Puttur Shree Mahalingeshwara Temple (ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು)

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು ದ.ಕ. 08251-230511

Website: putturmahalingeshwaratemple.kar.nic.in | Email: [email protected]

 

21ನೇಯ ಶತಮಾನದ ಆದಿಯಲ್ಲಿ ನಡೆದ ದೇಗುಲ ಸಮರ್ಪಣೆ:

ಇತಿಹಾಸದ ಪುಟ ಸೇರಿದ ಮಹಾಲಿಂಗೇಶ್ವರ ಸನ್ನಿಧಿ


ಪುತ್ತೂರು ಸೀಮೆಯಲ್ಲಿ ಸಹಸ್ರ ಸಂವತ್ಸರಗಳಿಗೊಮ್ಮೆ ಬರುವ ಅಪೂರ್ವವಾದ ಸಂಭ್ರಮ ಕಳೆದು ಸಂವತ್ಸರವೇ ಕಳೆದಿದೆ. ಮಹಾಲಿಂಗೇಶ್ವರ ದೇವರ ಆಲಯ ಪುನರ್ ನಿರ್ಮಾಣ, ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜೊತೆಗೆ ಅದ್ಧೂರಿಯ ಜಾತ್ರೋತ್ಸವದ ಸಂಭ್ರಮದ ನೆನಪು ಯಾವತ್ತೂ ಮಾಸಲಾರದು. ಅದೊಂದು ಅದ್ಭುತವಾದ ಧಾರ್ಮಿಕ ಪ್ರಕ್ರಿಯೆ! ೨೧ ನೇಯ ಶತಮಾನದ ಆದಿಯಲ್ಲಿ ನಡೆದ ದೇಗುಲ ಸಮರ್ಪಣೆ ಸಂಭ್ರಮ ಇತಿಹಾಸದ ಪುಟ ಸೇರಿದೆ. ಮುಂದಿನ ಪೀಳಿಗೆಗೆ ಬೇಕಾದ ದಾಖಲೆಗಳನ್ನು ಪೇರಿಸಿಡಲಾಗಿದೆ. ನಮ್ಮ ಜೀವಿತಾವಧಿಯಲ್ಲಿ ಬಲು ಅಪೂರ್ವವಾದ ಮತ್ತು ಅಪರೂಪವಾದ ಧಾರ್ಮಿಕ ಪ್ರಕ್ರಿಯೆಯೊಂದು ನಡೆದುಹೋಗಿ ನಾವೆಲ್ಲರೂ ಪಾವನರಾಗಿದ್ದೇವೆ,
ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ತಾಲೂಕಾಗಿರುವ ಪುತ್ತೂರು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ಬಹಳಷ್ಟು ಅಭಿವೃದ್ಧಿಯನ್ನು ಹೊಂದಿರುವ ಪ್ರದೇಶವಾಗಿದೆ. ಪುತ್ತೂರು ಸೀಮೆ ಅಂದರೆ ತುಳುನಾಡ ಪರಂಪರೆಯ ರಾಜಮನೆತನದ ಆಳ್ವಿಕೆಯ ಸಾಕ್ಷಿಯಾಗಿರುವ ೨ ಸಾವಿರ ಸೀಮೆಯೆಂದು ಕರೆಯಲ್ಪಡುತ್ತಿದ್ದ ೩೦ ಗ್ರಾಮಗಳನ್ನೊಳಗೊಂಡಿದ್ದ ಭೂಭಾಗ. ಇಂದು ಈ ಸೀಮೆಯ ಕೆಲ ಭಾಗಗಳು ಕೇರಳಕ್ಕೆ ಸೇರಿಕೊಂಡಿದೆ. ಪ್ರಮುಖ ಪಟ್ಟಣಗಳಾದ ಪುತ್ತೂರು ವಿಟ್ಲ ಮತ್ತು ಉಪ್ಪಿನಂಗಡಿಗಳಲ್ಲಿ ಕ್ರಮವಾಗಿ ಮಹಾಲಿಂಗೇಶ್ವರ, ಪಂಚಲಿಂಗೇಶ್ವರ ಮತ್ತು ಸಹಸ್ರಲಿಂಗೇಶ್ವರ ಹೆಸರಿನಲ್ಲಿ ಪೂಜಿಲ್ಪಡುತ್ತಿರುವ ಶಿವನ ಕ್ಷೇತ್ರಗಳಿಗೆ ಪರಸ್ಪರ ನಿಕಟವಾದ ಸಂಪರ್ಕಗಳಿವೆ. ಯಾವುದೇ ರಾಜ ನಮ್ಮ ಪ್ರದೇಶದ ಮೇಲೆ ದಂಡೆತ್ತಿ ಬಂದಾಗ ಅಥವಾ ಬ್ರೀಟಿಷರ ಆಡಳಿತದಲ್ಲಿ ಈ ದೇಗುಲಗಳಿಗೆ ಯಾವುದೇ ಸಂದಿಗ್ಧತೆಯಾಗದೆ, ಪೂಜಾದಿ ಕ್ರಿಯೆಗಳು ಸಂಪ್ರದಾಯನಿಷ್ಠವಾಗಿ ನಡೆದುಕೊಂಡು ಬಂದಿದೆ ಎಂದರೆ ಮಹಾಲಿಂಗೇಶ್ವರ ಪವಾಡ ಪುರುಷನಾಗಿದ್ದಾನೆ. ಸುಮಾರು ಒಂದು ಸಾವಿರಕ್ಕಿಂತಲೂ ಹೆಚ್ಚು ವರ್ಷಗಳ ಇತಿಹಾಸವನ್ನು ಈ ದೇವಸ್ಥಾನ ಹೊಂದಿದೆ ಎಂದು ಹಲವಾರು ದಾಖಲೆಗಳಿಂದ ತಿಳಿದುಬಂದಿದೆ.
ಪುತ್ತೂರಿನ ಭಕ್ತಾದಿಗಳ ನಂಬಿಕೆಯ ದೇವರು ಮಹಾಲಿಂಗೇಶ್ವರ ಸ್ವಾಮಿ. ಮಹಾಲಿಂಗೇಶ್ವರನ ಪರಿಸರ ಈಗ ಧರ್ಮ ಜಾಗೃತಿಯ ನಡೆಯಾಗಿದೆ. ಸತ್ಯ, ಧರ್ಮ, ನ್ಯಾಯ, ನೀತಿ ಪರಿಪಾಲನೆಯ ಶ್ರದ್ಧಾ ಕೇಂದ್ರವಾಗಿದೆ. ಪುತ್ತೂರಿನ ಪ್ರತಿ ಮನೆ, ಅಂಗಡಿ, ಕಛೇರಿಗಳಲ್ಲಿ ನ್ಯಾಯ ನೀಡುವ ಅಧಿದೇವತೆ ಮಹಾಲಿಂಗೇಶ್ವರನ ಫೋಟೊ ಇಟ್ಟು ಭಕ್ತಿಯ ಆರಾಧನೆ ನಡೆಯುತ್ತಿದೆ. ಮಾತ್ರವಲ್ಲದೆ ಪರವೂರಿನಲ್ಲಿರುವ ಪುತ್ತೂರಿನವರು ತಮ್ಮ ಮನೆ, ಕಛೇರಿ, ಕೇಂದ್ರ ಸ್ಥಾನಗಳಲ್ಲಿ ಆರಾಧ್ಯ ಮೂರ್ತಿ ಮಹಾಲಿಂಗೇಶ್ವರನ ಫೋಟೋ ಇಟ್ಟು ಆರಾಧಿಸುತ್ತಿರುವುದು ಕಂಡು ಬರುತ್ತದೆ. ಇಲ್ಲಿ ದೇಗುಲ ದರ್ಶಿಸದೆ ದೈನಂದಿನ ಕೆಲಸ ಆರಂಭವಾಗುವುದೇ ಇಲ್ಲ.
ದೇವಳದ ಎದುರು ಭಾಗದ ಗದ್ದೆಯ ಕೊನೆಯ ಭಾಗದಲ್ಲಿರುವ ಮೂಲ ನಾಗನ ಗುಡಿ ಸೇರಿದಂತೆ ದೇವಳದ ಬದಿಯಲ್ಲಿರುವ ನಾಗನ ಗುಡಿ, ನವಗ್ರಹಗಳ ಗುಡಿ, ಅಯ್ಯಪ್ಪ ಗುಡಿ ಹೀಗೆ ವಿವಿಧ ಸಾನಿಧ್ಯಗಳು ಭಕ್ತಾದಿಗಳ ಸಂಕಷ್ಟವನ್ನು ಈಡೇರಿಸುತ್ತಿವೆ. ವರ್ಷಗಳ ಹಿಂದೆ ನೂತನವಾಗಿ ನಿರ್ಮಿತವಾದ ದೇವಾಲಯದ ಶಿಲಾ ಹಾಸಿನ ಅಂಗಣದೊಳಗೆ ಗಣಪತಿಯ ಗುಡಿ, ದುರ್ಗಾಪರಮೇಶ್ವರಿಯ ಗುಡಿ, ಸುಬ್ರಹ್ಮಣ್ಯ ದೇವರ ಗುಡಿ, ಶಾಸ್ತಾವು (ಅಯ್ಯಪ್ಪ) ದೇವರ ಗುಡಿ, ವಸಂತ ಮಂಟಪ, ನೈವೇದ್ಯ ಕೋಣೆ ಕಲಾತ್ಮಕವಾಗಿದೆ. ದೇವರೆದುರು ಇದ್ದ ನಂದಿಯನ್ನು ಸ್ಥಾನ ಪಲ್ಲಟ ಮಾಡದೆಯೇ ಅದೇ ಸ್ಥಳದಲ್ಲಿ ಸುಂದರವಾದ ನಂದಿ ಮಂಟಪ, ಗೋಪುರದ ಹೊರಭಾಗದ ದಕ್ಷಿಣ ಆಗ್ನೇಯದಲ್ಲಿ ರಕ್ತೇಶ್ವರಿ ಗುಡಿಯಿದೆ. ಸುತ್ತುಗೋಪುರದ ಪಶ್ಚಿಮ ನೈರುತ್ಯ ಭಾಗದಲ್ಲಿ ಪ್ರಶ್ನೆಯಲ್ಲಿ ಕಂಡುಬಂದಂತೆ ಬದಲಾವಣೆ ಮಾಡದೆಯೇ ಉಳ್ಳಾಲ್ತಿ ದೇವಿಯ ನಡೆಬಾಗಿಲನ್ನು ಇರಿಸಲಾಗಿದೆ. ದೈವೀ ಶಕ್ತಿಗಳು ಇಲ್ಲಿ ಪ್ರಬಲವಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತವೆ.
ದಿನನಿತ್ಯ ದೇವಳಕ್ಕೆ ಬರುವ ಭಕ್ತರ ಸಂಖ್ಯೆ ಅಧಿಕ. ಯಾವುದೇ ಶುಭ ಕಾರ್ಯಕ್ಕೆ ಶ್ರೀ ಮಹಾಲಿಂಗೇಶ್ವರ ವಿಘ್ನವಿನಾಶಕನಾಗಿದ್ದಾನೆ. ದಿನನಿತ್ಯ ನಿಗದಿತ ಸಮಯದಲ್ಲಿ ಪ್ರಾತಃ ಮಧ್ಯಾಹ್ನ ರಾತ್ರಿ ಕಾಲಗಳಲ್ಲಿ ಪೂಜೆ ನಡೆಯುತ್ತದೆ. ವರ್ಷಂಪ್ರತಿ ಎಪ್ರಿಲ್ ೧೦ರಂದು ಧ್ವಜಾರೋಹಣಗೊಂಡು ೧೦ ದಿನಗಳ ವಿಜೃಂಭಣೆಯಿಂದ ನಡೆಯುವ ಜಾತ್ರೋತ್ಸವ ಜಗದಗಲದಲ್ಲಿ ಪ್ರಸಿದ್ಧಿ ಪಡೆದಿದೆ. ದೀಪಾವಳಿಯಿಂದ ಪತ್ತನಾಜೆ ತನಕ ಬಲಿ ಹೊರಡುವ ಸಂಪ್ರದಾಯವಿದೆ. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿ ತಿಥಿಯಂದು ನಾಗರ ಪಂಚಮಿ, ಸಿಂಹ ಮಾಸದ ಶುಕ್ಲಪಕ್ಷದ ಶ್ರವಣ ನಕ್ಷತ್ರಕ್ಕೆ ಸುಬ್ರಹ್ಮಣ್ಯನಿಗೆ ಉಪಾಕರ್ಮ, ಭಾದ್ರಪದ ಶುಕ್ಲಪಕ್ಷದ ಹಸ್ತಾ ನಕ್ಷತ್ರದಂದು ಕದಿರು (ಕೊರಳು) ತರುವುದು (ತೆನೆ ಉತ್ಸವ), ಭಾದ್ರಪದ ಶುಕ್ಲಪಕ್ಷದ ಚೌತಿ ತಿಥಿಯಂದು ಗಣೇಶಚತುರ್ಥಿ, ಅಶ್ವಯುಜ ಶುಕ್ಲಪಕ್ಷದ ಪಾಡ್ಯ ತಿಥಿಗೆ ಆರಂಭಗೊಂಡು ನವಮಿ ತಿಥಿಯವರೆಗೆ ನವರಾತ್ರಿ ಪೂಜೆ, ನವರಾತ್ರಿಯಲ್ಲಿ ಶ್ರೀ ದೇವರ ಮಹಾಪೂಜೆಯ ಬಳಿಕ ದುರ್ಗಾದೇವಿಯ ಮಹಾಪೂಜೆ, ಅಶ್ವಯುಜ ಅಮವಾಸ್ಯೆ ತಿಥಿಯಂದು ದೀಪಾವಳಿ, ಬಲೀಂದ್ರ ಹಾಕುವುದು, ಬಲಿ ಹೊರಡುವುದು, ಪ್ರತಿ ಸೋಮವಾರ ತಂತ್ರ ಸುತ್ತು ಹಾಗೂ ಕ್ಷೇತ್ರಪಾಲ ಪೂಜೆ, ಕಾರ್ತಿಕ ಮಾಸದ ಹಸ್ತ ನಕ್ಷತ್ರದ ದಿವಸ ಪೂಕರೆ ಉತ್ಸವ, ಕಾರ್ತಿಕ ಮಾಸದ ಅಮವಾಸ್ಯೆಯ ದಿನ ಲಕ್ಷದೀಪೋತ್ಸವ, ಧನುಸಂಕ್ರಮಣದ ಮರುದಿನ ಧನುಮಾಸ ಪ್ರಾರಂಭದಲ್ಲಿ ಉದಯಕ್ಕೆ (೪ ಗಂಟೆಗೆ) ಧನುಪೂಜೆ, ಮಕರಸಂಕ್ರಮಣ ಉತ್ಸವ, ಷಷ್ಠಿಪೂಜೆಯ ದಿನ ಸುಬ್ರಹ್ಮಣ್ಯನಿಗೆ ವಿಶೇಷವಾಗಿ ಮಧ್ಯಾಹ್ನಕ್ಕೆ ಮಹಾಪೂಜೆ ಇರುತ್ತದೆ. ಶಿವರಾತ್ರಿ ಉತ್ಸವ ವಿಶೇಷವಾಗಿ ನಡೆಯುತ್ತದೆ. ಹೀಗೆ ವರ್ಷಪೂರ್ತಿ ದೇವಾಲಯದಲ್ಲಿ ಇನ್ನಿತರ ದೈವ ದೇವರುಗಳಿಗೆ ವಿಶೇಷವಾದ ಸೇವೆ ಉತ್ಸವಗಳು ನಡೆಯುತ್ತವೆ.

