*ಶಾಸಕರ ಅನುದಾನಗಳ ಅನಾವರಣ, ಸನ್ಮಾನ ಕಾರ್ಯಕ್ರಮ
ಗ್ಯಾರಂಟಿ ಯೋಜನೆಯ ಅತೀ ಹೆಚ್ಚು ಲಾಭ ಪಡೆಯುತ್ತಿರುವ ಬಿಜೆಪಿಯವರು ಸರಕಾರದ ಬಳಿ ದುಡ್ಡಿಲ್ಲ ಎನ್ನುತ್ತಿರುವುದು ಹಾಸ್ಯಾಸ್ಪದ-ಅಶೋಕ್ ರೈ
ಪುತ್ತೂರು: ಗ್ಯಾರಂಟಿ ಯೋಜನೆಯ ಸಂಪೂರ್ಣ ಲಾಭವನ್ನು ಪಡೆಯುತ್ತಿರುವ ಬಿಜೆಪಿಯವರು ಕಾಂಗ್ರೆಸ್ ಸರಕಾರದ ಬಳಿ ದುಡ್ಡಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ, ದುಡ್ಡಿಲ್ಲದಿದ್ದರೆ ಕೋಟ್ಯಾಂತರ ರೂ. ಅನುದಾನವನ್ನು ಮತ್ತೂರು ಕ್ಷೇತ್ರಕ್ಕೆ ತರಲು ನನಗೆ ಹೇಗೆ ಸಾಧ್ಯವಾಯಿತು ಎಂದು ವಿರೋಧಿಸುವವರು ತಿಳಿದುಕೊಳ್ಳಲಿ, ಬಿಜೆಪಿಯವರು ಜನರನ್ನು ಮಂಗ ಮಾಡುವುದನ್ನು ಇನ್ನಾದರೂ ಬಿಟ್ಟು ಬಿಡಲಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ನ.30ರಂದು ಅರಿಯಡ್ಕ ವಲಯ ಕಾಂಗ್ರೆಸ್ ವತಿಯಿಂದ ಕೌಡಿಚ್ಚಾರು ಎಸ್.ಎಂ ಬಿಲ್ಡಿಂಗ್ ವಠಾರದಲ್ಲಿ ಅರಿಯಡ್ಕ ಬಾಲಕೃಷ್ಣ ಶೆಟ್ಟಿ ವೇದಿಕೆಯಲಿ ನಡೆದ ಅರಿಯಡ್ಕ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಬಜೆಟ್‌ನಲ್ಲಿ ಮಂಡನೆಯಾದಾಗ ಅದು ಮಂಡನೆ ಮಾತ್ರ, ಆಗಲು ಸಾಧ್ಯವಿಲ್ಲ ಎಂದು ಹೇಳಿದರು, ಬಳಿಕ ಮೆಡಿಕಲ್ ಕಾಲೇಜು ಪುತ್ತೂರು ತಾಲೂಕಲ್ಲಿ ಆಗಲು ಸಾಧ್ಯವಿಲ್ಲ, ಜಿಲ್ಲಾ ಕೇಂದ್ರದಲ್ಲಿ ಆಗುತ್ತದೆ’ ಎಂದರು. ಆ ಬಳಿಕ ಮುಖ್ಯಮಂತ್ರಿ ಪುತ್ತೂರಿಗೆ ಬಂದು ಮೆಡಿಕಲ್ ಕಾಲೇಜು ಪುತ್ತೂರಿನಲ್ಲಿಯೇ ಮಾಡುತ್ತೇನೆ ಎಂದು ಘೋಷಣೆ’ ಮಾಡಿದಾಗ ಅಪಸ್ವರ ಎತ್ತುತ್ತಿದ್ದವರ ಧಮ್ಮು ನಿಂತು ಹೋಗಿತ್ತು, ಇದೀಗ ಮತ್ತೆ ಟೆಂಟರ್ ಆಗಿಲ್ಲ ಎನ್ನುತ್ತಾ ಅದೂ ಇದೂ ಎಂದು ಹೇಳುತ್ತಿದ್ದಾರೆ. ನಾನು ಹೇಳ್ತೇನೆ ‘ಇದು ಅಶೋಕ್ ರೈ’ ಮೆಡಿಕಲ್ ಕಾಲೇಜು ಆಗಿಯೇ ಆಗುತ್ತದೆ, ಶಿಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಕೂಡಾ ಆಗುತ್ತದೆ ಎಂದು ಹೇಳಿದರು.
