ಪಾಣಾಜೆ ಗ್ರಾ.ಪಂ.ಜಾಗವನ್ನು ದಫನ ಭೂಮಿಗೆ ನೀಡುವ ನಿರ್ಣಯ ರದ್ದುಪಡಿಸುವಂತೆ ಗ್ರಾಮಸ್ಥರಿಂದ ಪ್ರತಿಭಟನೆ

0

ಜಾಗ ನೀಡಿರುವುದು ಧರ್ಮಾಧಾರಿತ ರಾಜಕಾರಣ-ಸಂಜೀವ ಮಠಂದೂರು
ರಾಜಧರ್ಮ ಪಾಲಿಸದೆ ಸರ್ವಾಧಿಕಾರಿ ಧೋರಣೆ-ಅರುಣ್ ಕುಮಾರ್ ಪುತ್ತಿಲ


ಪುತ್ತೂರು:ಪಾಣಾಜೆ ಗ್ರಾಮ ಪಂಚಾಯತ್‌ಗೆ ಕಾಯ್ದಿರಿಸಿದ ಜಾಗವನ್ನು ಮಸೀದಿಯ ದಫನ ಭೂಮಿಗೆ ನೀಡಿ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮಾಡಿರುವ ನಿರ್ಣಯದ ವಿರುದ್ಧ ಗ್ರಾಮ ಪಂಚಾಯತ್ ಎದುರುಗಡೆ ಪಾಣಾಜೆ ಗ್ರಾಮಸ್ಥರಿಂದ ಪ್ರತಿಭಟನೆ ನಡೆಯಿತು.


ಜಾಗವನ್ನು ಖಾಸಗಿ ಸಂಸ್ಥೆಗೆ ನೀಡಿರುವುದು ಧರ್ಮಾಧಾರಿತ ರಾಜಕಾರಣ:
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಪಾಣಾಜೆ ಪಂಚಾಯತ್ ಅಧ್ಯಕ್ಷರು ಏಕಾಏಕಿ ಒಂದು ನಿರ್ಣಯವನ್ನು ಸರ್ವಾಧಿಕಾರಿ ಧೋರಣೆಯಲ್ಲಿ ತೆಗೆದುಕೊಂಡಿರುವುದು ರಾಜಕೀಯ ಪ್ರೇರಿತವಾಗಿದೆ.ಅವರು ಮತಾಧಾರಿತ ರಾಜಕಾರಣವನ್ನು ಮಾಡಿದ್ದಾರೆ ಎಂಬುದು ಗೊತ್ತಾಗಿದೆ.ಈ ಜಾಗಕ್ಕೆ ಸಂಬಂಧಿಸಿ ನಾನು ಶಾಸಕನಾಗಿದ್ದಾಗ ಗ್ರಾಮ ಪಂಚಾಯತ್‌ನ ಆಗಿನ ಅಧ್ಯಕ್ಷರ ನೇತೃತ್ವದಲ್ಲಿ ನಿಯೋಗ ನನ್ನಲ್ಲಿಗೆ ಬಂದಿತ್ತು.ಬಳಿಕ ಮಾತುಕತೆ ಮಾಡಿ ತೀರ್ಮಾನ ಮಾಡಿ, ಪಾಣಾಜೆ ಗ್ರಾಮದ ಹಿತವನ್ನು ಕಾಪಾಡುವ ಕೆಲಸ ಮಾಡಿದ್ದೆವು.ಸರ್ವ ಜನರ ಹಿತವನ್ನು ಬಯಸುವ ಗ್ರಾಮದ ಸರಕಾರದಲ್ಲಿ ಜಾತ್ಯತೀತ ಎನ್ನುವ ಪಕ್ಷವೊಂದು ಪಂಚಾಯತ್ ಜಾಗವನ್ನು ಖಾಸಗಿ ಸಂಸ್ಥೆಗೆ ಕೊಡುವ ಹುನ್ನಾರದಿಂದ ಯಾವ ರೀತಿ ಧರ್ಮಾಧಾರಿತ ರಾಜಕಾರಣ ಮಾಡುತ್ತಿದೆ ಎಂಬುದು ತಿಳಿದಿದೆ ಎಂದರು.ಗ್ರಾಮ ಪಂಚಾಯತ್ ಅಧ್ಯಕ್ಷರು ರಾಜಧರ್ಮ ಪಾಲನೆ ಮಾಡದೆ ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದಾರೆ.ಈ ನಿರ್ಣಯ ಮಾಡಿರುವುದು ನೂರಕ್ಕೆ ನೂರು ಕಾನೂನು ಬಾಹಿರ ಎಂದು ಆರೋಪಿಸಿದ ಮಠಂದೂರು, ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು.ಆದುದರಿಂದ ತಾಲೂಕು ಪಂಚಾಯತ್ ಇಒ ಅವರು ಈ ನಿರ್ಣಯವನ್ನು ಅನೂರ್ಜಿತಗೊಳಿಸಿ ಪಂಚಾಯತ್‌ಗೆ ಪಹಣಿ ಮಾಡಿಕೊಡಬೇಕು.ಅಲ್ಲದೆ ಕಾನೂನು ಬಾಹಿರವಾಗಿ ಕಟ್ಟಿದ ಕಟ್ಟಡದ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ರಾಜಧರ್ಮ ಪಾಲಿಸದೆ ಸರ್ವಾಧಿಕಾರಿ ಧೋರಣೆಯ ನಿರ್ಣಯ:
ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ರಾಜಧರ್ಮ ಪಾಲಿಸುವ ಮೂಲಕ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕಾಗಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷರು ಸರ್ವಾದಿಕಾರಿ ಧೋರಣೆಯ ಮೂಲಕ ಗ್ರಾಮ ಪಂಚಾಯತಿಗೆ ಕಾಯ್ದಿರಿಸಿದ ಜಾಗವನ್ನು ದಫನ ಭೂಮಿಗೆ ನೀಡಬೇಕು ಎಂದು ನಿರ್ಣಯ ಮಾಡಿ ಪಾಣಾಜೆ ಗ್ರಾಮಸ್ಥರಿಗೆ ದ್ರೋಹದ ಕೆಲಸ ಮಾಡಿದ್ದಾರೆ.ಗ್ರಾಮ ಪಂಚಾಯತ್‌ನ ಅಧ್ಯಕ್ಷರಾಗಿ ಕರ್ತವ್ಯ ಮಾಡುವುದನ್ನು ಬಿಟ್ಟು ದ್ವೇಷ ಅಸೂಯೆಯ ಮೂಲಕ ಪಾಣಾಜೆಯಲ್ಲಿ ಸಂಘರ್ಷದ ವಾತಾವರಣ ನಿರ್ಮಿಸಲು ದಫನ ಭೂಮಿಗೆ ಭೂಮಿ ಕೊಡುವ ನಿರ್ಣಯ ಮಾಡಿರುವುದು ಅವರ ಸರ್ವಾಧಿಕಾರಿ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿದರು.ಹಿಂದೂ ರುದ್ರಭೂಮಿಗೆ ಕೊಡಬೇಕೆಂದು ಹಿಂದೂಗಳು ಯಾರೂ ಕೇಳಿಲ್ಲ.ಆದುದರಿಂದ ದಫನ ಭೂಮಿಗೆ ಭೂಮಿಯನ್ನು ಕೊಡುವ ಅವಶ್ಯಕತೆ ಏನಿದೆ?.ಈ ನಿರ್ಣಯದ ವಿರುದ್ಧ ಗ್ರಾಮಸ್ಥರು ಮೇಲಾಧಿಕಾರಿಗೆ ದೂರು ಕೊಡಲಿದ್ದಾರೆ.ಕಾಂಗ್ರೆಸ್‌ನವರ ಈ ದ್ವೇಷ ರಾಜಕಾರಣಕ್ಕೆ ಮುನ್ನುಡಿ ಬರೆದ ಪ್ರಯತ್ನಕ್ಕೆ ಮುಂದಿನ ದಿನಗಳಲ್ಲಿ ನಿಮ್ಮ ಅಧಿಕಾರದ ಶವಪೆಟ್ಟಿಗೆಗೆ ಇದು ಅಂತಿಮ ಮೊಳೆ ಹೊಡೆದಿದ್ದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.