ಸಂತೃಪ್ತನಾದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಸ್ವಾಮಿ

ಜಗದೊಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ಸ್ವಾಮಿ ಸಂತೃಪ್ತನಾಗಿದ್ದಾನೆ. ಸಮಸ್ತ ಭಕ್ತಾದಿಗಳ ಭಕ್ತಿಯ ಸೇವೆಯನ್ನು ಪಡೆದ ಪರಮೇಶ್ವರ ಪ್ರಸನ್ನವದನನಾಗಿ ಅನುಗ್ರಹಿಸುತ್ತಿದ್ದಾನೆ. ಸಹಸ್ರಾರು ವರ್ಷಗಳಿಗೊಮ್ಮೆ ನಡೆಯಬಹುದಾದ ಮಹದೋತ್ಸವವನ್ನು ಶಿಸ್ತು ಮತ್ತು ಶ್ರದ್ಧೆಯಿಂದ ಅಚ್ಚುಕಟ್ಟಾಗಿ ನಿರ್ವಹಿಸಿದ ಭಕ್ತಾದಿಗಳಲ್ಲಿ “ಇದು ತಮಗೆ ದೊರೆತ ಪೂರ್ವಜನ್ಮದ ಪುಣ್ಯದ ಫಲ” ಎಂಬ ಧನ್ಯತಾಭಾವ ಮೂಡಿದೆ. ಸೀಮೆಗೆ ಸೀಮೆಯೇ ಭಾಗವಹಿಸುವುದರ ಜೊತೆಗೆ ಊರ ಪರವೂರ ಭಕ್ತಾದಿಗಳ ಆಗಮನದಲ್ಲಿ ಪುತ್ತೂರಿನ ಬ್ರಹ್ಮಕಲಶೋತ್ಸವ ಧಾರ್ಮಿಕ ಕ್ಷೇತ್ರದಲ್ಲಿ ಹೊಸ ಚರಿತ್ರೆಯನ್ನು ನಿರ್ಮಿಸಿದೆ. ಮಹಾಲಿಂಗೇಶ್ವರನ ಪವಾಡಗಳೇ ಅದ್ಧೂರಿಯಾಗಿ ಮತ್ತು ಯಶಸ್ವಿಯಾಗಿ ನಡೆದ ಬ್ರಹ್ಮಕಲಶೋತ್ಸವಕ್ಕೆ ಸಾಕ್ಷಿಯಾಗಿ ಈಗ ಒಂದು ವರ್ಷವೇ ಕಳೆದಿದೆ.
ಎಲ್ಲಾ ಶಿವಮಯವಾಗಿದೆ. ಅಂದರೆ ಇಲ್ಲಿ ಪ್ರತಿಯೊಂದು ಕಾರ್ಯವೂ ಆತನ ಆಜ್ಞೆಯಂತೆಯೇ ನಡೆದಿದೆ. ಎಲ್ಲವೂ ಅತ್ಯಂತ ಶಾಂತಿಯುತವಾಗಿ ಜಾತಿ ಮತ ಭೇದವಿಲ್ಲದೆ ಸಾಮರಸ್ಯದ ಪ್ರತೀಕವಾಗಿ ಬ್ರಹ್ಮಕಲಶೋತ್ಸವದಲ್ಲಿ ಜನರು ಸಂಭ್ರಮಿಸಿ, ಆನಂದಿಸಿ, ಸಂತಸಪಟ್ಟದ್ದು ಪುತ್ತೂರಿನ ಇತಿಹಾಸದಲ್ಲಿ ಒಂದು ಸರ್ವಕಾಲಿಕ ದಾಖಲೆಯಾಗಿ ಗತಕಾಲ ಸೇರಿವೆ. ಇಲ್ಲಿ ನಡೆದಿರುವ ಪ್ರತಿಯೊಂದು ಕೆಲಸ ಕಾರ್ಯಗಳ ಹಿಂದೆ ಮಹಾಲಿಂಗೇಶ್ವರನ ಆಜ್ಞೆ ಮತ್ತು ಅನುಗ್ರಹವಿತ್ತು. ಆತನ ಆಜ್ಞೆಯನ್ನು ಪರಿಪಾಲಿಸಿ ಆತನೊಂದಿಗೆ ಕಾರ್ಯ ನಿರ್ವಹಿಸಿದ ಭಕ್ತಾದಿಗಳು ಧನ್ಯರಾಗಿದ್ದಾರೆ. ಆ ಕಾರಣವಾಗಿಯೇ ಅದೆಲ್ಲವೂ ದಾಖಲೆಗೆ ಸೇರಲೇಬೇಕು. ಬ್ರಹ್ಮ ಕಲಶೋತ್ಸವದಲ್ಲಿ ಸ್ವಯಂ ಸೇವಕರು ತಮ್ಮ ಪಾಲಿಗೆ ವಹಿಸಿದ ಜವಾಬ್ಧಾರಿಯನ್ನು ಶ್ರದ್ಧೆ, ಶ್ರಮ ಮತ್ತು ಶಿಸ್ತಿನಿಂದ ನಿರ್ವಹಿಸಿ, ಭಕ್ತಾದಿಗಳನ್ನು ಗೌರವಿಸಿರುವುದೇ ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಕಾರಣವಾಗಿದೆ. ಹನ್ನೆರಡು ದಿನಗಳಲ್ಲಿ ಸುಮಾರು ೧೦ ಲಕ್ಷಕ್ಕೂ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ವಿಶೇಷವಾದ ಕಲಾಕೃತಿಯಲ್ಲಿ ನಿರ್ಮಾಣವಾಗಿರುವ ನೂತನ ದೇಗುಲದ ಭವ್ಯತೆ ಮತ್ತು ಅಲ್ಲಿನ ಕಾರ್ಯಕ್ರಮ ಸಂಯೋಜನೆ, ಸ್ವಯಂಸೇವಕರ ಪರಿಶ್ರಮ, ಬ್ರಹ್ಮಕಲಶೋತ್ಸವದ ಅಚ್ಚುಕಟ್ಟಾದ ಸುವ್ಯವಸ್ಥೆಯನ್ನು ಕಣ್ತುಂಬ ಸವಿದು ಸಂತಸ ಪಟ್ಟಿದ್ದಾರೆ. ಆ ಸಂತಸವನ್ನು ತಾವು ಹೋಗಿರುವ ಕಡೆಗಳಲ್ಲಿ ತಿಳಿಸಿ ಅವರಲ್ಲಿ ಈ ದೇಗುಲದ ವಿಶಿಷ್ಠತೆಗಳನ್ನು ವರ್ಣಿಸಿ ಅವರನ್ನು ಕೂಡಾ ದೇಗುಲ ವೀಕ್ಷಿಸುವಂತೆ ಪ್ರೇರೇಪಿಸಿದ್ದಾರೆ. ಪರಿಣಾಮವಾಗಿ ಜಾತಿ ಕುಲ ಧರ್ಮಗಳ ಯಾವುದೇ ಬೇಧ-ಭಾವಗಳಿಲ್ಲದೆ ಸಮಾನತೆ ಸಾಮರಸ್ಯದ ಸಂಕೇತವಾಗಿ ಕ್ಷೇತ್ರಕ್ಕೆ ದೂರದೂರುಗಳಿಂದ ಜನ ಬರುತ್ತಲೇ ಇದ್ದಾರೆ. ದೇಗುಲವನ್ನು ವೀಕ್ಷಿಸುತ್ತಿದ್ದಾರೆ. ಒಮ್ಮೆ ನೋಡಿದರೆ ಮತ್ತೊಮ್ಮೆ, ಮತ್ತೊಮ್ಮೆ ನೋಡಿದರೆ ಮಗದೊಮ್ಮೆ ನೋಡುತ್ತಲೇ ಇರಬೇಕೆನ್ನುವ, ಮತ್ತೆ ಮತ್ತೆ ಅಲ್ಲಿಯೇ ಇರಬೇಕೆನ್ನುವ… ತಿರುತಿರುಗಿ ಅಲ್ಲಿಗೇ ಎಳೆದೊಯ್ಯುವ ವಿಶೇಷವಾದ ದೈವೀ ಶಕ್ತಿಯೇ ಕಲೆ ತುಂಬಿದ ಸಾನಿಧ್ಯ. ಕ್ಷೇತ್ರದ ತಂತ್ರಿಗಳವರ ತಪೋನಿಷ್ಠೆಯಲ್ಲಿ, ಭಕ್ತಾದಿಗಳ ಶ್ರದ್ಧಾ ಭಕ್ತಿಗೆ ಒಲಿದ ಮಹಾಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಪ್ರಸನ್ನನಾಗಿರುವುದರಿಂದಲೇ, ಇದೊಂದು ಭಕ್ತರನ್ನು ತನ್ನತ್ತ ಸೆಳೆಯುವ ಕೇಂದ್ರವಾಗಿದೆ. ಸಾನಿಧ್ಯ ವೃದ್ಧಿಯಾಗುತ್ತಲೇ ಜಿಲ್ಲೆಯ ಪವಿತ್ರ ಕ್ಷೇತ್ರಗಳಂತೆಯೇ ಭಕ್ತರಿಂದ ತುಂಬಿ ತುಳುಕುವ ಆ ಶಕ್ತಿ ಇಲ್ಲಿ ನೆಲೆಯಾಗಿ ಇಲ್ಲಿಗೆ ಜನಸಾಗರವೇ ಹರಿದುಬರಲಿರುವ ಕಾಲ ದೂರವಿಲ್ಲ. ಇದೊಂದು ಅದ್ಭುತವಾದ ಸಾನಿಧ್ಯ ಸೃಷ್ಠಿಯಾಗಿರುವ ಕ್ಷೇತ್ರವಾಗಿರುವುದರಿಂಲೇ ನಾಸ್ತಿಕನನ್ನು ಕೂಡಾ ಎಳೆದು ತರುವ ಚೈತನ್ಯ ಮಹಾಲಿಂಗೇಶ್ವರನಲ್ಲಿದೆ. ಇದು ಸಮಸ್ತ ಭಕ್ತಾದಿಗಳ ಧರ್ಮ ಜಾಗೃತಿಯ ನಡೆಯಾಗಿದ್ದು, ನ್ಯಾಯ-ಸತ್ಯ-ಧರ್ಮ ಪರಿಪಾಲನೆಯಾಗಿ ಸಮಾನತೆ ಸಾಮರಸ್ಯದ ಬೀಡಾಗಲಿದೆ.

