ಚಿತ್ರ – ಕೃಷ್ಣ ಪುತ್ತೂರು
- ಸವಣೂರು ಸೀತಾರಾಮ ರೈರವರ ಅಭಿನಂದನಾ ಗ್ರಂಥ “ಅಮೃತ ರಶ್ಮಿ” ಅನಾವರಣ
ವಿದ್ಯಾರ್ಥಿಗಳು ಸಂಶೋಧನಾ ಪ್ರವೃತಿ ಬೆಳೆಸಿಕೊಳ್ಳಿ- ಎಸ್.ಅಂಗಾರ
ಸೃದೇಶಿ ಚಿಂತನೆಯ ಮೂಲಕ ಭಾರತ ಬೆಳೆಯಬೇಕು – ನಳಿನ್ ಕುಮಾರ್
ಸೀತಾರಾಮ ರೈಯವರಿಗೆ ಡಾಕ್ಟರೇಟ್ ಪದವಿ ದೊರೆಯಲಿ- ಬಾಲ್ಯೊಟ್ಟು
ಸೀತಾರಾಮ ರೈ ಕೊಡುಗೆ ಅನನ್ಯ- ಹರೀಶ್ ರೈ
ಗ್ರಾಮೀಣ ವಿದ್ಯಾರ್ಥಿಗಳಿಗೆ ಲ್ಯಾಬ್ ಪ್ರಯೋಜನ- ಸೀತಾರಾಮ ರೈ
ಪುತ್ತೂರು: ವಿದ್ಯಾರ್ಥಿಗಳು ಸಂಶೋಧನಾ ಪ್ರವೃತ್ತಿಯನ್ನು ತಮ್ಮ ಶಿಕ್ಷಣದ ಜೊತೆಯಲ್ಲಿ ತೊಡಗಿಸಿಕೊಂಡು, ಭವಿಷ್ಯದಲ್ಲಿ ಸಾಧನೆಯ ಪಥದಲ್ಲಿ ಹೆಜ್ಜೆ ಇಡಲು ಅಟಲ್ ಟಿಂಕರಿಂಗ್ ಲ್ಯಾಬ್ ಸಹಕಾರಿ ಆಗಲಿದೆ ಎಂದು ಸಚಿವ ಎಸ್.ಅಂಗಾರ ಹೇಳಿದರು.
ಅವರು ಸೆ. ೧೭ ರಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಸುಮಾರು ೨೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ, ಅಟಲ್ ಟಿಂಕರಿಂಗ್ ಲ್ಯಾಬ್ನ್ನು ಉದ್ಘಾಟಿಸಿ, ಮಾತನಾಡಿ ಯಾವುದೇ ಒಂದು ಕಾರ್ಯಕ್ಷೇತ್ರದಲ್ಲಿ ಯಶಸ್ಸುನ್ನು ಸಾಧಿಸಬೇಕಾದರೆ ಧೈರ್ಯದ ಜೊತೆ ಬುದ್ಧಿ ಶಕ್ತಿ ಬೇಕು ಇದಕ್ಕಾಗಿ ಇಂದಿನ ವಿದ್ಯಾರ್ಥಿಗಳಲ್ಲಿ ಇರುವ ವೈಜ್ಞಾನಿಕ ಆಸಕ್ತಿಗಳಿಗೆ ಅನುಗುಣವಾಗಿ ಅಟಲ್ ಟಿಂಕರಿಂಗ್ ಲ್ಯಾಬ್ ಬಹಳಷ್ಟು ಅನುಕೂಲವನ್ನು ಮಾಡಿಕೊಡಲಿದೆ ಎಂದು ಹೇಳಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪಾಯಿರವರು ಪೊಕ್ರಾನ್ನಲ್ಲಿ ಅಣು ಬಾಂಬ್ ಸ್ಪೋಟ ಮಾಡುವ ಮೂಲಕ ಭಾರತದ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ನಾಯಕ, ಅವರ ಹೆಸರಿನಲ್ಲಿ ಪ್ರಾರಂಭವಾದ ಅಟಲ್ ಟಿಂಕರಿಂಗ್ ಲ್ಯಾಬ್ ವಿಜ್ಞಾನ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ಎಂದು ಹೇಳಿದರು.
ಸವಣೂರು ಸೀತಾರಾಮ ರೈರವರು ಗ್ರಾಮೀಣ ಭಾಗದಲ್ಲಿ ಕಟ್ಟಿರುವ ವಿದ್ಯಾಸಂಸ್ಥೆಯು ಈ ಭಾಗದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿದೆ. ಅವರ ೭೫ ನೇ ಹುಟ್ಟು ಹಬ್ಬದ ನೆನಪಿನ ಅಮೃತ ರಶ್ಮಿ ಗ್ರಂಥದಿಂದ ಮುಂದಿನ ಪೀಳಿಗೆಗೆ ರೈರವರ ಸಾಧನೆಯ ಹೆಜ್ಜೆಗಳು ಪೂರಕವಾಗಿ ಕೆಲಸವನ್ನು ಮಾಡಲಿ ಎಂದು ಹಾರೈಸಿದರು.