ತಳಮಟ್ಟದಲ್ಲಿ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಲು ಕಾರ್ಯಕರ್ತರು ಮತ್ತು ನಾಯಕರು ಪ್ರಯತ್ನಿಸಬೇಕು, ಜಾತಿ, ಧರ್ಮ, ಪಕ್ಷ ಬಿಟ್ಟು ಎಲ್ಲರಿಗೂ ಸೇವೆ ನೀಡಿದಾಗ ಜನರು ನಮ್ಮನ್ನು ಬೆಂಬಲಿಸುತ್ತಾರೆ ಎಂದು ಶಾಸಕರು ಹೇಳಿದರು.
ಅರಿಯಡ್ಕ ಉತ್ಸವದ ರೂವಾರಿ ಇಕ್ಬಾಲ್ ಹುಸೇನ್ ಅವರನ್ನು ಶ್ಲಾಘಿಸಿದ ಶಾಸಕರು, ಒಳ್ಳೆಯ ಜನರನ್ನು ಸೇರಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವನ್ನು ಹೇಗೆ ನಡೆಸಬಹುದೆಂಬುವುದನ್ನು ಇಕ್ಬಾಲ್ ಹುಸೇನ್ ಅವರಿಂದ ನೋಡಿ ಕಲಿಯಬೇಕಾಗಿದೆ. ತಳಮಟ್ಟದಲ್ಲಿ ಕೆಲಸ ಮಾಡಿದರೆ ಮಾತ್ರ ಈ ರೀತಿ ಜನರನ್ನು ಸೇರಿಸಲು ಸಾಧ್ಯ ಎಂದು ಹೇಳಿದರು. ಇಕ್ಬಾಲ್ ಹುಸೇನ್ ಅವರು ನನ್ನ ಬಳಿ ಬಂದಾಗ ಅವರಿಗಾಗಿ ಏನನ್ನೂ ಕೇಳಿಲ್ಲ, ನನ್ನ ಜೊತೆ ಚೊರೆ ಮಾಡಿ ಅನುದಾನ ಕೇಳುತ್ತಾ ಇರುತ್ತಾರೆ, ಪಾಪೆಮಜಲು ಪ್ರೌಢಶಾಲೆಯನ್ನು ತನ್ನ ಸ್ವಂತ ಶಾಲೆಗಿಂತ ಹೆಚ್ಚು ಆಸಕ್ತಿ ವಹಿಸಿ ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದರು. ಇಕ್ಬಾಲ್ ಹುಸೇನ್ ಅವರು ವಲಯ ಅಧ್ಯಕ್ಷರಾದ ಬಳಿಕ ಮೊದಲು ಕೇಳಿದ್ದು ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಅನುದಾನ. ಅಷ್ಟು ಅರ್ಜೆಂಟಲ್ಲಿ ಅನುದಾನ ಯಾಕೆ ಅಂತ ಕೇಳಿದಾಗ, ಆ ಭಜನಾ ಮಂದಿರಕ್ಕೆ ಸಾಕಷ್ಟು ಜನರು ಬರ್ತಾ ಇರ್ತಾರೆ, ಹಾಗಾಗಿ ಅಲ್ಲಿನ ರಸ್ತೆ ಅಭಿವೃದ್ಧಿಗೆ ಮೊದಲು ಅನುದಾನ ಇಡಬೇಕೆಂದು ಹೇಳಿದರು. ಅದರಂತೆ 5 ಲಕ್ಷ ರೂ ಅನುದಾನ ಕೊಟ್ಟಿದ್ದೇನೆ, ಭಜನಾ ಮಂದಿರದ ರಸ್ತೆ ಕಾಮಗಾರಿ ಆಗಿದೆ ಎಂದು ಶಾಸಕರು ಹೇಳಿದರು.
ಅರಿಯಡ್ಕ ವಲಯಕ್ಕೆ 1 ಕೋಟಿ ರೂ. ಘೋಷಣೆ:
ಮುಂದಿನ ದಿನಗಳಲ್ಲಿ ಅಭಿವೃದ್ಧಿಗಾಗಿ ಪ್ರತೀ ವಲಯಗಳಿಗೂ ಅನುದಾನ ಕೊಡುತ್ತೇನೆ, ಅರಿಯಡ್ಕ ವಲಯಕ್ಕೆ ಒಂದು ಕೋಟಿ ರೂ ಅನುದಾನ ನೀಡುತ್ತೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಘೋಷಿಸಿದರು.
ಜಿಲ್ಲೆಯ ಬಿಜೆಪಿ ಶಾಸಕರು ಅಶೋಕ್ ರೈಯವರನ್ನು ನೋಡಿ ಕಲಿಯಿರಿ-ಎಂ.ಎಸ್ ಮುಹಮ್ಮದ್
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್ ಮಾತನಾಡಿ, ಕೇವಲ ಧರ್ಮದ ಬಗ್ಗೆ ಮಾತ್ರ ಮಾತನಾಡುವ ಬಿಜೆಪಿಯವರು ಜನರನ್ನು ನಿರಂತರವಾಗಿ ವಂಚಿಸುತ್ತಾ ಬಂದಿದ್ದು ನಯಾ ಪೈಸೆಯ ಅಭಿವೃದ್ಧಿ ಅವರಿಂದ ಆಗುತ್ತಿಲ್ಲ, ಜಿಲ್ಲೆಯ ಬಿಜೆಪಿಯ ಶಾಸಕರು ಕೂಡಾ ಅಭಿವೃದ್ಧಿ ಕೆಲಸವನ್ನು ಮಾಡದೇ ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ, ಮೆಡಿಕಲ್ ಕಾಲೇಜು ಸೇರಿದಂತೆ ಕೋಟಿ-ಕೋಟಿ ಅನುದಾನವನ್ನು ತಂದಿರುವ ನಮ್ಮ ಶಾಸಕ ಅಶೋಕ್ ರೈ ಅವರನ್ನು ಜಿಲ್ಲೆಯ ಬಿಜೆಪಿ ಶಾಸಕರುಗಳು ನೋಡಿ ಕಲಿಯಲಿ ಎಂದರು. ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಅರಿಯಡ್ಕ ಉತ್ಸವ ಯಶಸ್ವಿಯಾಗಿ ನಡೆದಿದ್ದು ಭಾರೀ ಜನ ಕೂಡಾ ಸೇರಿದ್ದಾರೆ, ಮುಂದಿನ ಗ್ರಾ.ಪಂ ಚುನಾವಣೆಯಲ್ಲಿ ಅರಿಯಡ್ಕ ಗ್ರಾ.ಪಂನಲ್ಲಿ ಬಿಜೆಪಿಯನ್ನು ತೊಳಗಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ಅದಕ್ಕಾಗಿ ಕಾರ್ಯಕರ್ತರು ಈಗಲೇ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಹೇಳಿದರು.
ಸುಳ್ಳು ಸುದ್ದಿ ಪ್ರಕಟಿಸುವ ಮಾಧ್ಯಮಗಳನ್ನು ಬಹಿಷ್ಕರಿಸಿ-ಅಮಳ ರಾಮಚಂದ್ರ
ದಿಕ್ಸೂಚಿ ಭಾಷಣ ಮಾಡಿದ ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಅವರು ಸರಕಾರ ಹಾಗೂ ಶಾಸಕರ ಅಭಿವೃದ್ಧಿ ಕಾರ್ಯವನ್ನು ಜನರಿಗೆ ತಿಳಿಸುವ ಉತ್ತಮ ಕೆಲಸ ಅರಿಯಡ್ಕ ಉತ್ಸವದಲ್ಲಿ ಆಗಿದೆ ಎಂದು ಶ್ಲಾಘಿಸಿದರು. ಕೇಂದ್ರದ ಬಿಜೆಪಿ ಸರಕಾರ ಇಡೀ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದೆ, ದೇಶದ ಬಹುತೇಕ ಮಾಧ್ಯಮಗಳು ಮಾರಾಟವಾಗಿದ್ದು ಮಡಿಲ ಮಾಧ್ಯಮಗಳು ಇಂದು ಕಾಂಗ್ರೆಸ್‌ನ್ನು ಟೀಕಿಸುತ್ತಾ ಬಿಜೆಪಿ ಪರವಾಗಿ ಬಹಿರಂಗವಾಗಿ ಕೆಲಸ ಮಾಡುತ್ತಿದೆ, ಸತ್ಯ ಸುದ್ದಿ ನೀಡಬೇಕಾದ ಮಾಧ್ಯಮಗಳು ಸುಳ್ಳನ್ನು ಬಿತ್ತರಿಸುವ ಮೂಲಕ ಕಾಂಗ್ರೆಸ್‌ನ್ನು ದೇಶದ್ರೋಹಿಗಳಂತೆ ಬಿಂಬಿಸಲು ಪ್ರಯತ್ನಿಸುತ್ತಿದೆ, ಇಂತಹ ಮಾರಿಕೊಂಡ ಮಾಧ್ಯಮಗಳನ್ನು ಯಾರೂ ವೀಕ್ಷಿಸಬಾರದು, ಸುಳ್ಳು ಸುದ್ದಿ ಪ್ರಕಟಿಸಿ ಬಿಜೆಪಿ ಪರ ಕೆಲಸ ಮಾಡುವ ಮಾಧ್ಯಮಗಳನ್ನು ಕಾಂಗ್ರೆಸ್‌ನವರು ಬಹಿಷ್ಕರಿಸಬೇಕು ಎಂದು ಅವರು ಹೇಳಿದರು.
