ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ, ಸೇತುವೆಗಳ ಬೇಡಿಕೆ ಇದ್ದು ಲೋಕೋಪಯೋಗಿ ಇಲಾಖೆಯಿಂದ ಹೆಚ್ಚುವರಿ ಅನುದಾನ ನೀಡುವಂತೆ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿ ಹೊಳಿಯವರನ್ನು ಭೇಟಿಯಾಗಿ ಶಾಸಕ ಅಶೋಕ್ ರೈ ಬೇಡಿಕೆ ಇಟ್ಟರು.
ಸಚಿವರನ್ನು ಭೇಟಿಯಾದ ಶಾಸಕರು ಕರಾವಳಿ ಭಾಗದಲ್ಲಿ ವಿಪರೀತ ಮಳೆಯಾಗುವ ಕಾರಣ ರಸ್ತೆಗಳು ಕೆಟ್ಟು ಹೋಗಿದೆ. ವರುಷಗಳ ಹಿಂದಿನ ಕೆಲವೊಂದು ಡಾಮಾರು ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ರಸ್ತೆ ನಿರ್ಮಾಣಕ್ಕೆ ಕ್ಷೇತ್ರದ ಜನರಿಂದ ಹೆಚ್ಚಿನ ಬೇಡಿಕೆ ಇದ್ದು, ಅನುದಾನದ ಕೊರತೆ ಇರುತ್ತದೆ. ಇಲಾಖೆಯಿಂದ ಹೆಚ್ಚುವರಿ ಅನುದಾನ ನೀಡಿದ್ದಲ್ಲಿ ಜನರ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗುತ್ತದೆ. ರಸ್ತೆ ಜೊತೆ ಸೇತುವೆಗಳ ನಿರ್ಮಾಣದ ಬೇಡಿಕೆಯೂ ಇದೆ ಎಂದು ಸಚಿವರ ಗಮನಕ್ಕೆ ತಂದರು.
ಹಾರಾಡಿ ರೈಲ್ವೇ ಸೇತುವೆ : 8 ಕೋಟಿ ಅನುದಾನದ ಬೇಡಿಕೆ
ಪುತ್ತೂರು ಉಪ್ಪಿನಂಗಡಿ ರಸ್ತೆಯು ಚತುಷ್ಪಥವಾಗಿ ಅಭಿವೃದ್ದಿ ಹೊಂದುತ್ತಿದ್ದು, ಹಾರಾಡಿಯಲ್ಲಿ ರೈಲ್ವೇ ಸೇತುವೆ ಇರುವ ಕಾರಣ ಅದನ್ನು ಅಭಿವೃದ್ದಿ ಹಾಗೂ ಅಗಲೀಕರಣ ಮಾಡುವ ಉದ್ದೇಶದಿಂದ ಈಗಾಗಲೇ 8.00 ಕೋಟಿ ರೂ ಬೇಡಿಕೆ ಇಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದ್ದು ಅನುದಾನವನ್ನು ಬಿಡುಗಡೆ ಮಾಡುವಂತೆ ಸಚಿವರಲ್ಲಿ ವಿನಂತಿಸಿದರು.