ಪವಿತ್ರ, ಫಲಪ್ರದವಾದ ಊರು ಅಂದರೆ ಪುತ್ತೂರು! ಸ್ಥಳ ಐತಿಹ್ಯ

ಪ್ರಾಚೀನ ಕಾಲದಲ್ಲ್ಲಿ ಪುತ್ತೂರಿನ ಬಳಿಯ ಕಾಡು ಪ್ರದೇಶವಾಗಿದ್ದ ಕಬಕದ ಸಮೀಪದಲ್ಲಿ ಬೇಟೆಯಾಡಿ ಜೀವಿಸುವ ಕೆಲವು ಕುಟುಂಬಗಳು ನೆಲೆಸಿದ್ದವಂತೆ. ಅಲ್ಲೊಂದು ಕನಿಷ್ಟ ಜನರ ಪುಟ್ಟ ಪಾಳ್ಯವಿತ್ತು. ಆ ಸಂದರ್ಭಕ್ಕೆ ಈಗಿನ ಪುತ್ತೂರು ವಿಶಾಲವಾದ ಪ್ರದೇಶವಾಗಿದ್ದು, ಬೇಟೆಯ ಸಂದರ್ಭದಲ್ಲಿ ನಗರದ ಸ್ಥಳದಲ್ಲಿ ವಿಫುಲ ನೀರಿನ ಆಶ್ರಯ ಮತ್ತು ಫಲವತ್ತಾದ ಮಣ್ಣು ಇರುವುದನ್ನು ಪತ್ತೆ ಮಾಡಿದ ಒಂದೆರಡು ಕುಟುಂಬಗಳು ಪಾಳ್ಯದಿಂದ ಇಲ್ಲಿಗೆ ಆಗಮಿಸಿ, ಈ ಹೊಸ ಊರಿನಲ್ಲಿ (ಪುತ್+ಊರಿನಲ್ಲಿ) ವಾಸಿಸತೊಡಗಿದರಂತೆ. ನೈಸರ್ಗಿಕ ಸಂಪತ್ತುಗಳಿಂದ ಈ ಪ್ರದೇಶದಲ್ಲಿ ನೆಮ್ಮದಿ, ಸುಖವನ್ನು ಪಡೆದ ಕುಟುಂಬಗಳ ಜೀವನವನ್ನು ಅನುಸರಿಸಿ, ಆಕರ್ಷಿತರಾಗಿ ಬೇರೆ ಬೇರೆ ಪಾಳ್ಯಗಳಿಂದ ಹೆಚ್ಚು ಹೆಚ್ಚು ಜನರು ಇಲ್ಲಿ ನೆಲೆಸಲು ಪ್ರಾರಂಭಿಸಿದುದರಿಂದ ಈ ಪ್ರದೇಶ ಮೂಲಭೂತ ಆವಶ್ಯಕತೆಗಳನ್ನು ನಿರ್ಮಿಸಿಕೊಳ್ಳಬೇಕಾಯ್ತು. ಕುಡಿಯಲು ನೀರು, ನಡೆದಾಡಲು ದಾರಿ, ವಾಸಕ್ಕೊಂದು ಸೂರು, ಆರಾಧನೆಗೊಂದು ಗುಡಿಯ ಅನಿವಾರ್ಯತೆಯಾಯಿತು. ಆ ಸಂದರ್ಭಕ್ಕೆ ಊರಿನ ಮಧ್ಯಭಾಗದಲ್ಲಿ ಸಾರ್ವಜನಿಕ ಅನುಕೂಲತೆಗಾಗಿ ಶ್ರಮಸೇವೆಯ ಮೂಲಕ ತೋಡಿದ ಕೆರೆಯೇ (ದೇವಾಲಯದ ಕೆರೆ) ಪ್ರಥಮವಾದ ದೈವೀ ಶಕ್ತಿಯ ನೆಲೆಯಾಯಿತು ಎನ್ನಬಹುದಾಗಿದೆ. ಪುತ್ತೂರು ಬೆಳೆಯುತ್ತಾ ಬಂದು ಒಂದು ಚಿಕ್ಕ ಕೇರಿಯಾಯಿತು. ನಂತರ ಗ್ರಾಮವಾಗಿ, ಪಟ್ಟಣವಾಗಿ ಬೆಳೆಯಿತು. ಪಾಳ್ಯವಿದ್ದ ಸ್ಥಳವು ಮುಂದೆ ತೌಳವ ಉಚ್ಚಾರಣೆಗೆ ಪೂರಕವಾಗಿ ಈಗಿನ ‘ಪೊಳ್ಯ’ವಾಗಿರಬಹುದು.
ತಳಂಗೆರೆಯ ಶಾಸನವು ಕುಂಬಳೆ ಸೀಮೆಯಿಂದ ಪಶ್ವಿಮ ಘಟ್ಟಗಳ ಬುಡದವರೆಗಿನ ಭೂಭಾಗವನ್ನು ರಾಜ ಜನಸಿಂಹ ಆಳ್ವಿಕೆ ಮಾಡುತ್ತಿದ್ದನು, ಆತನ ರಾಜ್ಯದ ಬಹುಮಧ್ಯವಾಗಿರುವ ಈ ಪ್ರದೇಶವು ಊರು ಪುತ್ ಊರು ಇದಾಗಿದೆ ಎಂದು ಉದ್ಗರಿಸಿರುವುದಾದರೆ ಇದು ಅಂದಿನಿಂದ ಪುತ್ತೂರು ಆಗಿರಬೇಕು ಎನ್ನಲಾಗಿದೆ. ಅಥವಾ ಮುತ್ತು ಬೆಳೆದ ಊರು ಪುತ್ತೂರು ಆಯ್ತೇ, ಪುತ್ತು (ಮಗ) ಇದ್ದ ಊರು ಪುತ್ತೂರು ಆಯ್ತೇ, ಹತ್ತು ಊರಿನ ಪ್ರಮುಖ ಕೇಂದ್ರಸ್ಥಾನವಾಗಿ ಪತ್ತ್ ಊರು ಎಂದು ಸಂಭೋದಿಸಿ ಪತ್ತೂರು ಕ್ರಮೇಣವಾಗಿ ಪುತ್ತೂರು ಆಯ್ತೇ ಮೊದಲಾದ ಹೆಸರು ಬಂದಿರುವ ಗೊಂದಲಕ್ಕೆ ಸ್ಪಷ್ಟತೆ ಕಾಣಸಿಗುತ್ತಿಲ್ಲ. ಕ್ರಿಸ್ತಶಕ ೧೦ನೇ ಶತಮಾನದ ಶಾಸನದಲ್ಲಿಯೇ ಈ ಪ್ರದೇಶದ ಹೆಸರು ಸ್ಪಷ್ಟವಾಗಿ ಪುತ್ತೂರು ಎಂದು ಉಲ್ಲೇಖವಾಗಿರುವುದರಿಂದ ಪುತ್ತೂರು ಎಂಬ ಹೆಸರು ಬರಲು ಸರಿಯಾದ ಆಧಾರಗಳು ಸಿಕ್ಕಿಲ್ಲವಾಗಿರುವುದರಿಂದ ಒಂದು ವಿಶೇಷವಾದ ಪವಿತ್ರವಾದ ಪುಣ್ಯದ ಊರು ಇದಾಗಿತ್ತು ಎಂಬುವುದು ತಿಳಿದು ಬರುತ್ತದೆ. ಇಲ್ಲಿ ದೇವಾಲಯ ನಿರ್ಮಾಣಕ್ಕೆ ಮೊದಲೇ ಈ ಪ್ರದೇಶಕ್ಕೆ ಪುತ್ತೂರು ಎಂಬ ನಾಮಕರಣವಾಗಿರುವುದು ದಾಖಲೆಗಳಿಂದ ತಿಳಿದು ಬರುತ್ತದೆ. ಶಾಸನದಲ್ಲಿ ಹೇಳಿರುವಂತೆ ಪುತ್ತೂರುನ “ಊರ ಕಡೆಯ ತೊರೆಯ ತಡಿಯ ಕರೆಯ ಕಲ್ಲ ಮೋರದಿಂ, ಪುತ್ತೂರ ಪೋಲೆಯರಿಪ್ಪ ಕೇರಿ…ಕಲ್ಕಾಡ ಬೆಟ್ಟಂ ಸಮತಳಂ ಮಾಡಿ…ಕೆರೆಯಂ ಕಟ್ಟಿಸಿ”ದ ಪ್ರಸ್ತಾಪಗಳು ಬರುವಂತಾಗಿದೆ. ಮೇಲೆ ಹೇಳಿದ ಶಾಸನಗಳ ಪೈಕಿ ಎರಡನೆಯದಾಗಿ ಪುತ್ತೂರಿನ ೧೨ನೇ ಶತಮಾನದ ಸಾಧಾರಣ ಸಂವತ್ಸರದ ಶಾಸನವು ಆ ಕೆರೆಯಲ್ಲಿದ್ದ ಮೀನುಗಳನ್ನು ಹಿಡಿಯಬಾರದು ಎಂದು ಆದೇಶಮಾಡಿದೆ. (ಈಗಲೂ ಈ ಕೆರೆಯ ಮೀನುಗಳನ್ನು ಹಿಡಿಯಬಾರದೆಂಬ ಪ್ರತೀತಿಯಿದೆ) ಆದುದರಿಂದ ಕ್ರಿ.ಶ ೧೦ನೇ ಶತಮಾನದ ಅಂತ್ಯ ಅಥವಾ ೧೧ನೇ ಶತಮಾನದ ಆದಿಯಲ್ಲಿ ಹೊಸತಾಗಿ ಜನ ನಿವಾಸಕ್ಕೆ ಯೋಗ್ಯವಾಗಿ ಮಾರ್ಪಟ್ಟ ಹೊಸ ಊರೇ ಪುತ್ತೂರು ಎಂದು ತಿಳಿಯಬಹುದಾಗಿದೆ.
ಈ ಕ್ಷೇತ್ರದ ಪಶ್ಚಿಮ ಭಾಗದಲ್ಲಿರುವ ಕೆರೆಗೂ ಈ ಊರಿನ ಹೆಸರಿಗೂ ಅಭೇದ್ಯ ಸಂಬಂಧವಿದೆ. ಈ ಕೆರೆಯಲ್ಲಿ ಅನರ್ಘ್ಯ ವಸ್ತುಗಳು ಲಭಿಸುತ್ತಿತ್ತು. ಕೆರೆಯಲ್ಲಿ ಮುತ್ತು ಬೆಳೆಯುತ್ತಿದ್ದ ಕಾರಣ ಮುತ್ತೂರು ಎಂಬ ಹೆಸರು ಈ ಕ್ಷೇತ್ರಕ್ಕೆ ಇತ್ತು. ಅದೇ ಮುತ್ತೂರು ಪುತ್ತೂರಾಯಿತು. ಕ್ಷೇತ್ರದ ಭೂ ಸಂಬಂಧ ಹಾಗೂ ಚರಿತ್ರಾ ಸಂಬಂಧವಾಗಿಯೂ ಇರುವಂತಹ ದಾಖಲೆಗಳಲ್ಲಿ ಹಲವು ಕಾಲಘಟ್ಟದಲ್ಲಿ ತಿರುಚುವಿಕೆ ಸಂಭವಿಸಿದೆ ಎಂದು ೨೦೦೯ರಲ್ಲಿ ನಡೆಸಿದ ಅಷ್ಟಮಂಗಲ ಪ್ರಶ್ನೆಯಲ್ಲಿ ದೈವಜ್ಞರಿಂದ ತಿಳಿದು ಬಂದಿದೆ. ಮುತ್ತೂರು ಪುತ್ತೂರು ಆಗಿರುವುದನ್ನು ಸ್ಥಳನಾಮ ಪರಿಣತರು ಒಪ್ಪಿಕೊಳ್ಳುವುದಿಲ್ಲ. ಪುದು ಊರು ಪುತ್ತೂರಾಯಿತೆಂದು ಅವರ ಅಭಿಪ್ರಾಯ. ಈ ಪಟ್ಟಣ ಹಿಂದೆ ದೂರದ ಪೋಲ್ಯದಲ್ಲೋ ಸಾಲ್ಮರದಲ್ಲೋ, ಬಂಗರಸರ ಬೀಡು ಇದ್ದ ಬಲ್ನಾಡಿನಲ್ಲೋ ಇದ್ದಿರಬಹುದು. ಆಳರಸರು ತಮ್ಮ ಆಡಳಿತದ ಅನುಕೂಲಕ್ಕಾಗಿ ತಮ್ಮ ಕೇಂದ್ರ ಸ್ಥಾನವನ್ನು ದೇವಾಲಯವಿರುವ ಈ ಪ್ರದೇಶದಲ್ಲಿ ನಿರ್ಮಾಣ ಮಾಡಿದರು. ಬಳಿಕ ಹೊಸಲೂರು {ಪುದಲೂರು} ಪುತ್ತೂರೆಂದೇ ಇದನ್ನು ಕರೆದರು. ಒಟ್ಟು ಕೆರೆಯಿಂದಾಗಿ ಊರಿಗೆ ಹೆಸರು ಬರದೇ ಇದ್ದರೂ ಮಹಾಲಿಂಗೇಶ್ವರ ದೇವಾಲಯದಿಂದಾಗಿ ನಗರ ನಿರ್ಮಾಣವಾಯಿತು ಎನ್ನುತ್ತಾರೆ.