ಧರ್ಮದಿಂದ ರಾಜಕೀಯ ದೂರವಾಗದೇ ದೇಶ ಉದ್ದಾರವಾಗಲ್ಲ-ದುರ್ಗಾ ಪ್ರಸಾದ್ ರೈ
ನ್ಯಾಯವಾದಿ ಕುಂಬ್ರ ದುರ್ಗಾ ಪ್ರಸಾದ್ ರೈ ಮಾತನಾಡಿ, ಕಾಂಗ್ರೆಸ್‌ನವರನ್ನು ಧರ್ಮ ವಿರೋಧಿಗಳು ಎಂಬ ಅಪಪ್ರಚಾರವನ್ನು ವಿರೋಧಿಗಳು ಮಾಡುತ್ತಾ ರಾಜಕೀಯ ಬೇಳೆ ಬೇಯಿಸುತ್ತಿದ್ದಾರೆ, ಧಾರ್ಮಿಕತೆಯಿಂದ ರಾಜಕೀಯ ದೊರೆ ಇಡುವವರೆಗೆ ದೇಶ ಉದ್ದಾರವಾಗಲು ಸಾಧ್ಯವಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಜನರಿಗೆ ಏನು ಕೊಟ್ಟರೂ ಅದನ್ನು ಜನರು ಬೇಗನೇ ಮರೆತು ಬಿಡುತ್ತಾರೆ, ಬಿಜೆಪಿಯವರ ಸುಳ್ಳಿನ ಮುಂದೆ ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಜನರು ಮರೆಯದಂತೆ ನಾವು ಎಚ್ಚರ ವಹಿಸಬೇಕಾಗಿದೆ’ ಎಂದು ಅವರು ಹೇಳಿದರು.
ಸುಳ್ಳಿನ ಮೂಲಕ ಬಿಜೆಪಿ ಜನರ ಹಾದಿ ತಪ್ಪಿಸುತ್ತಿದೆ-ಮಹಮ್ಮದ್ ಬಡಗನ್ನೂರು
ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ, ಕಾಂಗ್ರೆಸ್ ಪಕ್ಷದ ವಿಚಾರಧಾರೆಗಳಿಗೂ ಬಿಜೆಪಿಗೂ ಅಜಗಜಾಂತರ ವ್ಯತ್ಯಾಸವಿದ್ದು ಕಾಂಗ್ರೆಸ್ ಸತ್ಯ ಹಾಗೂ ನ್ಯಾಯದ ಮಾರ್ಗದಲ್ಲಿ ಮುಂದುವರಿಯುತ್ತಿದ್ದು, ಬಿಜೆಪಿ ದ್ವೇಷ, ಸುಳ್ಳಿನ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಧರ್ಮದ ಹೆಸರನ್ನು ಹೇಳಿಕೊಂಡು ಜನರನ್ನು ದಾರಿ ತಪ್ಪಿಸುತ್ತಿರುವ ಬಿಜೆಪಿ ಈ ದೇಶಕ್ಕೆ ಯಾವುದೇ ಕೊಡುಗೆ ನೀಡಿದ ಇತಿಹಾಸ ಇಲ್ಲ, ಗಾಂಧೀಜಿಯನ್ನು ಕೊಂದ ಗೋಡ್ಸೆ ಆರಾಧಿಸುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಅವರು ಹೇಳಿದರು. ಶಾಸಕ ಅಶೋಕ್ ರೈ ಅವರು ಎರಡೂವರೆ ವರ್ಷದ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿಯನ್ನು ಮಾಡಿದ್ದು ಜನರು ಕಾಂಗ್ರೆಸನ್ನು ಬೆಂಬಲಿಸಬೇಕು ಎಂದು ಅವರು ಹೇಳಿದರು.