ಸೃದೇಶಿ ಚಿಂತನೆಯ ಮೂಲಕ ಭಾರತ ಬೆಳೆಯಬೇಕು – ನಳಿನ್ ಕುಮಾರ್
ಸಮಾರಂಭದ ಅಧ್ಯಕ್ಷತೆ ವಹಿಸಿ, ಸೀತಾರಾಮ ರೈರವರ ಅಭಿನಂದನಾ ಗ್ರಂಥವನ್ನು ಅನಾವರಣಗೊಳಿಸಿದ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ರವರು ಮಾತನಾಡಿ ಭಾರತ ಇಂದು ವಿಶ್ವಕ್ಕೆ ಗುರುವಾಗಿದೆ. ಭಾರತ ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿ ಸಾಧನೆ ಮಾಡಿದೆ. ದ,ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ೨೦ ಅಟಲ್ ಟಿಂಕರಿಂಗ್ ಲ್ಯಾಬ್ನ್ನು ನಿರ್ಮಾಣ ಮಾಡಲಾಗಿದ್ದು, ಕೇಂದ್ರ ಸರಕಾರ ೧೨ ಲಕ್ಷ ರೂ ಅನುದಾನವನ್ನು ಲ್ಯಾಬ್ಗಳಿಗೆ ನೀಡುತ್ತಿದ್ದು, ಇದು ಗುಣ ಮಟದ ಲ್ಯಾಬ್ ಆಗಿದೆ ಎಂದು ಹೇಳಿ, ಸ್ವದೇಶಿ ಚಿಂತನೆಯ ಮೂಲಕ ಭಾರತ ಬೆಳೆಯಬೇಕು ಎಂಬ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ವನೆಯನ್ನು ಸವಣೂರು ಸೀತಾರಾಮ ರೈರವರು ಸವಣೂರಿನಲ್ಲಿ ಮಾಡಿ ತೋರಿಸಿದ್ದಾರೆ,
ವಿದ್ಯಾರಶ್ಮಿ ವಿದ್ಯಾರ್ಥಿಗಳ ಸಾಧನೆ
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳು ಲ್ಯಾಬ್ ನಲ್ಲಿ ಡ್ರೋನ್ ಗೆ ೬ ರೆಕ್ಕೆಗಳನ್ನು ಜೋಡಿಸುವ ಮೂಲಕ ಹೊಸ ಅವಿಸ್ಕಾರವನ್ನು ಮಾಡಿತೋರಿಸಿದ್ದಾರೆ ಎಂದು ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಶಿಸಿದರು. ಮೊಬೈಲ್ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಭಾರತ ನಂಬರ್ ಒನ್ ಆಗಿದೆ ಎಂದು ಹೇಳಿ, ಎಲ್ಲಾ ರಂಗದಲ್ಲೂ ಭಾರತ ಸಾಧನೆಯ ಪಥದತ್ತ ಸಾಗಲಿ ಎಂದು ಆಶಿಸಿ, ಸವಣೂರು ಸೀತಾರಾಮ ರೈರವರಿಗೆ ೭೫ ವರುಷ ಆದರೂ ಅವರ ಮನಸು ೩೦ ಹರೆಯದಲ್ಲಿ ಇದೆ. ವಿದ್ಯಾರಶ್ಮಿ ವಿದ್ಯಾಲಯ ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯವಾಗಿ ಬೆಳದು ಸವಣೂರಿನ ಹೆಸರು ಹತ್ತೂರಲ್ಲಿ ಬೆಳಗಲಿ ಎಂದು ಆಶಿಸಿದರು.
ಸೀತಾರಾಮ ರೈಯವರಿಗೆ ಡಾಕ್ಟರೇಟ್ ಪದವಿ ದೊರೆಯಲಿ- ಬಾಲ್ಯೊಟ್ಟು
ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಸೀತಾರಾಮ ರೈರವರು ಸಹಕಾರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಕರ್ನಾಟಕ ಸರಕಾರದ ಸಹಕಾರ ರತ್ನ ಪ್ರಶಸ್ತಿ ದೊರೆತಿದೆ. ಇವರ ಸಾಧನೆಗಾಗಿ ಮುಂದೆ ಡಾಕ್ಟ್ರೇಟ್ ಗೌರವ ಪದವಿ ಕೊಡ ಮಾಡುವಂತೆ ಸಂಸದರು ಹಾಗೂ ಸಚಿವರಲ್ಲಿ ವಿನಂತಿಸಿದರು.
