಂಧಕ ಹರೀಶ್ ಬೊಳಂತಿಮೊಗರು ಶಾಲು ಹೊದಿಸಿ ಗೌರವಿಸಿದರು.
ಯಕ್ಷಗಾನ ಹಿರಿಯ ಕಲಾವಿದ ಗೋವಿಂದ ಭಟ್, ಮೇಳದ ಪ್ರಬಂಧಕ ಹರೀಶ್ ಬೊಳಂತಿಮೊಗರು, ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಕ್ಷಗಾನ ತಾಳಮದ್ದಲೆ ಕಲಾವಿದ ಹಿರಣ್ಯ ವೆಂಕಟೇಶ್ವರ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮೇಳದ ಯಜಮಾನ ಹಾಗೂ ಯಕ್ಷಗಾನ ಕಲಾಪೋಷಕ ಟಿ.ಶ್ಯಾಮ ಭಟ್, ಮ್ಯಾನೇಜರ್ ದಿವಾಕರ ಕಾರಂತ್, ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು. ಉದ್ಘಾಟನೆ ಬಳಿಕ ಅಶ್ವಮೇಧ ಯಕ್ಷಗಾನ ನಡೆಯಿತು.
ಈ ವರ್ಷದ ನೂತನ ಪ್ರಸಂಗ “ವರ್ಣ ಪಲ್ಲಟ”
ಮೇಳದ ಈ ವರ್ಷದ ತಿರುಗಾಟದಲ್ಲಿ ನೂತನ ಪ್ರಸಂಗವಾಗಿ ವಾಸುದೇವ ರಂಗಾ ಭಟ್ ಕಥಾ ಸಂಯೋಜನೆಯಲ್ಲಿ ಪ್ರಸಾದ್ ಮೊಗೆಬೆಟ್ಟು ಪದ್ಯ ರಚನೆಯ “ವರ್ಣ ಪಲ್ಲಟ” ರಂಗದಲ್ಲಿ ವೈಭವೀಕರಿಸಲಿದೆ. ಮೇಳದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಚಿನ್ಮಯ ಭಟ್ ಕಲ್ಲಡ್ಕ, ಚೆಂಡೆ ಮದ್ದಳೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಚೈತನ್ಯಕೃಷ್ಣ ಪದ್ಯಾಣ, ಶ್ರೀಧರ ವಿಟ್ಲ, ಕೌಶಲ್ ರಾವ್ ಪುತ್ತಿಗೆ, ಚಕ್ರತಾಳದಲ್ಲಿ ನಿಶ್ವತ್ಥ್ ಜೋಗಿ ಜೋಡುಕಲ್ಲು, ಹಾಸ್ಯ ಪಾತ್ರದಲ್ಲಿ ಸೀತಾರಾಮ ಕುಮಾರ್ ಕಟೀಲ್, ಮುಚ್ಚೂರು ಮೋಹನ, ಸ್ತ್ರೀಪಾತ್ರದಲ್ಲಿ ಸಂತೋಷ ಕುಮಾರ್ ಹಿಲಿಯಾಣ, ರಕ್ಷಿತ್ ಶೆಟ್ಟಿ ಪಡ್ರೆ, ಸತೀಶ್ ನೀರ್ಕರೆ, ಮಹೇಶ್ ಎಡನೀರು, ಮುಮ್ಮೇಳದಲ್ಲಿ ವಾಸುದೇವ ರಂಗಾಭಟ್ ಮಧೂರು, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಜಗದಾಭಿರಾಮ ಪಡುಬಿದ್ರೆ, ಸದಾಶಿವ ಕುಲಾಲ್ ವೇಣೂರು, ದಿವಾಕರ ರೈ ಸಂಪಾಜೆ, ಪೆರ್ಲ ಜಗನ್ನಾಥ ಶೆಟ್ಟಿ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಪ್ರಸಾದ್ ಸವಣೂರು, ಶಿವರಾಜ್ ಬಜಕೂಡ್ಲು, ಮುಖೇಶ್ ದೇವಧರ್ ನಿಡ್ಲೆ, ಅಜಿತ್ ಪುತ್ತಿಗೆ, ಪೃಥ್ವೀಶ್, ಕೀರ್ತನ್ ಕಾರ್ಕಳ, ಸತೀಶ್ ಎಡಮೊಗೆ, ರೂಪೇಶ್ ಆಚಾರ್ಯ, ಅಭಿಷೇಕ್ ಕಲ್ಲಡ್ಕ, ಅತಿಥಿ ಕಲಾವಿದರಾಗಿ ಉಬರಡ್ಕ ಉಮೇಶ್ ಶೆಟ್ಟಿ, ಶಶಿಧರ್ ಕುಲಾಲ್ ಕನ್ಯಾನರವರು ಪಾತ್ರ ನಿರ್ವಹಣೆ ಮಾಡಲಿದ್ದಾರೆ ಎಂದು ಮೇಳದ ಪ್ರಕಟಣೆ ತಿಳಿಸಿದೆ.
ಮೇಳದ ಪ್ರದರ್ಶನಗಳನ್ನು ಅಪೇಕ್ಷಿಸುವವರು ಮೇಳದ ಪ್ರಬಂಧಕ ಹರೀಶ್ ಬೊಳಂತಿಮೊಗರು ೯೪೮೦೫೭೪೩೫೩, ೯೪೮೦೬೪೩೧೫೭ ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.