ಕಾಂಗ್ರೆಸ್‌ನತ್ತ ಜನರ ಒಲವು-ಕೃಷ್ಣಪ್ರಸಾದ್ ಆಳ್ವ
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವಾ ಮಾತನಾಡಿ, ಸಿದ್ದರಾಮಯ್ಯ ಸರಕಾರದ 5 ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಜೀವನ ವಿಧಾನವನ್ನೇ ಬದಲಾಯಿಸಿದ್ದು ಜನರು ಇದೀಗ ಕಾಂಗ್ರೆಸ್‌ನತ್ತ ವಾಲುತ್ತಿದ್ದಾರೆ, ಪುತ್ತೂರಿಗೆ ಮೆಡಿಕಲ್ ಕಾಲೇಜು ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ತರುವ ಮುಖಾಂತರ ಅಭೂತಪೂರ್ವ ಅಭಿವೃದ್ಧಿಯನ್ನು ಮಾಡುತ್ತಿರುವ ಶಾಸಕ ಅಶೋಕ್ ರೈಯವರ ಕಾರ್ಯವೈಖರಿಯನ್ನು ಮೆಚ್ಚಿ ಪುತ್ತೂರಿನ ವಿವಿಧ ಕಡೆಗಳಲ್ಲಿ ಜನರು ಕಾಂಗ್ರೆಸಿನತ್ತ ಒಲವು ತೋರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಅರಿಯಡ್ಕ ಉತ್ಸವವನ್ನು ಹಾಡಿ ಹೊಗಳಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಅವರು ಇದು ಅರಿಯಡ್ಕ ಉತ್ಸವ ಅಲ್ಲ, ಇದು ಪುತ್ತೂರು ಉತ್ಸವ ರೀತಿಯಲ್ಲಿ ಆಗಿದೆ ಎಂದು ಶ್ಲಾಘಿಸಿದರು. ಗ್ರಾಮ ಮಟ್ಟದಲ್ಲಿ 25, 50 ಜನರನ್ನು ಸೇರಿಸಲು ಕಷ್ಟ ಆಗ್ತದೆ, ಅಂತದ್ರಲ್ಲಿ 400 ಜನರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದರೆ ಅದಕ್ಕೆ ಇಕ್ಬಾಲ್ ಹುಸೇನ್ ಅವರ ನಾಯಕತ್ವವೇ ಕಾರಣ. ಅನುದಾನದ ವಿಷಯದಲ್ಲಿ ನಮ್ಮ ಜೊತೆ ಹಾಗೂ ಶಾಸಕರ ಜೊತೆ ಜಗಳವಾಡುವ ಇಕ್ಬಾಲ್ ಹುಸೇನ್ ಅವರು ತಮ್ಮ ಗ್ರಾಮದ ಅಭಿವೃದ್ಧಿಗಾಗಿ ವಿಶೇಷ ಕಾಳಜಿ ವಹಿಸುತ್ತಿರುತ್ತಾರೆ. ಈ ರೀತಿಯ ವಲಯ ಅಧ್ಯಕ್ಷರು ಎಲ್ಲಾ ಕಡೆಗಳಲ್ಲೂ ಆಗಬೇಕಾದ ಅಗತ್ಯವಿದ್ದು ಈ ರೀತಿಯಲ್ಲಿ ಕಾರ್ಯಪ್ರವೃತ್ತಗೊಂಡರೆ ಮುಂಬರುವ ಗ್ರಾ.ಪಂ, ತಾ.ಪಂ, ಜಿ.ಪಂ ಚುನಾವಣೆಯಲ್ಲಿ ಗೆಲ್ಲುವುದು ದೊಡ್ಡ ವಿಷಯವೇ ಅಲ್ಲ ಎಂದು ಅವರು ಹೇಳಿದರು. ಎಲ್ಲಾ ವಲಯ ಕಾಂಗ್ರೆಸಿನ ಅಧ್ಯಕ್ಷರುಗಳೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಆದರೆ ಅರಿಯಡ್ಕ ವಲಯದ ಅಧ್ಯಕ್ಷ ಇಕ್ಬಾಲ್ ಹುಸೇನ್ ‘ಸೂಪರ್ ವಲಯ ಅಧ್ಯಕ್ಷ’ರಾಗಿದ್ದಾರೆ ಎಂದು ಅವರು ಬಣ್ಣಿಸಿದರು.
ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ಒಬ್ಬರು ಸಿಕ್ಕಿ ಮಾತನಾಡಿದಾಗ ನೀವು ಎಲ್ಲಿಯವರು ಎಂದು ಕೇಳಿದೆ, ನಾನು ಕೌಡಿಚ್ಚಾರಿನವರು ಎಂದರು. ಇಕ್ಬಾಲ್ ಹುಸೇನ್ ಪರಿಚಯ ಇದೆಯಾ ಕೇಳಿದೆ, ಆಗ ಅವರು ಹೌದು ಪರಿಚಯ ಇದೆ, ಇಕ್ಬಾಲ್ ಹುಸೇನ್ ಅವರು ನಮಗೆ ಅಕ್ರಮ ಸಕ್ರಮ, 94 ಸೀರಿದಂತೆ ಎಲ್ಲವನ್ನು ಮಾಡಿಸಿಕೊಟ್ಟಿದ್ದಾರೆ ಎಂದು ಹೇಳಿದಾಗ ನನಗೆ ಬಹಳ ಖುಷಿಯಾಯಿತು, ಇಕ್ಬಾಲ್ ಹುಸೇನರ ಕೆಲಸದ ಬಗ್ಗೆ ಹೆಮ್ಮೆಯಾಯಿತು ಎಂದು ಕೃಷ್ಣ ಪ್ರಸಾದ್ ಆಳ್ವ ಹೇಳಿದರು.
ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯುತ್ತಿದೆ-ನಝೀರ್ ಮಠ
ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ನಝೀರ್ ಮಠ ಮಾತನಾಡಿ, ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯುತ್ತಿದ್ದು ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ಮೂಲಕ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ, ಪುತ್ತೂರಿನಲ್ಲಿ ಶಾಸಕ ಅಶೋಕ್ ರೈಯವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಅಭಿವೃದ್ಧಿ ಮಾಡುತ್ತಿದ್ದಾರೆ, ಗ್ರಾಮ ಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಶಕ್ತಿಯುತವಾಗಿ ಕಟ್ಟುವ ಮೂಲಕ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಾಗಿದೆ ಎಂದು ಹೇಳಿದರು.
ಗ್ರಾಮದ ಅಭಿವೃದ್ಧಿಗೆ ಬೇಕಾಗಿ ಶಾಸಕರ ಜೊತೆ ಜಗಳವಾಡಿದ್ದೇನೆ-ಇಕ್ಬಾಲ್ ಹುಸೇನ್
ಪ್ರಾಸ್ತಾವಿಕವಾಗಿ ಮಾತನಾಡಿದ ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಅವರು ಶಾಸಕ ಅಶೋಕ್ ಕುಮಾರ್ ರೈಯವರು ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ನಮ್ಮ ಗ್ರಾಮಕ್ಕೆ ಐದು ಕೋಟಿ ರೂ ಅನುದಾನವನ್ನು ಒದಗಿಸಿಕೊಟ್ಟಿದ್ದಾರೆ. ಭಜನಾ ಮಂದಿರ, ಮಸೀದಿ, ಶಾಲೆ ಹೀಗೆ ಎಲ್ಲಾ ಕಡೆಗಳಿಗೂ ಅನುದಾನ ಕೊಡುವ ಮುಖಾಂತರ ಅವರು ಅಭಿವೃದ್ಧಿ ಹರಿಕಾರರಾಗಿ ಗುರುತಿಸಿಕೊಂಡಿದ್ದಾರೆ ಎಂದರು. ಅರಿಯಡ್ಕ ಉತ್ಸವದಲ್ಲಿ ಇಕ್ಬಾಲ್ ಹುಸೇನ್ ಕುಟುಂಬಸ್ಥರು ಮತ್ತು 25 ಮಂದಿ ಮಾತ್ರ ಅಲ್ಲಿ ಸೇರಬಹುದು ಎಂದು ಕೆಲವರು ವ್ಯಂಗ್ಯವಾಡಿದರು. ಆದರೆ ಇಂದು 500ರಷ್ಟು ಜನರು ಇಲ್ಲಿ ಸೇರಿದ್ದು ಅರಿಯಡ್ಕ ವಲಯ ಕಾಂಗ್ರೆಸ್‌ನ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದೆ ಎಂದು ಅವರು ಹೇಳಿದರು.
ನಾನು ನನಗಾಗಿ ಏನನ್ನು ಕೇಳಿಲ್ಲ, ನಮ್ಮ ಗ್ರಾಮಕ್ಕಾಗಿ, ಗ್ರಾಮದ ಅಭಿವೃದ್ಧಿಗಾಗಿ ಶಾಸಕರ ಜೊತೆ ಜಗಳವಾಡಿ ಅನುದಾನವನ್ನು ಕೇಳಿದ್ದೇನೆ, ನಾವು ಕೇಳಿದಾಗಲೆಲ್ಲ ನಮಗೆ ಶಾಸಕರು ಅನುದಾನ ಕೊಟ್ಟು ಸಹಕರಿಸಿದ್ದಾರೆ, ಈ ರೀತಿ ಅಭಿವೃದ್ಧಿ ಮಾಡುವಂತಹ ಶಾಸಕರು ನಮಗೆ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ ಎಂದು ಅವರು ಹೇಳಿದರು. ನಮ್ಮ ಬೇಡಿಕೆಗೆ ಸ್ಪಂದಿಸುವ ಶಾಸಕರನ್ನು ನಾವು ಯಾವತ್ತೂ ಕೈ ಬಿಡಬಾರದು, ಈ ಶಾಸಕರು ಮುಂದೆಯೂ ಶಾಸಕರಾಗಿ ಆಯ್ಕೆಯಾದರೆ ಇಡೀ ತಾಲೂಕಿನ ಚಿತ್ರಣವೇ ಬದಲಾಗಬಹುದು, ಅದಕ್ಕಾಗಿ ಶಾಸಕ ಜೊತೆ ನಾವೆಲ್ಲರೂ ಗಟ್ಟಿಯಾಗಿ ನಿಂತು ಅವರಿಗೆ ಶಕ್ತಿ ನೀಡಬೇಕು ಎಂದು ಅವರು ಹೇಳಿದರು.