ಕ್ರಿ.ಶ. 12ನೇ ಶತಮಾನದ ಮೊದಲು ನಿರ್ಮಾಣಗೊಂಡ ದೇವಾಲಯ


ಕ್ರಿಸ್ತಶಕ ೧೧-೧೨ನೇ ಶತಮಾನದಷ್ಟು ಪ್ರಾಚೀನವಾಗಿರುವ ಸುಮಾರು ೧೧ ಶತಮಾನಗಳ ಇತಿಹಾಸ ಹೊಂದಿರುವ ಪುತ್ತೂರು ಸೀಮೆಯ ಮುಖ್ಯ ದೇಗುಲ ಶ್ರೀ ಮಹಾಲಿಂಗೇಶ್ವರ ದೇವಾಲಯ. ೧೧ ತಿಂಗಳುಗಳಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ತನ್ನ ಮೂಲ ಆಯವನ್ನು ಇರಿಸಿಕೊಂಡು ನೂತನ ತಾಂತ್ರಿಕತೆಯನ್ನು ಅಳವಡಿಸಿ ಭವ್ಯವಾಗಿ ಪುನರ್ ನಿರ್ಮಾಣಗೊಂಡಿದೆ. ಹತ್ತೂರಿನ ಭಕ್ತ ಸಮೂಹ ಸಂಕಲ್ಪ ಬದ್ಧರಾಗಿ ನಡೆಸಿದ ಬ್ರಹ್ಮಕಲಶೋತ್ಸವ ಬಾನೆತ್ತರಕ್ಕೆ ವಿಜೃಂಭಿಸಿದೆ. ನೂತನ ಧ್ವಜ ಸ್ತಂಭದಲ್ಲಿ ಧ್ವಜರೋಹಣವಾಗಿ ವೈಭವದ ಜಾತ್ರೋತ್ಸವ ನಡೆದಿದೆ.
ಸುಮಾರು ೧೧ ಶತಮಾನಗಳ ಹಿಂದೆ ಈ ಪ್ರದೇಶದ ಭಕ್ತಾದಿಗಳ ಬೇಡಿಕೆಗಳಿಗೆ ಮನ್ನಣೆಯಿತ್ತು, ಅಂದಿನ ಅರಸರ ಅಭೀಷ್ಟದಂತೆ ನಿರ್ಮಿಸಿರುವರೆನ್ನಲಾಗಿರುವ ಪುತ್ತೂರು ಸೀಮೆಯ ಎಲ್ಲಾ ಗ್ರಾಮಗಳನ್ನೊಳಗೊಂಡ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜಗದಗಲಕ್ಕೆ ಪ್ರಖ್ಯಾತಿ ಪಡೆದ ಪ್ರಾಚೀನ ದೇವಸ್ಥಾನ. ದೇಗುಲಕ್ಕೆ ಸಂಬಂಧಿಸಿದಂತೆ ಹಲವಾರು ಸ್ಥಳ ಐತಿಹ್ಯವಿರುವುದು ಕಾಣಬಹುದು.

ದೇವಾಲಯವು ಗಜಪೃಷ್ಠಾಕೃತಿಯಲ್ಲಿದ್ದುದರಿಂದ ಇದು ಕ್ರಿ.ಶ. ೧೨ನೇ ಶತಮಾನದ ಮೊದಲು ನಿರ್ಮಾಣಗೊಂಡ ದೇವಾಲಯವಾಗಿದೆ. ಅಂದರೆ ಕರ್ನಾಟಕದ ಸಾರ್ವಭೌಮರಾದ ಚಾಲುಕ್ಯರು ದೇವಾಲಯದ ನಿರ್ಮಾಣದಲ್ಲಿ ೧೨ನೇ ಶತಮಾನದವರೆಗೆ ಮಾತ್ರ ಗಜಪೃಷ್ಠಾಕೃತಿಯ ವಾಸ್ತು ರಚನೆಯನ್ನು ಅನುಸರಿಸುತ್ತಿದ್ದರು ಎಂಬ ವಿಚಾರ ದಾಖಲೆಗಳಿಂದ ಸಿಗುತ್ತದೆ.
ಅಲ್ಲದೆ ಕ್ರಿ.ಶ ೧೨ನೇ ಶತಮಾನದಲ್ಲಿ ಕರ್ನಾಟಕವನ್ನು ಆಳುತ್ತಿದ್ದ ಮಹಾ ಮಂಡಲೇಶ್ವರ ಹೊಯ್ಸಳ ವಿಷ್ಣುವರ್ಧನನ ಅನುಮತಿಯಿಂದ ಬರೆದಿದ್ದ ಶಿಲಾಶಾಸನವು ಈ ದೇವಾಲಯದ ಪ್ರಾಂಗಣದಲ್ಲಿರುವ  ಗುಡಿಯ ಬಳಿಯಲ್ಲಿ ದೊರೆತಿದ್ದು, ಅದು ಈ ದೇವಾಲಯವನ್ನು ಮತ್ತು ದೇವಾಲಯದ ಬಳಿಯಿರುವ ವಿಶಾಲವಾದ ಕೆರೆಯನ್ನು ಉಲ್ಲೇಖಿಸಿರುವುದರಿಂದ ಆಗಲೇ ಈ ದೇವಾಲಯವೂ, ಕೆರೆಯೂ ಕಟ್ಟಲ್ಪಟ್ಟಿದೆ ಮಾತ್ರವಲ್ಲದೆ ರಾಜನ ಅನುಮತಿ ಅಥವಾ ನೇತೃತ್ವದಲ್ಲಿಯೇ ಭಕ್ತಾದಿಗಳಿಂದ ನಿರ್ಮಾಣವಾಯಿತು ಎಂದು ತಿಳಿದುಬರುತ್ತದೆ.
ಶಾಸನದಲ್ಲಿ ಬಳಸಿರುವ ಅಕ್ಷರಗಳ ವಿನ್ಯಾಸ ಹಾಗೂ ಪ್ರಾಚೀನತೆಯ ಆಧಾರದ ಮೇಲೆ ೧೦ನೇ ಶತಮಾನದ ಅಂತ್ಯ ಕಾಲದ್ದೆಂದು ನಿರ್ಣಯಿಸಲ್ಪಟ್ಟ ತಳಂಗೆರೆಯ ಶಾಸನ ಹಾಗೂ ೧೨ನೇ ಶತಮಾನದ ಶಾಸನಗಳೆರಡೂ ಪುತ್ತೂರಿನಲ್ಲಿ ನಿರ್ಮಿಸಿದ ಒಂದು ಕೆರೆಯ ಕುರಿತು ಉಲ್ಲೇಖಿಸುವುದರಿಂದ ೧೦ನೇಯ ಶತಮಾನದಲ್ಲಿಯೇ ನಾಗರೀಕರ ಅಗತ್ಯತೆಗಳಿಗೆ ವಿಶಾಲವಾದ ಭೂಪ್ರದೇಶದ ಮಧ್ಯ ಭಾಗದಲ್ಲಿ ಸಣ್ಣದೊಂದು ಕೆರೆಯನ್ನು ನಿರ್ಮಿಸಿ ಕೊಂಡರು. ತದನಂತರ ಆರಾಧನೆಗಾಗಿ ಅದರ ಪಕ್ಕದಲ್ಲಿಯೇ ದೇಗುಲ ಪ್ರತಿಷ್ಠೆಯ ಸಂಕಲ್ಪ ವಾಗಿ ಆಡಳಿತೆದಾರರ ಅಪ್ಪಣೆ ಪಡೆದು ನಿರ್ಮಾಣ ಗೊಂಡಿರಬಹುದು. ನಂತರ ಊರಿನ ಉಳ್ಳವರು ಅದರ ಅಧಿಪತ್ಯವನ್ನು ಪಡೆದು ಪೂಜಾದಿ ಕೈಂಕರ್ಯ ಗಳನ್ನು ನಡೆಸಿಕೊಂಡು ಬಂದು ಇಂದಿಗೂ ಅದು ಪ್ರದೇಶದ ದೇವಾಲಯವಾಗಿರುವುದನ್ನು ಊಹಿಸಿಕೊಳ್ಳಬಹುದು. ಹಿಂದೆ ದೇವರ ಸೇವೆಯನ್ನು ನಟ್ಟೋಜಿ ಮನೆತನದವರು ಸಮಸ್ತರನ್ನು ಸೇರಿಸಿ ನೆರವೇರಿಸಿಕೊಂಡು ಬರುತ್ತಿದ್ದರೆಂಬುವುದು ಕೂಡಾ ಜನಜನಿತವಾದ ನಂಬಿಕೆ. ಆದರೂ ಇದು ಓರ್ವನ ಆಸ್ತಿಯಾಗಿರದೆ ಸಮಸ್ತ ಭಕ್ತಾದಿಗಳ ಭಕ್ತಿ ಶ್ರಮ ಸೇವೆಯ ಆರಾಧನಾ ಕೇಂದ್ರ ವಾಗಿರುವುದು ಕಂಡುಬರುತ್ತದೆ. ಆರಂಭದಲ್ಲಿ ದೇಗುಲವು ಭಕ್ತಾದಿಗಳ ಶ್ರಮದಿಂದಲೇ ನಿರ್ಮಾಣಗೊಂಡಿರುವುದರಿಂದಲೇ ಭಕ್ತರ ಶ್ರಮ ಭಕ್ತಿ ಸೇವೆಗೆ ಪ್ರಸನ್ನನಾಗುವ ಭಗವಂತ ಇಷ್ಟಾರ್ಥಗಳನ್ನು ಈಡೇರಿಸಿ ಭಕ್ತರ ಹೃದಯ ಮಂದಿರದಲ್ಲಿ ನೆಲೆಯಾಗಿರುವನು ಎಂದು ನಂಬಲಾಗಿದೆ.

ವರುಣ ಪೂಜೆಯಿಂದ ನೀರು ಉಕ್ಕೇರಿ ಕೆರೆ ತುಂಬಿತು: ದೇಗುಲದ ಕೆರೆಯ ಐತಿಹ್ಯ


ಪುತ್ತೂರು ಮಹಾಲಿಂಗೇಶ್ವರ ನ್ಯಾಯ ನೀತಿ ಪರಿಪಾಲನೆಯ ಶಕ್ತಿ ಸ್ವರೂಪ. ಹತ್ತು ಹಲವು ಐತಿಹ್ಯಗಳಿಂದ ಕಾರಣಿಕ ಪುರುಷನಾಗಿ ಕ್ಷೇತ್ರ ಪಾಲಕನಾಗಿ ಧರ್ಮದ ರಕ್ಷಕನಾಗಿ ಪ್ರದೇಶವನ್ನು ಸಮತೋಲನದಲ್ಲಿ ಪೊರೆಯುತ್ತಿದ್ದಾನೆ. ಊರ ಪರವೂರ ಸಾವಿರಾರು ಭಕ್ತರನ್ನು ದಿನನಿತ್ಯ ಆಕರ್ಷಿಸಿ ಅವರಿಂದ ಸೇವೆ ಪಡೆಯುತ್ತಿದ್ದಾನೆ. ದೇವಾಲಯ ಗಜಪೃಷ್ಠಾಕಾರದಲ್ಲಿದ್ದು, ವಿಶಾಲವಾದ ಅಂಗಣವನ್ನು ಹೊಂದಿದೆ. ಒಳಗಷ್ಟೇ ಅಲ್ಲ, ಆವರಣದ ಹೊರ ಭಾಗದಲ್ಲಿಯೂ ದೇವಾಲಯಕ್ಕೆ ಸಾಕಷ್ಟು ಜಾಗವಿದೆ. ದೇವಾಲಯಗಳ ಮುಂಭಾಗದಲ್ಲಿ ಜಲಾಶಯಗಳಿರುವುದು ಸಾಮಾನ್ಯ ಪದ್ಧತಿ. ಪುತ್ತೂರಿನಲ್ಲಿ ಮಾತ್ರ ಪಶ್ಚಿಮ ದಿಕ್ಕಿನಲ್ಲಿ ವಿಶಾಲವಾದ ಮತ್ತು ಆಳವಾದ ಪುಷ್ಕರಿಣಿ ದೇವಾಲಯದ ಹಿಂಭಾಗದಲ್ಲಿರುವುದು ವಿಶೇಷ. ಈ ಕೆರೆಯ ಕಾರಣದಿಂದಾಗಿಯೇ ಊರಿಗೆ ಪುತ್ತೂರು ಎಂಬ ಹೆಸರು ಬಂತೆಂಬ ಅತ್ಯಂತ ಜನಪ್ರಿಯವಾದ ಕತೆಯೊಂದಿದೆ.
ಕೆರೆಯ ಮಧ್ಯದಲ್ಲೊಂದು ಮಂಟಪ. ಇಲ್ಲಿ ಕೆರೆ ಉತ್ಸವವು ನಡೆಯುತ್ತದೆ. ಇದರ ನೀರು ಸದಾ ತಿಳಿಹಸಿರು. ಕೆರೆಗೆ ತಾಗಿಕೊಂಡು ವಿಶಾಲವಾದ ಎರಡು ಅಶ್ವತ್ಥ ವೃಕ್ಷಗಳಿವೆ. ಶತಮಾನಗಳ ಇತಿಹಾಸವಿರುವ ಈ ಮರಗಳು ಪೂಜ್ಯನೀಯವಾಗಿ, ಆಯಾಸಿಗರಿಗೆ ನೆರಳಾಗಿ, ಪಶು ಪಕ್ಷಿ ಬಾವಲಿಗಳಿಗೆ ಆಶ್ರಯದಾತನಾಗಿ ಬೆಳೆದು ನಿಂತಿದೆ. ಹಿಂದೆ ಕೆರೆಯನ್ನು ಆಳಕ್ಕೆ ತೋಡಿದಾಗ ನೀರು ಸಿಗಲಿಲ್ಲವಂತೆ. ದೈವಜ್ಞರಿಂದ ಪ್ರಶ್ನೆಯ ಮೂಲಕ ವಿಚಾರಿಸಿದ ಊರಿನ ಅರಸ ಕೆರೆಯಲ್ಲಿ ನೀರು ತುಂಬುವಂತೆ ವರುಣಪೂಜೆ ಮಾಡಿಸಿದನಂತೆ. ಬಳಿಕ ಕೆರೆಯೊಳಗೆ ಬ್ರಾಹ್ಮಣ ಸಂತರ್ಪಣೆ ನಡೆಯಿತು. ಬ್ರಾಹ್ಮಣರ ಭೋಜನ ಮುಗಿಯುತ್ತಿದ್ದಂತೆ ನೀರಿನ ಒರತೆ ಉಕ್ಕೇರಿ ಬಂತು. ಉಣ್ಣುತ್ತಿದ್ದವರು ಎಂಜಲೆಲೆಯನ್ನು ಅಲ್ಲೇ ಬಿಟ್ಟು ಓಡಿದರು. ಕೆರೆಯಲ್ಲಿ ನೀರು ತುಂಬಿತು. ಉಂಡವರು ಬಿಟ್ಟ ಎಲೆಗಳು ನೀರಿನಲ್ಲಿ ತೇಲುವ ಬದಲು ಮುಳುಗಿ ಮುತ್ತಿನ ಚಿಪ್ಪುಗಳು ಆದವು. ಎಲೆಯಲ್ಲಿ ಉಳಿದಿದ್ದ ಅನ್ನದ ಅಗುಳುಗಳು ಮುತ್ತುಗಳಾಗಿ ಮಾರ್ಪಾಡುಗೊಂಡವು. ಎಂಜಲೆಲೆಯಲ್ಲಿ ಉಳಿದಿದ್ದ ಒಂದೆಲಗ ಪತ್ರದ ಚಟ್ನಿಯ ಹಸಿರು ಬಣ್ಣದಿಂದಾಗಿ ನೀರು ಹಸಿರಾಯಿತು. ಇದರಲ್ಲಿ ಉಚಿಷ್ಟವು ಉಳಿದುಕೊಂಡಿರುವುದರಿಂದ ತೆಪ್ಪೋತ್ಸವ ಬಿಟ್ಟರೆ ಆಶುದ್ಧವಾದ ನೀರು ಇಂದಿಗೂ ಯಾವುದೇ ಉಪಯೋಗಕ್ಕೆ ನಿಷಿದ್ಧವಾಗಿದೆ. ಈ ಶತಮಾನದ ಆರನೇ ದಶಕದಲ್ಲೊಮ್ಮೆ ಈ ಕೆರೆಯ ನೀರು ಬಹಳಷ್ಟು ಬತ್ತಿ ಹೋಗಿದ್ದು ಇದರಲ್ಲಿದ್ದ ಕೆಸರು ಮಣ್ಣನ್ನು ತೆಗೆಯುತ್ತಿದ್ದಾಗ ಹಳೆಯ ಮುತ್ತಿನ ಚಿಪ್ಪುಗಳು ದೊರೆತಿವೆ ಎಂದು ಪ್ರತೀತಿ ಇದೆ. ಇಲ್ಲಿ ದೈವೀ ಶಕ್ತಿಯ ನೆಲೆಯನ್ನು ಜನ ಕಂಡುಕೊಂಡು, ಪಕ್ಕದಲ್ಲಿಯೇ ದೇಗುಲ ನಿರ್ಮಿಸಿದರೆಂಬ ಪ್ರತೀತಿಯಿದೆ. ಪರಿಣಾಮವಾಗಿ ಈ ಊರು ಮೌಕ್ತಿಕಾ ಪುರವಾಯಿತು. ಅಂದರೆ ಮುತ್ತಿನ ಊರು ಎಂದು ಕರೆಯಲ್ಪಟ್ಟಿತ್ತು. ಕ್ರಮೇಣ ಮುತ್ತೂರು ಆಗಿ ಈಗ ಪುತ್ತೂರು ಆಗಿದೆ ಎಂಬುದು ಹಿರಿಯರು ಹೇಳುವ ಮಾತು.
ಈ ಕೆರೆಯ ನೀರು ಆನೆಗಳಿಗೆ ವಿಷಯುಕ್ತವೆಂದು ಅಲ್ಲದೆ ಈ ಪ್ರದೇಶದಲ್ಲಿ ಆನೆಗಳ ಸಾಕಾಣಿಕೆ ಮಾತ್ರವಲ್ಲ ಆನೆಯ ಲಾಂಛನ ಕೂಡಾ ನಿಷಿದ್ಧವೆಂದು ನಂಬಲಾಗಿದೆ.