ನಿರ್ಣಯ ಮಾಡಿರುವುದು ಸಂವಿಧಾನ ವಿರೋಧಿ:
ಗ್ರಾಮಸ್ಥರಾದ ನಾರಾಯಣಪ್ರಕಾಶ್ ನೆಲ್ಲಿತ್ತಿಮಾರ್ ಮಾತನಾಡಿ,ಪಾಣಾಜೆಯಲ್ಲಿ ಇಷ್ಟರವರೆಗೆ ಧರ್ಮಾಧಾರಿತ ರಾಜಕಾರಣ ಯಾವ ಪಕ್ಷದವರೂ ಮಾಡಿಲ್ಲ,ಎಲ್ಲರನ್ನೂ ಸಮಾನತೆಯಿಂದ ನೋಡಿದ್ದಾರೆ.ಸಂಜೀವ ಮಠಂದೂರು ಶಾಸಕರಾಗಿದ್ದ ಸಂದರ್ಭದಲ್ಲಿ, ನಾರಾಯಣ ಪೂಜಾರಿ ಅಧ್ಯಕ್ಷರಾಗಿದ್ದಾಗ 1.15 ಎಕರೆ ಜಾಗವನ್ನು ಪಂಚಾಯತ್ ಹೆಸರಲ್ಲಿ ಕಾಯ್ದಿರಿಸಲಾಗಿದೆ. ಪಂಚಾಯತ್ ಸದಸ್ಯರ ವಿರೋಧವಿದ್ದರೂ ಅದನ್ನು ಕಡೆಗಣಿಸಿ ಒತ್ತಾಯ ಪೂರ್ವಕವಾಗಿ ಈ ಜಾಗದಿಂದ ದಫನ ಭೂಮಿಗೆ ಕೊಡಲು ಪಿಡಿಒ ಮೂಲಕ ಅಧ್ಯಕ್ಷರು ನಿರ್ಣಯ ಬರೆಯಿಸಿರುವುದು ಸಂವಿಧಾನ ವಿರೋಧಿ,ಸರ್ವಾಧಿಕಾರ ಧೋರಣೆಯಾಗಿದೆ,ಈ ನಿರ್ಣಯವನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು.ಅಲ್ಲದೆ ಕೇಂದ್ರ ಸರಕಾರ ಅಭಿವೃದ್ಧಿಗಾಗಿ ನೀಡಿದ ಹಣಕಾಸನ್ನು ದುರುಪಯೋಗ ಮಾಡಿ ಕಟ್ಟಡ ಕಟ್ಟಿಕೊಂಡಿದ್ದಾರೆ.ಇದು ತಪ್ಪು ಎಂದ ಅವರು,ಗ್ರಾಮಕ್ಕೆ ಸಮಸ್ಯೆಯಾದಾಗ ಗ್ರಾಮದ ಜನರೆಲ್ಲರೂ ಒಟ್ಟಿಗೆ ಸೇರಬೇಕು.ಗ್ರಾಮ ಪಂಚಾಯತ್‌ನ ದುರಾಡಳಿತ, ಸರ್ವಾಽಕಾರದ ವಿರುದ್ಧ ಪಾಣಾಜೆ ಗ್ರಾಮಸ್ಥರು ಹೋರಾಡಬೇಕು ಎಂದರು.


