ನಿಡ್ಪಳ್ಳಿ; ಕೂಟೇಲು ಕಿಂಡಿ ಅಣೆಕಟ್ಟಿನ ಮೂಲಕ ಚಿಕ್ಕೋಡಿ ಹೋಗುವ ಕಾಲು ದಾರಿಗೆ ಚಿಕ್ಕೋಡಿ ಎಂಬಲ್ಲಿ ನಿರ್ಮಿಸಿದ ಕಿರು ಸೇತುವೆಗೆ ಸ್ಥಳೀಯ ಯುವಕರು ಸೇರಿ ಪಾಲ ನಿರ್ಮಿಸಿ ಸಂಪರ್ಕ ಕಲ್ಪಿಸಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಚಿಕ್ಕೋಡಿ ಎಂಬಲ್ಲಿ ಶಿಥಿಲ ಗೊಂಡ ಕಾಲು ದಾರಿ ಸೇತುವೆ ತೆಗೆದು 30 ಲಕ್ಷ ವೆಚ್ಚದಲ್ಲಿ 10 ಅಡಿ ಅಗಲದ ಹೊಸ ಸೇತುವೆ ನಿರ್ಮಾಣ ಮಾಡಲಾಯಿತು. ನಂತರ ಮಳೆ ಆರಂಭವಾದ ಕಾರಣ ಸೇತುವೆಯ ಎರಡು ಕಡೆ ಸಂಪರ್ಕ ಕಾಮಗಾರಿ ನಡೆಸದೆ ಬಾಕಿಯಾಗಿ ಸಾರ್ವಜನಿಕರಿಗೆ ಅತ್ತಿಂದಿತ್ತ ಸಂಪರ್ಕ ಕಡಿತಗೊಂಡು ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆಯಾಗಿತ್ತು.
ಇದೀಗ ಸ್ಥಳೀಯ ಕೆಲವು ಯುವಕರು ಸೇರಿ ಹರೀಶ್ ಬರೆ, ಪಂಚಾಯತ್ ಸದಸ್ಯ ಮುರಳೀಕೃಷ್ಣ ಮುಂಡೂರು ನೇತೃತ್ವದಲ್ಲಿ ಸೇತುವೆಯ ಎರಡೂ ಕಡೆ ಸಂಪರ್ಕ ಕಲ್ಪಿಸಿ ದ್ವಿಚಕ್ರ ವಾಹನ ಸವಾರರಿಗೆ ಸಂಚರಿಸಲು ಅನುಕೂಲ ಮಾಡಿ ಕೊಟ್ಟಿದ್ದಾರೆ. ಯುವಕರ ಈ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.