ದೈವೀ ಶಕ್ತಿಯಲ್ಲಿ ನೆಲೆಗೊಂಡ ಲಿಂಗ ದೇಗುಲ ನಿರ್ಮಾಣದ ಐತಿಹ್ಯ

 ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ನೆಲೆಯಾದ ಬಗ್ಗೆ ಹಲವಾರು ಕಥೆಗಳು ಕೇಳಿಬಂದರೂ, ಒಂದಕ್ಕೊಂದು ಪೂರಕವಾಗಿರುವುದು ಕಂಡು ಬಂದಿದೆ. ಪ್ರಾಚೀನ ಕಾಲಘಟ್ಟದಲ್ಲಿ ತನ್ನ ಜೀವನವನ್ನೇ ಮಹಾನ್ ಶಕ್ತಿ ಸ್ವರೂಪ ಶಿವನಿಗಾಗಿಯೇ ಮೀಸಲಾಗಿರಿಸಿ ತೀರ್ಥ ಯಾತ್ರೆಗಳನ್ನು ಮಾಡಿ ಭಗವಂತನ ಅರ್ಚನೆ, ಸ್ಮರಣೆಯಿಂದಲೇ ಕಾಲಕಳೆಯುತ್ತಿದ್ದ ಸಾಧ್ವಿಯೊಬ್ಬರು ಕಾಶಿ ಕ್ಷೇತ್ರದಿಂದ ತನ್ನ ಆರಾಧನೆಗಾಗಿ ಶಿವಲಿಂಗವೊಂದನ್ನು ತಂದಿದ್ದರಂತೆ. ದಾರಿಯಲ್ಲಿ ಮದ್ಯಾಹ್ನದ ಹೊತ್ತಿಗೆ ಉಪ್ಪಿನಂಗಡಿಗೆ ಬಂದ ಸಾಧ್ವಿಗಳು ಪುತ್ತೂರಿನ ಅರ್ಚಕರೋರ್ವರ ಪರಿಚಯವಾಗಿ ಕುಮಾರಧಾರ ನದಿಯಲ್ಲಿ ಸ್ನಾನಾದಿ ಕ್ರಿಯೆಗಳನ್ನು ಮಾಡುವಾಗ ತನ್ನಲ್ಲಿದ್ದ ಶಿವಲಿಂಗವನ್ನು ಅವರ ಕೈಗಿತ್ತು ಇದನ್ನು ನೆಲದಲ್ಲಿ ಇರಿಸಬಾರದೆಂದು ಹೇಳಿ ಹೋದರಂತೆ. ಬಹಳ ಹೊತ್ತು ಕಳೆದರೂ ಸಾಧ್ವಿಗಳು ಬರಲಿಲ್ಲವಂತೆ. ಅರ್ಚಕರು ತನ್ನೊಂದಿಗಿದ್ದ ಶಿವಲಿಂಗದೊಂದಿಗೆ ಪುತ್ತೂರು ತಲುಪಿದರಂತೆ. ಆ ದಿನ ಸೋಮವಾರವಾಗಿತ್ತು. ಶಿವಲಿಂಗದ ಪೂಜೆಗಾಗಿ ಪೂಜಾ ಸಾಮಾಗ್ರಿಗಳನ್ನು ಪಡೆಯಲೆಂದು ಅರ್ಚಕರು ಅರಮನೆಗೆ ತೆರಳಿದರಂತೆ. ಆ ಸಂದರ್ಭಕ್ಕೆ ಸೀಮೆಯನ್ನು ಆಡಳಿತ ಮಾಡುತ್ತಿದ್ದ ಜೈನಧರ್ಮದ ಬಂಗರಸುವಿನ ಸಹೋದರಿ ಪ್ರಸವ ವೇದನೆಯಿಂದ ನರಳುತ್ತಿದ್ದುದರಿಂದ ಅರಸು ಬಹಳ ದುಖಃಕ್ರಾಂತರಾಗಿದ್ದರು. ಅರಸನ ಸಂಕಷ್ಟವನ್ನು ನೋಡಿದ ಅರ್ಚಕರು ತನ್ನೊಂದಿಗಿದ್ದ ಶಿವಲಿಂಗಕ್ಕೆ ಪ್ರಾರ್ಥಿಸಿ ಅರಸನ ಸಹೋದರಿ ಪುತ್ರವತಿಯಾಗಲಿ ಎಂದು ಹರಸಿದರಂತೆ. ಅದರಂತೆ ಬಂಗರಸನ ಸಹೋದರಿ ಗಂಡು ಮಗುವಿಗೆ ಜನ್ಮ ನೀಡಿದಳು. ಅರಮನೆಯಿಂದ ಪಡೆದುಕೊಂಡ ಪೂಜಾ ಸಾಮಾಗ್ರಿಗಳೊಂದಿಗೆ ಅರ್ಚಕರು ಶಿವಲಿಂಗವನ್ನು ನೆಲದಲ್ಲಿಯೇ ಇರಿಸಿ ಪೂಜೆ ಮಾಡಿದರು ಎಂಬುವುದು ಒಂದು ಕಥೆಯಾದರೆ, ಬಹಳ ಹಿಂದೆ ತೀರ್ಥಯಾತ್ರೆಗೆ ಹೋಗಿದ್ದ ಓರ್ವ ಬ್ರಾಹ್ಮಣ ಪುತ್ತೂರು ಪ್ರದೇಶಕ್ಕೆ (ಈಗಿನ ಮಹಾಲಿಂಗೇಶ್ವರ ದೇವಾಲಯವಿರುವ ಜಾಗ) ಬಂದು ತಲುಪಿದನಂತೆ. ಯಾತ್ರೆ ಮುಗಿಸಿಕೊಂಡು ಬರುವಾಗ ಕಾಶಿಯಿಂದ ಒಂದು ಶಿವಲಿಂಗವನ್ನು ತನ್ನೊಡನೆ ತಂದಿದ್ದನಂತೆ. ಮಧ್ಯಾಹ್ನದ ಹೊತ್ತು ತನ್ನೊಡನೆ ತಂದಿದ್ದ ಶಿವಲಿಂಗವನ್ನು ಮರದಡಿಯ ನೆಲದ ಮೇಲಿಟ್ಟು ಪೂಜೆ ಸಲ್ಲಿಸಿ ತನ್ನ ಫಲಾಹಾರ ಮುಗಿಸಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡ. ಬಿಸಿಲು ಇಳಿಯುವ ಹೊತ್ತಿನವರೆಗೆ ಮರದಡಿಯಲ್ಲಿ ಮಲಗಿ ವಿಶ್ರಾಂತಿ ಪಡೆದು ಹೊರಡಲು ಸಿದ್ಧನಾಗಿ ಲಿಂಗವನ್ನು ತೆಗೆಯಲು ನೋಡಿದಾಗ ದೈವೀ ಶಕ್ತಿ ನೆಲೆಯಾಗಿ ಭೂಮಿಯೊಳಗೆ ಹೂತು ಹೋದ ಲಿಂಗ ಎತ್ತಿದರೆ ಬರಲಿಲ್ಲವಂತೆ. ತನ್ನ ಶಕ್ತಿ ಸಾಮರ್ಥ್ಯವನ್ನೆಲ್ಲಾ ಬಳಸಿ ಎರಡೂ ಕೈಗಳಿಂದ ಕೀಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಗ ಪುತ್ತೂರನ್ನು ಆಳುತ್ತಿದ್ದ ಬಂಗರಸರ ಅರಮನೆಗೆ ತೆರಳಿದ. ಬ್ರಾಹ್ಮಣ ಅರಸನಿಗೆ ದೂರು ಕೊಟ್ಟು ಆಳುಗಳನ್ನು ಕಳುಹಿಸಿ ಲಿಂಗವನ್ನು ಮೇಲಕ್ಕೆತ್ತಿಕೊಡುವಂತೆ ಕೇಳಿಕೊಂಡ. ಅರಸನ ಆಳುಗಳಿಂದಲೂ, ಸೈನಿಕರಿಂದಲೂ ಅಸಾಧ್ಯವಾದಾಗ ತನ್ನ ಪಟ್ಟದಾನೆಯೊಂದಿಗೆ ಈ ಅದ್ಭುತ ಶಕ್ತಿಯನ್ನು ಅರಸ ಕಣ್ಣಾರೆ ಕಾಣುವ ಸಲುವಾಗಿ ತಾನೂ ಕೂಡ ಆ ಜಾಗಕ್ಕೆ ಹೋದನಂತೆ. ಆನೆ ತನ್ನ ಸೊಂಡಿಲನ್ನು ಲಿಂಗಕ್ಕೆ ಸುತ್ತು ಹಾಕಿ ಎಳೆಯಲು ಯತ್ನಿಸಿದಾಗ ಆನೆಯು ಛಿದ್ರ ಛಿದ್ರವಾಗಿ ಅದರ ಅಂಗಾಂಗಗಳು ಬಹುದೂರ ದೂರಕ್ಕೆ ಎಸೆಯಲ್ಪಟ್ಟವಂತೆ. ಎಸೆಯಲ್ಪಟ್ಟ ಆನೆಯ ತಲೆ ಬಿದ್ದ ಸ್ಥಳಕ್ಕೆ ತಲೆಪ್ಪಾಡಿ, ಕೊಂಬು (ದಂತ) ಬಿದ್ದಲ್ಲಿಗೆ ಕೊಂಬೆಟ್ಟು, ಕಾಲು ಬಿದ್ದ ಜಾಗಕ್ಕೆ ಕಾರ್ಜಾಲ್, ಬೆನ್ನು{ಬೆರಿ} ಬಿದ್ದ ಜಾಗಕ್ಕೆ ಬೆರಿಪದವು, ಉಳಿದ ಕಾಯ {ಶರೀರ} ಬಿದ್ದ ಜಾಗ ಕಾಯರ್ ಮಜಲು ಎಂಬ ಹೆಸರಿನ ಸ್ಥಳಗಳಾದವು ಎಂಬ ಐತಿಹ್ಯವಿದೆ. ಪುತ್ತೂರಿನ ಸುತ್ತು ಮುತ್ತು ಈ ಸ್ಥಳಗಳನ್ನು ಈಗಲೂ ನಾವು ಕಾಣಬಹುದಾಗಿದೆ. ಶಿವನ ಕ್ರೋಧಕ್ಕೆ ಈಡಾದ ಗಜಸಂತತಿಗೆ ಇಂದಿಗೂ ಇಲ್ಲಿನ ಕೆರೆಯ ನೀರು ವಿಷಕಾರಿಯಾಗಿದೆ ಎಂದು ನಂಬಲಾಗಿದೆ.
ಆಗ ಅರಸ ದೈವೀ ಶಕ್ತಿಯ ಪ್ರಭಾವಕ್ಕೆ ಮಣಿದು ಲಿಂಗಕ್ಕೆ ಪೂಜೆ ಸಲ್ಲಿಸಿ ಸ್ಥಾಪನೆಗೊಂಡ ಲಿಂಗಕ್ಕೆ ಗುಡಿಯನ್ನು ನಿರ್ಮಿಸಿ ಮಹಾನ್ ಶಕ್ತಿಶಾಲಿಯಾದ ಈಶ್ವರನ ಲಿಂಗಕ್ಕೆ ಮಹಾಲಿಂಗೇಶ್ವರ ಎಂದು ಸಂಬೋಧಿಸಿ ಪೂಜಾ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬಂದಾಗ ಅವನ ಆಡಳಿತವು ಸುಖ ಸಮೃದ್ಧಿಯನ್ನು ಪಡೆದು ಪ್ರಜೆಗಳು ನೆಮ್ಮದಿಯಿಂದ ಜೀವನ ಸಾಗಿಸಿದರು ಎಂಬುವುದು ಮಹಾಲಿಂಗೇಶ್ವರ ದೇವರು ನೆಲೆಗೊಂಡ ಬಗ್ಗೆ ತಲೆತಲಾಂತರಗಳಿಂದ ಹೇಳಿಕೊಂಡು ಬಂದಿರುವ ಕಥೆ. ಆ ಕಾರಣವಾಗಿ ಯಾವುದೇ ಸಂದರ್ಭಕ್ಕೆ ಲಿಂಗವನ್ನು ಸ್ಥಾನಪಲ್ಲಟ ಮಾಡುವಂತಿಲ್ಲ ಎಂಬ ವಿಚಾರ ಅಷ್ಟಮಂಗಲದಿಂದ ಕೂಡಾ ತಿಳಿದು ಬಂದಿದೆ. ಮಹಾಲಿಂಗೇಶ್ವರನ ಲಿಂಗವನ್ನು ಮುಟ್ಟದೆಯೇ ದೇವಾಲಯ ನಿರ್ಮಿಸುವಂತೆ ದೈವಜ್ಞರಿಂದ ಪ್ರಶ್ನೆಯ ಮೂಲಕ ತಿಳಿದು ಬಂದಿರುವುದರಿಂದ ಅದೇ ಪ್ರಕಾರ ಲಿಂಗಕ್ಕೆ ಭದ್ರವಾದ ಪಂಜರ ಬಾಲಾಲಯ ನಿರ್ಮಿಸಿ ದೇವಾಲಯ ನಿರ್ಮಾಣಗೊಂಡಿದೆ.

