ಪುತ್ತೂರು: ನಮ್ಮ ಮನೆಯ ಮಗುವಿಗೆ ರಾಷ್ಟ್ರೀಯತೆಯನ್ನು ತಿಳಿಸಿದರೆ ಸಹಜವಾಗಿ ಈ ನೆಲವನ್ನು ಪ್ರೀತಿಸುವ ವ್ಯಕ್ತಿಯಾಗಿ ಬೆಳೆಯುತ್ತಾನೆ ಹೊರತು ಈ ನೆಲವನ್ನು ಎಂದು ದ್ವೇಷಿಸುವುದಿಲ್ಲ. ಈ ನಿಟ್ಟಿನಲ್ಲಿ ರಾಷ್ಟ್ರೀಯತೆ ಇಲ್ಲದೆ ರಾಷ್ಟ್ರಪ್ರೇಮವನ್ನು ಅಳವಡಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರ ಟೋಳಿ ಸದಸ್ಯ ಸುನಿಲ್ ಕುಲಕರ್ಣಿ ಅವರು ಹೇಳಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾದಲ್ಲಿ ನಡೆಯುವ 56ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸೆ.1ರಂದು ನಡೆದ 2ನೇ ದಿನದ ಧಾರ್ಮಿಕ ಸಭೆಯಲ್ಲಿ ಅವರು ಮುಖ್ಯ ಭಾಷಣ ಮಾಡಿದರು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕೂಡಾ ರಾಷ್ಟ್ರೀಯತೆ ಭಾವ ಬಿತ್ತಿದರೆ ಮಾತ್ರ ರಾಷ್ಟ್ರಪ್ರೇಮ ಅರಳುತ್ತದೆ. ಇದು ಎಲ್ಲರಿಗೂ ತಿಳಿಯಬೇಕಾದ ವಿಚಾರ. ಇವತ್ತು ಸಮಾಜದಲ್ಲಿ ರಾಷ್ಟ್ರೀಯತೆಯ ಅಭಾವದಿಂದ ರಾಷ್ಟ್ರೀಯತೆ ಕೊರತೆಯಿಂದಾಗಿ ಅನೇಕ ಅವಘಡಗಳು ನಡೆಯುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯತೆಯನ್ನು ಉಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಮೊದಲ ಅಕ್ಷರವಾಗಿ ಮೂಡಿ ಬಂದಿದೆ. ಪ್ರತಿಯೊಬ್ಬ ವ್ಯಕ್ತಿ ಸ್ವಯಂ ಪ್ರೇರಣೆಯಿಂದ ಮಾಡುವ ಕೆಲಸವನ್ನು ಸಂಘ ಕಲಿಸುತ್ತದೆ. ವ್ಯಕ್ತಿತ್ವದ ಒಂದೊಂದು ಗುಣ ತುಂಬುವುದೇ ಸಂಘದ ಉದ್ದೇಶ ಎಂದ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರ ಧಾರೆಯನ್ನು ಮುಂದಿಟ್ಟರು. ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರಸನ್ನ ಕುಮಾರ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸೈನಿಕ ಚಂದ್ರಶೇಖರ್ ಗೌಡ ಅತಿಥಿಯಾಗಿ ಭಾಗವಹಿಸಿದ್ದರು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎಂ.ಕೆ.ಪ್ರಸಾದ್, ಅಧ್ಯಕ್ಷ ಶಶಾಂಕ್ ಜೆ ಕೊಟೇಚಾ, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಾಗೃತಿ ನಾಯಕ್ ಪ್ರಾರ್ಥಿಸಿದರು. ಸಮಿತಿ ಸದಸ್ಯೆ ಜಯಶ್ರೀ ಎಸ್ ಶೆಟ್ಟಿ ಸ್ವಾಗತಿಸಿದರು. ಪ್ರೇಮಲತಾ ರಾವ್ ವಂದಿಸಿದರು. ರಾಮಚಂದ್ರ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಭಜನಾ ಕಾರ್ಯಕ್ರಮ, ಬಳಿಕ ಧೀಶಕ್ತಿ ಮಹಿಳಾ ಯಕ್ಷಗಾನ ಸಂಘದಿಂದ ಯಕ್ಷಗಾನ ತಾಳಮದ್ದಳೆ, ಸಂಜೆ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ರಾತ್ರಿ ರಂಗಪೂಜೆ ನಡೆಯಿತು. ಕೊನೆಗೆ ಅಮ್ಮ ಕಲಾವಿದೆರ್ ಕುಡ್ಲ ಇವರಿಂದ ಪರಕೆ ಪೂವಕ್ಕೆ ನಾಟಕ ಪ್ರದರ್ಶನಗೊಂಡಿತ್ತು.