ಅರಿಯಡ್ಕ ಗ್ರಾಮ ಪಂಚಾಯತ್ ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡಿದ್ದು ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ತೊಳಗಿಸಿ ಗ್ರಾ.ಪಂನಲ್ಲಿ ಕಾಂಗ್ರೆಸ್ ಅಧಿಕಾರ ಪಡೆಯಬೇಕು, ಆಗ ಮಾತ್ರ ಇಲ್ಲ ಅಭಿವೃದ್ಧಿಯನ್ನು ಕಾಣಲು ಸಾಧ್ಯ ಎಂದು ಅವರು ಹೇಳಿದರು.
ರಾಜೀವ್ ರೈ ಅವರಿಂದ ಉದ್ಘಾಟನೆ:
ಅರಿಯಡ್ಕ ವಲಯ ಅರಣ್ಯ ಸಮಿತಿ ಮಾಜಿ ಅಧ್ಯಕ್ಷ ರಾಜೀವ್ ರೈ ಕುತ್ಯಾಡಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಶಾಸಕರ ಅನುದಾನಗಳ ಅನಾವರಣ:
ಕಳೆದ ಎರಡುವರೆ ವರ್ಷದ ಅವಧಿಯಲ್ಲಿ ಶಾಸಕರು ಅಶೋಕ್ ಕುಮಾರ್ ರೈ ಅವರು ಅರಿಯಡ್ಕ ಗ್ರಾಮಕ್ಕೆ ನೀಡಿದ 5 ಕೋಟಿ ರೂ. ಅನುದಾನಗಳ ಸಂಪೂರ್ಣ ವಿವರಗಳನ್ನು ಒಳಗೊಂಡ ಅನುದಾನಗಳ ಪೋಸ್ಟರನ್ನು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಬಿಡುಗಡೆಗೊಳಿಸಲಾಯಿತು. ಗ್ರಾ.ಪಂ ವ್ಯಾಪ್ತಿಗೆ ಶಾಸಕರು ನೀಡಿದ ನೀಡಿದ ಅನುದಾನಗಳ ವಿವರಗಳನ್ನೊಳಗೊಂಡ ಪತ್ರವನ್ನು ಗ್ರಾಮದ ಪ್ರತೀ ಮನೆಗಳಿಗೂ ಮುಟ್ಟಿಸುವುದಾಗಿ ಇಕ್ಬಾಲ್ ಹುಸೇನ್ ಹೇಳಿದರು.
ಹಿರಿಯ ಕಾರ್ಯಕರ್ತರಿಗೆ ಸನ್ಮಾನ:
ಕಾಂಗ್ರೆಸ್ ಪಕ್ಷದ ಐದು ಮಂದಿ ಹಿರಿಯ ಕಾರ್ಯಕರ್ತರಾದ ಸೀತರಾಮ ರೈ ಹೊಸಗದ್ದೆ, ಚೋಮ, ಐತ್ತ, ಯೂಸುಫ್ ಹಾಜಿ ಬಂಡಸಾಲೆ, ವೇಳಾಯಿ ಮಾರಿಮುತ್ತು, ಸೀತಮ್ಮ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು ಶಾಸಕ ಅಶೋಕ್ ಕುಮಾರ್ ಅವರು ಅವರನ್ನು ಸನ್ಮಾನಿಸಿ ಗೌರವಿಸಿದರು.