ಈ ಹೋರಾಟಕ್ಕೆ ನಾನು ಯಾವಾಗಲೂ ಇದ್ದೇನೆ:
ಗ್ರಾಮಸ್ಥ ರಮಾನಾಥ ರೈ ಪಡ್ಯಂಬೆಟ್ಟು ಮಾತನಾಡಿ 5 ವರ್ಷದಿಂದ ಅಧಿಕಾರದ ಸ್ವಾದ ಅನುಭವಿಸಿ ಅಧಿಕಾರದ ಕೊನೆಯಲ್ಲಿ ಜಾಗವನ್ನು ಇನ್ನೊಬ್ಬರಿಗೆ ಕೊಡುವ ಕೆಲಸ ಮಾಡಿದ್ದಾರೆ ಇದು ಖಂಡನೀಯ.ಪಂಚಾಯತ್‌ನ ಆಸ್ತಿಯನ್ನು ರಕ್ಷಿಸುವ ಜವಾಬ್ದಾರಿ ಪಿಡಿಒ, ಅಧ್ಯಕ್ಷರು ಹಾಗೂ ಸದಸ್ಯರದ್ದಾಗಿದೆ.ಈ ನಿರ್ಣಯವನ್ನು ರದ್ದುಗೊಳಿಸಿ ನ್ಯಾಯ ದೊರಕಿಸಬೇಕು.ಈ ಹೋರಾಟಕ್ಕೆ ನಿಮ್ಮೊಂದಿಗೆ ನಾನು ಯಾವಾಗಲೂ ಇದ್ದೇನೆ ಎಂದರು.


ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಅನಿಲ್ ತೆಂಕಿಲ, ಪಾಣಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ, ಪಂಚಾಯತ್ ಸದಸ್ಯರಾದ ಭಾರತಿ ಭಟ್, ಸುಭಾಶ್ ರೈ ಸಿ.ಎಚ್., ಸುಲೋಚನಾ, ಮೋಹನ ನಾಯ್ಕ, ಪಾಣಾಜೆ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಪ್ರೇಮ್‌ರಾಜ್, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಉಮೇಶ್ ರೈ ಗಿಳಿಯಾಲು,ನಿರ್ದೇಶಕರಾದ ಸದಾಶಿವ ರೈ ಸೂರಂಬೈಲು, ಹರೀಶ್ ಪೂಜಾರಿ, ಪುಷ್ಪಾವತಿ ರಘುನಾಥ ಪಾಟಾಳಿ, ತಾ.ಪಂ.ಮಾಜಿ ಅಧ್ಯಕ್ಷೆ ಸವಿತಾ ಎಂ.ಜಿ., ಪಾಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ, ಮಾಜಿ ಸದಸ್ಯರಾದ ರಘುನಾಥ ಪಾಟಾಳಿ, ಯಶೋದಾ ಉಡ್ಡಂಗಳ, ನಿಡ್ಪಳ್ಳಿ ಬಿಜೆಪಿ ಶಕ್ತಿಕೆಂದ್ರದ ಅಧ್ಯಕ್ಷ ಸಂತೋಷ್, ಗ್ರಾಮಸ್ಥರಾದ ಮಂಜುನಾಥ್ ಪೈ, ಸುಜಿತ್ ಕಜೆ, ಪ್ರದೀಪ್ ಪಾಣಾಜೆ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಭಟನೆಕಾರರಿಂದ ಪಿಡಿಒಗೆ ಮನವಿ