ಸೀತಾರಾಮ ರೈ ಕೊಡುಗೆ ಅನನ್ಯ- ಹರೀಶ್ ರೈ
ಸವಣೂರು ಸೀತಾರಾಮ ರೈರವರ ಅಭಿನಂದನಾ ಗ್ರಂಥ “ಅಮೃತ ರಶ್ಮಿ” ಸಂಪಾದಕರಾದ ಪತ್ರಕರ್ತ ಪಿ.ಬಿ.ಹರೀಶ್ ರೈಯವರು ಮಾತನಾಡಿ ಸುಳ್ಯ ಮತ್ತು ಪುತ್ತೂರು ತಾಲೂಕಿಗೆ ಸವಣೂರು ಸೀತಾರಾಮ ರೈಯವರ ಕೊಡುಗೆ ಅನನ್ಯವಾದ್ದದು ಎಂದು ಹೇಳಿ, ಅವರ ಬಗ್ಗೆ ಮುಂದೆ ವಿಸ್ತಾರವಾದ ಜೀವನ ಚರಿತ್ರೆಯ ಗ್ರಂಥವೊಂದು ಬರುವ ಅವಶ್ಯಕತೆ ಇದೆ ಎಂದು ಹೇಳಿದರು.
ಹರೀಶ್ ರೈಯವರಿಗೆ ಸನ್ಮಾನ
ಈ ಸಂದರ್ಭದಲ್ಲಿ ರಾಷ್ಟ್ರೀಯ ಪತ್ರಿಕಾ ಮಂಡಳಿ ನಿರ್ದೇಶಕರಾಗಿ ಆಯ್ಕೆಗೊಂಡ ಪಿ.ಬಿ.ಹರೀಶ್ ರೈಯವರನ್ನು ವಿದ್ಯಾರಶ್ಮಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಲ್ಯಾಬ್ ಪ್ರಯೋಜನ- ಸೀತಾರಾಮ ರೈ
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಸ್ವಾಗತಿಸಿ, ಮಾತನಾಡಿ ಅಟಲ್ ಟಿಂಕರಿಂಗ್ ಲ್ಯಾಬ್ ನಮ್ಮ ಸಂಸ್ಥೆ ಮತ್ತು ಇತರ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವನ್ನು ಮಾಡಿಕೊಡಲಿದೆ ಎಂದು ಹೇಳಿ, ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಗ್ರಾ.ಪಂ, ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಕೆಡೆಂಜಿ, ಅಟಲ್ ಟಿಂಕರಿಂಗ್ ಲ್ಯಾಬ್ನ ನೋಡೆಲ್ ಅಧಿಕಾರಿ ಜಯಲಕ್ಷ್ಮಿ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ, ಟ್ರಸ್ಟಿಗಳಾದ ಸವಣೂರು ಎನ್.ಸುಂದರ ರೈ, ರಶ್ಮಿ ಆಶ್ವಿನ್ ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ನಾರಾಯಣ ಮೂರ್ತಿರವರುಗಳು ಉಪಸ್ಥಿತರಿದ್ದರು
ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ವಂದಿಸಿದರು, ಉಪನ್ಯಾಸಕಿ ರಾಜಿ ಸಿ.ಜೆ. ಕಾರ್ಯಕ್ರಮ ನಿರೂಪಿಸಿದರು.
೨೦ ಲಕ್ಷ ರೂ ವೆಚ್ಚದ ಸುಸಜ್ಜಿತ ಲ್ಯಾಬ್
ಸವಣೂರು ವಿದ್ಯಾರಶ್ಮಿ ಯಲ್ಲಿ ೨೦ ಲಕ್ಷ ರೂಪಾಯಿ ವೆಚ್ಚದಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ನಿರ್ಮಾಣಗೊಂಡಿದ್ದು, ಇದರಲ್ಲಿ ೧೨ ಲಕ್ಷ ರೂಪಾಯಿ ಕೇಂದ್ರ ಸರಕಾರದ ಅನುದಾನ ದೊರೆತಿದೆ. ಈ ಲ್ಯಾಬ್ನ್ನು ವಿದ್ಯಾರ್ಥಿಗಳು ಬಳಕೆ ಮಾಡಿ, ವಿಜ್ಞಾನ ಕ್ಷೇತ್ರದ ಸಂಶೋಧನೆಯಲ್ಲಿ ತೊಡಗಿ, ಭವಿಷ್ಯದಲ್ಲಿ ದೇಶಕ್ಕೆ ಕೊಡುಗೆ ನೀಡಿ – ಸವಣೂರು ಕೆ.ಸೀತಾರಾಮ ರೈ- ಸಂಚಾಲಕರು