ಇಳಂತಾಜೆ ಸಂತೋಷ್ ರೈಗೆ ಗೌರವಾರ್ಪಣೆ:
ರೂ.5 ಕೋಟಿ ಶಾಸಕರ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿರುವ ಕೌಡಿಚ್ಚಾರು-ಇಳಂತಾಜೆ-ಕೆಯ್ಯೂರು ರಸ್ತೆ ಕಾಮಗಾರಿ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಕಾರ್ಯಪ್ರವೃತ್ತರಾಗಿರುವ ಇಳಂತಾಜೆ ಸಂತೋಷ್ ರೈಯವರನ್ನು ಶಾಸಕ ಅಶೋಕ್ ರೈಯವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಶಾಸಕರಿಗೆ ಭರ್ಜರಿ ಸ್ವಾಗತ:
ಶಾಸಕ ಅಶೋಕ್ ರೈಯವರು ಅರಿಯಡ್ಕ ಗ್ರಾಮಕ್ಕೆ ಐದು ಕೋಟಿ ರೂ ಅನುದಾನ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಭರ್ಜರಿಯಾಗಿ ಸ್ವಾಗತಿಸುವ ಕಾರ್ಯಕ್ರಮ ನಡೆಯಿತು. ಶಾಸಕರು ಬಂದು ಕಾರಿನಿಂದ ಇಳಿಯುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಈ ವೇಳೆ ಆರತಿ ಬೆಳಗಿಸಿ ಸ್ವಾಗತಿಸಲಾಯಿತು. ಸಿಆರ್‌ಸಿ ನಿವಾಸಿಗಳಾದ ನಾಗಮ್ಮ, ಪೇಚಾಯಿ, ವಿಜಯ, ಸೆಲ್ವರಾಣಿ ಹಾಗೂ ದೇವಿಕಾ ಆರತಿ ಬೆಳಗಿಸಿದರು. ಬಳಿಕ ಶಾಸಕರನ್ನು ಕೌಡಿಚಾರ್ ಜಂಕ್ಷನ್‌ನಿಂದ ಅರಿಯಡ್ಕ ಉತ್ಸವದ ವೇದಿಕೆಯವರೆಗೆ ಬ್ಯಾಂಡ್ ವಾದ್ಯಗಳೊಂದಿಗೆ ಕರೆ ತರಲಾಯಿತು.
ನೂರಾರು ಮಂದಿ ಭಾಗಿ:
ಕಾರ್ಯಕ್ರಮದಲ್ಲಿ ಸುಮಾರು 500 ರಷ್ಟು ಮಂದಿ ಭಾಗವಹಿಸಿದ್ದರು. ಭಾಗವಹಿಸಿದವರಿಗೆ ತಂಪು ಪಾನೀಯ, ಮಜ್ಜಿಗೆ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು
ಬ್ಲಾಕ್ ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ನರಿಮೊಗರು, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಕಾಯಾಧ್ಯಕ್ಷೆ ಚಂದ್ರಪ್ರಭಾ ಗೌಡ ನೀರ್ಪಾಡಿ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ನೆ.ಮುಡ್ನೂರು ಗ್ರಾ.ಪಂ ಸದಸ್ಯ ಶ್ರೀರಾಮ್ ಪಕ್ಕಳ, ಬಡಗನ್ನೂರು ಗ್ರಾ.ಪಂ ಸದಸ್ಯ ರವಿರಾಜ್ ರೈ ಕುತ್ಯಾಡಿ, ಬೃಜೇಶ್ ಶೆಟ್ಟಿ, ಇಬ್ರಾಹಿಂ ಗೋಳಿಕಟ್ಟೆ, ಕುಂಬ್ರ ಸಿ.ಎ ಬ್ಯಾಂಕ್ ಮಾಜಿ ನಿರ್ದೇಶಕ ಸತೀಶ್ಚಂದ್ರ ರೈ ಗೋಳ್ತಿಲ, ಅರಿಯಡ್ಕ ಗ್ರಾ.ಪಂ ಸದಸ್ಯ ಮೋನಪ್ಪ ಪೂಜಾರಿ ಕೆರೆಮಾರು, ನೆ.ಮುಡ್ನೂರು ಗ್ರಾ.ಪಂ ಉಪಾಧ್ಯಕ್ಷ ರಾಮ ಮೇನಾಲ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನುತಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಮುಖರಾದ ಸಾರ್ಥಕ್ ರೈ, ಚಂದ್ರಶೇಖರ್ ಮಣಿಯಾಣಿ, ಮೋಹನ್ ದರ್ಬೆತ್ತಡ್ಕ, ವರದರಾಜ್ ಸಿಆರ್‌ಸಿ, ಯೂಸುಫ್ ಅಲ್ಫಾಝ್, ಸುಂದರ್ ನಿಧಿಮುಂಡ, ಜಯಂತಿ ಅರಿಯಡ್ಕ, ಗೋಪಾಲ ಪಾಟಾಳಿ ಮೊದಲಾದವರು ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು.ವಿದ್ಯಾರ್ಥಿನಿ ಅನ್ವಿತಾ ಪ್ರಾರ್ಥಿಸಿದರು. ಬೂತ್ ಅಧ್ಯಕ್ಷ ಬಶೀರ್ ಕೌಡಿಚ್ಚಾರ್ ಸ್ವಾಗತಿಸಿ ವಂದಿಸಿದರು.