ಪುತ್ತೂರು: ಪುತ್ತೂರು ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್ ಆಶ್ರಯದಲ್ಲಿ ಸೆ. ೯ರಂದು ಸಂಜೆ ತೆಂಕಿಲ ಚುಂಚಶ್ರೀ ಸಭಾಭವನದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
2024-25ನೇ ಸಾಲಿನ ರೋಟರಿಯ ನಿಯೋಜಿತ ಜಿಲ್ಲಾ ಗವರ್ನರ್ ವಿಕ್ರಮ್ ದತ್ತಾ ಮಾತನಾಡಿ, ಶಿಕ್ಷಕ ಗಂಭೀರ ಹಾಗೂ ಸೃಜನಶೀಲ ವೃತ್ತಿ. ಶಿಕ್ಷಕರಿಲ್ಲದೇ ಜಗತ್ತು ಮುಂದುವರಿಯಲು ಅಸಾಧ್ಯ. ಶಿಕ್ಷಕರು ಈ ಸಮಾಜದ ಉನ್ನತಿಗೆ ಶ್ರಮಿಸುತ್ತಿದ್ದಾರೆ. ಆದ್ದರಿಂದ ಸನ್ಮಾನ ಸ್ವೀಕರಿಸಿದ ಎಲ್ಲಾ ಶಿಕ್ಷಕರು ಶ್ರೇಷ್ಠ ವೃತ್ತಿಯನ್ನು ನಿರ್ವಹಿಸಿದ್ದಾರೆ. ನಿವೃತ್ತರಾದ ಪುತ್ತೂರು ತಾಲೂಕಿನ ಎಲ್ಲಾ ಶಿಕ್ಷಕರನ್ನು ಸನ್ಮಾನಿಸಿರುವ ಪುತ್ತೂರು ರೋಟರಿ ಕ್ಲಬ್ ಉತ್ತಮ ಕಾರ್ಯ ಮಾಡಿದೆ ಎಂದು ಶ್ಲಾಘಿಸಿದರು.
ನಿವೃತ್ತ ದೈ.ಶಿ. ಶಿಕ್ಷಕಿ ಗೀತಾಮಣಿ ಮಾತನಾಡಿ, ಕೊಂಬೆಟ್ಟು ಶಾಲೆಯ ವಿದ್ಯಾರ್ಥಿನಿಯೋರ್ವಳ ಮನೆಯ ದೈನಸೀ ಸ್ಥಿತಿಯನ್ನು ಕಂಡು ಸುಜಿತ್ ರೈ ಅವರ ಮೂಲಕ ಪುತ್ತೂರು ರೋಟರಿ ಕ್ಲಬ್ಬಿನ ಗಮನಕ್ಕೆ ತಂದೆ. ಇಂದು ಅತ್ಯುತ್ತಮ ಮನೆಯನ್ನು ರೋಟರಿ ನಿರ್ಮಿಸಿಕೊಟ್ಟಿದೆ. ರೋಟರಿಯ ನಿಸ್ವಾರ್ಥ ಸೇವೆ ಶ್ಲಾಘನೀಯ. ಇಂತಹ ಕಾರ್ಯವನ್ನು ಜನಪ್ರತಿನಿಧಿಗಳು ಮಾಡಬೇಕಿದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ್ ಪಿ.ಬಿ. ಅಧ್ಯಕ್ಷತೆ ವಹಿಸಿದ್ದರು. ನಿಯೋಜಿತ ಅಧ್ಯಕ್ಷ ಜಯರಾಜ್ ಭಂಡಾರಿ ಉಪಸ್ಥಿತರಿದ್ದರು.
ಈ ವರ್ಷ ನಿವೃತ್ತರಾದ ಪುತ್ತೂರು ತಾಲೂಕಿನ ಎಲ್ಲಾ ಶಿಕ್ಷಕರನ್ನು ಪುತ್ತೂರು ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಚಿದಾನಂದ ಬೈಲಾಡಿ ನಿರ್ವಹಿಸಿದರು. ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಸಾಧಕ ಶಿಕ್ಷಕಿ ತೆರೆಸಾ, ಸಾಧಕರಾದ ಶಾಯರಿ ಕೊಳತ್ತಾಯ, ವರ್ಷಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ವಿದ್ಯಾಗೌರಿ ನಿರ್ವಹಿಸಿದರು.
ಕ್ಲಬ್ಬಿನ ವೃತ್ತಿ ಸೇವಾ ನಿರ್ದೇಶಕ ವಾಮನ್ ಪೈ ಅತಿಥಿಗಳನ್ನು ಪರಿಚಯಿಸಿದರು.
ಮಂದಿರಾ ಕಜೆ, ಮನೀಷಾ ಕಜೆ ಪ್ರಾರ್ಥಿಸಿದರು. ಕಾರ್ಯದರ್ಶಿ ಡಾ. ಶ್ರೀಪ್ರಕಾಶ್ ವರದಿ ವಾಚಿಸಿದರು. ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಟೈನಿ ದೀಪಕ್ ವಂದಿಸಿದರು. ಕಿಶನ್ ಬಿ.ವಿ. ಹಾಗೂ ಪರಮೇಶ್ವರ್ ಕಾರ್ಯಕ್ರಮ ನಿರೂಪಿಸಿದರು.