ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

0

ಯುವಜನರನ್ನು ರಕ್ತದಾನ ಮಾಡುವಂತೆ ಪ್ರೇರೇಪಿಸಬೇಕಿದೆ: ಡಾ. ರಾಮಕೃಷ್ಣ ರಾವ್

ಪುತ್ತೂರು: ಇಂದು ವಿವಿಧ ಕಾರಣಗಳಿಗಾಗಿ ಪ್ರತಿ ಮೂರು ಸೆಕೆಂಡ್‌ಗೆ ಒಬ್ಬರಿಗೆ ರಕ್ತದ ಆವಶ್ಯಕತೆ ಉಂಟಾಗುತ್ತಿದೆ. ಇದನ್ನು ಪೂರೈಸುವ ಏಕೈಕ ದಾರಿ ರಕ್ತದಾನ. ನಮ್ಮಲ್ಲಿ ಶೇ.60ರಷ್ಟು ಮಂದಿ ರಕ್ತದಾನ ಮಾಡಲು ಶಕ್ತರಿದ್ದರೂ ಶೇ.5ರಷ್ಟು ಮಂದಿ ಮಾತ್ರ ರಕ್ತದಾನ ಮಾಡುತ್ತಿದ್ದಾರೆ. ಇದರಿಂದ ರಕ್ತದ ಕೊರತೆ ಉಂಟಾಗುತ್ತಿದೆ. ಆದರೆ ಇಂತಹ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಯುವಜನರನ್ನು ರಕ್ತದಾನ ಮಾಡುವಂತೆ ಪ್ರೇರೇಪಿಸುವುದರಿಂದ ರಕ್ತದ ಕೊರತೆ ನಿವಾರಿಸಬಹುದು ಎಂದು ಪುತ್ತೂರಿನ ರೋಟರಿ ಬ್ಲಡ್ ಬ್ಯಾಂಕ್ ನ ಆರೋಗ್ಯ ಅಧಿಕಾರಿ ಡಾ ರಾಮಕೃಷ್ಣ ರಾವ್ ಹೇಳಿದರು.


ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಯುವ ರೆಡ್ ಕ್ರಾಸ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರಿ ಕ್ಯಾಂಪಕೋ ಬ್ಲಡ್ ಬ್ಯಾಂಕ್ ಪುತ್ತೂರು ಮತ್ತು ಹೆಚ್ ಡಿ ಎಫ್ ಸಿ ಬ್ಯಾಂಕ್, ಪುತ್ತೂರು ಇದರ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ದೀಪಾವಳಿ ಬೆಳಗುವ ಮೂಲಕ ಚಾಲನೆ ನೀಡಿ, ನಂತರ ರಕ್ತದಾನದ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುವವರನ್ನು ಬದುಕಿಸಲು ರಕ್ತದಾನ ಮಾಡುವುದು ಸಮಾಜಮುಖಿ ಕಾರ್ಯಗಳಲ್ಲಿ ಒಂದು. ರಕ್ತದಾನ ಮಹಾದಾನ, ಒಂದು ಹನಿರಕ್ತ ಅಮೂಲ್ಯ ಜೀವದ ಉಳಿಯುವಿಕೆಗೆ ನೆರವಾಗಲಿದೆ. ರಕ್ತದಾನ ಮಾಡಬೇಕಾದರೆ ಗಂಡು ಹೆಣ್ಣು ಭೇದವಿಲ್ಲದೆ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿ ಹೊಸ ರಕ್ತದ ಸಂಚಲನವಾಗುತ್ತದೆ ಎಂದರಲ್ಲದೆ, ಯುವಜನರು ರಕ್ತದಾನ ಮಾಡುವಂತೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ. ಕೆ. ರವೀಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಪುತ್ತೂರು ರೋಟರಿ ಕ್ಲಬ್ ಸಿಟಿಯ ಅಧ್ಯಕ್ಷರಾದ ಉಲ್ಲಾಸ್ ಪೈ, ಹೆಚ್ ಡಿ ಎಫ್ ಸಿ ಬ್ಯಾಂಕ್, ಪುತ್ತೂರು ಇದರ ಸಹಾಯಕ ಮ್ಯಾನೇಜರ್ ಭಾಗ್ಯಶ್ರೀ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಅಕ್ಷತಾ ಎ. ಪಿ., ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಯುವ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ತಿಲಕ್ ಟಿ., ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜಕ ಲಕ್ಷ್ಮೀಕಾಂತ ಎ., ಸಹಾ ಸಂಯೋಜಕರಾದ ಕು. ರಕ್ಷಿತಾ ಉಪಸ್ಥಿತರಿದ್ದರು.

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿ ಸಂಯೋಜಕ ಶ್ರೀಕೃಷ್ಣ ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿ ಸಂಯೋಜಕ ಶ್ರೇಯಸ್ ರೈ ವಂದಿಸಿದರು. ವಿದ್ಯಾರ್ಥಿನಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೋಧಕ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ರಕ್ತದಾನ ಶಿಬಿರ ನಡೆದಿದ್ದು, ಸುಮಾರು 55 ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.

LEAVE A REPLY

Please enter your comment!
Please enter your name here