ಪುತ್ತೂರು: ಪಾನಮತ್ತರ ದುವರ್ತನೆಗೆ ಕೆಎಸ್ಸಾರ್ಟಿಸಿ ನಿರ್ವಾಹಕ ಮಾಡಿದ ಹಲ್ಲೆ ತಪ್ಪಾಗಿದ್ದರೂ ತಕ್ಷಣ ಅಮಾನತು ಆದೇಶ ಹೊರಡಿಸಿರುವುದು ಅಧಿಕಾರಿಗಳು ಪಾನಮತ್ತರಿಗೆ ಪ್ರೋತ್ಸಾಹ ನೀಡಿದಂತಾಗಿದೆ. ಇದು ಖಂಡನೀಯ ಎಂದು ಕೆಎಸ್ಸಾರ್ಟಿಸಿ ಮಜ್ದೂರ್ ಸಂಘ ಪುತ್ತೂರು ವಿಭಾಗದ ವಕ್ತಾರ ಶಾಂತರಾಮ ವಿಟ್ಲ ಅವರು ತಿಳಿಸಿದ್ದಾರೆ.
ನಿರ್ವಾಹಕ ವ್ಯಕ್ತಿಗೆ ಮಾಡಿದ ಹಲ್ಲೆ ಸರಿಯಲ್ಲ. ಆದರೆ ಅಧಿಕಾರಿಗಳು ಈ ಕುರಿತು ತಕ್ಷಣ ಅಮಾನತು ಆದೇಶ ಹೊರಡಿಸಿದ್ದು ಅವರ ವಿವೇಚನಾ ಅಧಿಕಾರಕ್ಕೆ ಪ್ರಶ್ನೆಯೇ ಇಲ್ಲದಂತಾಗಿದೆ. ಜೊತೆಗೆ ಪಾನಮತ್ತನ ಮನೆಗೆ ಹೋಗಿ ತಂಪು ಪಾನೀಯ ನೀಡಿ ಜೊತೆಗೆ ಆರ್ಥಿಕ ಪರಿಹಾರ ನೀಡುವುದು ಮುಂದೆ ಪಾನಮತ್ತರು ಸೇರಿ ಕೆಎಸ್ಸಾರ್ಟಿಸಿ ಸಿಬ್ಬಂದಿಗಳಿಗೆ ಹಲ್ಲೆ ನಡೆಸಲು ಪ್ರೋತ್ಸಾಹ ನೀಡಿದಂತಾಗಿದೆ. ಪಾನಮತ್ತ ವ್ಯಕ್ತಿಯ ಪೂರ್ವಪರ ನೋಡದೆ ಸಹಾಯ ಮಾಡುವುದು ಸರಿಯಲ್ಲ. ಕೆಎಸ್ಸಾರ್ಟಿಸಿ ಅಧಿಕಾರಿಗಳ ನಿಲುವು ಖಂಡನೀಯ ಎಂದು ಅವರು ತಿಳಿಸಿದ್ದಾರೆ.