ಗಜಪೃಷ್ಠ ಶೈಲಿಯ ಗರ್ಭಗೃಹ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯವನ್ನು ಸುಮಾರು ೧೧ ಅಥವಾ ೧೨ನೇ ಶತಮಾನದಲ್ಲಿ ಕಟ್ಟಲಾಗಿದೆ ಎಂದು ಹೇಳಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ದೇವಾಲಯದ ಗರ್ಭಗೃಹವು ಗಜಪಷ್ಠ ಶೈಲಿಯಲ್ಲಿದೆ. ಇದೀಗ ದೇವಾಲಯವು ಸಂಪೂರ್ಣ ಜೀರ್ಣೋದ್ಧಾರಗೊಂಡಿದ್ದರೂ ಗರ್ಭಗೃಹವನ್ನು ಗಜಪಷ್ಠ ಶೈಲಿಯಲ್ಲಿಯೇ ಪುನರ್ ನಿರ್ಮಿಸಲಾಗಿದೆ. ಗಜಪಷ್ಠ ಶೈಲಿಯನ್ನು ಕರ್ನಾಟಕದ ಸಾರ್ವಭೌಮರಾದ ಚಾಲುಕ್ಯರು ದೇವಾಲಯ ನಿರ್ಮಾಣದಲ್ಲಿ ೧೨ನೇ ಶತಮಾನದವರೆಗೆ ಮಾತ್ರ ಅನುಸರಿಸುತ್ತಿದ್ದರು ಎನ್ನುವುದು ಇತಿಹಾಸದಿಂದ ತಿಳಿದು ಬರುತ್ತದೆ.
೧೨ ನೇ ಶತಮಾನದ ನಂತರ ದೇವಾಲಯಗಳ ನಿರ್ಮಾಣದಲ್ಲಿ ಈ ಶೈಲಿಯನ್ನು ಅನುಸರಿಸದೇ ಇದ್ದುದರಿಂದ ಪುತ್ತೂರು ದೇವಾಲಯ ೧೨ ನೇ ಶತಮಾನದ್ದು ಎಂದು ಹೇಳಬಹುದಾಗಿದೆ. ಆದಿ ಶಂಕರಚಾರ್ಯರು ಧರ್ಮ ಜಾಗೃತಿಯ ಕಾರ್‍ಯಕ್ರಮಗಳಿಂದಾಗಿ ಆ ಕಾಲದಲ್ಲಿ ಹೆಚ್ಚಾಗಿ ಶಿವಾಲಯಗಳನ್ನು ಕಟ್ಟಿಸುತ್ತಿದ್ದರು. ಆ ನಂತರದ ಮಧ್ವಾಚಾರ್ಯರ ಕಾಲದಿಂದ (೧೩ನೇ ಶತಮಾನ) ವೈಷ್ಣವ ದೇವಾಲಯಗಳ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ಬಂತು ಎಂದು ಹೇಳಲಾಗಿದೆ. ಈ ಮಧ್ಯಕಾಲದಲ್ಲಿ ಕರ್ನಾಟಕದ ಸಾರ್ವಭೌಮರಾಗಿದ್ದ ಚಾಲುಕ್ಯರು ಶಿವಾಲಯಗಳನ್ನೆ ಕಟ್ಟಲು ಪ್ರೋತ್ಸಾಹಿಸುತ್ತಿದ್ದರು ಎಂದೂ ತಿಳಿದುಬರುತ್ತದೆ.

ಶಿವನೆದುರಿಗೆ ಮಂಡಿಯೂರಿ ಕಲ್ಲಾದ ನಂದಿ: ನಂದಿಯ ಐತಿಹ್ಯ

ಶಿವನು ನಂದಿವಾಹನ. ಶಿವನ ವಾಹನವಾಗಿರುವ ವೃಷಭವೊಂದು ಪೂರ್ವ ಕಾಲದಲ್ಲಿ ಗದ್ದೆಗಳಲ್ಲಿ ಬೆಳೆಯುತ್ತಿದ್ದ ಕೃಷಿಯನ್ನು ರಾತ್ರಿ ಕಾಲದಲ್ಲಿ ಎಲ್ಲಿಂದಲೋ ಇಳಿದು ಬಂದು ಮೇಯುತ್ತಿತ್ತಂತೆ. ಇದರಿಂದಾಗಿ ಬೆಳೆ ನಷ್ಟವಾದ ರೈತರು ನಂದಿಯನ್ನು ಹೊಡೆಯಲು ಕಾದು ಕುಳಿತಾಗ ಎಂದಿನಂತೆ ಬಂದ ನಂದಿ ಪೈರನ್ನು ಮೇಯಲು ಶುರು ಮಾಡಿತು. ಅದನ್ನು ಬೆನ್ನಟ್ಟಿದ ರೈತರು ಅದರ ಹಿಂಗಾಲನ್ನು ಕಡಿದೇ ಬಿಟ್ಟರು. ನಂದಿಯ ಅರ್ಧ ಕಾಲು ತುಂಡಾಗಿ ಹೊಲದಲ್ಲಿ ಬಿದ್ದು ಹೋಗಿ ಮೂರುವರೆ ಕಾಲಿನಿಂದ ನಂದಿ ಕುಂಟುತ್ತಾ ಬಂದು ಶಿವನೆದುರು ಮಂಡಿಯೂರಿ ಮಲಗಿತಂತೆ. ಶಿವನಿಗೆ ನಂದಿಯ ವೇದನೆ ಕಂಡು ಕನಿಕರವಾಗಿ ಮಲಗಿದಲ್ಲೇ ನಂದಿಯನ್ನು ಕಲ್ಲಾಗಿಸಿದ. ಆ ಸಂದರ್ಭಕ್ಕೆ ಮಹಾಲಿಂಗೇಶ್ವರನ ದೇವಾಲಯದಲ್ಲಿ ಜೀವಂತ ವೃಷಭವೊಂದು ಇತ್ತಂತೆ. ಮೇಯಲು ಹೋಗಿ ಬಂದು ಮತ್ತೆ ದೇವಾಲಯದಲ್ಲಿಯೇ ಇರುತ್ತಿತ್ತಂತೆ. ಈ ಘಟನೆ ನಡೆದಂದಿನಿಂದ ದೇವಾಲಯದಲ್ಲಿರುತ್ತಿದ್ದ ವೃಷಭ ಇಲ್ಲವಾಯಿತಂತೆ ದೇವರು ಕಲ್ಲಾಗಿಸಿದ ನಂದಿಯೇ ಅದು ಎಂದು ಜನರು ಭಯಭಕ್ತಿಯಿಂದ ನಂದಿಯನ್ನು ಪ್ರಾರ್ಥಿಸಿದರಂತೆ. ಈಗಲೂ ಮೂರುವರೆ ಕಾಲಿನ ನಂದಿ ಶಿವನ ಎದುರು ಕಲ್ಲಾಗಿ ಇರುವುದು ಮತ್ತು ತುಂಡಾದ ಕಾಲಿನ ಅರ್ಧ ಭಾಗ ಈಗಲೂ ದೇವಾಲಯದ ಎದುರಿನ ಗದ್ದೆಯಲ್ಲಿ ಕಲ್ಲಾಗಿ ಇರುವುದು ಕೂಡಾ ಜನರ ಬಾಯಲ್ಲಿರುವ ಒಂದು ಐತಿಹ್ಯ. ಅದಕ್ಕಾಗಿ ಶಿವ ಲಿಂಗದಂತೆ ನಂದಿಯ ವಿಗ್ರಹವನ್ನು ಕೂಡಾ ಮುಟ್ಟದೆಯೇ ಪಂಜರ ಬಾಲಾಲಯ ನಿರ್ಮಿಸಿ ಬ್ರಹ್ಮಕಲಶೋತ್ಸವ ಸಂದರ್ಭಕ್ಕೆ ನಂದಿ ಮಂಟಪದ ನಿರ್ಮಾಣವಾಗಿದೆ.

