




ಉಪ್ಪಿನಂಗಡಿ: ಹಲವು ಸಮಾಜಮುಖಿ ಕಾರ್ಯಗಳೊಂದಿಗೆ ಉಬಾರ್ ಕಪ್ ಕ್ರಿಕೆಟ್ ಪಂದ್ಯಾಟ ಅದ್ದೂರಿಯಾಗಿ ನಡೆದಿದ್ದು, ಆದರೆ ಈ ನಡುವೆ ಪಂದ್ಯಾಟ ನಡೆಯುತ್ತಿದ್ದಾಗ ಅಂಪೈರ್ ನೀಡಿದ ತೀರ್ಪಿಗೆ ಅಸಮಾಧಾನಗೊಂಡ ಕೆಲವರು ಏಕಾಏಕಿ ಮೈದಾನಕ್ಕೆ ನುಗ್ಗಿ ಅಂಪೈರ್ನನ್ನು ತಳ್ಳಿದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಕಿಡಿಗೇಡಿಗಳ ಈ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.



ಉಬಾರ್ ಸ್ಪೋರ್ಟಿಂಗ್ ಕ್ಲಬ್ ಉಪ್ಪಿನಂಗಡಿಯಲ್ಲಿ ಅದ್ದೂರಿಯಾಗಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪಂದ್ಯಾಟವನ್ನು ಆಯೋಜಿಸಿ ಕ್ರೀಡಾ ಸ್ಫೂರ್ತಿ ಮೆರೆದಿತ್ತು. ಇದಲ್ಲದೆ, ಸಾಧಕರಿಗೆ ಸನ್ಮಾನ, ಬಡ ಕುಟುಂಬಗಳಿಗೆ ಟೈಲರಿಂಗ್ ಮೆಷಿನ್ ಕೊಡುಗೆ ಸೇರಿದಂತೆ ಇದೇ ವೇದಿಕೆಯಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿತ್ತು. ಎರಡು ದಿನಗಳ ಕಾಲ ನಡೆದ ಈ ಪಂದ್ಯಾಟಕ್ಕೆ ಸಾವಿರಾರು ಜನರು ಆಗಮಿಸಿ ಕ್ರೀಡಾ ಸವಿ ಅನುಭವಿಸಿದ್ದರು. ರಾತ್ರಿ ‘ಕಾನಾ’ ಮತ್ತು ‘ಕೆಜಿಎಫ್’ ತಂಡಗಳ ಮಧ್ಯೆ ರೋಚಕ ಸೆಮಿ ಫೈನಲ್ ನಡೆಯುತ್ತಿದ್ದ ಸಂದರ್ಭ ಬ್ಯಾಟ್ಸ್ಮೆನ್ ಒಬ್ಬರಿಗೆ ಅಂಪೈರ್ ರೋಲನ್ ಪಿಂಟೋ ಅವರು ಎಲ್ಬಿಡಬ್ಲ್ಯೂ ಔಟ್ ತೀರ್ಪು ನೀಡಿದ್ದರು. ಅಂಪೈರ್ ಸರಿಯಾಗಿಯೇ ತೀರ್ಪು ನೀಡಿದ್ದರೂ, ಇದು ತಪ್ಪು ತೀರ್ಪು ಎಂದು ವಾದಿಸಿದ ಕೆಲ ಯುವಕರು ಏಕಾಏಕಿ ಮೈದಾನಕ್ಕೆ ಆಗಮಿಸಿ ಅಂಪೈರ್ ಅವರನ್ನು ತಳ್ಳಿದೆ. ತಕ್ಷಣವೇ ಮಧ್ಯ ಪ್ರವೇಶಿಸಿದ ಸಂಘಟಕರು ಯುವಕರನ್ನು ಮೈದಾನದಿಂದ ಹೊರಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಬಳಿಕ ಅವಿಸ್ಮರಣೀಯವಾಗಿಪಂದ್ಯಾಟ ನಡೆಯಿತು. ಸಂಘಟಕರು ಕೆಲ ದಿನಗಳ ಅವಿರತ ಶ್ರಮದಿಂದ ಹಲವು ಸಮಾಜಮುಖಿ ಕಾರ್ಯಗಳೊಂದಿಗೆ ಅದ್ದೂರಿಯಾಗಿ ಪಂದ್ಯಾಟ ಆಯೋಜಿಸಿದ್ದರೂ ಕೆಲ ಕಿಡಿಗೇಡಿಗಳು ಮಾತ್ರ ಕ್ರೀಡಾ ಸ್ಫೂರ್ತಿ ಮರೆತು ಈ ರೀತಿ ಮಾಡಿರುವುದು ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನಿರಂತರವಾಗಿ ನಡೆಸುವ ಸಮಾಜಮುಖಿ ಕೆಲಸಗಳಿಂದಾಗಿ ಉಬಾರ್ ಸ್ಪೋರ್ಟಿಂಗ್ ಕ್ಲಬ್ಗೆ ಈ ಬಾರಿಯ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ.














