ಉಪ್ಪಿನಂಗಡಿ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ಸರಿಯಾಗಿ ಕಾಮಗಾರಿ ನಡೆಸದೇ ನಿರ್ಲಕ್ಷ್ಯ ವಹಿಸಿದ ಕಾರಣ ಇಲ್ಲಿನ ಬೈಪಾಸ್ ರಸ್ತೆಯ ನಟ್ಟಿಬೈಲ್ ಬಳಿ ಚರಂಡಿಯಲ್ಲಿ ನೀರು ನಿಲ್ಲುವಂತಾಗಿದ್ದು, ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಇದನ್ನು ಸರಿಪಡಿಸದಿದ್ದಲ್ಲಿ ಸರ್ವೀಸ್ ರಸ್ತೆ ಕಾಮಗಾರಿಗೆ ತಡೆಯೊಡ್ಡುವುದಾಗಿ ಎಚ್ಚರಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಬೈಪಾಸ್ ರಸ್ತೆಯ ನಟ್ಟಿಬೈಲ್ ಬಳಿ ಚರಂಡಿಗೆ ಸಣ್ಣ ಮೋರಿ ಹಾಕಲಾಗಿದ್ದು, ಅದು ಕೂಡಾ ಮಣ್ಣು ತುಂಬಿ ಬ್ಲಾಕ್ ಆಗಿತ್ತು. ಇದರಿಂದ ಚರಂಡಿಯಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗದ ಭೀತಿ ಹರಡಿತ್ತು. ಸುಮಾರು ಆರು ತಿಂಗಳಿನಿಂದ ಈ ಬಗ್ಗೆ ಗುತ್ತಿಗೆದಾರರಿಗೆ ಹೇಳಿದರೂ ಅವರು ಈ ಬಗ್ಗೆ ಕ್ಯಾರೇ ಎನ್ನಿರಲಿಲ್ಲ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ನಟ್ಟಿಬೈಲ್ ಸಂಪರ್ಕ ರಸ್ತೆಯ ಬಳಿ ಸರ್ವೀಸ್ ರಸ್ತೆ ಕಾಮಗಾರಿ ನಡೆಸುತ್ತಿದ್ದ ಸಂದರ್ಭ ಗ್ರಾ.ಪಂ. ಸದಸ್ಯ ಧನಂಜಯ ನಟ್ಟಿಬೈಲ್ ನೇತೃತ್ವದಲ್ಲಿ ಸ್ಥಳಕ್ಕೆ ಬಂದು ಮೊದಲು ಚರಂಡಿ ಕಾಮಗಾರಿ ಸರಿ ಮಾಡಿಕೊಡಿ. ಇಲ್ಲದಿದ್ದಲ್ಲಿ ಸರ್ವೀಸ್ ರಸ್ತೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಗುತ್ತಿಗೆದಾರ ಸಂಸ್ಥೆಯ ಎಂಜಿನಿಯರ್ಗಳು ಸ್ಥಳಕ್ಕೆ ಬಂದು ಇಲ್ಲಿನ ಎರಡು ಕಿ.ಮೀ. ಉದ್ದದ ಚರಂಡಿಯನ್ನು ಸುವ್ಯವಸ್ಥಿತವಾಗಿ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿ ಆಕ್ರೋಶಿತರನ್ನು ತಣ್ಣಗಾಗಿಸಿದರು.
ಈ ಸಂದರ್ಭ ವಕೀಲ ರಾಘವೇಂದ್ರ ನಾಯಕ್, ಸ್ಥಳೀಯರಾದ ಪ್ರಸಾದ್ ಬಂಡಾರಿ, ಗೋಪಾಲ ಸಪಲ್ಯ, ಉಮೇಶ ನಟ್ಟಿಬೈಲು ಮತ್ತಿತರರು ಉಪಸ್ಥಿತರಿದ್ದರು.