1916ರ ವರೆಗೆ ದೇವಾಲಯದ ಆಡಳಿತ ನಟ್ಟೋಜಿ ಮನೆತನದಲ್ಲಿತ್ತು

ಕಿಸ್ತಶಕ ೧೯೧೬ರ ವರೆಗೆ ದೇವಾಲಯದ ಆಡಳಿತ ನಟ್ಟೋಜಿ ಮನೆತನದಲ್ಲಿತ್ತು ಎಂಬುವುದನ್ನು ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಕಟಿತ ದಾಖಲೆಯೊಂದು ತಿಳಿಸುತ್ತದೆ. ಉಡುಪಿಯ ಇತಿಹಾಸ ತಜ್ಞ ದಿವಂಗತ ಪಿ. ಗುರುರಾಜ ಭಟ್ ಅವರ ೧೯೬೬ರಲ್ಲಿ ಪ್ರಕಟನೆಗೊಂಡ ಪುಸ್ತಕದಲ್ಲಿರುವಂತೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿರುವ ೧೩೫೩ನೇ ಶಕ ವರ್ಷದ ಶಿಲಾಶಾಸನದಲ್ಲಿ ” ಸ್ವಸ್ತಿ ಶ್ರೀ ಜಯಾಬ್ಯುದಯ ಶಕ ವರ್ಷ ೧೩೫೩ನೇ ವರ್ತಮಾನದ ವಿರೋಧಿಕೃತು ಸಂವತ್ಸರದ ಮಾರ್ಗಶಿರ ಶು. ೫ರಲ್ಲಿ ಶ್ರೀ ಮತ್ತು ವಿಜಯನಗರಿಯಲ್ಲು ಪ್ರತಾಪ ದೇವರಾಯರು ಚತು ಸಮುದ್ರವ ಪಾಲಿಸುವಲ್ಲಿ ಪ್ರಧಾನಿ ಹರಿಯಪ್ಪ ವಣ್ಣಾಯಕ ಊಡೆಯರ ನಿರೂಪದಿಂದ ಮಂಗ್ಳೂರು ರಾಜ್ಯವನ್ನು ದೇವರಾಜಗಳ ಮಗ ಅಂಣಪ್ಪಗಳು ಆಳುವಲ್ಲಿ ಪಾಡ್ಯಪ್ಪ ಅರಸರಾದ ಬಂಗರ ಸ್ಥಾನದಲ್ಲು ಪುತ್ತೂರು ಶ್ರೀ ಮಹಾ ದೇವರ ಸನ್ನಿಧಿಯಲ್ಲಿ ಅಚಂದ್ರಾರ್ಕ ಸ್ಥಾಯಿಯಾಗಿ ಥಿಲುನಾಡಿನ ನಾಡು ಗ್ರಾಮ ಮುಂತಾಗಿ ಮಾಡಿದ ಧರ್ಮಗಳ ಬರೆಸಿದ ಶಿಲಾ ಶಾಸನ ಕ್ರಮ ಎಂತೆಂದರೆ.. ದೇವರ ಪಾದ ಮೂಲಿನ ಸುಭಂಣನೇ ಮೊದಲಾದ ನಾಲ್ವರು ಪಾದ ಮೂಲಿಗಳ ನಿಲಿಸಿ ಮಾಡಿದ ಧರ್ಮಂಗಳ ವಿವರ. ಪುತ್ತೂರು ದೇವರಲ್ಲಿ ಪ. ಮೂವರು ಬ್ರಾಹ್ಮಣರ ಚತ್ರವ ನಡೆಸೂದೆಂದು ನಾಗಂಣ. ಪುತ್ತೂರು ದೇವರ ನಟ್ಟೋಜಿ ಮೊದಲಾದ ನಾಲ್ವರ ಪಾದ ಮೂಲಿಗಳ ಬಂಗರ ಮನುಷ್ಯ ಸಹವಾಗಿ. ಪುಳಿನಾ ನದಿ ತೀರದಿಂದ ಬಂದ ಅಣ್ಣ ತಮ್ಮಂದಿರಲಿ ನಟ್ಟೋಜಿ ಸುಭಂಣಗೆ ಬರಕೊಟ್ಟ ತಾಂಮ್ರ ಶಾಸನ ದಾರೆಪಟ್ಟಿ, ಕ್ರಮ ಎಂತೆಂದರೆ. ನಿಂಮ ಜೀವನಕ್ಕೆ ಪಾಡ್ಯವ ಅರಸರಾದ ಬಂಗರಿಂದ ಕ್ರಯಕ್ಕೆ ಕೊಂಡ ಕಂಬಳ ತಿಮಾರು ಮುಂತಾಗಿ ಯಿಂನೂರಯಿಪತ್ತ ಮೂರು ವರಹದ ಭೂಮಿಯನು ನಿಉ ಸಂತಾನ ಪಾರಂಪರವಾಗಿ ಬಾಳಿ ಅನುಭವಿಸಿ ಕಾಲಕಾಲಕೆಸಿಸ್ತನು ತೆತ್ತು ಬರಬಹುದೆಂದು ದಾನತ್ತ ಮಾಡಿ…” ಎಂಬುವುದಾಗಿದೆ.
ದಿ.ಗುರುರಾಜ ಭಟ್ಟರು ಉಲ್ಲೇಖಿಸಿದ ಶಾಸನವು ಪುತ್ತೂರು ಕ್ಷೇತ್ರದ ಇತಿಹಾಸದಲ್ಲಿ. ‘ನಟ್ಟೋಜಿ’ ವಂಶಸ್ಥರ ಇರುವಿಕೆ ಮತ್ತು ಕ್ಷೇತ್ರದಲ್ಲಿ ಅವರ ಪ್ರಧಾನ ಪಾತ್ರವನ್ನು ದಾಖಲೆ ಸಹಿತ ಎತ್ತಿ ತೋರಿಸುತ್ತದೆ. ಶಾಸನದಲ್ಲಿ ಪೊಳಲಿಯಿಂದ ಬಂದ ಅಣ್ಣ ತಮ್ಮಂದಿರಲ್ಲಿ ದೈವಭಕ್ತರಾದ ನಟ್ಟೋಜಿ ಸುಬ್ಬಣ್ಣರವರಿಗೆ ಬರೆದು ಧಾರೆ ಎರೆದು ಕೊಟ್ಟಿರುವ ತಾಮ್ರದ ಶಾಸನ ಎಂಬುವುದಾಗಿ ಸ್ಪಷ್ಟವಾಗಿದೆ. ನಟ್ಟೋಜಿಯವರು ಪೊಳಲಿಯ ಶ್ರೀ ರಾಜರಾಜೇಶ್ವರೀ ದೇವಿಯ ಪೂಜಕರಾಗಿದ್ದರು. ಆ ಕಾರಣವಾಗಿ ಪುತ್ತೂರಿನ ದೇಗುಲದೊಳಗೆ ತಮ್ಮ ಕುಲ ದೇವಿಯನ್ನು ಸ್ಥಾಪನೆ ಮಾಡಿದರು. ಈಗಲೂ ನಟ್ಟೋಜಿ ಮನೆತನವು ಪುತ್ತೂರಿನಲ್ಲಿದ್ದು ಅವರ ಕಂಬಳ ತಿಮಾರು ಗದ್ದೆ ದೇವಳದ ಎದುರು ಭಾಗದಲ್ಲಿದೆ. ದೇವಳದ ಸುತ್ತು ಮುತ್ತಲಿನ ಸ್ಥಳವು ನಟ್ಟೋಜಿ ಮನೆತನದ ರಾಜರಾಜೇಶ್ವರಿ ದೇವರ ಭಂಡಾರಕ್ಕೆ ಸೇರಿದೆ ಎಂಬುವುದು ಹಿಂದಿನಿಂದಲೂ ಹೇಳಿಕೊಂಡು ಬಂದ ಪ್ರತೀತಿ. ೧೯೬೮ರಲ್ಲಿ ಮಂಗಳೂರಿನ ಡಾ| ಅಚ್ಚುತ ಶರ್ಮರು ಬರೆದಿರುವ ಕ್ಷೇತ್ರಕ್ಕೆ ಸಂಬಂಧ ಪಟ್ಟ ಪುಸ್ತಕದಲ್ಲಿ ನಟ್ಟೋಜಿ ಮನೆತನದವರೇ ಶ್ರೀ ಮಹಾಲಿಂಗೇಶ್ವರ ದೇಗುಲ ನಿರ್ಮಾಣ ಮಾಡಿದವರು. ಅದರ ಸುತ್ತುಮುತ್ತಲಿನ ಜಮೀನುಗಳೆಲ್ಲವೂ ಅವರ ಒಡೆತನದಲ್ಲಿಯೇ ಇತ್ತು ಎಂಬುವುದನ್ನು ದಾಖಲಿಸಿದ್ದಾರೆ. ಅಲ್ಲದೇ ಜಾತ್ರೆಯ ನಂತರ ನಡೆಯುವ ಶ್ರೀ ಬಲ್ನಾಡು ಉಳ್ಳಾಳ್ತಿ ನಡಾವಳಿಯಲ್ಲಿ ಕುಡಿಪ್ಪಾಡಿ ಗ್ರಾಮದಲ್ಲಿರುವ ನಟ್ಟೋಜಿ ಮನೆತನದ ಒಂದು ಕುಟುಂಬದಿಂದ ಬಂಗಾರದ ಮಲ್ಲಿಗೆಯ ಮುಗುಳನ್ನು ದೈವಕ್ಕೆ ಒಪ್ಪಿಸುವ ಸಂಪ್ರದಾಯವು ಈಗಲೂ ನಡೆಯುತ್ತಿರುವುದು ದೈವಸ್ಥಾನ, ದೇವಾಲಯ ಮತ್ತು ನಟ್ಟೋಜಿ ಮನೆತನದ ಸಂಬಂಧವನ್ನು ತೋರಿಸುತ್ತದೆ.

ಸ್ಮಶಾನ ದಿಟ್ಟಿಸುತ್ತಿರುವ ರುದ್ರ ಕಾರಣಿಕದ ಶಕ್ತಿಯ ಸಂಚಯ

ಲಯಕರ್ತೃ ಸ್ಮಶಾನವಾಸಿ ನಿರಾಡಂಭರಿ ಶಿವನಿಗೆ ರುದ್ರಭೂಮಿಯ ಸಾಮೀಪ್ಯವೇ ಪ್ರಿಯವೆನಿಸುವುದು. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಸ್ಮಶಾನದ ಹತ್ತಿರದಲ್ಲೇ ವಾಸವಾಗಿದ್ದಾನೆ. ಸ್ಮಶಾನಕ್ಕೆ ನೇರ ಅಭಿಮುಖವಾಗಿ ದೃಷ್ಠಿಯನ್ನು ಹಾಕಿ ಪೂಜಿಸಲ್ಪಡುತ್ತಿರುವ ಶಿವನ ಮಹಿಮೆ ಇಲ್ಲಿ ಅಪಾರವಾದುದು. ಶ್ರೀ ವಿಶ್ವನಾಥ ಸ್ವಾಮಿಯ ಪುಣ್ಯ ಕ್ಷೇತ್ರ ಕಾಶಿಯನ್ನು ಹೊರತು ಪಡಿಸಿ ಮಿಕ್ಕ ಯಾವ ಶಿವಾಲಯವು ರುದ್ರ ಭೂಮಿಯ ಸನಿಹದಲ್ಲಿರುವುದು ಬಹಳ ಅಪರೂಪ. ಆದುದರಿಂದಲೇ ಈ ಕ್ಷೇತ್ರವು ಕಾಶೀ ಕ್ಷೇತ್ರದಷ್ಠೇ ಪರಮ ಪುಣ್ಯ ಪವಿತ್ರವಾದ ಸರ್ವಾಭಿಷ್ಟ ಪ್ರದಾಯಕ, ಶಕ್ತಿವರ್ಧಕ ಕ್ಷೇತ್ರವಾಗಿ ಮೂಡಿಬರುತ್ತಿದೆ.

…ದೇವಾಲಯದ ಒಳಾಂಗಣ…

ಒಳಾಂಗಣದಲ್ಲಿ ಐತಿಹಾಸಿಕ ಆಯವನ್ನು ಉಳಿಸಿಕೊಂಡು ಗಜಪೃಷ್ಠ ಶೈಲಿಯಲ್ಲಿ ಸಂಪೂರ್ಣ ಶಿಲಾಮಯವಾಗಿ ರಚನೆಯಾದ ೪೨ ಅಡಿ ಎತ್ತರದ ಎರಡು ಅಂತಸ್ತಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಭವ್ಯವಾಗಿ ಶೋಭಿಸುತ್ತಿದೆ. ವರ್ಷಗಳ ಹಿಂದೆ ನೂತನವಾಗಿ ನಿರ್ಮಿತವಾದ ದೇವಾಲಯದ ಶಿಲಾ ಹಾಸಿನ ಅಂಗಣದೊಳಗೆ ಗಣಪತಿಯ ಗುಡಿ. ದುರ್ಗಾಪರಮೇಶ್ವರಿಯ ಗುಡಿ, ಸುಬ್ರಹ್ಮಣ್ಯ ದೇವರ ಗುಡಿ, ಶಾಸ್ತಾವು (ಅಯ್ಯಪ್ಪ) ದೇವರ ಗುಡಿ, ವಸಂತ ಮಂಟಪ, ನೈವೇದ್ಯ ಕೋಣೆ ಇದೆ. ದೇವರೆದುರು ಇದ್ದ ನಂದಿಯನ್ನು ಸ್ಥಾನ ಪಲ್ಲಟ ಮಾಡದೆಯೇ ಅದೇ ಸ್ಥಳದಲ್ಲಿ ಸುಂದರವಾದ ನಂದಿ ಮಂಟಪ ನಿರ್ಮಿಸಲಾಗಿದೆ. ಸುತ್ತು ಗೋಪುರದಲ್ಲಿ ಆಗ್ನೇಯಕ್ಕೆ ದೈವಗಳ ಗುಡಿಯಿದೆ. ಗರ್ಭ ಗುಡಿಯ ಉತ್ತರ ಈಶಾನ್ಯಕ್ಕೆ ಪ್ರಸಾದ ಕೌಂಟರ್ ಮತ್ತು ಖಜಾನೆ ಇದೆ. ದೇಗುಲದ ಎದುರಿಗೆ ತಾಮ್ರ ಮುಚ್ಚಿದ ಧ್ವಜಸ್ತಂಭವಿದೆ. ತುಳಸೀ ಕಟ್ಟೆಯಿದೆ. ಬಾವಿಯಿದೆ. ಸುತ್ತುಗೋಪುರದ ಪಶ್ಚಿಮ ನೈರುತ್ಯ ಭಾಗದಲ್ಲಿ ಪ್ರಶ್ನೆಯಲ್ಲಿ ಕಂಡುಬಂದಂತೆ ಬದಲಾವಣೆ ಮಾಡದೆಯೇ ಉಳ್ಳಾಲ್ತಿ ದೇವಿಯ ನಡೆಬಾಗಿಲನ್ನು ಇರಿಸಲಾಗಿದೆ.

… ದೇಗುಲದ ಹೊರಾಂಗಣ ಸುತ್ತು ಮುತ್ತು ….

