ಸೆ.12: ಸಾಲಮನ್ನಾ, ಹಾಲಿನ ದರ ಏರಿಕೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದಿಂದ ಕಾಲ್ನಡಿಗೆ ಜಾಥಾ

0

ಪುತ್ತೂರು: 2018ರಲ್ಲಿ ಸರಕಾರ ರೈತರ ಬೆಳೆ ಸಾಲಮನ್ನಾ ಯೋಜನೆಯನ್ನು ಜಾರಿಗೊಳಿಸಿದ್ದರೂ ಕಳೆದ ನಾಲ್ಕು ವರ್ಷಗಳ ಸತತ ಪ್ರಯತ್ನದ ಬಳಿಕವೂ ಹಲವಾರು ಪ್ರಾಥಮಿಕ ಸಹಕಾರಿ ಸಂಘಗಳ ಸಾಲಗಾರ ಸದಸ್ಯರಿಗೆ ಮನ್ನಾದ ಸೌಲಭ್ಯ ದೊರಕಿರುವುದಿಲ್ಲ. ಕೂಡಲೇ ಈ ಬಗ್ಗೆ ಸೂಕ್ತ ಕೈಗೊಳ್ಳಬೇಕೆಂದು ಆಗ್ರಹಿಸಿ ಮತ್ತು ಹಾಲಿಗೆ ಲೀಟರ್‌ಗೆ ಕನಿಷ್ಟ 75 ರೂ. ನಿಗದಿಪಡಿಸಬೇಕು ಜೊತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.12ರಂದು ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ರೈತರ ಕಾಲ್ನಡಿಗೆ ಜಾಥಾ ನಡೆಯಲಿದೆ.

ಈ ಬಗ್ಗೆ ಸೆ.9ರಂದು ಸುದ್ದಿ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿ ಸಮಿತಿ ಸದಸ್ಯ ಸುಬ್ರಾಯ ಅವರು, 2018ರಲ್ಲಿ ಸರಕಾರ ರೈತರ ಬೆಳೆ ಸಾಲಮನ್ನಾ ಯೋಜನೆಯನ್ನು ಜಾರಿಗೊಳಿಸಿದ್ದರೂ ಕಳೆದ ನಾಲ್ಕು ವರ್ಷಗಳ ಸತತ ಪ್ರಯತ್ನದ ಬಳಿಕವೂ ಹಲವಾರು ಪ್ರಾಥಮಿಕ ಸಹಕಾರಿ ಸಂಘಗಳ ಸಾಲಗಾರ ಸದಸ್ಯರಿಗೆ ಮನ್ನಾದ ಸೌಲಭ್ಯ ದೊರಕಿರುವುದಿಲ್ಲ. ಈ ಸೌಲಭ್ಯದಿಂದ ವಂಚಿತರಾಗಿರುವ ರೈತರು ಜನಪ್ರತಿನಿಧಿಗಳನ್ನು ಇಲಾಖಾ ಅಧಿಕಾರಿಗಳನ್ನು ಭೇಟಿಯ ನಿರಾಶರಾಗಿದ್ದಾರೆ ಎಂದರು.

ಜೊತೆಗೆ ಹೈನುಗಾರ ರೈತರು ಹಿಂಡಿ, ಕೂಲಿ ಇತ್ಯಾದಿ ಒಳಸುರಿಗಳ ಬೆಲೆ ಏರಿಕೆಯಾಗಿದ್ದರೂ, ಹಿಂದಿನ ದರವನ್ನೇ ಪಡೆಯುತ್ತಿದ್ದಾರೆ, ಇತ್ತೀಚೆಗೆ ಕೆ.ಎಂ.ಎಫ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಣಕಾಸು ವರ್ಷದಲ್ಲಿ ಸುಮಾರು 1.25 ಲಕ್ಷ ಲೀಟರ್ ಹಾಲು ಉತ್ಪಾದನೆ ದ.ಕ. ಮತ್ತು ಉಡುಪಿಯ ಒಕ್ಕೂಟ ಒಂದರಲ್ಲೇ ಕುಂಠಿತಗೊಂಡಿರುವ ಉಲ್ಲೇಖವು ರೈತರು ಹೈನುಗಾರಿಕೆಯಿಂದ ದೂರ ಸರಿಯುತ್ತಿರುವ ಸೂಚನೆಯಾಗಿದೆ. ಲಾಭದಾಯಕ ವೈಜ್ಞಾನಿಕ ಬೆಲೆಯಾಗಿ ಹಾಲಿಗೆ ಲೀಟರ್‌ಗೆ ಕನಿಷ್ಟ ರೂ.75.೦೦ ಸಿಕ್ಕರೆ ಮಾತ್ರ ರೈತರು ನೆಮ್ಮದಿಯಿಂದಿರಬಹುದು. ಜೊತೆಗೆ ಕದೀಂ ವರ್ಗ ಭೂಮಿಯ ನೆರಳಿನಂತಿರುವ ಕುಮ್ಮಿ ಭೂಮಿಯನ್ನು ಸಂಬಂಧಿಸಿದ ರೈತರಿಗೆ ಹಕ್ಕು ಪತ್ರ ನೀಡುವಂತೆ ಕಳೆದ 32 ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೂ ಸುಖಾಂತ್ಯ ಕಾಣಿಸಬೇಕಾಗಿದೆ. ತೀವ್ರವಾಗಿ ಕುಸಿಯುತ್ತಿರುವ ರಬ್ಬರ್ ಬೆಲೆಯಿಂದ ರೈತರನ್ನು ರಕ್ಷಿಸುವ ಬೆಂಬಲ ಬೆಲೆ ಘೋಷಿಸಬೇಕು.

ಈ ಎಲ್ಲಾ ವಿಚಾರಗಳ ಬಗ್ಗೆ ಸರಕಾರದ ಗಮನ ಸೆಳೆಯುವ ಸಲುವಾಗಿ ಸೆ.12ರಂದು ಸೋಮವಾರ, ಕಾಲ್ನಡಿಗೆಯಲ್ಲಿ ರೈತ ಜಾಥಾ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9.30ಕ್ಕೆ ದರ್ಜೆ ವೃತ್ತದಿಂದ ಹೊರಟು ಮುಖ್ಯ ರಸ್ತೆ ಮೂಲಕ ಮಿನಿ ವಿಧಾನ ಸೌಧದ ಎದುರು ಧರಣಿ ನಡೆಸಿ ಸಹಾಯಕ ಆಯುಕ್ತರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭಾರತೀಯ ಕಿಸಾನ್ ಸಂಘ ಶಾಂತಿಗೋಡು ಘಟಕದ ಅಧ್ಯಕ್ಷ ಎಸ್.ಪಿ. ನಾರಾಯಣ ಗೌಡ, ಕಾರ್ಯದರ್ಶಿ ವಿಶ್ವನಾಥ ಬಲ್ಯಾಯ, ಭಾರತೀಯ ಕಿಸಾನ್ ಸಂಘ ನರಿಮೊಗರು ವಲಯದ ಅಧ್ಯಕ್ಷ ಎಸ್. ಸುರೇಶ್ ಪ್ರಭು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here