ಪ್ರತಿಭಟನೆ ಬಳಿಕ ಗ್ರಾಮಸ್ಥರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ಸಲ್ಲಿಸಿದರು.2019ನೇ ಇಸವಿಯಲ್ಲಿ ಸರ್ವೆ ನಂ.79ರಲ್ಲಿ 1.15 ಎಕ್ರೆ ಸರಕಾರಿ ಜಮೀನನ್ನು ಪುತ್ತೂರು ಸಹಾಯಕ ಆಯುಕ್ತರು, ತಹಶೀಲ್ದಾರರ ಪ್ರಸ್ತಾವನೆಯಂತೆ ಪಾಣಾಜೆ ಗ್ರಾಮ ಪಂಚಾಯತ್‌ಗೆ ಕಾಯ್ದಿರಿಸಿ ಆದೇಶಿಸಿರುತ್ತಾರೆ.ಪ್ರಕೃತ ಗ್ರಾಮ ಪಂಚಾಯತ್ ಅಧ್ಯಕ್ಷರು ಸರ್ವಾಽಕಾರಿ ಧೋರಣೆಯಿಂದ ಪಂಚಾಯತ್ ಸದಸ್ಯರ ಪೂರ್ಣ ಒಪ್ಪಿಗೆ ಇಲ್ಲದೆ ಸದ್ರಿ ಜಾಗವನ್ನು ಹೈಕೋರ್ಟ್ ಆದೇಶವನ್ನು ಮೀರಿ ಕಾನೂನು ಬಾಹಿರವಾಗಿ ಬೇರೆ ಸಂಸ್ಥಗೆ ನೀಡಿದ್ದಾರೆ.ಪಾಣಾಜೆ ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಕಾಯ್ದಿರಿಸಿದ ಜಾಗವನ್ನು ಯಾವುದೇ ಧಾರ್ಮಿಕ ಕೇಂದ್ರಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ನೀಡಬಾರದು ಮತ್ತು ಹಿಂದಿನ ಸಾಮಾನ್ಯ ಸಭೆಯಲ್ಲಿ ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮಾಡಿದ ನಿರ್ಣಯವನ್ನು ರದ್ದುಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.


ಪಿಡಿಒ ಅವರ ಕರ್ತವ್ಯ ಲೋಪವೇ ಎಲ್ಲ ಗೊಂದಲಗಳಿಗೆ ಕಾರಣ
ಅಧ್ಯಕ್ಷೆಪಾಣಾಜೆ ಗ್ರಾಮ ಪಂಚಾಯತ್ ಹಾಗೂ ಬದ್ರಿಯಾ ಮಸೀದಿಯ ವಿವಾದಿತ ಜಾಗದ ವಿಷಯದ ಬಗ್ಗೆ ೦3.೦9.2024ರ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಒಮ್ಮತದ ಅಭಿಪ್ರಾಯದಂತೆ, ಸೌಹಾರ್ದಯುತವಾಗಿ ಹಾಗೂ ನ್ಯಾಯಯುತವಾದ ವಿಧದಲ್ಲಿ ಒಂದು ತೀರ್ಮಾನವನ್ನು ಪಂಚಾಯತ್ ಅಧ್ಯಕ್ಷರೇ ತೆಗೆದುಕೊಂಡು ಜಾಗದ ವಿವಾದವನ್ನು ಬಗೆ ಹರಿಸುವಂತೆ ನಿರ್ಣಯಿಸಲಾಗಿತ್ತು. ಹಾಗಾಗಿ 18.11.2025ರ ಸಾಮಾನ್ಯ ಸಭೆಯಲ್ಲಿ ಪ್ರಸ್ತುತ ಜಾಗದ ವಿಷಯ ಚರ್ಚಿಸಲ್ಪಟ್ಟು ಒಟ್ಟು 1.15 ಎಕ್ರೆ ಜಾಗದಿಂದ 70 ಸೆಂಟ್ಸ್ ಜಾಗ ಪಂಚಾಯತ್ ಪಾಲಿಗೂ, ಉಳಿದ 45 ಸೆಂಟ್ಸ್ ಜಾಗವನ್ನು ಮಸೀದಿ ಪಾಲಿಗೂ ಬರುವಂತೆ ವಿಂಗಡಿಸಿ ಗಡಿ ಗುರುತು ಮಾಡಲು ಕಂದಾಯ ಇಲಾಖೆಗೆ ಬರೆಯುವ ನಿರ್ಣಯವನ್ನು ನಾನು ಸಭೆಯಲ್ಲಿ ಮಂಡಿಸಿದ್ದೆ.