ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಪುತ್ತೂರು ತಾಲೂಕು ಜನಜಾಗೃತಿ ವೇದಿಕೆ, ಗೋಳಿತ್ತೊಟ್ಟು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ, ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ, ಶ್ರೀ ಸಿದ್ಧಿವಿನಾಯಕ ಮಾತೃಮಂಡಳಿ, ಗ್ರಾಮ ಪಂಚಾಯತ್, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಬೆಳ್ತಂಗಡಿ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಕಲಾಮಂದಿರದಲ್ಲಿ ಆ.22ರಂದು ಆರಂಭಗೊಂಡ 1575ನೇ ಮದ್ಯವರ್ಜನ ಶಿಬಿರದ ಸಮಾರೋಪ ಆ.29ರಂದು ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು, ಡ್ರಗ್ಸ್, ದುಶ್ಚಟಗಳಿಗೆ ಯುವಕರು ಬಲಿಯಾಗಬಾರದು. ಮದ್ಯವರ್ಜನ ಶಿಬಿರದ ಮೂಲಕ ನವಜೀವನ ಆರಂಭಿಸಿರುವ ನವಜೀವನ ಸಮಿತಿ ಸದಸ್ಯರೂ ಇನ್ನಷ್ಟೂ ಮಂದಿಯನ್ನು ದುಶ್ಚಟಮುಕ್ತರಾಗಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬೇಕೆಂದು ಹೇಳಿದರು. ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಅಜಿತ್ಕುಮಾರ್ ಪಾಲೇರಿ ಅಧ್ಯಕ್ಷತೆ ವಹಿಸಿದ್ದರು. ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೇಸಪ್ಪ ರೈ ರಾಮಕುಂಜ, ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಳ, ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ ಸಂದರ್ಭೋಚಿತವಾಗಿ ಮಾತನಾಡಿದರು. ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಜಿ.ಮಹಾಬಲ ರೈ, ನಿಕಟಪೂರ್ವಾಧ್ಯಕ್ಷ ಪದ್ಮನಾಭ ಶೆಟ್ಟಿ, ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಕಳೆಂಜ, ಗೋಳಿತ್ತೊಟ್ಟು ವಲಯಾಧ್ಯಕ್ಷ ನೋಣಯ್ಯ ಪೂಜಾರಿ ಅಂಬರ್ಜೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಗೋಳಿತ್ತೊಟ್ಟು ವಲಯಾಧ್ಯಕ್ಷ ವೀರೇಂದ್ರ ಪಾಲೆತ್ತಡ್ಡ, ಗೋಳಿತ್ತೊಟ್ಟು ಒಕ್ಕೂಟದ ಅಧ್ಯಕ್ಷೆ ಜಯಮಾಲ, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷೆ ಶಾಲಿನಿಶೇಖರ ಪೂಜಾರಿ, ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಕಲಾಮಂದಿರದ ಅಧ್ಯಕ್ಷ ವೆಂಕಪ್ಪ ಗೌಡ ಡೆಬ್ಬೇಲಿ, ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಅಧ್ಯಕ್ಷ ವಿಶ್ವನಾಥ ಮೂಲ್ಯ, ಪ್ರಜ್ಞಾಅಜಿತ್ಕುಮಾರ್ ಪಾಲೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಹುಮಾನ ವಿತರಣೆ, ಸನ್ಮಾನ ಕಾರ್ಯಕ್ರಮ ನಡೆಯಿತು. ಶಿಬಿರಾರ್ಥಿ ಜಗದೀಶ್ ಅನಿಸಿಕೆ ವ್ಯಕ್ತಪಡಿಸಿದರು. ಮದ್ಯವರ್ಜನ ಶಿಬಿರದ ಪ್ರಧಾನ ಸಂಚಾಲಕ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ.ಟ್ರಸ್ಟ್ನ ದ.ಕ.ಜಿಲ್ಲೆ-2 ಇದರ ಜಿಲ್ಲಾ ನಿರ್ದೇಶಕರಾಗಿರುವ ಪ್ರವೀಣ್ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಶಿಬಿರದ ಮೂಲಕ 91 ಮಂದಿ ನವಜೀವನ ಆರಂಭಿಸಿದ್ದಾರೆ ಎಂದರು. ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಸ್ವಾಗತಿಸಿ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷ ಜನಾರ್ದನ ಗೌಡ ಬರಮೇಲು ವಂದಿಸಿದರು. ಯೋಜನೆಯ ಮೇಲ್ವಿಚಾರಕ ರವಿಪ್ರಸಾದ್, ಗೋಳಿತ್ತೊಟ್ಟು ಶಾಲಾ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ನಿರೂಪಿಸಿದರು. ಉಡುಪಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ, ಶಿಬಿರಾಧಿಕಾರಿ ದಿವಾಕರ ಪೂಜಾರಿ ಮತ್ತಿತರರು ವಿವಿಧ ಕಾರ್ಯಕ್ರಮ ನಿರೂಪಿಸಿದರು.
ಡಾ| ಡಿ.ವೀರೇಂದ್ರ ಹೆಗ್ಗಡೆ ಭೇಟಿ:
ಮದ್ಯವರ್ಜನ ಶಿಬಿರದ 7ನೇ ದಿನವಾದ ಆ.28ರಂದು ಸಂಜೆ ರಾಜ್ಯಸಭಾ ಸದಸ್ಯರೂ ಆಗಿರುವ, ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡಿ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.