ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಲಾವತ್ತಡಿ ಎಂಬಲ್ಲಿ ಹುಲ್ಲು ತೆಗೆಯುವ ಯಂತ್ರ ಚಲಾಯಿಸಿ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಗಾಯಗೊಳಿಸಿದ ಘಟನೆ ವರದಿಯಾಗಿದೆ.
ನೆಟ್ಟಣಿಗೆಮುಡ್ನೂರು ಮೈರೋಳಿ ನಿವಾಸಿ ಆನಂದ (40ವ) ಎಂಬವರು ಗಾಯಗೊಂಡವರು.ಅವರು ನೆರೆಮನೆಯ ಪ್ರಸಾದ್ ಎಂಬವರ ಜೊತೆಯಲ್ಲಿ ಕೆಲಸಕ್ಕೆ ಹೋಗುತ್ತಿರುವಾಗ ಲಾವತ್ತಡಿ ತಲುಪಿದಾಗ ರಸ್ತೆ ಬದಿಯಲ್ಲಿ ಹುಲ್ಲು ತೆಗೆಯುತ್ತಿದ್ದ ರಮೇಶ ಎಂಬವರು ಆನಂದ ಅವರ ಮೇಲೆ ಹುಲ್ಲು ತೆಗೆಯುವ ಯಂತ್ರವನ್ನು ಚಲಾಯಿಸಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಜೊತೆಗಿದ್ದ ಪ್ರಸಾದ್ ಅವರು ಬಿಡಿಸಲು ಬಂದಾಗ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆನ್ನಲಾಗಿದೆ.ಗಾಯಾಳು ಆನಂದ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ನೆಟ್ಟಣಿಗೆಮುಡ್ನೂರಿನ ಪ್ರದೀಪ್ ರೈ ಎಂಬವರ ಆದೇಶದಂತೆ ರಮೇಶ್ ಅವರು ಆನಂದ ಅವರ ಮೇಲೆ ಹುಲ್ಲು ತೆಗೆಯುವ ಯಂತ್ರವನ್ನು ಚಲಾಯಿಸಿ ಗಾಯಗೊಳಿಸಿರುವುದಾಗಿ ಆರೋಪಿಸಿ ದೂರು ನೀಡಲಾಗಿದ್ದು ಪುತ್ತೂರು ಗ್ರಾಮಾಂತರ ಪೊಲೀಸರು ರಮೇಶ್ ಮತ್ತು ಪ್ರದೀಪ್ ರೈ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