ಶ್ರೀ ಮಹಾಲಿಂಗೇಶ್ವರ ದೇಗುಲದ ಹೊರಾಂಗಣದಲ್ಲಿ ಈಶಾನ್ಯಕ್ಕೆ ಉತ್ಸವ ಕಟ್ಟೆಯಿದ್ದು, ಅದರಲ್ಲಿ ದೇವರು ವಿಷು ಸಂಕ್ರಮಣ ಮತ್ತು ಏಪ್ರಿಲ್ ೧೬ನೇ ತಾರೀಕು ಕೆರೆಕಟ್ಟೆ ಉತ್ಸವದಂದು ಕಟ್ಟೆ ಪೂಜೆ ಕೈಗೊಳ್ಳುತ್ತಾರೆ. ಆಗ್ನೇಯಕ್ಕೆ ವಸಂತ ಮಂಟಪವಿದ್ದು, ದೇವರು ಹೊರಾಂಗಣಕ್ಕೆ ಬರುವ ಪ್ರತೀ ಬಾರಿಯೂ ಆ ವಸಂತ ಕಟ್ಟೆಯಲ್ಲಿ ಪೂಜೆ ಕೈಗೊಳ್ಳುತ್ತಾರೆ. ದಕ್ಷಿಣ ಆಗ್ನೇಯಕ್ಕೆ ರಕ್ತೇಶ್ವರಿ ಗುಡಿಯಿದ್ದು, ದೇಗುಲವನ್ನು ಕಾಯುವ ಶಕ್ತಿಯಾಗಿ ಈ ದೈವವು ಇಲ್ಲಿ ನೆಲೆ ನಿಂತಿರುವುದಾಗಿದೆ. ದೇವಾಲಯದ ನೈರುತ್ಯ ಭಾಗದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದ ಬಳಿಯಿರುವ ಕಟ್ಟೆಯಲ್ಲಿ ದೇವರು ಅವಭೃತ ಸ್ನಾನಕ್ಕೆ ಹೋಗುವ ದಿವಸ ಈ ಕಟ್ಟೆಯಲ್ಲಿ ಪೂಜೆ ಕೈಗೊಳ್ಳುತ್ತಾರೆ. ಈ ಕಟ್ಟೆಯಲ್ಲಿ ಕುರ್ದಿನೀರು ಪ್ರೋಕ್ಷಣೆ ಮಾಡುವ ಸಂಪ್ರದಾಯವಿದ್ದು, ಈ ಕಟ್ಟೆಗೆ ಓಕುಳಿ ಕಟ್ಟೆ ಎಂದೂ ಕರೆಯುತ್ತಾರೆ. ವಾಯುವ್ಯದಲ್ಲಿ ಉತ್ಸವ ಕಟ್ಟೆಯಿದ್ದು, ಈ ಕಟ್ಟೆಯಲ್ಲಿ ದೇವರು ರಥೋತ್ಸವದ ದಿವಸ ಪೂಜೆ ಕೈಗೊಳ್ಳುತ್ತಾರೆ. ಈ ಕಟ್ಟೆಗೆ ಮಂಗನಕಟ್ಟೆ ಎಂದೂ ಹೆಸರಿದೆ. ಅಂದರೆ ಹಿಂದೆ ಈ ಕಟ್ಟೆಯ ತುಂಬಾ ಮಂಗಗಳು ಇದ್ದವು ಎಂಬುದರಿಂದ ಈ ಕಟ್ಟೆಗೆ ಹೆಸರು ಬಂದಿದೆಯಂತೆ.
ದೇವಾಲಯದ ಹಿಂಭಾಗದಲ್ಲಿ ಪವಿತ್ರವಾದ ವಿಶಾಲವಾದ ಕೆರೆಯಿದ್ದು, ಕೆರೆಯ ಮಧ್ಯದಲ್ಲೊಂದು ಮಂಟಪ. ಇಲ್ಲಿ ಕೆರೆ ಉತ್ಸವವು ನಡೆಯುತ್ತದೆ. ಇದರ ನೀರು ಸದಾ ತಿಳಿಹಸಿರು. ಕೆರೆಗೆ ತಾಗಿಕೊಂಡು ವಿಶಾಲವಾದ ಎರಡು ಅಶ್ವತ್ಥ ವೃಕ್ಷಗಳಿವೆ. ಶತಮಾನಗಳ ಇತಿಹಾಸವಿರುವ ಈ ಮರಗಳು ಪೂಜ್ಯನೀಯವಾಗಿ, ಆಯಸಿಗರಿಗೆ ನೆರಳಾಗಿ, ಪಶು ಪಕ್ಷಿ ಬಾವಲಿಗಳಿಗೆ ಆಶ್ರಯದಾತನಾಗಿ ಬೆಳೆದು ನಿಂತಿದೆ. ಕೆರೆಗೆ ಅಭಿಮುಖವಾಗಿ ದೇವರು ತೆಪ್ಪೋತ್ಸವ ಸಂದರ್ಭದಲ್ಲಿ ಆರಾಧನೆಗೊಳ್ಳುವ ಹೆಬ್ಬಾರ ಕಟ್ಟೆ ಇದೆ. ಕೆರೆಯ ಪಶ್ಚಿಮಕ್ಕೆ ಜಾತ್ರೆ ಸಂದರ್ಭದಲ್ಲಿ ದೇವರ ಭಂಡಾರ ಮತ್ತು ಲಕ್ಷದೀಪೋತ್ಸವ ಸಂದರ್ಭದಲ್ಲಿ ದೇವರು ಆರಾಧನೆಗೊಳ್ಳುವ ಲಲಿತ ಟೀಚರ್ ಕಟ್ಟೆ ಇದೆ. ದೇವಾಲಯದ ಪಶ್ಚಿಮ ನೈರುತ್ಯಕ್ಕೆ ಶಾರದಾ ಭಜನಾ ಮಂದಿರವಿದೆ. ಪಶ್ಚಿಮ ವಾಯುವ್ಯಕ್ಕೆ ಕಿರಿಯ ಪ್ರಾಥಮಿಕ ಶಾಲೆಯಿದೆ. ವಾಯುವ್ಯಕ್ಕೆ ಉಮಾಮಹೇಶ್ವರಿ ಸಂಗೀತ ಶಾಲೆಯಿದೆ. ಅದರ ಹಿಂದಕ್ಕೆ ಬಸವನ ಕೊಟ್ಟಿಗೆಯಿದೆ.
ದೇವಾಲಯದ ಹೊರಾಂಗಣದ ಈಶಾನ್ಯಕ್ಕೆ ಎದುರಿನ ಗದ್ದೆಯಲ್ಲಿ ನಾಗನ ಸನ್ನಿಧಿಯಿದೆ. ಪಶ್ಚಿಮಾಭಿಮುಖವಾಗಿ ಇದ್ದು, ಈ ನಾಗನ ಸನ್ನಿಧಿಯು ಜುಲೈ ೧೪, ೧೯೯೫ರಂದು ನಿರ್ಮಾಣವಾಗಿದೆ. ಇಲ್ಲಿ ನಾಗರ ಪಂಚಮಿಗೆ ವಿಶೇಷವಾದ ನಾಗಾರಾಧನೆ ನಡೆಯುತ್ತದೆ. ಈ ನಾಗನ ಸನ್ನಿಧಿಯ ಎಡಬದಿಗೆ ನವಗ್ರಹ ಗುಡಿಯಿದೆ. ಇದು ಮಾರ್ಚ್ ೧೯, ೧೯೯೯ರಂದು ನಿರ್ಮಾಣವಾಗಿದೆ. ಈ ಗುಡಿಗೆ ಅಭಿಮುಖವಾಗಿ ಅಯ್ಯಪ್ಪ ಸ್ವಾಮಿಯ ಗುಡಿಯಿದೆ. ಇದರ ಪ್ರತಿಷ್ಠಾ ವಿಗ್ರಹದ ರಚನಾಕಾರ ಕೇರಳದ ವಿ.ವಿ.ರಾಮಚಂದ್ರನ್ ಆಗಿದ್ದು, ದೇವಳದ ಶಿಲಾನ್ಯಾಸವು ಫೆ.೧೮, ೨೦೦೦ದಂದು ಶ್ರೀಕ್ಷೇತ್ರ ಶಬರಿಮಲೆಯ ಶ್ರೀ ರಾಧಾಕೃಷ್ಣ ಎಂಬ್ರಾನ್ ಮೇಲ್‌ಶಾಂತಿಯವರಿಂದ ನಡೆದಿದೆ. ಈ ಗುಡಿಗಳ ಹಿಂಭಾಗದಲ್ಲಿ ಶ್ರೀ ಮಹಾಲಿಂಗೇಶ್ವರ ಸಭಾಭವನವಿದೆ.
ದೇವಾಲಯದ ಮುಂಭಾಗದಲ್ಲಿ ವಿಶಾಲವಾದ ಸುಮಾರು ೧೧ ಎಕರೆ ಗದ್ದೆಯಿದ್ದು, ಅದರ ಒಡೆತನವು ದೇವಾಲಯಕ್ಕೆ ಇದೆ. ಇದು ಜಾತ್ರೋತ್ಸವದ ಗದ್ದೆಯಾಗಿದ್ದು, ಜಾಗವನ್ನು ದೇಗುಲಕ್ಕೆ ಪಡೆದುಕೊಳ್ಳುವಲ್ಲಿ ತಹಶೀಲ್ದಾರ್ ಕೋಚಣ್ಣ ರೈ ಅವರ ಅವಿರತ ಪರಿಶ್ರಮ ಪ್ರತಿಯೊಬ್ಬರಿಗೂ ತಿಳಿದಿದೆ. ದೇಗುಲದ ಆಗ್ನೇಯಕ್ಕೆ ಬ್ರಹ್ಮರಥ ಮಂದಿರವಿದೆ. ಆಗ್ನೇಯಕ್ಕೆ ಸುಮಾರು ೩೦೦ ಮೀಟರ್ ದೂರದಲ್ಲಿ ಮೂಲನಾಗನ ಸಾನಿಧ್ಯವಿದೆ. ಇದನ್ನು ಉದ್ಯಮಿ ಮುತ್ತಪ್ಪ ರೈಯವರು ನಿರ್ಮಿಸಿಕೊಟ್ಟಿದ್ದಾರೆ. ಮೂಲನಾಗನ ಕಟ್ಟೆಯು ಪಶ್ಚಿಮಾಭಿಮುಖವಾಗಿದ್ದು, ಪ್ರತೀ ತಿಂಗಳು ಅಲ್ಲದೆ ಹರಕೆಯ ಮೂಲಕ ಇಲ್ಲಿ ನಾಗಾರಾಧನೆ ನಡೆಯುತ್ತಿರುತ್ತದೆ. ಈ ಕಟ್ಟೆ ಗೆ ಅಭಿಮುಖವಾಗಿ ೫೦ ಮೀಟರ್ ದೂರದಲ್ಲಿ ಒಂದು ಕಟ್ಟೆಯಿದ್ದು, ಅದು ಹಿಂದೆ ನಂದಿ ಮಾಯವಾದ ಕುರುಹು ಇರುವ ಜಾಗವೆಂದು ಜನಜನಿತವಾದ ಸ್ಥಳವಾಗಿದೆ. ಅಲ್ಲದೆ ದೇವರು ಅವಭೃತ ಸ್ನಾನಕ್ಕೆ ಹೋಗುವ ದಿವಸ ಈ ಸ್ಥಳದವರೆಗೆ ದೇಗುಲದ ದೈವಗಳಾದ ಹುಲಿ ಭೂತ, ಕಾಜುಕುಜುಂಬ ಅಂಙನತ್ತಾಯ ಮತ್ತು ರಕ್ತೇಶ್ವರೀ ದೈವಗಳ ಪ್ರತಿನಿಧಿ ದೈವವಾಗಿ ದೇವರೊಂದಿಗೆ ಹೋಗುವ ರಕ್ತೇಶ್ವರಿ ದೈವವು ದೇವರನ್ನು ಬೀಳ್ಕೊಡುವ ಜಾಗ ಇದಾಗಿದ್ದು, ಹಿಂದೆ ದೇಗುಲದ ಮೊಕ್ತೇಸರರು ಕೂಡಾ ಆರಾಟಕ್ಕೆ ಹೋಗುವ ದೇವರನ್ನು ಬೀಳ್ಕೊಡುತ್ತಿದ್ದ ಜಾಗವಾಗಿದೆ. ಇದನ್ನು ಭೂತದ ಕಲ್ಲು ಎಂದೂ ಕರೆಯುತ್ತಾರೆ. ದೇಗುಲದ ಎದುರಿಗೆ ಸುಮಾರು ೧೫೦ಮೀಟರ್ ದೂರಕ್ಕೆ ರಥಬೀದಿಯ ಬಲಭಾಗದ ಅಂಚಿನಲ್ಲಿ ಪೂಕರೆ ಕುತ್ತಿ ಎಂಬ ಸ್ಥಳವಿದೆ. ಆ ಜಾಗವನ್ನು ಗದ್ದೆಗೆ ಕಟ್ಟೆ ಕಟ್ಟಿ ಸಂರಕ್ಷಿಸಲಾಗಿದೆ. ಇದು ಪೂಕರೆ ನೆಡುವ ಸ್ಥಳವಾಗಿದೆ. ಹಿಂದೆ ಬೇಸಾಯ ಸಂದರ್ಭಕ್ಕೆ ಆಚರಣೆಯಾಗುತ್ತಿದ್ದ ಪೂಕರೆ ಉತ್ಸವದ ಪ್ರತೀಕವಾಗಿ ಈಗಲೂ ವರ್ಷಂಪ್ರತಿ ಉತ್ಸವ ನಡೆಯುತ್ತದೆ. ಅದರ ಪಕ್ಕದಲ್ಲಿಯೇ ಇನ್ನೊಂದು ಕಟ್ಟೆ ಕಾಣುತ್ತಿದ್ದು, ಅದು ನಂದಿಯ ಕಾಲುತುಂಡಾಗಿ ಬಿದ್ದ ಸ್ಥಳವಾಗಿ ಅದರ ಕುರುಹುಗಳನ್ನು ಅಲ್ಲಿ ಕಾಣಬಹುದು. ದೇಗುಲದ ನೇರಕ್ಕೆ ಸುಮಾರು ೫೦೦ ಮೀಟರ್ ದೂರದಲ್ಲಿ ಶಿವನ ಧ್ಯಾನವನವಿದೆ. ಅದರ ಹಿಂಭಾಗಕ್ಕೆ ಸ್ಮಶಾನವಿದೆ.