ಆದರೆ ನಮ್ಮ ಪಿಡಿಒ ಸದ್ರಿ ನಿರ್ಣಯವನ್ನು ನಿರ್ಣಯ ಪುಸ್ತಕದಲ್ಲಿ ಒಂದು ರೀತಿ ಹಾಗೂ ಆನ್ ಲೈನ್‌ನಲ್ಲಿ ಮತ್ತೊಂದು ರೀತಿ ತಿರುಚಿ ಬರೆದು ಅದರ ಪ್ರತಿಗಳನ್ನು ಸಾರ್ವಜನಿಕ ವಲಯಕ್ಕೆ ರವಾನಿಸಿದ್ದೇ ಇಷ್ಟೊಂದು ಗೊಂದಲಗಳಿಗೆ ಕಾರಣವಾಯ್ತು.ಸಾಮಾನ್ಯ ಸಭೆಯಲ್ಲಿ ಮಾಡಿದ ನಿರ್ಣಯವನ್ನು ಉದ್ದೇಶ ಪೂರ್ವಕವಾಗಿಯೇ ಆನ್ ಲೈನ್‌ನಲ್ಲಿ ಸರಿಯಾದ ರೀತಿಯಲ್ಲಿ ಅಪ್‌ಲೋಡ್ ಮಾಡದೇ ಜನರಲ್ಲಿ ಗೊಂದಲ ಉಂಟು ಮಾಡುವ ದುರುದ್ದೇಶದಿಂದ ಕರ್ತವ್ಯ ಲೋಪವೆಸಗಿ ಈ ಸಮಸ್ಯೆಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಪಾಣಾಜೆ ಗ್ರಾ.ಪಂ.ಅಧ್ಯಕ್ಷೆ ಮೈಮುನತ್ತುಲ್ ಮೆಹ್ರಾ ಸ್ಪಷ್ಟನೆ ನೀಡಿದ್ದಾರೆ.
ಪಂಚಾಯತ್ ಕಚೇರಿಯ ಪಕ್ಕದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಟ್ಟಡವಿರುವ ಜಾಗವೂ ವಿವಾದದಲ್ಲಿದ್ದು ಅದನ್ನು ಕೂಡ ಬಗೆಹರಿಸಿ ಗಡಿ ಗುರುತು ಮಾಡಲು ಕಂದಾಯ ಇಲಾಖೆಗೆ ಬರೆಯಲಾಗಿದೆ.ಇದೆಲ್ಲವೂ ನಮ್ಮ ಆಡಳಿತ ಅವಧಿ ಇನ್ನೇನು ಮುಗಿಯುವ ಹಂತದಲ್ಲಿ ಇರುವುದರಿಂದ ಅದೆಕ್ಕೆಲ್ಲ ಒಂದು ಪರಿಹಾರ ಕಂಡುಕೊಳ್ಳುವ ಒಂದೇ ಒಂದು ಉದ್ದೇಶದಿಂದ ಹಾಗೂ ಗ್ರಾಮದ ಅಭಿವೃದ್ಧಿಯ ಹಿತದೃಷ್ಟಿಯಿಂದ ಈ ರೀತಿಯ ನಿರ್ಣಯ ಮಾಡಿರುವುದೇ ಹೊರತು ಇದರಲ್ಲಿ ರಾಜಕೀಯ ಪ್ರೇರಿತ, ಪಕ್ಷಾತೀತ,ಧಾರ್ಮಿಕವಾದ ಅಥವಾ ವೈಯಕ್ತಿಕವಾದ ಯಾವುದೇ ಉದ್ದೇಶಗಳು ಇರುವುದಿಲ್ಲ ಎಂದು ಅವರು ‘ಸುದ್ದಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

LEAVE A REPLY

Please enter your comment!
Please enter your name here